ಬಂಟ್ವಾಳ: ಸಾವಿರಾರು ಪ್ರಯಾಣಿಕರು ದಿನನಿತ್ಯ ಸಂಚರಿಸುವ ಬಿ.ಸಿ.ರೋಡ್‌ನಲ್ಲಿ ಸರಿಯಾದ ಬಸ್ ನಿಲ್ದಾಣಗಳನ್ನು ಕಲ್ಪಿಸಲಾಗದ ಆಡಳಿತ ವ್ಯವಸ್ಥೆ ಕನಿಷ್ಠ ಪಕ್ಷ ರಸ್ತೆ ಬದಿಯಲ್ಲಿ ನಿಂತು ಬಸ್ಸಿಗೆ ಕಾಯುವ ಸ್ಥಿತಿಯನ್ನೂ ಮಾಡಿಕೊಟ್ಟಿಲ್ಲ. ಹೀಗಾಗಿ ಕಳೆದ ಕೆಲವು ದಿನಗಳಿಂದ ನಿರಂತರ ಸುರಿಯುತ್ತಿರುವ ಮಳೆಯ ಪರಿಣಾಮ ಬಿ.ಸಿ.ರೋಡ್ ನಿಂದ ಮಂಗಳೂರು ಭಾಗಕ್ಕೆ ತೆರಳುವ ಪ್ರಯಾಣಿಕರು ಕೃತಕ ನೆರೆಯಲ್ಲೇ ನಿಂತು ಬಸ್ಸಿಗೆ ಕಾಯಬೇಕಾದ ಸ್ಥಿತಿ ಇದೆ.
ಬಿ.ಸಿ.ರೋಡ್‌ನ ಸರ್ವಿಸ್ ರಸ್ತೆಯಲ್ಲಿ ಮಂಗಳೂರು ಭಾಗಕ್ಕೆ ತೆರಳುವ ಬಸ್ ಗಳು ನಿಲ್ಲುವ ಸ್ಥಳದಲ್ಲಿ ಕಾಮಗಾರಿ ಅವ್ಯವಸ್ಥೆಯ ಪರಿಣಾಮ ಕಳೆದ ಹಲವು ವರ್ಷಗಳಿಂದ ಕೃತಕ ನೆರೆಯ ಸ್ಥಿತಿ ಇದ್ದು, ಸಾಕಷ್ಟು ಬಾರಿ ಸಂಬಂಧಪಟ್ಟ ಅಧಿ ಕಾರಿಗಳ ಗಮನಕ್ಕೆ ತಂದರೂ ಯಾವುದೇ ಸ್ಪಂದನೆ ಸಿಕ್ಕಿಲ್ಲ. ಹೀಗಾಗಿ ಪ್ರತೀ ವರ್ಷವೂ ಮಳೆಗಾಲದಲ್ಲಿ ಪ್ರಯಾಣಿಕರು ಕೃತಕ ನೆರೆಯಲ್ಲೇ ಬಸ್ಸಿಗೆ ಕಾಯಬೇಕಿದೆ.
ಗಮನಹರಿಸಿಲ್ಲ
ಇದು ಹೆದ್ದಾರಿ ಪ್ರದೇಶದಲ್ಲಿ ಇರುವುದರಿಂದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ(ಎನ್‌ಎಚ್‌ಎಐ)ದ ವ್ಯಾಪ್ತಿಗೆ ಬರುವುದರಿಂದ ಅಲ್ಲಿ ಅಧಿಕಾರಿಗಳು ಇತ್ತ ಗಮನಹರಿಸುವುದೇ ಇಲ್ಲ. ಅವರು ಇಲಾಖೆ ನೀಡಿದ ವಾಹನದಲ್ಲಿ ತಿರುಗಾಡುವುದರಿಂದ ಕೃತಕ ನೆರೆಯ ಪರಿಸ್ಥಿತಿಯಲ್ಲಿ ಸಮಸ್ಯೆಯಾಗಿಲ್ಲ.
Related Articles
ಸಮಸ್ಯೆ ಪರಿಹರಿಸಬೇಕಾದ ಬಂಟ್ವಾಳ ಪುರಸಭೆಯ ಅಧಿಕಾರಿಗಳು ಕೂಡ ಇತ್ತ ಗಮನವೇ ಹರಿಸುತ್ತಿಲ್ಲ.
ಇಲ್ಲಿ ಕಾಂಕ್ರೀಟ್ ಹೆದ್ದಾರಿ ಇದ್ದು, ಪಕ್ಕದಲ್ಲೇ ಚರಂಡಿ ಇದ್ದರೂ ಅದಕ್ಕೆ ನೀರು ಹೋಗಲು ಸರಿಯಾದ ವ್ಯವಸ್ಥೆ ಮಾಡದೆ ಇರುವುದರಿಂದ ಇಂತಹ ಸ್ಥಿತಿ ಇದೆ. ಜತೆಗೆ ತಳಭಾಗದಲ್ಲಿ ಕಾಂಕ್ರೀಟ್ ಇರುವುದರಿಂದ ನೀರು ಇಂಗದೆ ಹಾಗೇ ನಿಲ್ಲುತ್ತದೆ. ಕಳೆದ ಕೆಲವು ದಿನಗಳಿಂದ ನಿರಂತರ ಮಳೆಯಾಗುತ್ತಿರುವುದರಿಂದ ದಿನದ ಎಲ್ಲ ಹೊತ್ತು ಕೂಡ ಈ ಭಾಗದಲ್ಲಿ ನೆರೆಯ ರೀತಿ ನೀರು ನಿಲ್ಲುತ್ತಿದೆ.
ಇಲ್ಲಿ ದಿನನಿತ್ಯ ಸಾವಿರಾರು ಪ್ರಯಾ ಣಿಕರು ಬಸ್ಸಿಗೆ ಕಾಯಬೇಕಿದ್ದು, ದೂರದ ಊರು ಸೇರಿ ಪುತ್ತೂರು, ಧರ್ಮಸ್ಥಳ, ವಿಟ್ಲ, ಉಪ್ಪಿನಂಗಡಿ ಮೊದಲಾದ ಭಾಗಗಳಿಂದ ಮಂಗಳೂರಿಗೆ ತೆರಳುವ ಬಸ್‌ಗಳು ಇಲ್ಲೇ ಪ್ರಯಾಣಿಕರನ್ನು ಇಳಿಸುತ್ತವೆ. ಇಲ್ಲಿನ ಅವ್ಯವಸ್ಥೆಯ ಪರಿಣಾಮ ಅವರೆಲ್ಲರೂ ನೀರಿನಲ್ಲೇ ಇಳಿಯಬೇಕಾದ ಸ್ಥಿತಿ ಇದೆ.