Advertisement
2022ರಲ್ಲಿ ಭಾರತೀಯ ಕ್ರಿಕೆಟ್ ನಿರ್ವಹಣೆ ಹೇಳಿಕೊಳ್ಳುವಂಥ ಮಟ್ಟದಲ್ಲಿ ಇರದಿದ್ದುದ ರಿಂದ ಹಾಗೂ ಈ ವರ್ಷ ಭಾರತದ ಆತಿಥ್ಯದಲ್ಲೇ ಏಕದಿನ ವಿಶ್ವಕಪ್ ಪಂದ್ಯಾವಳಿ ನಡೆಯುವುದರಿಂದ ಈ ಸಭೆ ಹೆಚ್ಚಿನ ಮಹತ್ವ ಪಡೆದಿತ್ತು. ಆಟಗಾರರ ಲಭ್ಯತೆ ಹಾಗೂ ಅವರ ಫಿಟ್‌ನೆಸ್ ಕಾಯ್ದುಕೊಳ್ಳುವ ವಿಚಾರದ ಕುರಿತು ದೊಡ್ಡ ಮಟ್ಟದಲ್ಲಿ ಚರ್ಚಿಸಲಾಯಿತು.
ಏಕದಿನ ವಿಶ್ವಕಪ್‌ಗಾಗಿ 20 ಕ್ರಿಕೆಟಿಗರನ್ನು ಆರಿಸಿ (ಶಾರ್ಟ್ ಲಿಸ್ಟ್), ಈ ವರ್ಷ ಆಡಲಾಗುವ ಸುಮಾರು 35 ಏಕದಿನ ಪಂದ್ಯಗಳಿಗೆ ಈ 20 ಕ್ರಿಕೆಟಿಗರನ್ನೇ ಆವರ್ತನ ಪದ್ಧತಿಯಂತೆ ಆಡಿಸುವುದು ಬಿಸಿಸಿಐ ಯೋಜನೆ. ಮೂರೂ ಮಾದರಿಗಳಲ್ಲಿ ಆಡಲಾಗುವ ಆಟಗಾರರ ಫಿಟ್‌ನೆಸ್‌ಗೆ ಹೆಚ್ಚಿನ ಗಮನ ಕೊಡಲು ಯೋಜನೆಗಳನ್ನು ರೂಪಿಸಲಾಯಿತು. ಆರಂಭದಲ್ಲೇ ಯೋ-ಯೋ ಮತ್ತು ಡೆಕ್ಸಾ ಟೆಸ್ಟ್‌ನಲ್ಲಿ ತೇರ್ಗಡೆಯಾದರೆ ನಡುವಲ್ಲಿ ಫಿಟ್‌ನೆಸ್ ಸಮಸ್ಯೆ ಎದುರಾಗದೆಂಬುದು ಮಂಡಳಿ ನಂಬಿಕೆ. ಹೀಗಾಗಿ ಆಟಗಾರರ ದೈಹಿಕ ಕ್ಷಮತೆಯ ಮೇಲ್ವಿಚಾರಣೆಗಾಗಿ ಐಪಿಎಲ್ ಫ್ರಾಂಚೈಸಿಗಳೊಂದಿಗೆ ಕೆಲಸ ಮಾಡುವಂತೆ ವಿವಿಎಸ್ ಲಕ್ಷ್ಮಣ್ ನೇತೃತ್ವದ ಎನ್‌ಸಿಎಗೆ ಬಿಸಿಸಿಐ ಸೂಚಿಸಿತು.
Related Articles
Advertisement
ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಲು ದೇಶಿ ಕ್ರಿಕೆಟ್‌ಗಳಲ್ಲಿ ಆಡಿ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸುವುದು ಮುಖ್ಯ. ಕೇವಲ ಐಪಿಎಲ್ ಮಾತ್ರವೇ ಮಾನದಂಡವಲ್ಲ ಎಂಬುದನ್ನು ಸೂಚ್ಯವಾಗಿ ಹೇಳಲಾಯಿತು.
ಯೋ-ಯೋ ಗೊತ್ತು, ಡೆಕ್ಸಾ ಅಂದರೇನು?ಕ್ರಿಕೆಟಿಗರ ಯೋ-ಯೋ ಟೆಸ್ಟ್ ಬಗ್ಗೆ ಈಗಾಗಲೇ ಅಲ್ಪಸ್ವಲ್ಪ ತಿಳಿದಿದೆ. ಇದು 23 ಹಂತಗಳ ಪರೀಕ್ಷೆ, ಕ್ರಿಕೆಟಿಗರಿಗೆ 5ನೇ ಹಂತದಿಂದ ಆರಂಭ, ಕ್ರಿಕೆಟಿಗ 20 ಪ್ಲಸ್ 20 ಮೀ. ದೂರವನ್ನು ನಿಗದಿತ ಅವಧಿಯಲ್ಲಿ ಪೂರೈಸುವುದು. ಹಂತಗಳ ಸಂಖ್ಯೆ ಹೆಚ್ಚಿದಂತೆ ದೂರವನ್ನು ಕ್ರಮಿಸುವ ಸಮಯ ಕಡಿಮೆಯಾಗುತ್ತದೆ. ಇಲ್ಲಿ ತೇರ್ಗಡೆಯಾಗಲು ಕನಿಷ್ಠ 16.1 ಅಂಕ ಅಗತ್ಯ. ಇದು ಯೋ-ಯೋ. ಡೆಕ್ಸಾ ಅಂದರೆ ಮೂಳೆಗಳ ಸಾಂದ್ರತೆ ಯನ್ನು ಪತ್ತೆಹಚ್ಚುವ ವಿಧಾನ. ಆಟಗಾರರ ದೈಹಿಕ ಕ್ಷಮತೆಯನ್ನು ವೈಜ್ಞಾನಿಕವಾಗಿ, ಹೆಚ್ಚು ನಿಖರವಾಗಿ ಗುರುತಿಸಲು ಇದರಿಂದ ಸಾಧ್ಯ. ಇಲ್ಲಿ ನಡೆಸಲಾಗುವ ಎಕ್ಸ್-ರೇ ಪರೀಕ್ಷೆ ವೇಳೆ ಆಟಗಾರರ ಮೂಳೆಯ ಸಾಮರ್ಥ್ಯದ ಸ್ಪಷ್ಟ ಚಿತ್ರಣ ಲಭಿಸುತ್ತದೆ. ಮೂಳೆಯ ಸಾಮರ್ಥ್ಯ ಎಷ್ಟಿದೆ, ಗಟ್ಟಿಯಾಗಿದೆಯೇ ಅಥವಾ ಬಹಳ ಬೇಗ ಮುರಿಯಬಹುದೇ ಎಂಬುದರ ಜತೆಗೆ ದೇಹದಲ್ಲಿನ ಕೊಬ್ಬಿನ ಅಂಶವನ್ನೂ ಪತ್ತೆಹಚ್ಚಬಹುದು. ಇದು ಕೇವಲ 10 ನಿಮಿಷಗಳ ಪರೀಕ್ಷೆ.