Advertisement

ಮಾಲಿನ್ಯಕ್ಕೆ ಎಚ್ಚೆತ್ತ ಬಿಬಿಎಂಪಿ

10:44 AM Dec 28, 2017 | |

ಬೆಂಗಳೂರು: ನವದೆಹಲಿಯಲ್ಲಿ ವಾಯುಮಾಲಿನ್ಯ ಪ್ರಮಾಣ ಹೆಚ್ಚಾಗಿ ಉಂಟಾದ ಪರಿಣಾಮಗಳಿಂದ ಬಿಬಿಎಂಪಿ ಎಚ್ಚೆತ್ತುಕೊಂಡಿದ್ದು, ದೆಹಲಿ ಪರಿಸ್ಥಿತಿ ನಗರಕ್ಕೆ ಬರಬಾರದು ಎಂಬ ಕಾಳಜಿಯಿಂದ ವಾಯು ಮಾಲಿನ್ಯ ನಿಯಂತ್ರಣಕ್ಕೆ ಸ್ಥಳೀಯ ಸಂಸ್ಥೆಗಳು ಕೈಗೊಳ್ಳ ಬೇಕಾದ ಪರಿಹಾರ ಕ್ರಮಗಳ ಕುರಿತ ಚರ್ಚಿಸಲು ಬುಧವಾರ ವಿಶೇಷ ಸಭೆ ಕರೆಯಲಾಗಿತ್ತು.

Advertisement

ನಗರದಲ್ಲಿ ಮಿತಿಮೀರಿದ ವಾಹನಗಳ ಬಳಕೆ, ರಸ್ತೆಗಳ ಅಸಮರ್ಪಕ ನಿರ್ವಹಣೆ ಹಾಗೂ ಮುಂಜಾಗ್ರತೆ ಇಲ್ಲದ ಅಭಿವೃದ್ಧಿ ಕಾಮಗಾರಿಗಳಿಂದ ಮಾಲಿನ್ಯ ಪ್ರಮಾಣ ಹೆಚ್ಚಿದೆ. ಜತೆಗೆ ಬೆಂಗಳೂರು, ಅಂತಾರಾಷ್ಟ್ರೀಯ “ಸಿ40 ಸಿಟೀಸ್‌ ನೆಟ್‌ವರ್ಕ್‌ ಗ್ರೂಪ್‌’ನ ನಾಯಕತ್ವ ವಹಿಸಿಕೊಂಡಿರುವ ಹಿನ್ನೆಲೆಯಲ್ಲಿ ಈ ವಿಶೇಷ ಸಭೆ ಮಹತ್ವದ್ದೆನಿಸಿದೆ. ಪಾಲಿಕೆಯ ಕೆಂಪೇಗೌಡ ಪೌರಸಭಾಂಗಣದಲ್ಲಿ ಬುಧವಾರ ನಡೆದ ವಿಶೇಷ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌, ವಾಯು ಮಾಲಿನ್ಯದಿಂದ ನಿತ್ಯ ದೇಶದಲ್ಲಿ 3,283 ಮಂದಿಯಂತೆ ವಾರ್ಷಿಕ 12 ಲಕ್ಷ ಜನ ಮೃತಪಡುತ್ತಾರೆ. ಈ ನಿಟ್ಟಿನಲ್ಲಿ ನಗರದ ಜನತೆಯ ಆರೋಗ್ಯ ಕಾಪಾಡುವ ಉದ್ದೇಶ ದಿಂದ ಮಾಲಿನ್ಯ ಪ್ರಮಾಣ ನಿಯಂತ್ರಿಸಲು ಕೂಡಲೇ ಕಾರ್ಯಪ್ರವೃತ್ತರಾಗಬೇಕಿದೆ ಎಂದು ತಿಳಿಸಿದರು. 

