Advertisement

ಬಿ.ಸಿ.ರೋಡು-ಅಡ್ಡಹೊಳೆ ಚತುಷ್ಪಥ ಹೆದ್ದಾರಿ ಕಾಮಗಾರಿ: ಕ್ಯೂರಿಂಗ್‌ ಬಳಿಕ ಹೊಸ ರಸ್ತೆಯಲ್ಲಿ ಸಂಚಾರಕ್ಕೆ ಅವಕಾಶ

11:27 PM Jan 01, 2023 | Team Udayavani |

ಬಂಟ್ವಾಳ: ರಾಷ್ಟ್ರೀಯ ಹೆದ್ದಾರಿ-75ರ ಬಿ.ಸಿ.ರೋಡು-ಅಡ್ಡಹೊಳೆ ಚತುಷ್ಪಥ ಕಾಮಗಾರಿ ವೇಗವಾಗಿ ಸಾಗುತ್ತಿದ್ದು, ಕಾಂಕ್ರೀಟ್‌ ಕಾಮಗಾರಿ ಪೂರ್ಣಗೊಂಡು ಕ್ಯೂರಿಂಗ್‌ ನಡೆದ ಸ್ಥಳಗಳಲ್ಲಿ ಹೊಸ ಕಾಂಕ್ರೀಟ್‌ ರಸ್ತೆಯಲ್ಲಿ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗುತ್ತಿದೆ. ಕಲ್ಲಡ್ಕ ಸಮೀಪದ ದಾಸಕೋಡಿ-ಸೂರಿಕುಮೇರು ಭಾಗದಲ್ಲಿ ಈಗಾಗಲೇ ಒಂದು ಬದಿಯಲ್ಲಿ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ.

Advertisement

ಒಟ್ಟು 64 ಕಿ.ಮೀ. ಉದ್ದದ ಬಿ.ಸಿ.ರೋಡು-ಅಡ್ಡಹೊಳೆ ಚತುಷ್ಪಥ ಹೆದ್ದಾರಿ ಕಾಮಗಾರಿಯನ್ನು 2 ಕಂಪೆನಿಗಳಿಗೆ ಟೆಂಡರ್‌ ವಹಿಸಲಾಗಿದ್ದು, ಅಡ್ಡಹೊಳೆ- ಪೆರಿಯಶಾಂತಿ ಭಾಗದ 15 ಕಿ.ಮೀ. ಕಾಮಗಾರಿಯನ್ನು 317 ಕೋ.ರೂ.ಗಳಲ್ಲಿ ಪುಣೆ ಮೂಲದ ಎಸ್‌.ಎಂ. ಔತಾಡೆ ಪ್ರೈ ಲಿ.ಕಂಪೆನಿ ನಿರ್ವಹಿಸುತ್ತಿದ್ದು, ಪೆರಿಯಶಾಂತಿ-ಬಿ.ಸಿ.ರೋಡು ಭಾಗದ 49 ಕಿ.ಮೀ.ಹೆದ್ದಾರಿ ಕಾಮಗಾರಿಯನ್ನು 1,600 ಕೋ.ರೂ.ಗಳಲ್ಲಿ ಹೈದರಾಬಾದ್‌ ಮೂಲದ ಕೆಎನ್‌ಆರ್‌ ಸಂಸ್ಥೆ ನಿರ್ವಹಿಸುತ್ತಿದೆ.

ಎರಡೂ ಕಡೆ ಪ್ರತ್ಯೇಕವಾಗಿ ಕಾಮಗಾರಿ ನಡೆಯುತ್ತಿರುವುದರಿಂದ ವೇಗವಾಗಿ ಸಾಗಲು ಅನುಕೂಲವಾಗಿದೆ. ಕಾಮಗಾರಿಗಾಗಿ ಅಗೆದ ಕಡೆ ಕುಡಿಯುವ ನೀರಿನ ಪೈಪ್‌ಲೈನ್‌ ಒಡೆದ ಸಮಸ್ಯೆ, ಕನೆಕ್ಟಿಂಗ್‌ ರಸ್ತೆ ಸಮಸ್ಯೆ, ಮಳೆಗಾಲದಲ್ಲಿ ಕೆಸರಿನ ಸಮಸ್ಯೆ, ಕೆಲವೆಡೆ ಧೂಳಿನ ಸಮಸ್ಯೆ ಆರೋಪವೂ ಆಗಾಗ್ಗೆ ಕೇಳಿಬರುತ್ತಿದೆ.

ಮಾಣಿ-ಉಪ್ಪಿನಂಗಡಿ ಕಾಮಗಾರಿ ನಡೆದಿಲ್ಲ
ಪ್ರಸ್ತುತ ಪರಿಸ್ಥಿತಿಯಲ್ಲಿ ಬಿ.ಸಿ.ರೋಡಿನಿಂದ-ಮಾಣಿವರೆಗಿನ ಕಾಮಗಾರಿ ವೇಗವಾಗಿ ಸಾಗುತ್ತಿದ್ದು, ಮಾಣಿಯಿಂದ ಉಪ್ಪಿನಂಗಡಿಯ ಸುಬ್ರಹ್ಮಣ್ಯ ಕ್ರಾಸ್‌ವರೆಗೆ ಹೆಚ್ಚಿನ ಕಾಮಗಾರಿ ನಡೆದಿಲ್ಲ. ಆದರೆ ಅಲ್ಲಿಂದ ಕೊಂಚಮಟ್ಟಿಗೆ ರಸ್ತೆ ವಿಸ್ತರಣೆ, ಕಾಂಕ್ರೀಟ್‌ ಕಾಮಗಾರಿಗಳು ನಡೆಯುತ್ತಿದ್ದು, ಗುಂಡ್ಯ ಭಾಗದಲ್ಲಿ ಮತ್ತೆ ಚುರುಕಿನ ಕಾಮಗಾರಿ ನಡೆಯುತ್ತಿದೆ.

