ಬೆಂಗಳೂರು: ಬಿಬಿಎಂಪಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಯ ವಿವರಗಳನ್ನು ಕಂಪ್ಯೂಟರೀಕರಣ ಮಾಡುತ್ತಿದೆ. ಈ ಮೂಲಕ ಸರ್ಕಾರದ ವಿವಿಧ ಸೇವೆ, ಸೌಲಭ್ಯಗಳನ್ನು ಸಿಬ್ಬಂದಿ ಸುಲಭವಾಗಿ ಪಡೆಯಲು ಅನುಕೂಲವಾಗಲಿದೆ ಎಂದು ಮೇಯರ್ ಜಿ.ಪದ್ಮಾವತಿ ಆಶಯ ವ್ಯಕ್ತಪಡಿಸಿದರು.
ಬಿಬಿಎಂಪಿ ಅಧಿಕಾರಿಗಳ ಮತ್ತು ನೌಕರರ ಸಂಘದ ಕಚೇರಿಯಲ್ಲಿ ಸಿಬ್ಬಂದಿಯ ಸೇವಾ ಪುಸ್ತಕದ ಮಾಹಿತಿ ಕಂಪ್ಯೂಟರೀಕರಣಗೊಳಿಸುವ ಪ್ರಕ್ರಿಯೆಗೆ ಗುರುವಾರ ಚಾಲನೆ ನೀಡಿ ಮಾತನಾಡಿದ ಅವರು, 50 ವರ್ಷಗಳಿಂದ ಪಾಲಿಕೆಯಲ್ಲಿ ಸಿಬ್ಬಂದಿಯ ಮಾಹಿತಿಯನ್ನು ಸೇವಾ ಪುಸ್ತಕದಲ್ಲಿ ದಾಖಲಿಸಲಾಗುತ್ತಿತ್ತು. ಇದರಿಂದಾಗಿ ಅಧಿಕಾರಿಗಳು, ನೌಕರರು ವರ್ಗಾವಣೆ ಅಥವಾ ನಿವೃತ್ತರಾದ ಸಂದರ್ಭದಲ್ಲಿ ಹಲವು ಸಮಸ್ಯೆ ಎದುರಾಗುತ್ತಿದ್ದವು. ಆ ಹಿನ್ನೆಲೆಯಲ್ಲಿ ಎಲ್ಲ ಮಾಹಿತಿಯನ್ನು ಕಂಪ್ಯೂಟರೀಕರಣಗೊಳಿಸಲು ನಿರ್ಧರಿಸಲಾಗಿದೆ ಎಂದರು.
ಪುಸ್ತಕ ಸಿಗದೆ ತೊಂದರೆ: ಪಾಲಿಕೆ ಸಿಬ್ಬಂದಿಯ ಸೇವಾ ವಿವರವನ್ನು ಪುಸ್ತಕದಲ್ಲಿ ದಾಖಲು ಮಾಡುತ್ತಿದ್ದರಿಂದ ಯಾವುದೇ ಸಿಬ್ಬಂದಿ ನಿವೃತ್ತರಾದಲ್ಲಿ, ವರ್ಗಾವಣೆಯಾದಲ್ಲಿ ಸೇವಾ ಪುಸ್ತಕಗಳು ಸಿಗದೆ ತೊಂದರೆ ಅನುಭವಿಸಿದ ಹಲವಾರು ಉದಾಹರಣೆಗಳಿವೆ. ಇದೀಗ ಪಾಲಿಕೆಯ ಎಲ್ಲ ಸಿಬ್ಬಂದಿಯ ವಿವರ ಕಂಪ್ಯೂಟರೀಕರಣದಿಂದ ಸಿಬ್ಬಂದಿ ನಿವೃತ್ತರಾದ ಕೂಡಲೇ ಅವರಿಗೆ ದೊರೆಯಬೇಕಾದ ಎಲ್ಲ ಸೌಲಭ್ಯಗಳನ್ನು ಸುಲಭವಾಗಿ ಒದಗಿಸಬಹುದು ಎಂದು ಹೇಳಿದರು.