ನಗರದಲ್ಲಿ ವಾಹನಗಳ ಸಂಖ್ಯೆ ಪ್ರತಿ ವರ್ಷ ಶೇ.10ರಷ್ಟು ಹೆಚ್ಚುತ್ತಿದ್ದು, ನಗರದಲ್ಲಿ ಸದ್ಯ 72.66 ಲಕ್ಷ ವಾಹನಗಳಿವೆ. ವಾಯುಮಾಲಿನ್ಯಕ್ಕೆ ವಾಹನಗಳ ಕೊಡುಗೆ ಶೇ.42ರಷ್ಟಿದ್ದು, ರಸ್ತೆ ಧೂಳಿನಿಂದ ಶೇ.20, ಕೈಗಾರಿಕೆಗಳಿಂದ ಶೇ.14, ಅಭಿವೃದ್ಧಿ ಕಾಮಗಾರಿಗಳಿಂದ ಶೇ.14, ಡಿ.ಜಿ.ಸೆಟ್‌ಗಳಿಂದ ಶೇ.7 ಹಾಗೂ ಇತರೆ ಮೂಲಗಳಿಂದ ಶೇ.3ರಷ್ಟು ವಾಯು ಮಾಲಿನ್ಯ ಉಂಟಾಗುತ್ತಿದೆ ಎಂದು ಮಾಹಿತಿ ನೀಡಿದರು. ಬಿಬಿಎಂಪಿ ವ್ಯಾಪ್ತಿಯಲ್ಲಿ 14 ಸಾವಿರ ಕಿ.ಮೀ ಉದ್ದದ ಒಟ್ಟು 93 ಸಾವಿರ ರಸ್ತೆಗಳಿದ್ದು, ರಸ್ತೆಗಳಲ್ಲಿನ ಧೂಳು ಸಹ ವಾಯು ಮಾಲಿನ್ಯಕ್ಕೆ ಕಾರಣವಾಗಿದೆ. 

ನಗರದಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ 16 ಕಡೆಗಳಲ್ಲಿ ಮಾಲಿನ್ಯ ಮಾಪನಗಳನ್ನು ಅಳವಡಿಸಿದ್ದು, ಆ ಪೈಕಿ 15 ಮಾಪನ ಕೇಂದ್ರಗಳಲ್ಲಿ ಧೂಳಿನ ಕಣಗಳಾದ ಪಿಎಂ 10 ಹಾಗೂ ಪಿಎಂ 2.5 ಕಣಗಳು ರಾಷ್ಟ್ರೀಯ ಮಿತಿಗಿಂತ ಹೆಚ್ಚಿರುವುದು ಆತಂಕ ಮೂಡಿಸಿದೆ. ಹೀಗಾಗಿ ಮಾಲಿನ್ಯ ನಿಯಂತ್ರಣಕ್ಕೆ ಎಲೆಕ್ಟ್ರಾನಿಕ್‌ ವಾಹನಗಳು ಹಾಗೂ ಸಮೂಹ ಸಾರಿಗೆಗೆ ಹೆಚ್ಚು ಆದ್ಯತೆ ನೀಡಬೇಕಿದೆ ಎಂದು ಸಲಹೆ ನೀಡಿದರು. 

ಬುದ್ಧಿಮಾಂದ್ಯರಾಗ್ತಾರೆ!: “ನಾಯಂಡಹಳ್ಳಿ, ರಾಜಾಜಿ ನಗರ ಹಾಗೂ ಪೀಣ್ಯ ಕೈಗಾರಿಕಾ ಪ್ರದೇಶಗಳಲ್ಲಿನ ಕೈಗಾರಿಕೆಗಳು ಕ್ಯಾಡ್ಮಿಯಂ, ಕ್ರೋಮೈಡ್‌, ಪಾದರಸ, ಸೀಸ ರೀತಿಯ ರಾಸಾಯನಿಕಗಳನ್ನು ರಾಜಕಾಲುವೆಗೆ ಹರಿಬಿಡುತ್ತಿವೆ. ಇಂಥ ಕಾಲುವೆಯಲ್ಲಿ ಹರಿಯುವ ನೀರನ್ನೇ ಬಳಸಿ ಕೆಂಗೇರಿ, ಬಿಡದಿ ಭಾಗಗಳಲ್ಲಿನ ರೈತರು ತರಕಾರಿ ಬೆಳೆಯುತ್ತಿದ್ದಾರೆ. ಈ ತರಕಾರಿಗಳ ಸೇವನೆಯಿಂದ ಮಕ್ಕಳು ಬುದ್ಧಿಮಾಂದ್ಯರಾಗುತ್ತಿದ್ದಾರೆ. ಇದಕ್ಕೆ ಸಾಕ್ಷಿಯೆಂಬಂತೆ ನಗರದಲ್ಲಿರುವ ಒಟ್ಟು ಮಕ್ಕಳ ಪೈಕಿ ಶೇ.8 ಮಂದಿ ಬುದ್ಧಿಮಾಂದ್ಯರಿದ್ದಾರೆ. ಇಷ್ಟು ಅನಾಹುತವಾಗುತ್ತಿದ್ದರೂ ಮಾಲಿನ್ಯ ನಿಯಂತ್ರಣ ಮಂಡಳಿ ಯೇಕೆ ಕೈಗಾರಿಕೆಗಳ ವಿರುದ್ಧ ಕ್ರಮ ಕೈಗೊಂಡಿಲ್ಲ,’ ಎಂದು ಆಯುಕ್ತರು ಪ್ರಶ್ನಿಸಿದರು.

