Advertisement

ಗಂಗೂಲಿಗಾಗಿ ಬಿಸಿಸಿಐ ಸಂವಿಧಾನಕ್ಕೆ ತಿದ್ದುಪಡಿ!

10:03 AM Dec 03, 2019 | Team Udayavani |

ಮುಂಬಯಿ: ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿಗಾಗಿ ತನ್ನ ಸಂವಿಧಾನವನ್ನೇ ಬದಲಿಸಲು ದೇಶದ ಅತ್ಯುನ್ನತ ಕ್ರಿಕೆಟ್‌ ಸಂಸ್ಥೆ ಬಿಸಿಸಿಐ ಮುಂದಾಗಿದೆ.

Advertisement

ಮುಂಬಯಿಯಲ್ಲಿ ನಡೆದ 88ನೇ ಸರ್ವ ಸದಸ್ಯರ ಸಭೆಯಲ್ಲಿ ಸಂವಿಧಾನ ತಿದ್ದುಪಡಿ ನಿರ್ಧಾರ ತೆಗೆದುಕೊಂಡಿರುವ ಬಿಸಿಸಿಐ ಆಡಳಿತ ಮಂಡಳಿ, 2024ರ ವರೆಗೆ ಗಂಗೂಲಿ ಅವರನ್ನೇ ಅಧ್ಯಕ್ಷರನ್ನಾಗಿ ಮುಂದುವರಿಸಲು ಅವಕಾಶ ಕಲ್ಪಿಸಿದೆ. ಇದಷ್ಟೇ ಅಲ್ಲ, ಈ ತಿದ್ದುಪಡಿ ನಿರ್ಧಾರವನ್ನು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಲಿದ್ದು, ಕೋರ್ಟ್‌ ಒಪ್ಪಿದರೆ ಗಂಗೂಲಿ 2024ರ ವರೆಗೆ ಬಿಸಿಸಿಐ ಅಧ್ಯಕ್ಷರಾಗಿ ಮುಂದುವರಿಯಲಿದ್ದಾರೆ.

ಸಭೆಯ ಬಳಿಕ ಮಾತನಾಡಿದ ಗಂಗೂಲಿ, ನಮ್ಮ ನಿರ್ಧಾರಗಳನ್ನು ಸುಪ್ರೀಂ ಕೋರ್ಟ್‌ ಮುಂದೆ ಇರಿಸುತ್ತೇವೆ, ಕೋರ್ಟ್‌ ತೀರ್ಮಾನಕ್ಕಾಗಿ ಕಾಯುತ್ತೇವೆ ಎಂದಿದ್ದಾರೆ.

ಹಾಲಿ ನಿಯಮಗಳ ಪ್ರಕಾರ ಸೌರವ್‌ ಇನ್ನು 9 ತಿಂಗಳು ಮಾತ್ರ ಬಿಸಿಸಿಐ ಅಧ್ಯಕ್ಷರಾಗಿರಬಹುದು. ಅದೇ ರೀತಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಪುತ್ರ ಜೇ ಶಾ ಕೂಡ ಇನ್ನೊಂದು ವರ್ಷದಲ್ಲಿ ಬಿಸಿಸಿಐ ಕಾರ್ಯದರ್ಶಿ ಹುದ್ದೆ ತ್ಯಜಿಸಬೇಕು.

ತಿದ್ದುಪಡಿಯೇನು?
ಬಿಸಿಸಿಐ ಅಥವಾ ರಾಜ್ಯಸಂಸ್ಥೆ ಸೇರಿ 6 ವರ್ಷ ಅಧಿಕಾರ ನಡೆಸಿದ್ದರೆ ವಿಶ್ರಾಂತಿ ನೀಡಬೇಕು ಎಂಬ ನಿಯಮ ಬದಲಾವಣೆಗೆ ಒಪ್ಪಿಗೆ ಸಿಕ್ಕಿದೆ. ಅದರ ಬದಲು ಸತತ 6 ವರ್ಷ ಯಾವುದೋ ಒಂದು ಸಂಸ್ಥೆಯಲ್ಲಿ ಪದಾಧಿಕಾರಿಯಾಗಿದ್ದರೆ ಮಾತ್ರ ಅವರಿಗೆ ಕಡ್ಡಾಯ ವಿಶ್ರಾಂತಿ ನೀಡಬೇಕು ಎಂದು ಬದಲಿಸಲಾಗಿದೆ!

