ಮುಂಬೈ: ಏಕದಿನ ವಿಶ್ವಕಪ್ ಮುಗಿದು ಎರಡು ವಾರಗಳು ಕಳೆದಿದೆ. ಕೂಟದುದ್ದಕ್ಕೂ ಅಭೂತಪೂರ್ವ ಪ್ರದರ್ಶನ ನೀಡಿದ ಟೀಂ ಇಂಡಿಯಾವು ಫೈನಲ್ ಪಂದ್ಯದಲ್ಲಿ ಸೋಲನುಭವಿಸಿತ್ತು. ಇದೀಗ ಬಿಸಿಸಿಐ ರಿವೀವ್ ಮೀಟಿಂಗ್ ನಡೆಸಿದ್ದು, ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಮತ್ತು ನಾಯಕ ರೋಹಿತ್ ಶರ್ಮಾ ಅವರನ್ನು ವಿಚಾರಣೆ ನಡೆಸಿದೆ ಎಂದು ವರದಿಯಾಗಿದೆ.
ದ್ರಾವಿಡ್ ಮತ್ತು ರೋಹಿತ್ ಅವರು ಬಿಸಿಸಿಐ ಸಭೆಯಲ್ಲಿ ಹಲವು ಪ್ರಶ್ನೆಗಳನ್ನು ಎದುರಿಸಿದರು ಎಂದು ವರದಿಯಾಗಿದೆ. ಫೈನಲ್ ಮುಗಿದು 11 ದಿನಗಳ ಬಳಿಕ ನಡೆದ ಮೀಟಿಂಗ್ ನಲ್ಲಿ ಫೈನಲ್ ಪಂದ್ಯದ ಸೋಲಿನ ಕಾರಣಗಳು ಮತ್ತು ಮುಂದಿನ ದಕ್ಷಿಣ ಆಫ್ರಿಕಾ ಸರಣಿಯ ಕಾರ್ಯತಂತ್ರಗಳ ಬಗ್ಗೆ ಕೇಳಲಾಯಿತು ಎನ್ನಲಾಗಿದೆ.
ನವದೆಹಲಿಯಲ್ಲಿ ನಡೆದ ಸಭೆಯಲ್ಲಿ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ, ಉಪಾಧ್ಯಕ್ಷ ರಾಜೀವ್ ಶುಕ್ಲಾ ಮತ್ತು ಖಜಾಂಚಿ ಆಶಿಶ್ ಶೆಲಾರ್ ಭಾಗವಹಿಸಿದ್ದರು. ನಿರ್ಣಾಯಕ ಫೈನಲ್ ಪಂದ್ಯದಲ್ಲಿ ಭಾರತದ ಸಾಧಾರಣ ಪ್ರದರ್ಶನಕ್ಕೆ ಕಾರಣವಾದ ಅಂಶಗಳ ಬಗ್ಗೆ ಅಧಿಕಾರಿಗಳು ದ್ರಾವಿಡ್ ಮತ್ತು ಶರ್ಮಾ ಅವರನ್ನು ವಿಚಾರಿಸಿದ್ದಾರೆ.
ದೈನಿಕ್ ಜಾಗರಣ್ ವರದಿಯ ಪ್ರಕಾರ, ತಂಡದ ಸೋಲಿಗೆ ಅಹಮದಾಬಾದ್ ಪಿಚ್ ಕಾರಣ ಎಂದು ದ್ರಾವಿಡ್ ಹೇಳಿದ್ದಾರೆ. ಪಿಚ್ ನಿರೀಕ್ಷಿತ ಪ್ರಮಾಣದ ತಿರುವು ಪಡೆಯಲಿಲ್ಲ ಎಂದಿದ್ದಾರೆ.
ವಿಶೇಷವಾಗಿ ಮೊಹಮ್ಮದ್ ಶಮಿ ಮತ್ತು ಜಸ್ಪ್ರೀತ್ ಬುಮ್ರಾ ನೇತೃತ್ವದ ಭಾರತದ ಸೀಮರ್ ಗಳು ಪಂದ್ಯಾವಳಿಯುದ್ದಕ್ಕೂ ಅದ್ಭುತ ಪ್ರದರ್ಶನ ನೀಡಿದಾಗ ಈ ಯೋಜನೆಯನ್ನು ಮುಂದುವರಿಸುವ ನಿರ್ಧಾರದ ಬಗ್ಗೆ ಬಿಸಿಸಿಐ ಅಧಿಕಾರಿಗಳು ದ್ರಾವಿಡ್ ಅವರನ್ನು ಪ್ರಶ್ನಿಸಿದರು. ದ್ರಾವಿಡ್ ಈ ತಂತ್ರವನ್ನು ಸಮರ್ಥಿಸಿಕೊಂಡರು, ಹಿಂದಿನ ಪಂದ್ಯಗಳಲ್ಲಿ ಇದು ಪರಿಣಾಮಕಾರಿಯಾಗಿ ಕೆಲಸ ಮಾಡಿದೆ ಆದರೆ ನಿರ್ಣಾಯಕ ಫೈನಲ್‌ನಲ್ಲಿ ಎಡವಿತು ಎಂದಿದ್ದಾರೆ.