Advertisement

ಬಿಬಿಎಂಪಿ ಅಧಿಕಾರಿ ವಿರುದ್ಧ ಗರ್ಭಪಾತದ ಆರೋಪ

11:56 AM Jan 19, 2017 | Team Udayavani |

ಬೆಂಗಳೂರು: ತನ್ನನ್ನು ಪ್ರೀತಿಸಿ ಎರಡನೇ ವಿವಾಹವಾದ ನಂತರ ಪತಿ ಎರಡು ಬಾರಿ ಗರ್ಭಪಾತ ಮಾಡಿಸಿ ವಂಚಿಸಿದ್ದಾರೆ ಎಂದು ಆರೋಪಿಸಿ ಮಹದೇವಪುರದ ವಲಯದ ಬಿಬಿಎಂಪಿ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ದೇವರಾಜ್‌ ವಿರುದ್ಧ ಸಂಜಯನಗರ ಪೊಲೀಸ್‌ ಠಾಣೆಯಲ್ಲಿ ಯುವತಿಯೊಬ್ಬಳು ದೂರು ನೀಡಿದ್ದಾಳೆ. 

Advertisement

 ದೇವರಾಜ್‌ ಅವರ ಪತ್ನಿ, ತನ್ನ ಪತಿ ಜತೆ ನಂಟು ಮುರಿದುಕೊಳ್ಳುವಂತೆ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ್ದಾರೆ ಎಂದೂ ಸಂತ್ರಸ್ತೆ ದೂರಿನಲ್ಲಿ ತಿಳಿಸಿದ್ದು, ಈ ಸಂಬಂಧ ದೇವರಾಜ್‌ ದಂಪತಿ ಮೇಲೆ ಜ. 11ರಂದು ಎಫ್ಐಆರ್‌ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

 ದೂರು ಸಲ್ಲಿಸಿದ ನಂತರ ತನಿಖೆಗೆ ಸಂತ್ರಸ್ತೆ ಅಸಹಕಾರ ತೋರಿಸುತ್ತಿದ್ದು, ತನಿಖೆಗೆ ಸ್ಪಂದಿಸುವಂತೆ ಸೂಚಿಸಿ ಪೊಲೀಸರು ನೋಟಿಸ್‌ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಬಿಬಿಎಂಪಿ ಎಂಜಿನಿಯರ್‌ ಆಗಿರುವ ದೇವರಾಜ್‌ (54) ಅವರಿಗೆ ಈವೆಂಟ್‌ ಮ್ಯಾನೇಜ್‌ಮೆಂಟ್‌ ಸಂಸ್ಥೆಯೊಂದರ ಉದ್ಯೋಗಿ, ಹಾಸನ ಮೂಲದ 23 ವರ್ಷದ ಯುವತಿ ಜತೆ ಸ್ನೇಹವಾಗಿದ್ದು, ಕ್ರಮೇಣ ಪ್ರೀತಿಸುತ್ತಿದ್ದರು.

ಈ ವಿಚಾರ ದೇವರಾಜ್‌ ಕುಟುಂಬದವರಿಗೆ ಗೊತ್ತಾಗಿ ರಂಪಾಟವಾಗಿದೆ. ಇದಾದ ಬಳಿಕ ಯುವತಿಯಿಂದ ದೇವರಾಜ್‌ ದೂರವಾಗಿದ್ದರು. ಅಲ್ಲದೆ, ತನ್ನ ಪತಿ ಜತೆ ಸಂಬಂಧ ಕಡಿದುಕೊಳ್ಳುವಂತೆ ದೂರುದಾರ ಯುವತಿಗೆ ದೇವರಾಜ್‌ ಪತ್ನಿ ಪ್ರೀತಿ ತಾಕೀತು ಮಾಡಿದ್ದರು. ಈ ಸಂದರ್ಭದಲ್ಲಿ ಇಬ್ಬರ ಮಧ್ಯೆ ಗಲಾಟೆಯಾಗಿದೆ. ಇದರಿಂದ ಕೆರಳಿದ ಯುವತಿ, ದೇವರಾಜ್‌ ಮತ್ತು ಅವರ ಪತ್ನಿ ವಿರುದ್ಧ ದೂರು ಸಲ್ಲಿಸಿದ್ದಾರೆ ಎಂದು ಪೊಲೀಸ್‌ ಮೂಲಗಳು ಮಾಹಿತಿ ನೀಡಿವೆ. 