Advertisement

ಮಾಲಿನ್ಯ ಪ್ರಮಾಣ ತಗ್ಗಿದೆ: ಕೈಗಾರಿಕೆ, ಅರೆನಗರ ಪ್ರದೇಶ, ವಾಣಿಜ್ಯ ಹಾಗೂ ಸೂಕ್ಷ್ಮ ಪ್ರದೇಶಗಳಾಗಿ ನಗರವನ್ನು ವಿಂಗಡಿಸಿದ್ದು, ಬಿಎಂಟಿಸಿ ಪ್ರತಿ ತಿಂಗಳ ಬಸ್‌ ದಿನಾಚರಣೆ ಹಮ್ಮಿಕೊಳ್ಳುವ ಮಾರ್ಗಗಳಲ್ಲಿ ಶೇ.12ರಷ್ಟು ಮಾಲಿನ್ಯ ಪ್ರಮಾಣ ತಗ್ಗಿದೆ. ಜತೆಗೆ ನಮ್ಮ ಮೆಟ್ರೋ ಕಾರಿಡಾರ್‌ಗಳಲ್ಲೂ ಶೇ.12ರಿಂದ 13ರಷ್ಟು ಮಾಲಿನ್ಯ ಕಡಿಮೆಯಾಗಿದೆ ಎಂದು ಮಂಡಳಿಯ ವೈಜ್ಞಾನಿಕ ಅಧಿಕಾರಿ ಡಾ.ನಾಗಪ್ಪ ತಿಳಿಸಿದರು

ನಕ್ಷೆ ನೀಡುವಾಗ ಷರತ್ತು ವಿಧಿಸಿ : ಕಟ್ಟಡ ನಕ್ಷೆ ಮಂಜೂರಾತಿಗೆ ಮೊದಲು ಬಿಲ್ಡರ್‌ ಗಳಿಗೆ ಮಾಲಿನ್ಯ ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಕೈಪಿಡಿ ನೀಡಿ ಅವುಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಷರತ್ತು ವಿಧಿಸಬೇಕು ಎಂದು ಕ್ರೆಡಾಯ್‌ ಸಂಸ್ಥೆಯ ಜಂಟಿ ಕಾರ್ಯದರ್ಶಿ ಸಿದ್ಧಿಕ್‌ ಬೇರಿ ಸಲಹೆ ನೀಡಿದರು. ನಗರದಲ್ಲಿ ನಿರ್ಮಾಣವಾಗುವ ಸಣ್ಣ ಕಟ್ಟಡಗಳ ಅವಶೇಷಗಳೂ ಮಾಲಿನ್ಯಕ್ಕೆ ಕಾರಣವಾಗಿದ್ದು, ನಗರದಲ್ಲಿರುವ 2 ಸಾವಿರ ಡೆವಲಪರ್‌ಗಳ ಪೈಕಿ 260 ಮಂದಿ ಕ್ರೆಡಾಯ್‌ನಲ್ಲಿ ಸದಸ್ಯರಾಗಿದ್ದು, ಕಾನೂನಿನಂತೆ ಕಾಮಗಾರಿ ನಡೆಸುತ್ತಿದ್ದಾರೆ. ಹೀಗಾಗಿ ಪಾಲಿಕೆಯಿಂದ ನಕ್ಷೆ ನೀಡುವ ವೇಳೆ ಮಾಲಿನ್ಯ ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಕುರಿತ ಕೈಪಿಡಿ ನೀಡಿ ಕಡ್ಡಾಯವಾಗಿ ಅವುಗಳನ್ನು ಅನುಸರಿಸುವಂತೆ ಷರತ್ತು ವಿಧಿಸಬೇಕು ಎಂದು ಹೇಳಿದರು 

