Advertisement

ಐಪಿಎಲ್‌ನಲ್ಲಿ ಹೊಸ ಪ್ರಯೋಗ: ಇನ್ನು ಬದಲಿ ಆಟಗಾರನ ಕರಾಮತ್ತು?

09:43 AM Nov 06, 2019 | mahesh |

ಹೊಸದಿಲ್ಲಿ: ವಿಶ್ವ ಕ್ರಿಕೆಟ್‌ನಲ್ಲಿ ಐಪಿಎಲ್‌ (ಇಂಡಿಯನ್‌ ಪ್ರೀಮಿಯರ್‌ ಲೀಗ್‌) ಟಿ20 ಕೂಟ ಪರಿ ಚಯಿಸಿ ಕ್ರಾಂತಿ ಮಾಡಿದ ಬಿಸಿಸಿಐ ಇನ್ನೊಂದು ಐತಿಹಾಸಿಕ ಬದಲಾವಣೆ ತರಲು ಮುಂದಾಗಿದೆ. 2020ರ ಐಪಿಎಲ್‌ನಿಂದ ಪಂದ್ಯದ ಯಾವುದೇ ಹಂತದಲ್ಲಿ ಬದಲಿ ಆಟಗಾರರನ್ನು ಕಣಕ್ಕಿಳಿಸುವುದೇ ಆ ವಿನೂತನ ಯೋಜನೆ. “ಪವರ್‌ ಪ್ಲೇಯರ್‌’ ಹೆಸರಿನ ಇದಕ್ಕೆ ಈಗಾಗಲೇ ಒಪ್ಪಿಗೆ ಸಿಕ್ಕಿದೆ. ಆದರೂ ಅದರ ಬಗ್ಗೆ ವಿಸ್ತೃತವಾಗಿ ಚರ್ಚಿಸಲು ಬಿಸಿಸಿಐ ಬಯಸಿದೆ. ಸದ್ಯಕ್ಕೆ ಅದನ್ನು ನ.8ರಿಂದ ಆರಂಭವಾಗುವ ಸೈಯದ್‌ ಮುಷ್ತಾಕ್‌ ಅಲಿ ಟಿ20 ಲೀಗ್‌ನಲ್ಲಿ ಅಳವಡಿಸಿ, ಪರೀಕ್ಷಿಸಲಾಗುವುದೆಂದು ಬಿಸಿಸಿಐ ಮೂಲಗಳು ತಿಳಿಸಿವೆ.

Advertisement

ಒಂದು ವೇಳೆ ಈ ಬದಲಾವಣೆ ಜಾರಿಯಾದರೆ ಐಪಿಎಲ್‌ನಲ್ಲೂ ಫ‌ುಟ್‌ಬಾಲ್‌, ಹಾಕಿ, ಕಬಡ್ಡಿ ಮಾದರಿ ಬರುತ್ತದೆ. ವಿಶ್ವದ ಹಲವು ದೇಶೀಯ ಟಿ20 ಕ್ರಿಕೆಟ್‌ನಲ್ಲಿ ಈ ಮಾದರಿ ಬಳಕೆಯಾಗಲೂಬಹುದು. ಈ ಹೊಸ ನಿಯಮ ಐಪಿಎಲ್‌ ಪಂದ್ಯಗಳ ಸಂಯೋಜನೆಯನ್ನೇ ಬದಲಿಸುತ್ತದೆ. ಆದರೆ ಇದರ ರೂಪುರೇಷೆಗಳು ಇನ್ನೂ ಸ್ಪಷ್ಟವಾಗಿ ಹೊರಬಿದ್ದಿಲ್ಲ.

ತಂಡಕ್ಕೆ ಹೇಗೆ ಸಹಾಯವಾಗುತ್ತದೆ?
ಪಂದ್ಯದ ನಿರ್ಣಾಯಕ ಹಂತ. ಬ್ಯಾಟಿಂಗ್‌ ತಂಡಕ್ಕೆ 2 ಓವರ್‌ಗಳಲ್ಲಿ 30 ರನ್‌ ಬೇಕಿರುತ್ತದೆ. ಆಗ 11ರ ಬಳಗದಿಂದ ಹೊರಗೆ ಓರ್ವ ಸ್ಫೋಟಕ ಬ್ಯಾಟ್ಸ್‌ಮನ್‌ ಕುಳಿತಿರುತ್ತಾನೆ. ನಾಯಕ ಕೂಡಲೇ ಆತನನ್ನು ಕ್ರೀಸ್‌ಗೆ ಕಳುಹಿಸಬಹುದು. ಇದೇ ಸಹಾಯ ಬೌಲಿಂಗ್‌ ತಂಡಕ್ಕೂ ಆಗುತ್ತದೆ. ಅಂತಿಮ ಹಂತದಲ್ಲಿ 11ರ ಬಳಗದಲ್ಲಿಲ್ಲದ, ಓರ್ವ ಘಾತಕ ವೇಗಿಯನ್ನು ಬದಲಿ ಆಟಗಾರನಾಗಿ ಕಣಕ್ಕಿಳಿಸಿ, ಬೌಲಿಂಗ್‌ ಮಾಡಿಸಬಹುದು.

