Advertisement

ಬಿ.ಸಿ.ರೋಡ್: ಕೃತಕ ನೆರೆ ಸಮಸ್ಯೆಗೆ ಮುಕ್ತಿ

09:54 AM May 30, 2022 | Team Udayavani |

ಬಂಟ್ವಾಳ: ಮಂಗಳೂರು ಭಾಗಕ್ಕೆ ತೆರಳುವ ಬಸ್‌ಗಳು ನಿಲ್ಲುವ ಸ್ಥಳದಲ್ಲಿ ಕೃತಕ ನೆರೆ ಸೃಷ್ಟಿಯಾಗುವ ಸಮಸ್ಯೆಗೆ ಕೊನೆಗೂ ಮುಕ್ತಿ ಸಿಕ್ಕಿದೆ. ಕಾಂಕ್ರೀಟ್‌ ರಸ್ತೆಯ ಕಾಮಗಾರಿ ದೋಷದಿಂದ ಮಧ್ಯ ಭಾಗದಲ್ಲಿ ತಗ್ಗಾಗಿ ಮಳೆ ನೀರು ಹರಿಯದೆ ತೊಂದರೆಯಾಗುತ್ತಿದ್ದ ಜಾಗಕ್ಕೆ ರವಿವಾರ ಡಾಮರು ಹಾಕಲಾಗಿದೆ.

Advertisement

ಹಲವು ವರ್ಷಗಳ ಹಿಂದೆ ಬಿ.ಸಿ.ರೋಡ್‌ನ‌ ಹೆದ್ದಾರಿ ಬದಿಯ ಸರ್ವಿಸ್‌ ರಸ್ತೆಗೆ ಕಾಂಕ್ರೀಟ್‌ ಹಾಕಲಾಗಿತ್ತು. ಕಾಮಗಾರಿ ನಿರ್ವಹಿಸಿದ ಸಂಸ್ಥೆಯ ಎಸಗಿನ ಸಣ್ಣ ತಪ್ಪಿನಿಂದ ಹಲವು ವರ್ಷಗಳಿಂದ ಬಸ್‌ ನಿಲ್ದಾಣದ ಬಳಿ ಕೃತಕ ನೆರೆ ಉಂಟಾಗುತ್ತಿತ್ತು. ಪಕ್ಕಕ್ಕೆ ಚರಂಡಿ ಇದ್ದರೂ, ಅದಕ್ಕೆ ನೀರು ಹೋಗುವ ವ್ಯವಸ್ಥೆ ಸರಿಯಿಲ್ಲದೆ ತೊಂದರೆಯಾಗಿತ್ತು. ಜತೆಗೆ ಕಾಂಕ್ರೀಟ್‌ ರಸ್ತೆಯ ಮಧ್ಯದ ಭಾಗ ಕೊಂಚ ತಗ್ಗಾಗಿ ನೀರು ಹರಿಯುತ್ತಿರಲಿಲ್ಲ. ಹಲವು ದಿನಗಳಿಂದ ನಿರಂತರ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ದಿನವಿಡೀ ನೀರು ನಿಂತು ತೊಂದರೆಯಾಗಿತ್ತು. ಈ ಸಮಸ್ಯೆಯ ಕುರಿತು ‘ಉದಯವಾಣಿ ಸುದಿನ’ದಲ್ಲಿ ಮೇ 20ರಂದು ‘ಬಿ.ಸಿ.ರೋಡ್: ನೀರಲ್ಲೇ ಬಸ್‌ಗೆ ಕಾಯಬೇಕಾದ ಸ್ಥಿತಿ’ ಎಂಬ ಶೀರ್ಷಿಕೆಯಲ್ಲಿ ವರದಿ ಪ್ರಕಟಿಸಲಾಗಿತ್ತು. ಅದೇ ದಿನ ಬಂಟ್ವಾಳ ಶಾಸಕ ರಾಜೇಶ್‌ ನಾೖಕ್‌ ಉಳಿಪ್ಪಾಡಿಗುತ್ತು ಅವರ ಸೂಚನೆಯಂತೆ ಮೊಗ್ರೋಡಿ ಕನ್‌ಸ್ಟ್ರಕ್ಷನ್ಸ್‌ನವರು ಸ್ಲ್ಯಾಬ್‌ ಕೊರೆದು ನೀರು ಹರಿಯುವುದಕ್ಕೆ ವ್ಯವಸ್ಥೆ ಮಾಡಿದ್ದರು. ಆದರೆ ಕಾಂಕ್ರೀಟ್‌ ರಸ್ತೆಯ ಮಧ್ಯೆ ಕೊಂಚ ತಗ್ಗಾಗಿದ್ದ ಹಿನ್ನೆಲೆಯಲ್ಲಿ ಸ್ಲ್ಯಾಬ್‌ ಕೊರೆದರೂ ಪೂರ್ತಿ ನೀರು ಹರಿದು ಹೋಗಲು ಸಾಧ್ಯವಿರಲಿಲ್ಲ. ಹೀಗಾಗಿ ಡಾಮರು ಹಾಕಿ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವ ಭರವಸೆಯನ್ನೂ ನೀಡಲಾಗಿತ್ತು.

ಮೇ 28ರಂದೇ ಡಾಮರು ಹಾಕುವುದಕ್ಕೆ ಸಿದ್ಧತೆ ನಡೆದಿದ್ದರೂ, ಬೆಳಗ್ಗೆ 11ರ ಬಳಿಕ ನಿರಂತರ ಮಳೆಯಾದ ಕಾರಣ ಕಾಮಗಾರಿ ನಡೆಸಲು ಸಾಧ್ಯವಾಗಿರಲಿಲ್ಲ. ಹೀಗಾಗಿ ರವಿವಾರ ಡಾಮರು ಹಾಕಲಾಗಿತ್ತು. ರಜಾ ದಿನವಾದ ಕಾರಣ ವಾಹನಗಳ ಓಡಾಟವೂ ಕಡಿಮೆ ಇದ್ದಿದ್ದು ಅನುಕೂಲವಾಗಿತ್ತು. ಜತೆಗೆ ಬಿ.ಸಿ.ರೋಡ್‌ನ‌ ಸರ್ವೀಸ್‌ ರಸ್ತೆಯ ಪಕ್ಕ ಬಿಎಸ್‌ಎನ್‌ಎಲ್‌ ಕಚೇರಿಯ ಮುಂಭಾ ಗದಿಂದ ಸಾಗುವ ರಸ್ತೆಯ ಪ್ರಾರಂಭಕ್ಕೂ ಡಾಮರು ಹಾಕಲಾಗಿದೆ. ಇಲ್ಲಿ ಕಡಿದಾದ ತಿರುವು ತೆಗೆದುಕೊಂಡು ವಾಹನಗಳು ಸಾಗಬೇಕಿದ್ದು, ಅಲ್ಲಿ ರಸ್ತೆ ಹದಗೆಟ್ಟಿತ್ತು. ಪ್ರಸ್ತುತ ಅದಕ್ಕೂ ಪರಿಹಾರ ಸಿಕ್ಕಂತಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next