ಬೆಂಕಿ ಹಾಕಿದರೆ 5 ಲಕ್ಷ  ರೂ. ದಂಡ
ತ್ಯಾಜ್ಯ ಬೆಂಕಿ ಹಚ್ಚುವ ಪ್ರಕರಣಗಳು ನಗರದಲ್ಲಿ ಹೆಚ್ಚಾಗುತ್ತಿರುವುದು ಸಹ ವಾಯು ಮಾಲಿನ್ಯಕ್ಕೆ ಕಾರಣವಾಗಿದ್ದು, ಪಾಲಿಕೆಯಿಂದ ವಿಧಿಸುತ್ತಿರುವ ದಂಡ ಪ್ರಮಾಣ ಕಡಿಮೆಯಿರುವುದರಿಂದ ಅವರು ಮತ್ತೆ ಅದನ್ನು ಮುಂದುವರಿಸುತ್ತಿದ್ದಾರೆ. ಹೀಗಾಗಿ ತ್ಯಾಜ್ಯಕ್ಕೆ ಬೆಂಕಿ ಹಚ್ಚುವರಿಗೆ 1 ಲಕ್ಷ ರೂ.ಗಳಿಂದ 5 ಲಕ್ಷ ರೂ.ದವರೆಗೆ ದಂಡ ವಿಧಿಸುವ ಕುರಿತು ನಿರ್ಣಯ ತೆಗೆದುಕೊಳ್ಳಲಾಗುವುದು ಎಂದು ಮೇಯರ್‌ ತಿಳಿಸಿದರು. ಅದಕ್ಕೆ ಮಾತು ಸೇರಿಸಿದ ಆಡಳಿತ ಪಕ್ಷದ ನಾಯಕ ಮಹಮದ್‌ ರಿಜ್ವಾನ್‌ ನವಾಬ್‌, ತ್ಯಾಜ್ಯಕ್ಕೆ ಬೆಂಕಿ ಹಚ್ಚುವುದನ್ನು ತಡೆಯಲು ಪ್ರತ್ಯೇಕ ತಂಡ ರಚಿಸಬೇಕು ಮತ್ತು ವಾರ್ಡ್‌ನ ಕಿರಿಯ ಆರೋಗ್ಯಾಧಿಕಾರಿಗಳಿಗೆ ಹೆಚ್ಚಿನ ಅಧಿಕಾರ ನೀಡುವ ಮೂಲಕ ಇಂತಹ ಪ್ರಕರಣಗಳನ್ನು ತಡೆಯಬೇಕು ಎಂದರು. 

ಖಾಸಗಿ ಬಸ್‌ಗಳನ್ನು ನಿಷೇಧಿಸಬೇಕಿದೆ
ವಾಹನ ದಟ್ಟಣೆ ತಡೆಯುವ ಸಲುವಾಗಿಯೇ ಈ ಹಿಂದೆ ಕೆಎಸ್‌ಆರ್‌ಟಿಸಿ ನಗರದಲ್ಲಿ ಬಸ್‌ಗಳ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಅದರಂತೆ ಪೀಣ್ಯ ಬಳಿಯ ಬಸವೇಶ್ವರ ಬಸ್‌ ನಿಲ್ದಾಣದಿಂದ 3 ಸಾವಿರ ಬಸ್‌ಗಳು ಸಂಚರಿಸಬೇಕಿತ್ತು. ಆದರೆ, ಇಂದು ಕೇವಲ 600 ಬಸ್‌ಗಳು ಕಾರ್ಯಾಚರಣೆ ನಡೆಸುತ್ತಿವೆ. ಅದೇ ರೀತಿ ಬೈಯಪ್ಪನಹಳ್ಳಿ ನಿಲ್ದಾಣವೂ ಸಹ ಸಕ್ರಿಯವಾಗಿಲ್ಲ. ಖಾಸಗಿ ಬಸ್‌ಗಳು ನಗರದಲ್ಲಿ ಸಂಚರಿಸುವು ದರಿಂದ ಕೆಎಸ್‌ಆರ್‌ಟಿಸಿಗೆ ನಷ್ಟವಾಗುತ್ತಿರುವುದರಿಂದ ಸರ್ಕಾರಿ ಬಸ್‌ಗಳು ಸಹ ನಗರಕ್ಕೆ
ಬರುತ್ತಿವೆ. ಹೊರ ಭಾಗದಲ್ಲಿರುವ ಬಸ್‌ ನಿಲ್ದಾಣಗಳಿಗೆ ನಮ್ಮ ಮೆಟ್ರೊ ಹಾಗೂ ಬಿಎಂಟಿಸಿ ಬಸ್‌ ಸಂಪರ್ಕವಿರುವುದರಿಂದ
ಜನರಿಗೆ ಅಲ್ಲಿಗೆ ಹೋಗಲು ತೊಂದರೆಯಾಗುವುದಿಲ್ಲ.

ಹೀಗಾಗಿ ನಗರದಲ್ಲಿ ಖಾಸಗಿ ಬಸ್‌ಗಳ ಸಂಚಾರ ನಿಷೇಧಿಸಲು ನಿರ್ಣಯ ತೆಗೆದುಕೊಳ್ಳಬೇಕು ಎಂದು ಆಯುಕ್ತರು ಮೇಯರ್‌ ನ್ನು ಕೋರಿದರು. ಇದಕ್ಕೆ ಪ್ರತಿಕ್ರಿಯಿಸಿದ ಮೇಯರ್‌ ಸಂಪತ್‌ ರಾಜ್‌, ಸಂಚಾರ ದಟ್ಟಣೆ ಹಾಗೂ ಮಾಲಿನ್ಯ ನಿಯಂತ್ರಣಕ್ಕಾಗಿ ಖಾಸಗಿ ಹಾಗೂ ಸರ್ಕಾರಿ ಬಸ್‌ಗಳು ಹೊರವಲಯದಿಂದಲೇ ಸಂಚರಿಸುವಂತೆ ನಿರ್ಣಯ ತೆಗೆದುಕೊಂಡ ಸರ್ಕಾರಕ್ಕೆ ಸಲ್ಲಿಸೋಣ ಎಂದು ಬೆಂಬಲಿಸಿದರು. 

