Advertisement

ಪಾಲಿಕೆ ತೆಕ್ಕೆಗೆ ಸರ್ಕಾರಿ ಸ್ಕೂಲ್‌, ಆಸ್ಪತ್ರೆ?

01:17 AM Jul 03, 2019 | Team Udayavani |

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳು ಹಾಗೂ ಐದು ವಲಯಗಳಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ತಮ್ಮ ಸುಪರ್ದಿಗೆ ನೀಡುವಂತೆ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿದೆ.

Advertisement

ನಗರದಲ್ಲಿರುವ 203 ಗ್ರಂಥಾಲಯ ಹಾಗೂ 1ರಿಂದ ಹತ್ತನೇ ತರಗತಿಯ 1599 ಸರ್ಕಾರಿ ಶಾಲೆಗಳು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ವ್ಯಾಪ್ತಿಯಲ್ಲಿವೆ. ಅಲ್ಲದೆ 48 ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನಿರ್ವಹಣೆಯಲ್ಲಿವೆ.

ಈಗಾಗಲೇ ಬಿಬಿಎಂಪಿ ನಿರ್ವಹಣೆಯಲ್ಲಿ 156 ಶಾಲೆಗಳಿದ್ದು ಅವುಗಳ ಮೂಲಸೌಕರ್ಯ, ಸಿಬ್ಬಂದಿ ಮತ್ತು ಆಡಳಿತ ನಿರ್ವಹಣೆ ಕಷ್ಟವಾಗಿದ್ದು ಹಿಂದೊಮ್ಮೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಗೆ ಒಪ್ಪಿಸುವ ಬಗ್ಗೆಯೂ ಚಿಂತನೆ ನಡೆದಿತ್ತು.

ಆದರೆ, ಇದೀಗ ಪಾಲಿಕೆಯು ಗ್ರಂಥಾಲಯ, ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಶಾಲೆಗಳನ್ನು ತಮ್ಮದೇ ಸುಪರ್ದಿಗೆ ನೀಡಿ ಎಂದು ಪ್ರಸ್ತಾವನೆ ಸಲ್ಲಿಸಿದೆ. ಆಸ್ಪತ್ರೆ ಮತ್ತು ಶಾಲೆಗಳನ್ನು ಸಮರ್ಪಕವಾಗಿ ಬಿಬಿಎಂಪಿ ನಿರ್ವಹಣೆ ಮಾಡಲು ಸಾಧ್ಯವೇ ಎಂಬ ಪ್ರಶ್ನೆಯೂ ಇದೆ.

ನಗರದಲ್ಲಿರುವ ಸರ್ಕಾರಿ ಶಾಲೆ ಹಾಗೂ ಆಸ್ಪತ್ರೆಗಳ ಬಗ್ಗೆ ದೂರು ಬಂದರೆ ಕ್ರಮ ಕೈಗೊಳ್ಳುವ ಅಧಿಕಾರ ಪಾಲಿಕೆಗಿಲ್ಲ. ಆದರೆ, ಅಲ್ಲಿನ ಸಮಸ್ಯೆಗಳಿಗೆ ಸಾರ್ವಜನಿಕರು ಪಾಲಿಕೆ ಸದಸ್ಯರನ್ನೇ ಪ್ರಶ್ನಿಸುತ್ತಾರೆ. ಹೀಗಾಗಿ, ಶಾಲೆಗಳನ್ನು ಪಾಲಿಕೆಗೆ ವಿಲೀನಗೊಳಿಸಬೇಕು.

Advertisement

ಪಾಲಿಕೆಗೆ ಹೊಸದಾಗಿ ಸೇರ್ಪಡೆಯಾಗಿರುವ ಪ್ರದೇಶಗಳ ಐದು ವಲಯಗಳಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ನಮಗೆ ಹಸ್ತಾಂತರಿಸಬೇಕು ಎಂದು ಇತ್ತೀಚೆಗೆ ನಡೆದ ಪಾಲಿಕೆಯ ಕೌನ್ಸಿಲ್‌ ಸಭೆಯಲ್ಲೂ ಒತ್ತಾಯಗಳು ಕೇಳಿಬಂದಿದ್ದವು.

ಸಾರ್ವಜನಿಕ ಗ್ರಂಥಾಲಯ, ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಬಿಬಿಎಂಪಿ ಆಡಳಿತಕ್ಕೆ ಕೊಟ್ಟರೆ ಸಮರ್ಪಕ ನಿರ್ವಹಣೆ ಸಾಧ್ಯವಾಗುತ್ತದೆ. ವಾರ್ಡ್‌ಗಳಲ್ಲಿರುವ ಪಾಲಿಕೆ ಸದಸ್ಯರು ಭೇಟಿ ನೀಡಿ ಬಹುದು. ಯಾವುದಾದರು ಲೋಪಗಳು ಕಂಡು ಬಂದರೆ ಪ್ರಶ್ನಿಸಬಹುದು ಎಂದು ಹೇಳಿದ್ದರು. ಈ ಹಿನ್ನೆಲೆಯಲ್ಲಿ ಬಿಬಿಎಂಪಿಯು ಪ್ರಸ್ತಾವನೆ ಸಿದ್ಧಪಡಿಸಿ ಎರಡೂ ಇಲಾಖೆಗಳಿಗೆ ಕಳುಹಿಸಿದೆ.

ನಮ್ಮದೇ ನಿರ್ವಹಣೆ ಇದ್ದರೆ ಸೂಕ್ತ: ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಸರ್ಕಾರಿ ಶಾಲೆ, ಆಸ್ಪತ್ರೆ, ಗ್ರಂಥಾಲಯಗಳನ್ನು ಬಿಬಿಎಂಪಿಯಿಂದಲೇ ನೇರವಾಗಿ ನಿರ್ವಹಣೆ ಮಾಡುತ್ತೇವೆ. ಶಾಲೆ, ಆಸ್ಪತ್ರೆ, ಗ್ರಂಥಾಲಯಕ್ಕಾಗಿ ಸಂಗ್ರಹಿಸುವ ಸೆಸ್‌ ಹಣವನ್ನು ಸರ್ಕಾರಕ್ಕೆ ಸಲ್ಲಿಸುವ ಬದಲು, ಇಲ್ಲೇ ವೆಚ್ಚ ಮಾಡಬಹುದು. ಈ ಮೂರು ವಿಷಯಗಳಿಗೆ ಸಂಬಂಧಿಸಿದಂತೆ ಪ್ರಸ್ತಾವನೆ ಕಳುಹಿಸಲಾಗಿದೆ ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ್‌ ಪ್ರಸಾದ್‌ ಅವರು ಮಾಹಿತಿ ನೀಡಿದರು.

* ಹಿತೇಶ್‌ ವೈ

Advertisement

Udayavani is now on Telegram. Click here to join our channel and stay updated with the latest news.

Next