ಅಪ್‌ಡೇಟ್: ನಂತರ ಮಾತನಾಡಿದ ವಿಶೇಷ ಆಯುಕ್ತೆ (ಆಡಳಿತ) ಸಾವಿತ್ರಿ ಅವರು, ಸೇವಾ ಪುಸ್ತಕ ಬಳಕೆಯಿಂದಾಗಿ ಬಿಬಿಎಂಪಿ ವ್ಯಾಪ್ತಿಯ ಬಹುತೇಕ ಸಿಬ್ಬಂದಿಯ ವಿವರ ಸಮರ್ಪಕವಾಗಿಲ್ಲ. ಕಂಪ್ಯೂಟರೀಕರಣ ಮಾಡುವುದರಿಂದ ಯಾವುದೇ ಮಾಹಿತಿ ಕಳೆಯುವುದಿಲ್ಲ. ಜತೆಗೆ ನಿಗದಿತ ವೇಳೆ ಅಪ್‌ಡೇಟ್ ಆಗುವುದರಿಂದ ಮಾಹಿತಿಗಳು ಸಮರ್ಪಕವಾಗಿರುತ್ತವೆ ಎಂದರು.
ನೂತನ ವ್ಯವಸ್ಥೆಯಲ್ಲಿ ಪ್ರತಿ ಸಿಬ್ಬಂದಿಯ ಸೇವೆಯ ಮಾಹಿತಿಯೊಂದಿಗೆ, ಅವರ ಕುಟುಂಬದ ಸದಸ್ಯರು, ಮಕ್ಕಳ ವಿವರವನ್ನು ಸೇರಿಸಲಾಗುತ್ತದೆ. ಕೈಬಹರದಲ್ಲಿರುವ ಸೇವಾ ಪುಸ್ತಕದ ದಾಖಲೆಗಳನ್ನು ಕಂಪ್ಯೂಟರ್‌ಗೆ ಅಳವಡಿಸಲು 30 ಕಂಪ್ಯೂಟರ್‌ಗಳು ಹಾಗೂ ಸಿಬ್ಬಂದಿಯನ್ನು ನೇಮಿಸಿಕೊಂಡಿದ್ದು, ಸದ್ಯ ಪಾಲಿಕೆಯಲ್ಲಿರುವ 8 ಸಾವಿರ ಕಾಯಂ ಸಿಬ್ಬಂದಿಯ ವಿವರವನ್ನು ಎರಡು ತಿಂಗಳಲ್ಲಿ ಕಂಪ್ಯೂಟರೀಕರಿಸಲಾಗುವುದು ಎಂದು ತಿಳಿಸಿದರು.
ಅಕ್ರಮಗಳು ಬಯಲಿಗೆ?
ಬಿಬಿಎಂಪಿ ವ್ಯಾಪ್ತಿಯಲ್ಲಿನ ಒಂದೇ ಹುದ್ದೆಗೆ ಇಬ್ಬರು ಕೆಲಸ ಮಾಡುತ್ತಾರೆ ಹಾಗೂ ಒಬ್ಬರಿಗೆ ಎರಡು ಹುದ್ದೆಯ ವೇತನ ಬಟವಾಡೆಯಾಗುತ್ತಿದೆ ಎಂಬ ಆರೋಪಗಳಿವೆ. ಪ್ರಸ್ತುತ ಸೇವಾ ಪುಸ್ತಕವನ್ನು ಕಂಪ್ಯೂಟರೀಕರಣ ಮಾಡುವ ವೇಳೆ ಪ್ರತಿ ಸಿಬ್ಬಂದಿಯ ಆಧಾರ್ ಕಾರ್ಡ್ ಲಿಂಕ್ ಮಾಡುವುದರಿಂದ ಇದುವರೆಗೆ ಪಾಲಿಕೆಯಲ್ಲಿ ನಡೆಯುತ್ತಿದ್ದ ಅಕ್ರಮಗಳು ನಿಲ್ಲಲಿವೆ ಎಂದು ಹಿರಿಯ ಅಧಿಕಾರಿ ತಿಳಿಸಿದ್ದಾರೆ.