Advertisement

ಐಸಿಸಿಯಲ್ಲಿ ಶಾ ಬಿಸಿಸಿಐ ಪ್ರತಿನಿಧಿ
ಬಿಸಿಸಿಐ ಕಾರ್ಯದರ್ಶಿಯಾಗಿರುವ ಜೇ ಶಾ ಇನ್ನು ಮುಂದೆ ಐಸಿಸಿಯಲ್ಲಿ ಬಿಸಿಸಿಐಯ ಪ್ರತಿನಿಧಿ ಯಾಗಿರುತ್ತಾರೆ. ಮುಂದೆ ಯಾವಾಗ ಐಸಿಸಿ ಸಭೆ ನಡೆದರೂ ಶಾ ಅದರಲ್ಲಿ ಬಿಸಿಸಿಐ ಪರವಾಗಿ ಪಾಲ್ಗೊಳ್ಳುತ್ತಾರೆ. ಇಲ್ಲಿಯವರೆಗೆ ಬಿಸಿಸಿಐ ಸಿಇಒ ರಾಹುಲ್‌ ಜೊಹ್ರಿ ಈ ಸ್ಥಾನದಲ್ಲಿದ್ದರು. ಸರ್ವೋಚ್ಚ ಅನುಮತಿ ಬೇಕು ಎನ್ನುವುದಕ್ಕೂ ತಿದ್ದುಪಡಿ ಬಿಸಿಸಿಐ ತನ್ನ ನಿಯಮಗಳಿಗೆ ಯಾವುದೇ ಬದಲಾವಣೆ ಮಾಡಿದರೂ ಅದಕ್ಕೆ ಅಂತಿಮವಾಗಿ ಸರ್ವೋಚ್ಚ ನ್ಯಾಯಾಲಯದ ಒಪ್ಪಿಗೆ ಬೇಕು. ಇದನ್ನೂ ಬದಲಿಸಲು ರವಿವಾರದ ಸಭೆಯಲ್ಲಿ ತೀರ್ಮಾನವಾಗಿರುವ ಸಾಧ್ಯತೆಯಿದೆ. ಪದೇ ಪದೇ ನ್ಯಾಯಾಲಯದ ಮೆಟ್ಟಿಲೇರಬೇಕೆನ್ನುವುದು ವಸ್ತುಸ್ಥಿತಿಗೆ ಹತ್ತಿರವಾಗಿಲ್ಲ ಎಂದು ಸದಸ್ಯರ ಅಭಿಪ್ರಾಯ. ಒಂದುವೇಳೆ ಈ ತಿದ್ದುಪಡಿಗೆ ನ್ಯಾಯಾಲಯ ಒಪ್ಪಿಕೊಂಡರೆ, ಬಿಸಿಸಿಐ ಮುಂದಿನ ನಿರ್ಧಾರಗಳನ್ನು ತೆಗೆದುಕೊಳ್ಳಲಿದೆ.

ಬಿಸಿಸಿಐನ ಐಸಿಸಿ ಪ್ರತಿನಿಧಿಗೆ
ವಯೋಮಿತಿ ಬೇಡ!
33 ತಿಂಗಳ ಆಡಳಿತಾಧಿಕಾರಿಗಳ ಅಧಿಕಾರಾ ವಧಿಯಲ್ಲಿ ಐಸಿಸಿಯಲ್ಲಿ ಬಿಸಿಸಿಐ ವರ್ಚಸ್ಸು ಕುಗ್ಗಿದೆ. ಇದಕ್ಕೆ ಕಾರಣ ಅಲ್ಲಿ ಬಿಸಿಸಿಐಯನ್ನು ಪ್ರಬಲವಾಗಿ ಪ್ರತಿನಿಧಿಸುವ ಅನುಭವಿಗಳ ಕೊರತೆ ಎನ್ನುವುದು ಬಿಸಿಸಿಐ ವಾದ. ಆದ್ದರಿಂದ ಐಸಿಸಿಯಲ್ಲಿ ಬಿಸಿಸಿಐ ಪ್ರತಿನಿಧಿಸುವವರಿಗೆ 70 ವರ್ಷ ವಯೋಮಿತಿ ಅನ್ವಯಿಸಬಾರದು ಎನ್ನುವ ಬದಲಾವಣೆ ಮಾಡಲು ಹೊರಟಿದೆ.

