Advertisement

ಬಿಸಿಸಿಐ-ನಾಡಾ ನಡುವಿನ ಬಿಕ್ಕಟ್ಟು ತೀವ್ರ

06:55 AM Nov 11, 2017 | |

ಮುಂಬೈ: ಬಿಸಿಸಿಐ (ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿ) ಮತ್ತು ನಾಡಾ (ಭಾರತ ಉದ್ದೀಪನ ನಿಗ್ರಹ ಸಂಸ್ಥೆ) ನಡುವಿನ ತಿಕ್ಕಾಟ ಈಗ ತಾರಕಕ್ಕೇರಿದೆ. ಬಿಸಿಸಿಐನ ಕ್ರಿಕೆಟಿಗರು ತನ್ನಿಂದ ಉದ್ದೀಪನ ಪರೀಕ್ಷೆಗೊಳಪಡಬೇಕು ಎಂದು ನಾಡಾ ವಾದಿಸಿದೆ. ಅದಕ್ಕೆ ಕೇಂದ್ರ ಕ್ರೀಡಾ ಸಚಿವಾಲಯ ಕೂಡ ಅನುಮತಿಯೂ ನೀಡಿದೆ. ಆದರೆ ಬಿಸಿಸಿಐ ಮಾತ್ರ ಖಂಡತುಂಡವಾಗಿ ಈ ಪ್ರಸ್ತಾಪವನ್ನು ವಿರೋಧಿಸಿದೆ.

Advertisement

ಒಂದು ವೇಳೆ ಬಿಸಿಸಿಐ ಇದಕ್ಕೆ ಒಪ್ಪಿಕೊಳ್ಳದೇ ಹೋದರೆ ಯಾವುದೇ ಭಾರತೀಯ ಕ್ರೀಡಾಪಟುಗಳನ್ನು ನಾಡಾ ಪರೀಕ್ಷೆಗೊಳಪಡಿಸಲು ಸಾಧ್ಯವಾಗುವುದಿಲ್ಲ. ಕಾರಣ ನಾಡಾವನ್ನೇ ವಾಡಾ (ವಿಶ್ವ ಉದ್ದೀಪನ ನಿಗ್ರಹ ಸಂಸ್ಥೆ) ಅಮಾನ್ಯಗೊಳಿಸಲಿದೆ. ಇದರ ಪರಿಣಾಮ ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಭಾರತೀಯರು ತೀವ್ರ ಮುಜುಗರ ಅನುಭವಿಸಬೇಕಾದ ಸನ್ನಿವೇಶ ಎದುರಾಗಲಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಿಸಿಸಿಐ ಸಿಇಒ ರಾಹುಲ್‌ ಜೊಹ್ರಿ, ಬಿಸಿಸಿಐ ರಾಷ್ಟ್ರೀಯ ಕ್ರೀಡಾಸಂಸ್ಥೆಯಲ್ಲ. ಆದ್ದರಿಂದ ನಾಡಾದ ವ್ಯಾಪ್ತಿಯಲ್ಲಿ ಬರುವುದಿಲ್ಲ. ಬಿಸಿಸಿಐ ಆಟಗಾರರನ್ನು ಪರೀಕ್ಷೆಗೊಳಪಡಿಸಲು ತನ್ನದೇ ವ್ಯವಸ್ಥೆ ಹೊಂದಿದೆ. ಸ್ಪರ್ಧೆ ನಡೆಯುವ ಸಂದರ್ಭದಲ್ಲಿ ಅಥವಾ ಸ್ಪಧೇìತರ ಸಂದರ್ಭಗಳಲ್ಲಿ ಐಡಿಟಿಎಂ ಎಂಬ ಸಂಸ್ಥೆ ಸಂಗ್ರಹಿಸುವ ಆಟಗಾರರ ಮಾದರಿಗಳನ್ನು ವಾಡಾ ಮಾನ್ಯತೆ ಹೊಂದಿರುವ ಎನ್‌ಡಿಟಿಎಲ್‌ ಪ್ರಯೋಗಾಲಯದಲ್ಲಿ ಪರೀಕ್ಷೆಗೊಳಪಡಿಸಲಾಗುತ್ತಿದೆ. ಇದಕ್ಕೆ ಕೇಂದ್ರ ಕ್ರೀಡಾ ಸಚಿವಾಲಯದ ಅನುಮತಿಯೂ ಇದೆ ಎಂದು ಹೇಳಿದ್ದಾರೆ.

ಬಿಸಿಸಿಐ ಈ ವಿಚಾರದಲ್ಲಿ ವಾಡಾ ಹಾಕಿಕೊಟ್ಟಿರುವ ಗುಣಮಟ್ಟವನ್ನೇ ಅನುಸರಿಸುತ್ತಿದೆ. ವಿಶ್ವಮಟ್ಟದ ಗುಣಮಟ್ಟವನ್ನೇ ಹೊಂದಿರುವ ಸಂಸ್ಥೆಯಿಂದ ಪರೀಕ್ಷೆಗಳು ನಡೆಯುತ್ತಿವೆ ಎಂದು ಜೊಹ್ರಿ ಸಮರ್ಥಿಸಿಕೊಂಡಿದ್ದಾರೆ.
ಒಂದು ವೇಳೆ ಬಿಸಿಸಿಐ ತನ್ನ ವಿರೋಧವನ್ನು ಮುಂದುವರಿಸಿದ್ದೇ ಆದಲ್ಲಿ ಅದು ಸರ್ಕಾರ ಮತ್ತು ಬಿಸಿಸಿಐ ನಡುವಿನ ಹೋರಾಟವಾಗಿ ಬದಲಾಗುವ ಸಾಧ್ಯತೆಯಿದೆ. ದೇಶದ ಕ್ರೀಡಾ ವಲಯದಲ್ಲಿ ತೀವ್ರ ಬಿಕ್ಕಟ್ಟೂ ಸೃಷ್ಟಿಯಾಗಬಹುದು.

Advertisement

Udayavani is now on Telegram. Click here to join our channel and stay updated with the latest news.

Next