ಹೊಸದಿಲ್ಲಿ: ಕಳೆದ ವರ್ಷ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಉಡುಗೊರೆಯಾಗಿ ಸಿಕ್ಕಿದ ಸ್ಮರಣಿಕೆಗಳ ಸಂಗ್ರಹವನ್ನು ಇ- ಹರಾಜು ಮಾಡಿದಾಗ ಒಲಿಂಪಿಕ್ ಚಾಂಪಿಯನ್ ನೀರಜ್ ಚೋಪ್ರಾ ಅವರ ಜಾವೆಲಿನ್ ಅನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) 1.5 ಕೋಟಿ ರೂ. ನೀಡಿ ಖರೀದಿಸಿತ್ತು ಎಂದು ಕ್ರಿಕೆಟ್ ಮಂಡಳಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಶುಕ್ರವಾರ.
ಟೋಕಿಯೊ ಒಲಿಂಪಿಕ್ಸ್ ಬಳಿಕ ಪ್ರಧಾನಿ ಮೋದಿಯವರು ಗೇಮ್ಸ್‌ನಲ್ಲಿ ಪಾಲ್ಗೊಂಡ ಭಾರತೀಯ ಕ್ರೀಡಾಪಟುಗಳಿಗೆ ಆತಿಥ್ಯ ವಹಿಸಿ ಸಂವಾದ ನಡೆಸಿದ ವೇಳೆ ಒಲಿಂಪಿಕ್‌ನಲ್ಲಿ ಚಿನ್ನ ಜಯಿಸಿದ್ದ ಚೋಪ್ರಾ ಅವರು ತಮ್ಮ ಸಂಗ್ರಹದಲ್ಲಿದ್ದ ಜಾವಲಿನ್ ಒಂದನ್ನು ಮೋದಿಗೆ ಉಡುಗೊರೆಯಾಗಿ ನೀಡಿದ್ದರು.
ಈ ಜಾವೆಲಿನ್ ಇ-ಹರಾಜಿನ ಸಮಯದಲ್ಲಿ ಇಡಲಾಗಿದ್ದ ಅನೇಕ ವಸ್ತುಗಳಲ್ಲಿ ಒಂದಾಗಿತ್ತು. ಹರಾಜಿನ ಮೂಲಕ ಬರುವ ಆದಾಯವು “ನಮಾಮಿ ಗಂಗೆ ಕಾರ್ಯಕ್ರಮ’ಕ್ಕೆ ಹೋಗಲಿದೆ. 2014ರಲ್ಲಿ ಪ್ರಾರಂಭವಾದ “ನಮಾಮಿ ಗಂಗೆ ಕಾರ್ಯಕ್ರಮ’ ಗಂಗಾ ನದಿಯನ್ನು ಸ್ವಚ್ಛಗೊಳಿಸುವ ಮತ್ತು ರಕ್ಷಿಸುವ ದೊಡ್ಡ ಯೋಜನೆಯಾಗಿದೆ.
2021ರ ಸೆಪ್ಟಂಬರ್‌ಮತ್ತು ಅಕ್ಟೋಬರ್ ನಡುವೆ ಹರಾಜು ನಡೆಸಲಾಗಿತ್ತು. ಇ-ಹರಾಜಿನಲ್ಲಿ ಬಿಸಿಸಿಐ ನೀರಜ್ ಅವರ ಜಾವೆಲಿನ್ ಅನ್ನು ಖರೀದಿಸಿದೆ. ಇದರ ಜತೆ ನಾವು ಮೋದಿ ಅವರ ಸಂಗ್ರಹದಲ್ಲಿದ್ದ ಇತರ ಕೆಲವು ವಸ್ತುಗಳನ್ನು ಕೂಡ ಖರೀದಿಸಿದ್ದೇವೆ. ನಮಾಮಿ ಗಂಗೆ ಎಂಬುದು ಒಂದು ಅಮೂಲ್ಯ ಕಾರಣ ಮತ್ತು ನಮ್ಮದು ದೇಶದ ಪ್ರಮುಖ ಕ್ರೀಡಾ ಸಂಸ್ಥೆಯಾಗಿರುವ ಕಾರಣ ರಾಷ್ಟ್ರದ ಅಭಿವೃದ್ಧಿಗೆ ನಮ್ಮ ಕರ್ತವ್ಯ ಪಾಲಿಸಲು ಬದ್ಧರಾಗಿದ್ದೇವೆ ಎಂದು ಹೆಸರು ಹೇಳಲಿಚ್ಛಿಸದ ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಚೋಪ್ರಾ ಅವರ ಜಾವೆಲಿನ್‌ನ ಹೊರತಾಗಿ, ಭಾರತೀಯ ಪ್ಯಾರಾಲಿಂಪಿಕ್ ತಂಡದ ಹಸ್ತಾಕ್ಷರವಿದ್ದ ಅಂಗವಸ್ತ್ರವನ್ನು ಬಿಸಿಸಿಐ 1 ಕೋಟಿ ರೂ.ಗೆ ಖರೀದಿಸಿತು. ಬಿಸಿಸಿಐ ಖರೀದಿಸಿದ ಚೋಪ್ರಾ ಅವರ ಜಾವೆಲಿನ್ ಅತ್ಯಧಿಕ ಹರಾಜು ಮೌಲ್ಯ ಪಡೆದಿದ್ದರೆ, ಫೆನ್ಸರ್ ಭವಾನಿ ದೇವಿ ಅವರ ಖಡ್ಗವು 1.25 ಕೋಟಿ ರೂ.ಗೆ ಮತ್ತು ಪ್ಯಾರಾಲಿಂಪಿಕ್ ಚಾಂಪಿಯನ್ ಜಾವೆಲಿನ್ ಎಸೆತಗಾರ ಸುಮಿತ್ ಆಂಟಿಲ್ ಅವರ ಜಾವೆಲಿನ್ ಅನ್ನು ಇತರ ಬಿಡ್ಡರ್‌ಗಳು 1.002 ಕೋಟಿ ರೂ.ಗೆ ಖರೀದಿಸಿದರು. ಲವಿÉನಾ ಬೊರ್ಗೊಹೈನ್ ಅವರ ಬಾಕ್ಸಿಂಗ್ ಕೈಗವಸುಗಳನ್ನು 91 ಲಕ್ಷ ರೂ.ಗೆ ಮಾರಾಟವಾಗಿದೆ.
ಚೋಪ್ರಾ ಟೋಕಿಯೊದಲ್ಲಿ ಒಲಿಂಪಿಕ್ ಚಿನ್ನ ಗೆಲ್ಲಲು ಬಳಸಿದ ಜಾವೆಲಿನ್ ಅನ್ನು ಇತ್ತೀಚೆಗೆ ಲಾಸನ್ನೆ ಮೂಲದ ಒಲಿಂಪಿಕ್ ಮ್ಯೂಸಿಯಂಗೆ ದಾನ ಮಾಡಿದ್ದರು. ಟೋಕಿಯೊ ಗೇಮ್ಸ್‌ನ ಅಧಿಕೃತ ಟ್ವಿಟರ್ ಮೂಲಕ ಇದನ್ನು ದೃಢಪಡಿಸಲಾಗಿದೆ.