ಅನುಮಾನಗಳೇನು?
ಇನ್ನೂ ಕ್ರೀಸ್‌ಗೆ ಬಾರದ ಬ್ಯಾಟ್ಸ್‌ಮನ್‌ ಅನ್ನು ಬದಲಿಸಿ, 11ರ ಬಳಗದ ಹೊರಗಿರುವ ಬೇರೋರ್ವನನ್ನು ಕ್ರೀಸ್‌ಗೆ ಕಳುಹಿಸಿದರೆ ಸಮಸ್ಯೆಯಿಲ್ಲ. ಆಗ ಒಟ್ಟಾರೆ 11 ಮಂದಿಯೇ ಬ್ಯಾಟಿಂಗ್‌ ಮಾಡಿದಂತಾಗುತ್ತದೆ. ಈಗಾಗಲೇ ಕ್ರೀಸ್‌ನಲ್ಲಿರುವ ಬ್ಯಾಟ್ಸ್‌ಮನ್‌ನನ್ನು ಆತ ಔಟಾಗದಿದ್ದರೂ ವಾಪಸ್‌ ಕರೆಸಿಕೊಳ್ಳಬಹುದೇ? ಹಾಗೆ ಮಾಡಿದರೆ ತಂಡದ ಆಟಗಾರರ ಪಟ್ಟಿ 12ಕ್ಕೇರಿದಂತಾಗುತ್ತದಲ್ಲ? ಬದಲಿ ಬ್ಯಾಟ್ಸ್‌ಮನ್‌ನ ರನ್‌ಗಳನ್ನು ಆತನ ಹೆಸರಿಗೆ ಸೇರಿಸಲಾಗುತ್ತದೋ? ಮೂಲ ಆಟಗಾರನ ಲೆಕ್ಕಕ್ಕೆ ಸೇರಿಸಲಾಗುತ್ತದೋ? ಇಂತಹ ಹಲವು ಅನುಮಾನಗಳು ಉಳಿದುಕೊಂಡಿವೆ.

ಗಂಗೂಲಿಯದ್ದೇ ಅಂತಿಮ ನಿರ್ಧಾರ
ಹೊಸ ನಿಯಮಕ್ಕೆ ಈಗಾಗಲೇ ಬಿಸಿಸಿಐ ಅನುಮೋದನೆ ಸಿಕ್ಕಿದೆ. ಜಾರಿ ಮಾಡುವ ವಿಚಾರದಲ್ಲಿ ಬಿಸಿಸಿಐ ನೂತನ ಅಧ್ಯಕ್ಷ ಸೌರವ್‌ ಗಂಗೂಲಿಯವರದ್ದೇ ಅಂತಿಮ ನಿರ್ಧಾರವಾಗಿ ರಲಿದೆ. ಐಪಿಎಲ್‌ ಆಡಳಿತ ಸಮಿತಿ, ದೀರ್ಘ‌ ಸಮಾಲೋಚನೆ ಮಾಡಿ ಗಂಗೂಲಿಗೆ ತನ್ನ ನಿರ್ಧಾರ ತಿಳಿಸಲಿದೆ. ಅದನ್ನು ಜಾರಿ ಮಾಡುವ ಬಗ್ಗೆ ದಾದಾ ತೀರ್ಮಾನಿಸುತ್ತಾರೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

Advertisement

ಬದಲಿ ಆಟಗಾರ ಹೇಗೆ?
ಇದುವರೆಗಿನ ಐಪಿಎಲ್‌ ಪಂದ್ಯಗಳಲ್ಲಿ ಒಮ್ಮೆ 11ರ ಬಳಗವನ್ನು ಅಂತಿಮಪಡಿಸಿದರೆ ಮುಗಿಯಿತು. ಮತ್ತೆ ಬದಲಾವಣೆಗೆ ಅವಕಾಶವಿಲ್ಲ. ನೂತನ ನಿಯಮದ ಪ್ರಕಾರ, ಇಡೀ ಪಂದ್ಯದ ಯಾವುದೇ ಹಂತದಲ್ಲಿ 15ರ ಬಳಗದಲ್ಲಿರುವ ಒಬ್ಬ ಆಟಗಾರನನ್ನು ಬದಲಿ ಆಟಗಾರನಾಗಿ ಕಣಕ್ಕಿಳಿಸಬಹುದು. ಒಂದು ವಿಕೆಟ್‌ ಬಿದ್ದಾಗ, ಒಂದು ಓವರ್‌ ಮುಗಿದಾಗ ಮಾತ್ರ ಈ ಬದಲಾವಣೆ ಮಾಡಲು ಅವಕಾಶವಿದೆ.

Advertisement

Udayavani is now on Telegram. Click here to join our channel and stay updated with the latest news.

Next