ಬೆಂಗಳೂರು: ನಗರದಲ್ಲಿ “ರಸ್ತೆ ಗುಂಡಿಗಳು ಆಭಿವೃದ್ಧಿಯಾಗುವುದು ಸಹ ನಿರಂತರ ಪ್ರಕ್ರಿಯೆ ಆದಂತಿದೆ’ ಜನರು ಗಾಯಗೊಂಡರೆ ಅವರಿಗೆ ಪಾಲಿಕೆಯೇ ಪರಿಹಾರ ನೀಡಬೇಕು ಮತ್ತು ಅಧಿಕಾರಿಗಳನ್ನು ಉತ್ತರದಾಯಿಗಳನ್ನಾಗಿ ಮಾಡಬೇಕೆಂಬ ಆದೇಶ ಹೊರಡಿಸಲಾಗುವುದು ಎಂದು ಹೈಕೋರ್ಟ್ ಮಂಗಳವಾರ ತೀಕ್ಷ್ಣವಾಗಿ ಹೇಳಿತು.
ನಗರದ ರಸ್ತೆ ಗುಂಡಿಗಳ ದುಸ್ಥಿತಿ ಕುರಿತು ಕೋರಮಂಗಲದ ವಿಜಯ್ ಮೆನನ್ 2015ರಲ್ಲಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸುತ್ತಿರುವ ಮುಖ್ಯ ನ್ಯಾ. ಎ.ಎಸ್. ಓಕಾ ಹಾಗೂ ನ್ಯಾ. ಮೊಹಮ್ಮದ್ ನವಾಜ್ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ಮಾತು ಹೇಳಿತು.
ಅರ್ಜಿ ವಿಚಾರಣೆ ಆರಂಭವಾಗುತ್ತಿದ್ದಂತೆ, ಬಿಬಿಎಂಪಿ ಪರ ವಕೀಲರು ಜ್ಞಾಪನಾ ಪತ್ರ (ಮೆಮೋ) ಸಲ್ಲಿಸಿ ಜುಲೈ 27ರವರೆಗೆ ಪಡೆದುಕೊಂಡ ಮಾಹಿತಿಯಂತೆ ಬೆಂಗಳೂರಿನಲ್ಲಿ 108 ಪ್ರಮುಖ ರಸ್ತೆಗಳ 401 ಕಿ.ಮೀ ಉದ್ದದ ರಸ್ತೆ ಗುಂಡಿಗಳಿಂದ ಕೂಡಿದೆ. 362 ಪ್ರಮುಖ ರಸ್ತೆಗಳ 943 ಕಿ.ಮೀ ಉದ್ದದ ರಸ್ತೆಗಳಲ್ಲಿ ಗುಂಡಿಗಳು ಇಲ್ಲ. ರಸ್ತೆ ಗುಂಡಿಗಳನ್ನು ಮುಚ್ಚು ಕೆಲಸ ಬಿಬಿಎಂಪಿ ನಿರಂತರವಾಗಿ ಮಾಡುತ್ತಿದೆ ಎಂದು ನ್ಯಾಯಪೀಠಕ್ಕೆ ತಿಳಿಸಿದರು.
ಆಗ ನ್ಯಾಯಪೀಠ, “ದುರದೃಷ್ಟವೆಂದರೆ ನಗರದಲ್ಲಿ ಗುಂಡಿಗಳು ಅಭಿವೃದ್ಧಿಯಾಗೋದು ಕೂಡ ನಿರಂತರ ಪ್ರಕ್ರಿಯೆಯೇ ಆಗಿದೆ. ಅಧಿಕಾರಿಗಳಿಗೆ ಹೊಣೆಗಾರಿಕೆ ನಿಗದಿಪಡಿಸದ ಹೊರತು ಈ ಸಮಸ್ಯೆ ಬಗೆಹರಿಯಲು ಸಾಧ್ಯವಿಲ್ಲ. ಕಾನೂನು ಪ್ರಕಾರ ಬಿಬಿಎಂಪಿಯೇ ಎಲ್ಲ ಹೊಣೆ ಹೊರಬೇಕು. ಹಾಗಾಗಿ ಇನ್ನು ಮುಂದೆ ರಸ್ತೆ ದುಸ್ಥಿತಿಯಿಂದ ಜನರು ಗಾಯಗೊಂಡರೆ ಅವರಿಗೆ ಪಾಲಿಕೆಯೇ ಪರಿಹಾರ ನೀಡಬೇಕು ಮತ್ತು ಅಧಿಕಾರಿಗಳನ್ನು ಉತ್ತರದಾಯಿಗಳನ್ನಾಗಿ ಮಾಡಬೇಕು. ಈ ಕುರಿತು ಆದೇಶ ಹೊರಡಿಸಲಾಗುವುದು” ಎಂದು ಹೇಳಿತು.
