Advertisement

ಅಪಾಯಕಾರಿ ಮರ ತೆರವುಗೊಳಿಸದ ಬಿಬಿಎಂಪಿ

12:23 PM Sep 18, 2018 | Team Udayavani |

ಬೆಂಗಳೂರು: ಬಿಬಿಎಂಪಿ ಅರಣ್ಯ ವಿಭಾಗದ ಅಧಿಕಾರಿಗಳು ಮಳೆಗಾಲಕ್ಕೆ ಮೊದಲೇ ಅಪಾಯಕಾರಿ ಮರಗಳ ತೆರವಿಗೆ ಮುಂದಾಗದ ಪರಿಣಾಮ ನಗರದ ಜನರು ತೊಂದರೆ ಅನುಭವಿಸುವಂತಾಗಿದೆ. 

Advertisement

ನಗರದಲ್ಲಿ ಕಳೆದ ಮೂರು ದಿನಗಳಿಂದ ಜೋರಾದ ಗಾಳಿ ಸಹಿತ ಸುರಿಯುತ್ತಿರುವ ಅನೇಕ ಮರಗಳು ಧರೆಗುರುಳಿವೆ. ಪ್ರಮುಖ ರಸ್ತೆಗಳಲ್ಲಿ ಮರದ ಕೊಂಬೆಗಳು ವಾಹನಗಳ ಮೇಲೆ ಉರುಳಿರುತ್ತಿರುವುದರಿಂದ ಸಾವು-ನೋವು ಸಂಭವಿಸುವ ಆತಂಕ ಎದುರಾಗಿದೆ. 

ಬೀಳುವ ಸ್ಥಿತಿಯಲ್ಲಿರುವ, ಒಣಗಿರುವ ಹಾಗೂ ಟೊಳ್ಳಾಗಿರುವ ಮರಗಳನ್ನು ಗುರುತಿಸಿ ಮಳೆಗಾಲಕ್ಕೆ ಮೊದಲೇ ಅವುಗಳ ತೆರವು ಕಾರ್ಯಾಚರಣೆ ನಡೆಸುವುದು ಪಾಲಿಕೆಯ ಅರಣ್ಯ ವಿಭಾಗದ ಕರ್ತವ್ಯ. ಆದರೆ, ಪಾಲಿಕೆಯ ಸಿಬ್ಬಂದಿ ಸಮರ್ಪಕವಾಗಿ ಕಾರ್ಯಾಚರಣೆ ನಡೆಸದ ಪರಿಣಾಮ ಸಣ್ಣ ಮಳೆಗೂ ಹತ್ತಾರು ಮರಗಳು ಉರುಳಿ ಜನರು ಕಷ್ಟಪಡುವಂತಾಗಿದೆ. 

ಕಳೆದ ವರ್ಷ ಸುರಿದ ಭಾರಿ ಮಳೆಯಿಂದ ಬೃಹತ್‌ ಮರ ಉರುಳಿದ ಕಾರಿನ ಮೇಲೆ ಬಿದ್ದ ಪರಿಣಾಮ ಮಿನರ್ವ ವೃತ್ತದ ಬಳಿ ಒಂದೇ ಕುಟುಂಬದ ಮೂವರು ಮೃತಪಟ್ಟಿದ್ದರು. ಇದೀಗ ಭಾನುವಾರ ಸುರಿದ ಮಳೆಗೆ ಹತ್ತಾರು ಮರಗಳು ಉರುಳಿದ್ದು, ಭಾನುವಾರ ಬೃಹದಾಕಾರದ ಮರವೊಂದು ಆಟೋ, ಕಾರು ಹಾಗೂ ದ್ವಿಚಕ್ರ ವಾಹನಗಳ ಮೇಲೆ ಬಿದ್ದ ಪರಿಣಾಮ ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆಸಿದೆ. 