ಪಾಣೆಮಂಗಳೂರು ಹಾಗೂ ಉಪ್ಪಿನಂಗಡಿಯಲ್ಲಿ ಸೇತುವೆ ಕಾಮಗಾರಿ ನಡೆಯುತ್ತಿದ್ದು, ಕಲ್ಲಡ್ಕದಲ್ಲಿ ಫ್ಲೆ$çಓವರ್‌ಗೆ ಪಿಲ್ಲರ್‌ಗಳ ನಿರ್ಮಾಣವೂ ಬಹುತೇಕ ಪೂರ್ಣಗೊಂಡಿದೆ. ಪಾಣೆಮಂಗಳೂರು, ಮೆಲ್ಕಾರ್‌, ಮಾಣಿ, 34ನೇ ನೆಕ್ಕಿಲಾಡಿ ಬಳಿ ಪುತ್ತೂರು ಕ್ರಾಸ್‌, ಉಪ್ಪಿನಂಗಡಿ ಸುಬ್ರಹ್ಮಣ್ಯ ಕ್ರಾಸ್‌ ಬಳಿ ಅಂಡರ್‌ಪಾಸ್‌ ಕಾಮಗಾರಿಯೂ ಪ್ರಗತಿಯಲ್ಲಿದೆ.

Advertisement

ಒಂದು ತಿಂಗಳ ಕ್ಯೂರಿಂಗ್‌
ಕಲ್ಲಡ್ಕದಲ್ಲಿ ಮಾಣಿ ಭಾಗಕ್ಕೆ ಸಾಗುವ ಭಾಗದಲ್ಲಿ ಬಹುತೇಕ ಕಡೆ ಒಂದು ಬದಿಯ ಕಾಂಕ್ರೀಟ್‌ ಕಾಮಗಾರಿ ಪೂರ್ಣಗೊಂಡಿದ್ದು, ಸುಮಾರು ಒಂದು ತಿಂಗಳ ಕ್ಯೂರಿಂಗ್‌ ಆಗಬೇಕಿರುವುದರಿಂದ ಹೆಚ್ಚಿನ ಕಡೆಗಳಲ್ಲಿ ಕ್ಯೂರಿಂಗ್‌ ಅವಧಿ ಪ್ರಗತಿಯಲ್ಲಿದೆ. ಉಪ್ಪಿನಂಗಡಿಯಿಂದ ನೆಲ್ಯಾಡಿ ಭಾಗದಲ್ಲೂ ಕೆಲವೆಡೆ ಕಾಂಕ್ರೀಟ್‌ ಕಾಮಗಾರಿ ಪೂರ್ಣಗೊಂಡಿದೆ.

ಹೀಗೆ ಕ್ಯೂರಿಂಗ್‌ ಪೂರ್ಣಗೊಂಡಿರುವ ಕಡೆ ಹೆದ್ದಾರಿಯನ್ನು ಹಂತ ಹಂತವಾಗಿ ಸಂಚಾರಕ್ಕೆ ಮುಕ್ತಗೊಳಿಸಿ ಮತ್ತೂಂದು ಬದಿಯ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. ಆಗ ಅನಿವಾರ್ಯವಾಗಿ ಹೊಸ ಕಾಂಕ್ರೀಟ್‌ ರಸ್ತೆಯಲ್ಲಿ ಸಂಚಾರಕ್ಕೆ ಅವಕಾಶ ನೀಡಬೇಕಾಗುತ್ತದೆ ಎಂದು ಗುತ್ತಿಗೆ ಕಂಪೆನಿಯ ಮೂಲಗಳು ತಿಳಿಸಿದೆ.

ಸಾಧ್ಯವಾದಷ್ಟು ಬೇಗ ಮುಗಿಸುವ ಯೋಚನೆ
ಪ್ರಸ್ತುತ ಕಾಂಕ್ರೀಟ್‌ ಪೂರ್ಣಗೊಂಡು ಕ್ಯೂರಿಂಗ್‌ ಆಗಿರುವ ಪ್ರದೇಶದ ಹೊಸ ರಸ್ತೆಯಲ್ಲಿ ಸಂಚಾರಕ್ಕೆ ಅವಕಾಶ ಕಲ್ಪಸಲಾಗುತ್ತಿದ್ದು, ಹಂತ ಹಂತವಾಗಿ ಪೂರ್ಣಗೊಂಡ ಕಡೆ ವಾಹನ ಸಂಚರಿಸಲಿದೆ. ಮಳೆಗಾಲಕ್ಕೂ ಮುನ್ನ ಸಾಧ್ಯವಾದಷ್ಟು ಕಾಮಗಾರಿ ಮುಗಿಸುವ ಯೋಚನೆ ಇದೆ.
– ಎಚ್‌.ಆರ್‌.ಲಿಂಗೇಗೌಡ, ಯೋಜನಾ ನಿರ್ದೇಶಕರು, ಎನ್‌ಎಚ್‌ಎಐ, ಮಂಗಳೂರು ವಿಭಾಗ

Advertisement

Udayavani is now on Telegram. Click here to join our channel and stay updated with the latest news.

Next