ಬಂಟ್ವಾಳ: ಬಿ.ಸಿ.ರೋಡ್ ನಗರ ಕೇಂದ್ರದ ಟೂರಿಸ್ಟ್ ಹೋಮ್ ಮತ್ತು ಸನಿಹದ ಕಾಂಪ್ಲೆಕ್ಸ್‌ನ ಮಹಡಿಯಲ್ಲಿ ನಡೆಯುತ್ತಿದ್ದ ರಿಕ್ರಿಯೇಷನ್ ಕ್ಲಬ್‌ಗ ದಾಳಿ ನಡೆಸಿದ ಪೊಲೀಸರು 130ಕ್ಕೂ ಅಧಿಕ ಮಂದಿಯನ್ನು ಬಂಧಿಸಿದ್ದಾರೆ. ಸ್ಥಳ ದಿಂದ ನೂರಾರು ಮೊಬೈಲ್, ಅಪಾರ ಪ್ರಮಾಣದ ನಗದು ವಶಕ್ಕೆ ಪಡೆದಿದ್ದಾರೆ. ದಾಳಿ ಬಳಿಕ ಸಿಕ್ಕಿದ ವಸ್ತುಗಳ ದಾಖಲೀಕರಣ, ಹಣದ ಲೆಕ್ಕಾಚಾರ ತಡರಾತ್ರಿ ತನಕ ಮುಂದುವರಿದಿತ್ತು.
ಬಂಟ್ವಾಳ ಉಪವಿಭಾಗ ಎಎಸ್‌ಪಿ ಸೈದುಲ್ ಅದಾವತ್ ನೇತೃತ್ವದಲ್ಲಿ ಬಂಟ್ವಾಳ ನಗರ ಠಾಣೆ ಎಸ್‌ಐ ಚಂದ್ರಶೇಖರ್, ಗ್ರಾಮಾಂತರ ಎಸ್‌ಐ ಪ್ರಸನ್ನ ಮತ್ತು ಸಿಬಂದಿ ದಾಳಿ ನಡೆಸಿದ್ದರು.
ಸಂಜೆ ಐದು ಗಂಟೆ ಸುಮಾರಿಗೆ ಎರಡು ಕಟ್ಟಡಗಳ ಮೇಲೆ ಪೊಲೀಸರು ಏಕಕಾಲದಲ್ಲಿ ದಾಳಿ ನಡೆಸಿದ್ದರು. ಟೂರಿಸ್ಟ್ ಹೋಮ್‌ನಲ್ಲಿ ಕೆಲವರು ತಪ್ಪಿಸಿಕೊಂಡು ಓಡಲು ಯತ್ನಿಸಿದ್ದರೂ ದಾರಿ ನಡುವೆ ಸಿಕ್ಕಿಬಿದ್ದಿದ್ದರು. ಇನ್ನು ಕೆಲವರು ಲಿಫ್ಟ್ನಲ್ಲಿ ಬಾಕಿ ಆಗುವ ಮೂಲಕ ಒಳಗಾಗಿ ಪೊಲೀಸರಿಗೆ ಸಿಕ್ಕಿ ಬಿದ್ದರು. ಈ ಎರಡು ಕ್ಲಬ್‌ಗಳನ್ನು ಪ್ರತ್ಯಪ್ರತ್ಯೇಕ ವ್ಯಕ್ತಿಗಳು ನಿರ್ವಹಿಸುತ್ತಿದ್ದರು ಎಂದು ತಿಳಿದು ಬಂದಿದೆ.
ರಿಕ್ರಿಯೇಷನ್ ಕ್ಲಬ್ ಎಂದು ಅನುಮತಿ ಪಡೆದುಕೊಂಡಿದ್ದು, ಅದರಲ್ಲಿ ಹಣವಿಟ್ಟು ಇಸ್ಪೀಟ್ ಆಡುವುದರ ಬಗ್ಗೆ ಹಲವು ದೂರುಗಳು ಬಂದಿದ್ದ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ತಡರಾತ್ರಿ ತನಕವೂ ಪೊಲೀಸರು ಪರಿಶೀಲನೆ ನಡೆಸಿದ್ದರು. ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಆರೋಪಿಗಳನ್ನು ವೈಯಕ್ತಿಕ ಬಾಂಡಿನ ಜಾಮೀನು ಆಧಾರದಲ್ಲಿ ಬಿಡುಗಡೆ ಮಾಡಲಾಗಿದೆ.
ಹಣ ಹೊರಗೆಸಿದರು!
ದಾಳಿ ನಡೆಯುತ್ತಿದ್ದಂತೆ ಕಟ್ಟಡದ ಒಳಗಿದ್ದವರು ಕಂತೆ ಕಂತೆ ಹಣವನ್ನು ಹೊರಕ್ಕೆ ಎಸೆದುದರಿಂದ ಗಾಳಿಯಲ್ಲಿ ನೋಟು ಹಾರುತ್ತಿದ್ದುದನ್ನು ಕಂಡ ಸಾರ್ವಜನಿಕರ ದೊಡ್ಡ ಗುಂಪು ಅದನ್ನು ಹೆಕ್ಕುವುದಕ್ಕಾಗಿ ಸೇರಿತ್ತು. ಈ ನಡುವೆ ಸ್ಥಳದಲ್ಲಿದ್ದ ಪೊಲೀಸರು ಕಟ್ಟಡದಿಂದ ಹೊರಗೆ ಎಸೆದಿರುವ ಹಣವನ್ನು ಪಡೆದುಕೊಳ್ಳಲು ಪ್ರಯತ್ನಿಸಿದ್ದರು. ಕೆಲವರು ನೀಡಿದ್ದರೆ, ಹಲವರು ಸಿಕ್ಕಿದ್ದನ್ನು ಹಿಡಿದುಕೊಂಡು ಓಡಿದ್ದರು. ಬಳಿಕ ಗುಂಪುನ್ನು ಚದುರಿಸಲಾಗಿತ್ತು.