ಸ್ವಹಿತಾಸಕ್ತಿ ನಿಯಮ ತಿದ್ದುಪಡಿ?
ಒಬ್ಬರೇ ಬಿಸಿಸಿಐಯಲ್ಲಿ 2 ಹುದ್ದೆ ಹೊಂದಿರಬಾರದು, ಬಿಸಿಸಿಐ ಕಾರ್ಯಚಟುವಟಿಕೆ ಮೇಲೆ ಪ್ರಭಾವ ಬೀರುವ ಬಾಹ್ಯ ಹುದ್ದೆಯನ್ನೂ ಹೊಂದಿರಬಾರದು ಎನ್ನುವುದು ನಿಯಮ. ಇದಕ್ಕೆ ವಿರುದ್ಧವಾಗಿದ್ದರೆ ಸ್ವಹಿತಾಸಕ್ತಿ ಸಂಘರ್ಷ ಎನಿಸಿ ಕೊಳ್ಳು ತ್ತದೆ. ಇದು ಭಾರತೀಯ ಕ್ರಿಕೆಟ್‌ಗೆ ಅಪಾಯಕಾರಿ ಎಂದು ಗಂಗೂಲಿ ಅಭಿಪ್ರಾಯಪಟ್ಟಿದ್ದಾರೆ. ಈ ನಿಯಮವನ್ನೂ ಮಾರ್ಪಡಿಸಲು ತೀರ್ಮಾನಿಸಿರುವ ಸಾಧ್ಯತೆಯಿದೆ.

ಪೂರ್ಣಾವಧಿ ಕ್ರಿಕೆಟ್‌ ಸಲಹಾ ಸಮಿತಿ ಇಲ್ಲ
ಸಭೆಯಲ್ಲಿ ಉನ್ನತ ಸಲಹಾ ಸಮಿತಿಗೆ ಸದಸ್ಯರ ನೇಮಕ ನಿರ್ಧಾರ ತೆಗೆದುಕೊಂಡಿಲ್ಲ. ಸಲಹಾ ಸಮಿತಿ ಬಗ್ಗೆಯೂ ಮಾತನಾಡಿದ ಗಂಗೂಲಿ, ಪೂರ್ಣಾವಧಿ ಕ್ರಿಕೆಟ್‌ ಸಲಹಾ ಸಮಿತಿ ಅಗತ್ಯವಿಲ್ಲ ಎಂದಿದ್ದಾರೆ. ಅದರ ಕೆಲಸ ಕೇವಲ ಆಯ್ಕೆಗಾರರು ಮತ್ತು ತರಬೇತುಗಾರರ ನೇಮಕವಷ್ಟೆ. ಪ್ರತಿವರ್ಷ ನಾವೇನೂ ಆಯ್ಕೆಗಾರರು ಮತ್ತು ಕೋಚ್‌ಗಳನ್ನು ನೇಮಕ ಮಾಡುವುದಿಲ್ಲವಲ್ಲ? ಹೀಗಾಗಿ ಪೂರ್ಣಾವಧಿ ಸಲಹಾ ಸಮಿತಿಯ ಏಕೆ ಬೇಕು ಎಂದು ಸುದ್ದಿಗಾರರನ್ನೇ ಸೌರವ್‌ ಗಂಗೂಲಿ ಪ್ರಶ್ನಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next