Advertisement

ತೆರಿಗೆ ಹೆಚ್ಚಳದ ಶಾಕ್‌ ನೀಡಲಿದೆ ಪಾಲಿಕೆ

12:43 AM May 07, 2019 | Lakshmi GovindaRaj |

ಬೆಂಗಳೂರು: ಲೋಕಸಭಾ ಚುನಾವಣೆ ಬಳಿಕ ನಿಯಮದಂತೆ ಆಸ್ತಿ ತೆರಿಗೆ ಹೆಚ್ಚಿಸುವ ಮೂಲಕ ಬೆಂಗಳೂರಿನ ಆಸ್ತಿ ಮಾಲೀಕರಿಗೆ ಶಾಕ್‌ ನೀಡಲು ಬಿಬಿಎಂಪಿ ಸಜ್ಜಾಗಿದ್ದು, ಈ ಕುರಿತು ಉಪಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲು ಮೇಯರ್‌ಗಂಗಾಂಬಿಕೆ ಮುಂದಾಗಿದ್ದಾರೆ.

Advertisement

ಕರ್ನಾಟಕ ಮುನ್ಸಿಪಲ್‌ ಕಾಯ್ದೆ ಪ್ರಕಾರ ಪ್ರತಿ 3 ವರ್ಷಕ್ಕೊಮ್ಮೆ ಸ್ಥಳೀಯ ಸಂಸ್ಥೆಗಳು ತನ್ನ ವ್ಯಾಪ್ತಿಯ ಆಸ್ತಿಗಳ ತೆರಿಗೆ ಹೆಚ್ಚಿಸಬಹುದಾಗಿದೆ. ಆ ಹಿನ್ನೆಲೆಯಲ್ಲಿ ಅಧಿಕಾರಿಗಳು ತೆರಿಗೆ ಹೆಚ್ಚಳಕ್ಕೆ ಸಂಬಂಧಿಸಿದಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಈವರೆಗೆ ಅನುಮೋದನೆ ಸಿಕ್ಕಿಲ್ಲ.

ಆ ಹಿನ್ನೆಲೆಯಲ್ಲಿ ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆದ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಅವರೊಂದಿಗೆ ಚರ್ಚಿಸಲು ತೀರ್ಮಾನಿಸಿದ್ದಾರೆ. ಕೆಎಂಸಿ ಕಾಯ್ದೆಯಂತೆ ಪಾಲಿಕೆಯಲ್ಲಿ 2016-17ನೇ ಸಾಲಿನಲ್ಲಿ ಶೇ.20 ರಿಂದ 25ವರೆಗೆ ತೆರಿಗೆ ಹೆಚ್ಚಿಸಲಾಗಿತ್ತು.

ಅದರಂತೆ 2019-20ನೇ ಸಾಲಿನಲ್ಲಿ ತೆರಿಗೆ ಹೆಚ್ಚಳ ಮಾಡಬೇಕಿದೆ. ಆದರೆ, ಲೋಕಸಭಾ ಚುನಾವಣೆ ಬಂದ ಪರಿಣಾಮ ತೆರಿಗೆ ಹೆಚ್ಚಿಸಲು ಸರ್ಕಾರ ಮುಂದಾಗಿಲ್ಲ. ಇದೀಗ ಸ್ವತಃ ಮೇಯರ್‌ ಅವರೇ ಪರಮೇಶ್ವರ್‌ ಅವರೊಂದಿಗೆ ಚರ್ಚಿಸುತ್ತೇನೆ ಎಂದಿದ್ದು, ಬಿಬಿಎಂಪಿ ಚುನಾವಣೆಯ ಗಮನದಲ್ಲಿಟ್ಟುಕೊಂಡು ತೆರಿಗೆ ಹೆಚ್ಚಳಕ್ಕೆ ಹಿಂದೇಟು ಹಾಕುವುದಿಲ್ಲ ಎಂದು ಹೇಳಿದರು.

ಬೆಂಗಳೂರು ಮಹಾನಗರ ಪಾಲಿಕೆ ಬಿಬಿಎಂಪಿಯಾಗಿ ಪರಿವರ್ತನೆಗೊಂಡ ನಂತರದಿಂದ ತೆರಿಗೆ ಹೆಚ್ಚಳ ಮಾಡಿರಲಿಲ್ಲ. ಅಂದರೆ 2008ರಂದು ತೆರಿಗೆ ಹೆಚ್ಚಳ ಮಾಡಲಾಗಿತ್ತು. ಅದಾದ ನಂತರ 2010ರಲ್ಲಿ ಬಿಬಿಎಂಪಿ ಚುನಾವಣೆ ನಡೆದಿತ್ತು. ಅದಾದ 3 ವರ್ಷಗಳ ನಂತರ ತೆರಿಗೆ ಹೆಚ್ಚಿಸಬೇಕಿತ್ತು. ಆದರೆ, ವಿಧಾನಸಭೆ, ಲೋಕಸಭೆ ಹಾಗೂ ಬಿಬಿಎಂಪಿ ಚುನಾವಣೆಗಳು ಎದುರಾದ ಹಿನ್ನೆಲೆಯಲ್ಲಿ ತೆರಿಗೆ ಹೆಚ್ಚಳಕ್ಕೆ ಸರ್ಕಾರ ಮನಸ್ಸು ಮಾಡಿರಲಿಲ್ಲ.