ವೈಟ್‌ಟಾಪಿಂಗ್‌ ರಸ್ತೆಗಳನ್ನು ತೊಳೆಯಬೇಕು
ಮಲೇಷ್ಯಾದಲ್ಲಿ ರಸ್ತೆಯಲ್ಲಿ ಧೂಳು ಇರದಂತೆ ನೀರಿನಿಂದ ತೊಳೆಯಲಾಗುತ್ತದೆ. ಅದೇ ರೀತಿ ವೈಟ್‌ಟಾಪಿಂಗ್‌ ರಸ್ತೆಗಳನ್ನು ತೊಳೆಯುವ ಹಾಗೂ ಇತರೆ ರಸ್ತೆಗಳಲ್ಲಿ ಧೂಳು ಉಂಟಾಗದಂತೆ ನೀರು ಸಿಂಪಡಿಸುವ ಕ್ರಮಗಳನ್ನು ಕೈಗೊಳ್ಳಬೇಕು. ಇದರಿಂದ ವಾಯು ಮಾಲಿನ್ಯ ಪ್ರಮಾಣ ಕಡಿಮೆ ಮಾಡಬಹುದು ಎಂದು ಮಾಜಿ ಆಡಳಿತ ಪಕ್ಷ ನಾಯಕ ಆರ್‌.ಎಸ್‌. ಸತ್ಯನಾರಾಯಣ ಸಲಹೆ ನೀಡಿದರು. ಅದಕ್ಕೆ ಸ್ಪಂದಿಸಿದ ಮೇಯರ್‌, ಮುಂದಿನ ದಿನಗಳಲ್ಲಿ ದಿನಗಳಲ್ಲಿ ವೈಟ್‌ ಟಾಪಿಂಗ್‌ ರಸ್ತೆಗಳನ್ನು ನೀರಿನಲ್ಲಿ
ತೊಳೆಯುವ ಮೂಲಕ ಧೂಳಿನ ಕಣಗಳು ಇರದಂತೆ ಕ್ರಮಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು
 
ಮಾಲಿನ್ಯ ತಪಾಸಣೆಗೆ ಯಂತ್ರಗಳ ಖರೀದಿ
ನಗರದ ಕೆಲವೆಡೆ ನಿಗದಿಗಿಂತ ಹೆಚ್ಚು ಮಾಲಿನ್ಯ ಹೊಂದಿದ್ದರೂ ಅಂತಹ ವಾಹನಗಳಿಗೆ ಪ್ರಮಾಣ ಪತ್ರ ನೀಡಲಾಗುತ್ತಿದೆ. ಹೀಗಾಗಿ ಎಲ್ಲ ಕೇಂದ್ರಗಳಲ್ಲಿ ಸ್ವಯಂಚಾಲಿತ ತಪಾಸಣಾ ಯಂತ್ರಗಳ ಬಳಕೆಗೆ ಮುಂದಾಗಿದ್ದು, ಈಗಾಗಲೇ ಟೆಂಡರ್‌ ಆಹ್ವಾನಿಸಲಾಗಿದ್ದು, ಜನವರಿ ಕೊನೆಯ ವೇಳೆಗೆ ಎಲೆಕ್ಟ್ರಾನಿಕ್‌ ಪರ್ಮಿಟ್‌ ನೀಡುವ ವ್ಯವಸ್ಥೆ ಜಾರಿಗೆ ಬರಲಿದೆ ಎಂದು ಓಂಕಾರೇಶ್ವರಿ ಮಾಹಿತಿ ನೀಡಿದರು 

