Advertisement

ಬಿ.ಸಿ.ರೋಡ್: ಲೋಕಾಯುಕ್ತ ತಂಡ, ಸಮಾಜ ಕಲ್ಯಾಣ ಇಲಾಖೆ ಆಯುಕ್ತರ ಭೇಟಿ

12:29 PM Jun 01, 2022 | Team Udayavani |

ಬಂಟ್ವಾಳ: ಸಮಾಜ ಕಲ್ಯಾಣ ಇಲಾಖೆಗೊಳಪಟ್ಟ ಬಿ.ಸಿ.ರೋಡ್‌ನ ಡಾ| ಬಿ.ಆರ್‌.ಅಂಬೇಡ್ಕರ್‌ ವಸತಿ ಶಾಲೆಯ ಕಟ್ಟಡ ಅವ್ಯವಸ್ಥೆಯ ಕುರಿತು ಸಾರ್ವಜನಿಕರೊಬ್ಬರು ನೀಡಿದ ದೂರಿನ ಹಿನ್ನೆಲೆಯಲ್ಲಿ ಮಂಗಳೂರು ಲೋಕಾಯುಕ್ತ ಇನ್ಸ್‌ಪೆಕ್ಟರ್‌ ಅಮಾನುಲ್ಲಾ ಹಾಗೂ ಸಿಬಂದಿ ಮಂಗಳವಾರ ಸಂಜೆ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Advertisement

ಲೋಕಾಯುಕ್ತರ ಭೇಟಿಗೂ ಮುನ್ನ ಸಮಾಜ ಕಲ್ಯಾಣ ಇಲಾಖೆಯ ಆಯುಕ್ತ ಡಾ| ರಾಕೇಶ್‌ ಕುಮಾರ್‌ ಕೆ. ಭೇಟಿ ನೀಡಿ ಕಟ್ಟಡವನ್ನು ಪರಿಶೀಲನೆ ನಡೆಸಿದರು. ತರಗತಿಯ ಕಬ್ಬಿಣದ ಕಿಟಕಿಗಳು ತುಕ್ಕು ಹಿಡಿದು ಮಕ್ಕಳಿಗೆ ಆಗಬಹುದಾದ ಅಪಾಯ, ಗೋಡೆ ಬಿರುಕು ಬಿಟ್ಟಿರುವುದು, ನೀರು ಸೋರುವುದು, ಕಟ್ಟಡದ ಮತ್ತು ತರಗತಿಯೊಳಗೆ ಮೇಲ್ಛಾವಣಿಯಲ್ಲಿ ಕಾಂಕ್ರೀಟ್‌ ಸವೆದು ಸರಳುಗಳು ಕಾಣುವುದು ಮೊದಲಾದ ಸಮಸ್ಯೆಗಳ ಕುರಿತು ದಲಿತ ಮುಖಂಡ ವಿಶ್ವನಾಥ ಚಂಡ್ತಿಮಾರ್‌ ಲೋಕಾಯುಕ್ತರಿಗೆ ದೂರು ನೀಡಿದ್ದರು.

ಲೋಕಾಯುಕ್ತರು ಪರಿಶೀಲನೆ ನಡೆಸುತ್ತಿರುವ ವೇಳೆ ಹಾವೊಂದು ತರಗತಿ ಯೊಳಗೆ ಪ್ರವೇಶಿಸಲು ಹವಣಿಸುತ್ತಿರು ವುದನ್ನು ಕಂಡು ಎಲ್ಲರೂ ಅವಕ್ಕಾದರು. ಕಟ್ಟಡದ ಹೊರಭಾಗದ ಸುತ್ತ ಶುಚಿಗೊಳಿಸಲು ಪುರಸಭೆಗೆ ತಿಳಿಸುವಂತೆ ನಿಲಯ ಪಾಲಕರಿಗೆ ಸೂಚಿಸಿದರು. ವಸತಿ ಶಾಲೆಯ ಕಟ್ಟಡ ಶಿಥಿಲಾವಸ್ಥೆಯಲ್ಲಿರುವುದನ್ನು ಗಮನಿಸಿದ ಅವರು ಕಟ್ಟಡವನ್ನು ದುರಸ್ತಿಗೊಳಿಸುವುದು ಇಲ್ಲವೇ ಹೊಸ ಕಟ್ಟಡ ನಿರ್ಮಿಸುವ ನಿಟ್ಟಿನಲ್ಲಿ ಪ್ರಸ್ತಾವನೆ ಸಲ್ಲಿಸುವಂತೆ ಸೂಚಿಸಿದರು.

ವಿದ್ಯಾರ್ಥಿಗಳೊಂದಿಗೂ ಸಂವಹನ ನಡೆಸಿದ ಲೋಕಾಯುಕ್ತ ಇನ್ಸ್‌ ಪೆಕ್ಟರ್‌ ಗುಣಮಟ್ಟದ ಆಹಾರ ಪೂರೈಸಲಾಗುತ್ತಿದೆಯೇ ಎಂಬ ಮಾಹಿತಿ ಪಡೆದರು. ಸಕಲ ವ್ಯವಸ್ಥೆಯನ್ನು ಒಳಗೊಂಡಿದ್ದು, ರಾತ್ರಿ ಕಾವಲುಗಾರ ಇಲ್ಲದಿರುವುದನ್ನು ತಿಳಿದು ಕಟ್ಟಡ ಶಿಥಿಲಾವಸ್ಥೆಯ ಕುರಿತು ಲೋಕಾಯುಕ್ತ ಎಸ್ಪಿ ಮೂಲಕ ಸಮಾಜ ಕಲ್ಯಾಣ ಇಲಾಖೆಯ ಆಯುಕ್ತರಿಗೆ ವರದಿ ಸಲ್ಲಿಸಲಾಗುವುದು ಎಂದು ತಿಳಿಸಿದರು. ಆಶ್ರಮ ಶಾಲೆಯ ನಿಲಯ ಪಾಲಕ ಪ್ರಸಾದ್‌, ವಿಶ್ವನಾಥ ಚಂಡ್ತಿಮಾರ್‌ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next