ಸಿಬ್ಬಂದಿಯಿಲ್ಲದೆ ಏನು ಮಾಡುವುದು: ಬಿಬಿಎಂಪಿಯ ಎಲ್ಲ ಎಂಟು ವಲಯಗಳಿಗೆ ಸೇರಿ ಒಟ್ಟು 21 ಕಾರ್ಯಾಚರಣೆ ತಂಡಗಳಿದ್ದು, ಹಗಲು ಹಾಗೂ ರಾತ್ರಿ ಪಾಳಿಯಲ್ಲಿ ಕೆಲಸ ಮಾಡುತ್ತಿವೆ. ಬಿದ್ದಿರುವ ಒಂದು ಮರ ತೆರವುಗೊಳಿಸುವ ವೇಳೆಗೆ ಮತ್ತೂಂದು ಭಾಗದಲ್ಲಿ ಮರ ಬಿದ್ದಿರುತ್ತದೆ. ನಗರದಲ್ಲಿ ಮಳೆ ಬೀಳುವ ವೇಳೆ ಸಂಚಾರ ದಟ್ಟಣೆ ಹೆಚ್ಚಾಗಿರುವುದರಿಂದ ಶೀಘ್ರ ಸ್ಥಳಕ್ಕೆ ಧಾವಿಸಿ ಮರಗಳನ್ನು ತೆರವುಗೊಳಿಸಲು ಸಾಧ್ಯವಿಲ್ಲ ಎಂದು ಅರಣ್ಯ ವಿಭಾಗದ ಅಧಿಕಾರಿಗಳು ಹೇಳುತ್ತಾರೆ. 

Advertisement

ವಿಭಾಗದಲ್ಲಿರುವ 21 ತಂಡಗಳು ಮಳೆಗಾಲಕ್ಕೂ ಮೊದಲೇ ಕಾರ್ಯಾಚರಣೆ ನಡೆಸಿ ಅಪಾಯಕಾರಿ ಸ್ಥಿತಿಯಲ್ಲಿರುವ 200 ಮರಗಳು, 1500 ಮರದ ಕೊಂಬೆಗಳು, 50-60 ಒಣಗಿದ ಮರಗಳನ್ನು ತೆರವುಗೊಳಿಸಿದ್ದಾರೆ. ಸಾರ್ವಜನಿಕರಿಂದ ಬರುವ ದೂರುಗಳನ್ನು ಆಧರಿಸಿ ತೆರವು ಕಾರ್ಯಾಚರಣೆ ನಡೆಸಿದ್ದು, ಸಿಬ್ಬಂದಿ ಕೊರತೆಯಿಂದಾಗಿ ಪೂರ್ಣ ಪ್ರಮಾಣದಲ್ಲಿ ತೆರವುಗೊಳಿಸಲು ಆಗಿಲ್ಲ ಎಂದರು. 

28 ತಂಡಗಳು ಅಗತ್ಯವಿದೆ: ಬಿಬಿಎಂಪಿ ವ್ಯಾಪ್ತಿಯ 28 ವಿಧಾನಸಭಾ ಕ್ಷೇತ್ರಗಳಿಂದ ತಲಾ ಒಂದರಂತೆ ಕಾರ್ಯಾಚರಣೆ ತಂಡವನ್ನು ನಿಯೋಜಿಸುವುದರಿಂದ ಇಂತಹ ಮರಗಳನ್ನು ತೆರವುಗೊಳಿಸಲು ಅನುಕೂಲವಾಗುತ್ತದೆ. ಆ ಹಿನ್ನೆಲೆಯಲ್ಲಿ ಹೆಚ್ಚುವರಿ ತಂಡಗಳನ್ನು ನೀಡುವಂತೆ ಹಾಗೂ ಕಾರ್ಯಾಚರಣೆ ತಂಡಗಳಿಗೆ ಅನುದಾನ ಮೀಸಲಿಡುವಂತೆ ಮೇಯರ್‌ ಅವರನ್ನು ಕೋರಲಾಗಿದೆ ಎಂದು ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಚೋಳರಾಜಪ್ಪ ತಿಳಿಸಿದರು. 

ಸಿಬ್ಬಂದಿ ಕೊರತೆ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯಿಂದ ಸಿಬ್ಬಂದಿ ಹಾಗೂ ಯಂತ್ರೋಪಕರಣ ಪಡೆಯುವ ಕುರಿತು ಅರಣ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಜತೆ ಚರ್ಚಿಲಾಗುವುದು. ಆ ಮೂಲಕ ಮಳೆಗಾಲದಲ್ಲಿ ಯಾವುದೇ ಅನಾಹುತ ಸಂಭವಿಸಿದಂತೆ ಕ್ರಮಕೈಗೊಳ್ಳಲಾಗುವುದು.
-ಆರ್‌.ಸಂಪತ್‌ರಾಜ್‌, ಮೇಯರ್‌ 

Advertisement

Udayavani is now on Telegram. Click here to join our channel and stay updated with the latest news.

Next