ಬೆಂಗಳೂರು: ಸುಮಾರು 17.56 ಕೋಟಿ ರೂ.ಬಾಡಿಗೆ ಪಾವತಿ ಮಾಡದ ಹಿನ್ನೆಲೆಯಲ್ಲಿ ಎಂ.ಜಿ.ರಸ್ತೆಯಲ್ಲಿರುವ ಬ್ಯಾಂಕ್ ಆಫ್ ಬರೋಡದ ಮೆಯೊ ಹಾಲ್ ಶಾಖೆಯ ಕಚೇರಿಗೆ ಪಾಲಿಕೆ ಅಧಿಕಾರಿಗಳು ಬೀಗ ಮುದ್ರೆ ಹಾಕಿದ್ದಾರೆ. ಜತೆಗೆ 2.32 ಕೋಟಿ ರೂ. ಬಾಡಿಗೆ ಉಳಿಸಿಕೊಂಡಿರುವ ಅದೇ ಬಿಲ್ಡಿಂಗ್‌ನಲ್ಲಿರುವ ಅಂಚೆ ಕಚೇರಿಗೂ ಶನಿವಾರ ಬಿಬಿಎಂಪಿ ಅಧಿಕಾರಿಗಳು ಬೀಗ ಜಡಿದಿದ್ದಾರೆ. ಹೆಚ್ಚಿನ ಪೊಲೀಸ್ ಬಂದೋಬಸ್ತ್ನೊಂದಿಗೆ ಬೆಳಗ್ಗೆ 6.45ರ ವೇಳೆ ಬೀಗ ಮುದ್ರೆ ಹಾಕಿದ್ದಾರೆ.
ಪಾಲಿಕೆ ಪೂರ್ವ ವಲಯ ವ್ಯಾಪ್ತಿಯ ಕಂದಾಯ ಅಧಿಕಾರಿಗಳು ಎಂ.ಜಿ.ರಸ್ತೆಯ ನೇತಾಜಿ ಸುಭಾಷ್ ಚಂದ್ರ ಬೋಸ್(ಪಿ.ಯು.ಬಿ)ಕಟ್ಟಡದ ನೆಲ ಅಂತಸ್ತಿನಲ್ಲಿರುವ ಬ್ಯಾಂಕ್ ಆಫ್ ಬರೋಡ (ವಿಜಯಾ ಬ್ಯಾಂಕ್) ಹಾಗೂ ಅಂಚೆ ಕಚೇರಿಗೆ ಬೀಗ ಜಡಿದಿದ್ದಾರೆ. ಪಿ.ಯು.ಬಿ ಕಟ್ಟಡದ ನೆಲ ಅಂತಸ್ತಿನಲ್ಲಿರುವ ಮಳಿಗೆ ಸಂಖ್ಯೆ: 14/15 ರಲ್ಲಿ ಬ್ಯಾಂಕ್ ಆಫ್ ಬರೋಡ (ವಿಜಯಾ ಬ್ಯಾಂಕ್) ಮತ್ತು ಮಳಿಗೆ ಸಂಖ್ಯೆ:17ರಲ್ಲಿ ಅಂಚೆ ಕಚೇರಿ ಕಾರ್ಯನಿರ್ವಹಿಸುತ್ತಿವೆ.