ಜನರಿಗೆ ತಿಳಿಯಬೇಕು
ಪಾಲಿಕೆಯ ಪ್ರತಿ ವಾರ್ಡ್‌ನ ಮಾಲಿನ್ಯದ ಬಗ್ಗೆ ಅರಿವು ಮೂಡಿಸಲು ಪ್ರತಿ ವಾರ್ಡ್‌ನಲ್ಲಿ ಮಾಲಿನ್ಯ ಮಾಪಕ ಉಪಕರಣ ಅಳವಡಿಸಬೇಕು. ವಾರ್ಡ್‌ನಲ್ಲಿ ಮಾಲಿನ್ಯ ಹೆಚ್ಚಾದಾಗ ಸಾರ್ವಜನಿಕರೇ ನಿಯಂತ್ರಣಕ್ಕೆ ಮುಂದಾಗುತ್ತಾರೆ. ಹೀಗಾಗಿ ಮಾಲಿನ್ಯ ಮಾಪಕ ಹಾಗೂ ಡಿಜಿಟಲ್‌ ಫ‌ಲಕ ಅಳಡಿಸುವ ಕುರಿತಂತೆ ಚಿಂತಿಸಲಾಗು ವುದು ಎಂದು ಸಂಪತ್‌ರಾಜ್‌ ಸಲಹೆ ನೀಡಿದರು. 

ಜನರ ಸಮಸ್ಯೆ ಚರ್ಚಿಸಲು ಸದಸ್ಯರಿಗೆ ಸಮಯವಿಲ್ಲ
ಬಿಬಿಎಂಪಿ ವತಿಯಿಂದ ಇದೇ ಮೊದಲ ಬಾರಿಗೆ ನಗರದಲ್ಲಿನ ವಾಯು ಮಾಲಿನ್ಯ ನಿಯಂತ್ರಣ ತಡೆಗೆ ಕೈಗೊಳ್ಳಬೇಕಾದ ಕ್ರಮಗಳು ಹಾಗೂ ಬೆಂಗಳೂರು ಮಹಾನಗರ ಪರಿಷ್ಕೃತ ಯೋಜನೆ (2031) ಕುರಿತಂತೆ ಚರ್ಚಿಸಲು ಬುಧವಾರ ಕರೆಯಲಾಗಿದ್ದ ವಿಶೇಷ ಸಭೆಯಲ್ಲಿ ಭಾಗವಹಿಸಿದ ಪಾಲಿಕೆ ಸದಸ್ಯರ ಸಂಖ್ಯೆ 30 ಮೀರದಿರುವುದು ವಿಷಾದನೀಯ. 

ಬಿಜೆಪಿ ಪಾಲಿಕೆ ಸದಸ್ಯರು ಪ್ರತಿಭಟನೆಗೆ ತೆರಳಿದ್ದ ಪರಿಣಾಮ
ಸಭೆಯನ್ನು ಎರಡು ಗಂಟೆ ತಡವಾಗಿ ಆರಂಭಿಸಲಾಯಿತು. ಆದರೆ, ಆಗಲೂ ಬಿಜೆಪಿ ಸದಸ್ಯರು ಹಾಜರಿರಲಿಲ್ಲ. ಮಧ್ಯಾಹ್ನ 1.30ಕ್ಕೆ ವಿಪಕ್ಷ ನಾಯಕ ಪದ್ಮನಾಭರೆಡ್ಡಿ ಸೇರಿ ಕೆಲವರು ಹಾಜರಾದರೂ, ಒಟ್ಟು ಸದಸ್ಯರ ಸಂಖ್ಯೆ 30 ಮೀರಲಿಲ್ಲ.

2 ಸ್ಟ್ರೋಕ್‌ ಆಟೋರಿಕ್ಷಾ ಬ್ಯಾನ್‌
ವಾಯು ಮಾಲಿನ್ಯದಲ್ಲಿ ವಾಹನಗಳ ಪಾತ್ರ ಶೇ.42ರಷ್ಟಿದ್ದು, 2ಸ್ಟೋಕ್‌ ಆಟೋರಿಕ್ಷಾಗಳು ಹೆಚ್ಚು ಮಾಲಿನ್ಯ ಉಂಟು ಮಾಡುತ್ತವೆ. ಹಾಗಾಗಿ ನಗರದಲ್ಲಿ ಅವುಗಳ ಸಂಚಾರ ನಿಷೇಧಿಸಿ, 2ಸ್ಟೋಕ್‌ ಆಟೋರಿಕ್ಷಾಗಳನ್ನು ಎಲ್‌ಪಿಜಿಯಾಗಿ ಪರಿವರ್ತಿಸಿಕೊಂಡವರಿಗೆ ಇಲಾಖೆಯಿಂದ ಸಬ್ಸಿಡಿ ನೀಡಲಾಗುತ್ತಿದೆ ಎಂದು ಸಂಚಾರ ವಿಭಾಗದ ಜಂಟಿ ಆಯುಕ್ತೆ ಓಂಕಾರೇಶ್ವರಿ ಅವರು ಸಭೆಗೆ ತಿಳಿಸಿದರು. 