Advertisement

2015ರಲ್ಲಿ ಬಿಬಿಎಂಪಿ ಚುನಾವಣೆ ನಡೆದ ನಂತರ ಅಧಿಕಾರಕ್ಕೆ ಬಂದ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಮೈತ್ರಿ ಆಡಳಿತ 2016-17ರಿಂದ ತೆರಿಗೆ ಹೆಚ್ಚಳ ಮಾಡಿ ಕ್ರಮ ಕೈಗೊಂಡಿತ್ತು. ಆದರೀಗ 2020ರಲ್ಲಿ ಮತ್ತೆ ಬಿಬಿಎಂಪಿಗೆ ಚುನಾವಣೆ ನಡೆಯುವುದರಿಂದ ಮೈತ್ರಿ ಆಡಳಿತವು ತೆರಿಗೆ ಹೆಚ್ಚಿಸಿ ಬೆಂಗಳೂರು ಜನರನ್ನು ಎದುರು ಹಾಕಿಕೊಳ್ಳುವುದೇ ಕಾದುನೋಡಬೇಕಿದೆ.

ಶೇ. 20ರಿಂದ 25 ಹೆಚ್ಚಳ?: ತೆರಿಗೆ ಹೆಚ್ಚಳ ಕುರಿತಂತೆ ಇತ್ತೀಚೆಗೆ ಸರ್ಕಾರಕ್ಕೆ ಪತ್ರ ಬರೆದಿದ್ದ ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ಅವರು, ವಸತಿ ಕಟ್ಟಡಗಳಿಗೆ ಶೇ.20 ಮತ್ತು ವಾಣಿಜ್ಯ ಆಸ್ತಿಗಳಿಗೆ ಶೇ.25ರಷ್ಟು ತೆರಿಗೆ ಹೆಚ್ಚಿಸಲು ಅನುಮೋದನೆ ನೀಡಬೇಕೆಂದು ಪ್ರಸ್ತಾವನೆ ಸಲ್ಲಿಸಿದ್ದರು. ಆದರೆ, ಲೋಕಸಭಾ ಚುನಾವಣೆಯ ನೀತಿ ಸಂಹಿತೆ ಜಾರಿಯಾದ ಹಿನ್ನೆಲೆಯಲ್ಲಿ ಸರ್ಕಾರ ಅನುಮೋದನೆ ನೀಡಿಲ್ಲ. ಇದೀಗ ಲೋಕಸಭೆ ಚುನಾವಣೆ ಮುಗಿಯುವ ಹಂತದಲ್ಲಿರುವುದರಿಂದ ಹಳೆಯ ಪ್ರಸ್ತಾವನೆಗೆ ಮರುಜೀವ ನೀಡಲು ಮೇಯರ್‌ ಮುಂದಾಗಿದ್ದಾರೆ.

ಐದು ವರ್ಷಗಳ ತೆರಿಗೆ ಸಂಗ್ರಹ ಪ್ರಮಾಣ
ವರ್ಷ ಗುರಿ ಸಂಗ್ರಹ (ಕೋಟಿ ರೂ.ಗಳಲ್ಲಿ)
-2014-15 2,900 1,810
-2015-16 2,456 1,960
-2016-17 2,300 2,179
-2017-18 2,600 2,173
-2018-19 3,100 2,530

ಕೆಎಂಸಿ ಕಾಯ್ದೆಯಂತೆ ಪ್ರತಿ ಮೂರು ವರ್ಷಗಳಿಗೊಮ್ಮೆ ತೆರಿಗೆ ಹೆಚ್ಚಿಸಲು ಅವಕಾಶವಿದೆ. ಅದರಂತೆ ಈಗಾಗಲೇ ಅಧಿಕಾರಿಗಳು ತೆರಿಗೆ ಹೆಚ್ಚಳ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಉಪಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗುವುದು.
-ಗಂಗಾಂಬಿಕೆ, ಬಿಬಿಎಂಪಿ ಮೇಯರ್‌

Advertisement

Udayavani is now on Telegram. Click here to join our channel and stay updated with the latest news.

Next