2022ರಿಂದ ಬಾಡಿಗೆ ಪಾವತಿಸಿಲ್ಲ: ಬ್ಯಾಂಕ್ ಆಫ್ ಬರೋಡ 2011ರಿಂದ ಹಳೆಯ ಬಾಡಿಗೆಯನ್ನು ಪಾವತಿಸುತ್ತಿದ್ದು, ಪರಿಷ್ಕೃತ ಬಾಡಿಗೆಯನ್ನು ಪಾವತಿಸುತ್ತಿರುವುದಿಲ್ಲ. ಅಲ್ಲದೆ ಡಿಸೆಂಬರ್ 2022ರಿಂದ ಯಾವುದೇ ಬಾಡಿಗೆಯನ್ನು ಪಾವತಿಸದೇ ಇದ್ದ ಕಾರಣ ಹಲವಾರು ಬಾರಿ ನೋಟೀಸ್ ಜಾರಿ ಮಾಡಿದ್ದರೂ ಬಾಡಿಗೆಯನ್ನು ಪಾವತಿಸಿಲ್ಲ ಎಂದು ಪಾಲಿಕೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಬ್ಯಾಂಕ್ ಆಫ್ ಬರೋಡಾ ಪಾಲಿಕೆಗೆ 17.56 ಕೋಟಿ ರೂ. ಬಾಡಿಗೆ ಪಾಲಿಕೆಗೆ ಪಾವತಿಸಬೇಕಿದ್ದು, ಈ ಸಂಬಂಧ ಪೂರ್ವ ವಲಯ ಆಯುಕ್ತರ ಆದೇಶದಂತೆ ಶನಿವಾರ ಬೆಳಗ್ಗೆ 6.45ರ ಸಮಯದಲ್ಲಿ ಈ ಮಳಿಗೆಗೆ ಬೀಗಮುದ್ರೆ ಹಾಕಲಾಗಿರುತ್ತದೆ ಎಂದು ಹೇಳಿದ್ದಾರೆ. ಪಾವತಿಸಬೇಕಾದ ಬಾಡಿಗೆ ಮೊತ್ತ 7.61 ಕೋಟಿ ರೂ. ಆಗಿದೆ. ಇದರಲ್ಲಿ 1.25 ಕೋಟಿ ರೂ. ಬಾಕಿ ಉಳಿಸಿಕೊಂಡಿತ್ತು. ಬಡ್ಡಿ ಮೊತ್ತ ಸೇರಿದಂತೆ ಒಟ್ಟು 17.56 ಕೋಟಿ ರೂ. ಬಾಕಿ ಮೊತ್ತವನ್ನು ಬ್ಯಾಂಕ್ ಆಫ್ ಬರೋಡ ಪಾವತಿಸಬೇಕಾಗಿದೆ ಎಂದು ತಿಳಿಸಿದ್ದಾರೆ.
ನೋಟಿಸ್‌ಗೆ ಕ್ಯಾರೆ ಎನ್ನದ ಅಂಚೆ ಇಲಾಖೆ: ಅಂಚೆ ಇಲಾಖೆ ಕಚೇರಿಯ ಬಾಡಿಗೆಯನ್ನು 2006ರಿಂದ ಹಳೆಯ ಬಾಡಿಗೆ ಪಾವತಿಸುತ್ತಿದ್ದು, ಪರಿಷ್ಕೃತ ಬಾಡಿಗೆಯನ್ನು ಪಾವತಿಸುತ್ತಿಲ್ಲ. ಈ ಬಗ್ಗೆ ಹಲವಾರು ಬಾರಿ ನೋಟೀಸ್ ಜಾರಿ ಮಾಡಿ ಪರಿಷ್ಕೃತ ಬಾಡಿಗೆಯನ್ನು ಪಾವತಿಸುವಂತೆ ಸೂಚಿಸಲಾಗಿದ್ದರೂ ಬಾಡಿಗೆಯನ್ನು ಪಾವತಿಸಿರುವುದಿಲ್ಲ ಎಂದು ಪಾಲಿಕೆ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಅಂಚೆ ಕಚೇರಿಯಿಂದ 2.32 ಕೋಟಿ ರೂ. ಬಾಡಿಗೆ ಪಾಲಿಕೆಗೆ ಪಾವತಿಸಬೇಕಿದ್ದು, ಈ ಸಂಬಂಧ ಪೂರ್ವ ವಲಯ ಆಯುಕ್ತರ ಆದೇಶದಂತೆ ಸದರಿ ಮಳಿಗೆಗೆ ಬೀಗಮುದ್ರೆ ಹಾಕಲಾಗಿದೆ ಎಂದು ಹೇಳಿದ್ದಾರೆ.
ಒಟ್ಟು 93.27 ಲಕ್ಷ ರೂ. ಪಾವತಿಸಬೇಕಾದ ಬಾಡಿಗೆ ಮೊತ್ತವಾಗಿತ್ತು ಇದರಲ್ಲಿ ಜಿಎಸ್‌ಟಿ ಮೊತ್ತ ಸೇರಿದಂತೆ 10 ಲಕ್ಷ ರೂ.ಬಾಕಿ ಉಳಿಸಿಕೊಂಡಿತ್ತು. ಈ ಎಲ್ಲ ಮೊತ್ತ ಸೇರಿ ಒಟ್ಟು 2.32 ಕೋಟಿ ರೂ.ಒಟ್ಟು ಬಾಕಿ ಮೊತ್ತ ಉಳಿಸಿಕೊಂಡಿದೆ ಎಂದು ಪಾಲಿಕೆ ಪೂರ್ವ ವಲಯದ ಸಹಾಯಕ ಕಂದಾಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.