ಸಾರಿಗೆ ಇಲಾಖೆಯಿಂದ ಸದ್ಯ ಬಿಎಸ್‌ 4 ವಾಹನಗಳ ನೋಂದಣಿ ಮಾತ್ರ ಮಾಡಲಾಗುತ್ತಿದ್ದು, 2017-18ನೇ ಸಾಲಿನಲ್ಲಿ 10 ಸಾವಿರ ಆಟೋರಿಕ್ಷಾಗಳನ್ನು ಎಲ್‌ಪಿಜಿಗೆ ಪರಿವರ್ತಿಸುವ ಗುರಿಯಿದೆ. ಜತೆಗೆ ಎಲೆಕ್ಟ್ರೀಕಲ್‌ಗೆ ಪರಿವರ್ತಿಸುವವರಿಗೂ ಸಹ ಸಬ್ಸಿಡಿ ನೀಡುವ ಕುರಿತು ಚಿಂತನೆಯಿದ್ದು, ನಗರದಲ್ಲಿರುವ 1.50 ಲಕ್ಷ ಆಟೋರಿಕ್ಷಾಗಳ ಪೈಕಿ 25 ಸಾವಿರ ಆಟೋರಿಕ್ಷಾಗಳು ಪರವಾನಗಿ ಪಡೆದುಕೊಂಡಿಲ್ಲ. ಹೀಗಾಗಿ ಎಲ್ಲ ಆಟೋರಿಕ್ಷಾಗಳಿಗೆ ಅತ್ಯಂತ ಸುರಕ್ಷತಾ ಹಾಗೂ ವಾಟರ್‌ ಮಾರ್ಕ್‌ ಇರುವ ದಾಖಲೆ ನೀಡಿ ಅನಧಿಕೃತ ವಾಹನಗಳಿಗೆ ಕಡಿವಾಣ ಹಾಕಲಾಗುವುದು ಎಂದರು. 

150 ಎಲೆಕ್ಟ್ರಿಕ್‌ ಬಸ್‌ ಖರೀದಿಗೆ ಟೆಂಡರ್‌
ಬಿಎಂಟಿಸಿಯಲ್ಲಿ ಒಟ್ಟು 6,395 ಬಸ್‌ಗಳಿದ್ದು, ಆ ಪೈಕಿ ಬಿಎಸ್‌-2 ಎಂಜಿನ್‌ನ 379, ಬಿಎಸ್‌ -3 ಎಂಜಿನ್‌ನ 3,477 ಹಾಗೂ ಬಿಎಸ್‌-4 ಎಂಜಿನ್‌ನ 2,435 ಬಸ್‌ಗಳಿವೆ. ಅವುಗಳನ್ನು ಪ್ರತಿ ತಿಂಗಳು ಸಂಸ್ಥೆಯ ಡಿಪೋಗಳಲ್ಲಿ ಮಾಲಿನ್ಯ ತಪಾಸಣೆ ಒಳಪಡಿಸಲಾಗುತ್ತದೆ. 

ನಿಗದಿಗಿಂತ ಹೆಚ್ಚು ಹೊಗೆ ಸೂಸುವ ಬಸ್‌ಗಳ ಸಂಚಾರ ಸ್ಥಗಿತಗೊಳಿಸಲಾಗುತ್ತದೆ. ಯಾವುದೇ ಬಸ್‌ ಖರೀದಿಸಿ 11 ವರ್ಷ ಅಥವಾ 8.50 ಲಕ್ಷ ಕಿ.ಮೀ. ಸಂಚರಿಸಿದ್ದರೆ, ಅಂತಹ ಬಸ್‌ ಗಳನ್ನು ಗುಜುರಿಗೆ ಹಾಕುವುದಾಗಿ ಬಿಎಂಟಿಸಿ ಅಧಿಕಾರಿ ಉಷಾರಾಣಿ ತಿಳಿಸಿದರು. ಇನ್ನು, ಬಿಎಂಟಿಸಿ ಬಸ್‌ಗಳನ್ನು ಮಾಲಿನ್ಯ ರಹಿತ ಮಾಡಲು 2020ರ ವೇಳೆಗೆ ಬಿಎಸ್‌6 ಬಸ್‌ಗಳನ್ನೇ ಖರೀದಿಸಲಾಗುವುದು.

ಹಾಗೆಯೇ, 150 ಎಲೆಕ್ಟ್ರಿಕಲ್‌ ಬಸ್‌ಗಳ ಖರೀದಿಗೆ ಟೆಂಡರ್‌ ಕರೆಯಲಾಗಿದ್ದು, ಸಿಎನ್‌ಜಿ ಬಸ್‌ ಖರೀದಿಗೆ ಯೋಜನೆ ರೂಪಿಸಿ 147 ಕೋಟಿ ರೂ. ಅನುದಾನ ಕೋರಿ ಕೇಂದ್ರಹಾಗೂ ರಾಜ್ಯ ಸರ್ಕಾರಗಳಿಗೆ ಪತ್ರ ಬರೆಯಲಾಗಿದೆ ಎಂದು ಮಾಹಿತಿ ನೀಡಿದರು. ಈ ವೇಳೆ ಮಾತನಾಡಿದ ಆಯುಕ್ತ ಮಂಜುನಾಥ ಪ್ರಸಾದ್‌, ಲಂಡನ್‌ನಲ್ಲಿ ಯೂರೋ-6ಎಂಜಿನ್‌ ಬಸ್‌ಗಳು ಬಳಕೆಯಾಗುತ್ತಿವೆ. ಆದರೆ, ಬಿಎಂಟಿಸಿ ಬಿಎಸ್‌-2 ಎಂಜಿನ್‌ ಬಸ್‌ ಬಳಸುವುದು ಮಾಲಿನ್ಯಕ್ಕೆ ಕಾರಣವಾಗಿದ್ದು, ಮುಂದಿನ ವರ್ಷದೊಳಗೆ ಎಲ್ಲ ಬಸ್‌ಗಳನ್ನು
ಬಿಎಸ್‌-4 ಎಂಜಿನ್‌ಗೆ ಮಾರ್ಪಡಿಸಬೇಕು ಎಂದು ಸೂಚಿಸಿದರು.  

ಮಾಲಿನ್ಯ ನಿಯಂತ್ರಣಕ್ಕೆ ಜತೆಯಾಗಿ 
ನಗರದಲ್ಲಿ ವಾಯುಮಾಲಿನ್ಯ ಪ್ರಮಾಣ ಮಿತಿ ಮೀರಿ ಅಪಾಯದ ಸನ್ನಿವೇಶ ಸೃಷ್ಟಿಯಾಗಿದ್ದು, ಮಾಲಿನ್ಯ ನಿಯಂತ್ರಣ ಪರಿಹಾರ ಕ್ರಮಗಳನ್ನು ಕೈಗೊಳ್ಳುವುದು ಬಿಬಿಎಂಪಿಯೊಂದಿಗೆ ನಾಗರಿಕರೂ ಮುಂದಾಗಬೇಕಿದೆ. ನಗರದ ಪರಿಸರ ಸಂರಕ್ಷಣೆ ಹಾಗೂ ಮಾಲಿನ್ಯ  ಯಂತ್ರಣದಲ್ಲಿ ನಾಗರಿಕರು ಪಾಲ್ಗೊಳ್ಳಬೇಕೆಂಬುದು “ಉದಯವಾಣಿ’ ಕಾಳಜಿಯಾಗಿದ್ದು, ನಾಗರಿಕರು ಈ ಕೆಳಗಿನ ಸಲಹೆಗಳನ್ನು ಪಾಲಿಸುವ ಮೂಲಕ ನಗರದ ಮಾಲಿನ್ಯ ನಿಯಂತ್ರಣಕ್ಕೆ ಸಹಕರಿಸಬೇಕು. 

 *ವೈಯಕ್ತಿಕ ವಾಹನಗಳ ಬದಲಿಗೆ, ಸಮೂಹ ಸಾರಿಗೆ ಬಳಕೆ
„ *ಮಾಲಿನ್ಯ ತಡೆಗೆ ಸಹಕಾರಿ ಯಾಗಬಲ್ಲ ಸಸಿಗಳನ್ನು ನೆಟ್ಟು ಬೆಳಸುವುದು
„ *ಕಟ್ಟಡ ನಿರ್ಮಾಣ, ತೆರವುಗೊಳಿಸುವ ವೇಳೆ ಮಾಲಿನ್ಯ ನಿಯಂತ್ರಣ ಮಂಡಳಿಯ ನಿಯಮಗಳ ಪಾಲನೆ
„ *ಕಟ್ಟಡ ಅವಶೇಷ ಹಾಗೂ ಘನತ್ಯಾಜ್ಯಗಳ ಸಮರ್ಪಕ ವಿಲೇವಾರಿ (ಕಸಕ್ಕೆ ಬೆಂಕಿ ಹಾಕದಿರುವುದು)
„ *ವಾಯು ಮಾಲಿನ್ಯ ತಡೆಗೆ ಸ್ಥಳೀಯ ಸಂಸ್ಥೆಗಳಿಗೆ ಸಹಕಾರ ನೀಡುವುದು

Advertisement

Udayavani is now on Telegram. Click here to join our channel and stay updated with the latest news.

Next