ಬೆಂಗಳೂರು: ಅಪೌಷ್ಟಿಕತೆ ನಿವಾರಣೆ ನಮ್ಮ ಸರಕಾರದ ಆದ್ಯತೆಯಾಗಿದ್ದು, ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟದ ಜತೆಗೆ ಕೋಳಿ ಮೊಟ್ಟೆ ಕೊಡುವ ಧೈರ್ಯ ಮಾಡಿದ್ದೇ ನಮ್ಮ ಸರಕಾರ, ಯಾವುದೇ ವಿರೋಧ ಬಂದರೂ ಅದನ್ನು ಮುಂದುವರಿಸುತ್ತೇವೆ ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಹೇಳಿದ್ದಾರೆ.
ಪ್ರಶ್ನೋತ್ತರ ಕಲಾಪದಲ್ಲಿ ಜೆಡಿಎಸ್‌ನ ಕೆ.ಎ. ತಿಪ್ಪೇಸ್ವಾಮಿ, ಮೊಟ್ಟೆ ದರ ಹೆಚ್ಚಾಗಿದೆ ಎಂಬ ಸಬೂಬು ಕೊಟ್ಟು ಕಳೆದ ಅಕ್ಟೋಬರ್, ನವೆಂಬರ್ ಮತ್ತು ಡಿಸೆಂಬರ್‌ನಿಂದ ಶಾಲಾ ಮಕ್ಕಳಿಗೆ ಮೊಟ್ಟೆ ವಿತರಣೆ ಮಾಡಿಲ್ಲ. ಈ ಹಿಂದೆ ಗುಣಮಟ್ಟದ ಮೊಟ್ಟೆಯೂ ಕೊಟ್ಟಿಲ್ಲ ಎಂದು ಆರೋಪಿಸಿದರು. ಇದಕ್ಕೆ ವಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್ ಸಹ ಧ್ವನಿಗೂಡಿಸಿ ಅನೇಕ ಶಾಲೆಗಳಲ್ಲಿ ಮೊಟ್ಟೆ ಕೊಡುವುದನ್ನು ನಿರಾಕರಿಸಲಾಗುತ್ತಿದೆ ಎಂದರು.
ಇದಕ್ಕೆ ಉತ್ತರಿಸಿದ ಸಚಿವರು, ಶಾಲಾ ಮಕ್ಕಳಿಗೆ ಮೊಟ್ಟೆ ನೀಡುವ ಬಗ್ಗೆ 2007ಕ್ಕಿಂತ ಮುಂಚೆ ಚರ್ಚೆ ಆರಂಭವಾಯಿತು. ಕೊನೆಗೆ ಮೊಟ್ಟೆ ಕೊಡಬೇಕು ಎಂದು 2007ರಲ್ಲಿ ತೀರ್ಮಾನವಾಯಿತು. ಆದರೆ, ಆಗಿನ ಸರಕಾರಗಳಿಗೆ ಯಾವ ಪಕ್ಷದ ಅಥವಾ ಯಾರ ಒತ್ತಡ ಇತ್ತೋ ಗೊತ್ತಿಲ್ಲ. ಮೊಟ್ಟೆ ವಿತರಣೆ ಮಾಡಲು ನಾವು ಧೈರ್ಯ ಮಾಡಿದ್ದೇವೆ. ಮೊದಲು ಅಪೌಷ್ಟಿಕತೆ ಹೆಚ್ಚಿರುವ ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲಿ ಪ್ರಾರಂಭಿಸಲಾಯಿತು. ಇದರ ಬಗ್ಗೆ ಗ್ರಾಮೀಣಾಭಿವೃದ್ಧಿ ವಿವಿ ವತಿಯಿಂದ ಅಧ್ಯಯನ ನಡೆಸಲಾಯಿತು. ಮೊಟ್ಟೆ ವಿತರಣೆ ಪೌಷ್ಠಿಕತೆ ಹೆಚ್ಚಳಕ್ಕೆ ನೆರವು ಆಗಿದೆ ಎಂದು ವಿವಿ ವರದಿ ಕೊಟ್ಟಿತು. ಅದನ್ನು ಆಧರಿಸಿ ವಾರದಲ್ಲಿ 2 ದಿನದಂತೆ ವರ್ಷದಲ್ಲಿ 46 ದಿನ ಬಿಸಿಯೂಟದ ಜತೆಗೆ 1 ರಿಂದ 8ನೇ ತರಗತಿ ಮಕ್ಕಳಿಗೆ ಕೋಳಿ ಮೊಟ್ಟೆ ವಿತರಣೆಯನ್ನು ಉಳಿದ ಜಿಲ್ಲೆಗಳಿಗೆ ವಿಸ್ತರಿಸಲಾಗಿದೆ. ಯಾವುದೇ ವಿರೋಧ ಬಂದರೂ ಮೊಟ್ಟೆ ವಿತರಣೆ ಮುಂದುವರಿಸುತ್ತೇವೆ. ಮೊಟ್ಟೆ ಬೇಡ ಅಂದವರಿಗೆ ಬಲವಂತ ಮಾಡುವುದಿಲ್ಲ. ಮೊಟ್ಟೆ ನಿರಾಕರಿಸಲಾಗುತ್ತಿದೆ ಎಂಬ ಆರೋಪ ಸರಿಯಲ್ಲ. ಮೊಟ್ಟ ಬೇಡ ಅಂದವರಿಗೆ ಬಾಳೆಹಣ್ಣು ಅಥವಾ ಚಿಕ್ಕಿಯನ್ನು ಪೂರೈಸಲು 2021-22ರಿಂದ ಕ್ರಮ ಕೈಗೊಳ್ಳಲಾಗಿದೆ. 2022-23ನೇ ಸಾಲಿನಿಂದ ಎಲ್ಲ ಜಿಲ್ಲೆಗಳಿಗೆ ಈ ಕಾರ್ಯಕ್ರಮ ವಿಸ್ತರಿಸಲಾಗಿದೆ ಎಂದರು.
“ಸಾತ್ವಿಕ ಆಹಾರ’: ಚರ್ಚೆ ಆಗಿಲ್ಲ
ಶಾಲಾ ಮಕ್ಕಳಿಗೆ ನೈತಿಕ ಶಿಕ್ಷಣ ನೀಡುವ ಕುರಿತು ಇತ್ತೀಚೆಗೆ ಕರೆಯಲಾಗಿದ್ದ ದುಂಡು ಮೇಜಿನ ಸಭೆಯಲ್ಲಿ ಶಿಕ್ಷಣ ತಜ್ಞರಿಂದ, ಕೆಲವು ಮಠಾಧೀಶರಿಂದ ಮತ್ತು ಸಂಘ-ಸಂಸ್ಥೆಗಳಿಗೆ ಮೊಟ್ಟೆಯ ಬದಲು ಸಸ್ಯಹಾರಿ/ಸಾತ್ವಿಕ ಆಹಾರ ನೀಡುವಂತೆ ಮೌಖೀಕ ಮತ್ತು ಲಿಖೀತವಾಗಿ ಸಲಹೆಗಳು ಬಂದಿವೆ. ಆದರೆ, ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯ ವರದಿಯ ಪ್ರಕಾರ ವಿದ್ಯಾರ್ಥಿಗಳಿಗೆ ಪೂರಕ ಪೌಷ್ಠಿಕಾಂಶ ರೂಪದಲ್ಲಿ ಮೊಟ್ಟೆ ಅಥವಾ ಮೊಟ್ಟೆ ಸೇವಿಸದ ಮಕ್ಕಳಿಗೆ ಬಾಳೆಹಣ್ಣು ಮತ್ತು ಚಿಕ್ಕಿ ಪೂರೈಸುವುದನ್ನು ಮುಂದುವರಿಸಲಾಗುತ್ತಿದೆ ಎಂದು ಸಚಿವ ಬಿ.ಸಿ. ನಾಗೇಶ್ ಸ್ಪಷ್ಟನೆ ನೀಡಿದರು.