ಈ ವೇಳೆ, ಮೆಟ್ರೋ ಸೇರಿದಂತೆ ವಿವಿಧ ಸಂಸ್ಥೆಗಳು ಸಹ ರಸ್ತೆ ಹಾಳಾಗಲು ಕಾರಣರಾಗುತ್ತಾರೆ. ಅವರ ಮೇಲೂ ಸಮಾನ ಹೊಣೆಗಾರಿಕೆ ವಹಿಸಬೇಕು. ಉದಾಹರಣೆಗೆ ಮೆಟ್ರೋ ಕಾಮಗಾರಿ ನಡೆಯುವ ಸ್ಥಳಗಳಲ್ಲಿ ರಸ್ತೆ ಗುಂಡಿಗಳು ಬಿದ್ದಿರುತ್ತವೆ. ಒಪ್ಪಂದದ ಪ್ರಕಾರ ಅವರೇ ಅವುಗಳನ್ನು ಮುಚ್ಚಬೇಕು. ಸಮಸ್ಯೆ ಏನೆಂದರೆ, ಕಾಮಗಾರಿ ಪೂರ್ಣಗೊಳ್ಳುವವರೆಗೆ ಅವರು ರಸ್ತೆ ಗುಂಡಿಗಳನ್ನು ಮುಚ್ಚುವುದಿಲ್ಲ. ಒಂದೊಮ್ಮೆ ನಾವು ದುರಸ್ತಿ ಮಾಡಿದರೂ, ಮತ್ತೇ ಗುಂಡಿಗಳು ಬೀಳುವ ಸಾಧ್ಯತೆ ಇರುತ್ತದೆ ಎಂದು ನ್ಯಾಯಪೀಠಕ್ಕೆ ಮನವರಿಕೆ ಮಾಡಿದರು.
ಅದಕ್ಕೆ , ನ್ಯಾಯಪೀಠ, ನೀವು ಒಪ್ಪಂದ ಮಾಡಿಕೊಂಡಿದ್ದರೂ ಸಹ ಮೂಲ ಕರ್ತವ್ಯ ಪಾಲಿಕೆಯದ್ದೇ. ನೀವು ನಿಮ್ಮ ಹೊಣೆಗಾರಿಕೆ ನಿಭಾಯಿಸಲೇಬೇಕು. ಕೇವಲ ರಸ್ತೆ ಗುಂಡಿಗಳನ್ನು ಮುಚ್ಚುವುದಲ್ಲ, ರಸ್ತೆಗಳು ಸಾರ್ವಜನಿಕರ ಸಂಚಾರಕ್ಕೆ ತೃಪ್ತಿದಾಯಕವಾಗಿರಬೇಕು. ರಸ್ತೆಗಳ ಸ್ಥಿತಿಗತಿ ಮೇಲೆ ನಿಗಾವಹಿಸಲು ಐಐಟಿ, ಐಐಎಸ್ಸಿಯಂತಹ ತಜ್ಞ ಸಂಸ್ಥೆಗಳನ್ನು ಪಾಲಿಕೆ ನೇಮಿಸಿಕೊಳ್ಳಬೇಕು ಎಂದು ನ್ಯಾಯಪೀಠ ಸಲಹೆ ಮಾಡಿತು.
ಅರ್ಜಿದಾರರ ಪರ ವಾದಿಸಿದ ಹಿರಿಯ ವಕೀಲೆ ಎಸ್.ಆರ್. ಅನುರಾಧ, ಪಾಲಿಕೆಯ ಎಲ್ಲ 198 ವಾರ್ಡ್‌ಗಳಲ್ಲಿ ವಾರ್ಡ್ ಸಮಿತಿಗಳನ್ನು ರಚನೆ ಮಾಡಲಾಗಿದೆ. ಅವುಗಳಿಗೆ ಈ ರಸ್ತೆ ನಿರ್ವಹಣೆ ಹೊಣೆ ವಹಿಸಬೇಕು. ರಸ್ತೆ ಗುಂಡಿಗಳಿಂದ ಗಾಯಗೊಂಡರೆ ಅದಕ್ಕೆ ಪಾಲಿಕೆ ಪರಿಹಾರ ನೀಡುವಂತೆ ಆದೇಶ ನೀಡಬೇಕೆಂದು ಕೋರಿದರು.