ಬಂಟ್ವಾಳ: ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಬಿ.ಸಿ.ರೋಡು-ಅಡ್ಡಹೊಳೆ ಹೆದ್ದಾರಿಯ ಚತುಷ್ಪಥ ಕಾಮಗಾರಿಯ ಹಿಂದಿನ ಟೆಂಡರ್ ಅರ್ಧಕ್ಕೆ ಮೊಟಕುಗೊಂಡಿದ್ದು, ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ (ಎನ್‌ಎಚ್‌ಎಐ) ಮತ್ತೆ ಟೆಂಡರ್ ಕರೆದು ಹೊಸದಾಗಿ ಕಾಮಗಾರಿ ಆರಂಭಗೊಳ್ಳಬೇಕಿದೆ.
ಮುಂದಿನ ಮೂರು ತಿಂಗಳೊಳಗೆ ಟೆಂಡರ್ ಪ್ರಕ್ರಿಯೆ ಆರಂಭಗೊಂಡು 2020ರ ಸೆಪ್ಟಂಬರ್‌ನಲ್ಲಿ ಕಾಮಗಾರಿ ಆರಂಭವಾಗುವ ನಿರೀಕ್ಷೆಯಲ್ಲಿ ಪ್ರಾಧಿಕಾರ ಇದೆ.
ಬಿ.ಸಿ.ರೋಡು-ಹಾಸನ ಮಧ್ಯೆ ಹೆದ್ದಾರಿಯನ್ನು ಚತುಷ್ಪಥಗೊಳಿಸುವ ನಿಟ್ಟಿನಲ್ಲಿ ಎನ್‌ಎಚ್‌ಎಐ ಹೆದ್ದಾರಿಯನ್ನು ಎರಡು ವಿಭಾಗಗಳನ್ನಾಗಿ ಮಾಡಿ ಹಾಸನ-ಮಾರನಹಳ್ಳಿ ಮಧ್ಯದ 55 ಕಿ.ಮೀ.ಯನ್ನು ಅಭಿವೃದ್ಧಿ ಪಡಿಸಲು 400 ಕೋ.ರೂ. ಹಾಗೂ ಬಿ.ಸಿ.ರೋಡು-ಅಡ್ಡಹೊಳೆ ಮಧ್ಯದ 65 ಕಿ.ಮೀ.ಗಳ ಹೆದ್ದಾರಿಯ ಅಭಿವೃದ್ಧಿಗಾಗಿ 821 ಕೋ.ರೂ.ಗಳಿಗೆ 2017ರಲ್ಲಿ ಟೆಂಡರ್ ನೀಡಿ ಕಾಮಗಾರಿ ಆರಂಭಗೊಂಡಿತ್ತು.
ಗುತ್ತಿಗೆ ಸಂಸ್ಥೆಯು 2 ವರ್ಷಗಳ ಹಿಂದೆಯೇ ಕಾಮಗಾರಿ ಆರಂಭಿಸಿ, ಬಹುತೇಕ ಕಡೆಗಳಲ್ಲಿ ಹೆದ್ದಾರಿ ಬದಿಯ ಜಾಗಗಳನ್ನು ಅಗೆದು ಹಾಕಿದೆ. ಹೆಚ್ಚಿನ ಕಡೆಗಳಲ್ಲಿ ಮೋರಿ ಕಾಮಗಾರಿ ನಡೆದಿದೆ.
ಬಿ.ಸಿ.ರೋಡು-ಅಡ್ಡಹೊಳೆ ಹೆದ್ದಾರಿಯ ಮಧ್ಯೆ ಅರಣ್ಯ ಇಲಾಖೆ ಭೂ ಪ್ರದೇಶ ಬರುತ್ತಿದ್ದು, ಹೀಗಾಗಿ ಅದರ ಭೂಸ್ವಾಧೀನ ಪ್ರಕ್ರಿಯೆಯಲ್ಲಿ ತೊಂದರೆ ಕಂಡುಬಂದ ಹಿನ್ನೆಲೆಯಲ್ಲಿ ಹೀಗಾಗಿದೆ. ಅಂದರೆ ಅದರ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಸುಮಾರು 150 ಕೋ.ರೂ.ಗಳ ಅಗತ್ಯವಿದ್ದು, ಆದರೆ ಅದು ಹಿಂದಿನ ಟೆಂಡರ್‌ನಲ್ಲಿ ಒಳಗೊಂಡಿರಲಿಲ್ಲ. ಹೀಗಾಗಿ ಮುಂದೆ ಅದನ್ನೆಲ್ಲಾ ಸೇರಿಸಿಕೊಂಡು ಮತ್ತೆ ಟೆಂಡರ್ ಕರೆಯಲಿದ್ದೇವೆ ಎಂದು ಎನ್‌ಎಚ್‌ಎಐ ಹಾಸನ ವಿಭಾಗದ ಎಂಜಿನಿಯರ್ ಒಬ್ಬರು “ಉದಯವಾಣಿ’ಗೆ ತಿಳಿಸಿದ್ದಾರೆ.