ದೂರಿನಲ್ಲೇನಿದೆ?: ಎರಡು ವರ್ಷಗಳ ಹಿಂದೆ ತನಗೆ ದೇವರಾಜ್‌ ಪರಿಚಯವಾಯಿತು. ಬಳಿಕ ಅದು ಪ್ರೀತಿಗೆ ತಿರುಗಿದ್ದು, ಇಬ್ಬರೂ ಗೋವಾ, ತಮಿಳುನಾಡು ಮೊದಲಾದ ಪ್ರವಾಸಿ ತಾಣಗಳಲ್ಲಿ ಸುತ್ತಾಡಿದ್ದೇವೆ. ನನ್ನೊಂದಿಗೆ ಪ್ರೇಮ ವಿವಾಹವಾದ ದೇವರಾಜ್‌, ಎಚ್‌ಎಸ್‌ಆರ್‌ ಲೇಔಟ್‌ನಲ್ಲಿ ಒಟ್ಟಿಗೆ ವಾಸವಾಗಿದ್ದರು. ಆ ವೇಳೆ ನಾನು ಎರಡು ಬಾರಿ ಗರ್ಭವತಿಯಾಗಿದ್ದು, ಆಗ, ಕಾರಣಗಳನ್ನು ಹೇಳಿ ಗರ್ಭಪಾತ ಮಾಡಿಸಿದ್ದರು.

Advertisement

ಎರಡನೇ ಬಾರಿ ಗರ್ಭಪಾತ ಮಾಡಿಸಿದ ನಂತರ ತನ್ನಿಂದ ದೂರವಾಗಿದ್ದಾರೆ. ಮನೆಗೆ ಬರುವಂತೆ ಆಹ್ವಾನಿಸಿದರೂ ಕೇಳುತ್ತಿರಲಿಲ್ಲ. ಹೀಗಾಗಿ ಇತ್ತೀಚೆಗೆ ಎಚ್‌ಎಸ್‌ಆರ್‌ ಲೇಔಟ್‌ನಲ್ಲಿರುವ ದೇವರಾಜ್‌ ಮನೆಗೆ ಹೋಗಿದ್ದೆ. ಆಗ ಅವರ ಪತ್ನಿ ನನ್ನ ಮೇಲೆ ಹಲ್ಲೆ ಮಾಡಿ ಸಂಬಂಧ ಮುಂದುವರಿಸಿದರೆ ಜೀವ ಉಳಿಯುವುದಿಲ್ಲ ಎಂದು ಬೆದರಿಕೆ ಹಾಕಿದ್ದಾರೆ ಎಂದು ಯುವತಿ ದೂರಿನಲ್ಲಿ ಉಲ್ಲೇಖೀಸಿರುವುದಾಗಿ ತಿಳಿದು ಬಂದಿದೆ. 

 ದೇವರಾಜ್‌ ಜತೆ ವಿವಾಹವಾಗಿರುವುದಕ್ಕೆ ಸೂಕ್ತ ದಾಖಲೆಗಳಿವೆ ಎಂದೂ ದೂರಿನಲ್ಲಿ ಹೇಳಿರುವ ಆಕೆ,  ವಂಚಿಸಿರುವ ದೇವರಾಜ್‌ ದಂಪತಿ ಮೇಲೆ ಕ್ರಮ ಜರುಗಿಸುವಂತೆ ಕೋರಿದ್ದಾರೆ. ಆದರೆ, ದೂರು ದಾಖಲಿಸಿಕೊಂಡ ನಂತರ ತನಿಖೆಗೆ ಸಹಕರಿಸುತ್ತಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next