Advertisement

ಸ್ವಚ್ಛ ಸರ್ವೆಕ್ಷಣ್‌ಗೆ ತಯಾರಿ ಆರಂಭಿಸಿದ ಬಿಬಿಎಂಪಿ

01:07 AM Jun 08, 2019 | Team Udayavani |

ಬೆಂಗಳೂರು: ಕೇಂದ್ರ ಸರ್ಕಾರದ ಸ್ವಚ್ಛ ಸರ್ವೆಕ್ಷಣ್‌-2020ರ ಅಭಿಯಾನದಲ್ಲಿ ಉತ್ತಮ ರ್‍ಯಾಂಕಿಂಗ್‌ ಪಡೆಯಲೇ ಬೇಕೆಂದು ಪಣತೊಟ್ಟಿರುವ ಬಿಬಿಎಂಪಿ, ಅಭಿಯಾನ ಶುರುವಾಗುವ ಮೊದಲೇ ಸಿದ್ಧತೆ ಆರಂಭಿಸಿದೆ.

Advertisement

ಕಳೆದ ನಾಲ್ಕು ವರ್ಷಗಳ ಅಭಿಯಾನದಲ್ಲಿ ಬೆಂಗಳೂರು ಕಳಪೆ ಸಾಧನೆ ಮಾಡಿದೆ. ಜತೆಗೆ ಯಾವುದೇ ವಿಭಾಗದಲ್ಲಿಯೂ ಬೆಂಗಳೂರಿನ ಪ್ರಶಸ್ತಿ ಲಭ್ಯವಾಗಿಲ್ಲ. ಆ ಹಿನ್ನೆಲೆಯಲ್ಲಿ ಪ್ರಸಕ್ತ ಸಾಲಿನಲ್ಲಾದರೂ ಉತ್ತಮ ಸಾಧನೆ ತೋರಲು ಪಾಲಿಕೆ ತೀರ್ಮಾನಿಸಿದೆ. ಅದಕ್ಕಾಗಿ ಮೇಯರ್‌ ಶುಕ್ರವಾರ ನಗರದ ವಿವಿಧ ಸಂಘ-ಸಂಸ್ಥೆಗಳೊಂದಿಗೆ ಶುಕ್ರವಾರ ಸಭೆ ನಡೆಸಿದ್ದು, ಸ್ವಚ್ಛ ಸರ್ವೆಕ್ಷಣ್‌ನಲ್ಲಿ ಉತ್ತಮ ರ್‍ಯಾಂಕ್‌ ಪಡೆಯಲು ಕೈಗೊಳ್ಳಬೇಕಿರುವ ಕ್ರಮಗಳ ಕುರಿತು ಮಾಹಿತಿ ಪಡೆದಿದ್ದಾರೆ.

ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮೇಯರ್‌ ಗಂಗಾಂಬಿಕೆ, ಸ್ವಚ್ಛ ಸರ್ವೇಕ್ಷಣ್‌ ಅಭಿಯಾನದಲ್ಲಿ ಈವರೆಗೆ ಬೆಂಗಳೂರಿಗೆ ಉತ್ತಮ ಸ್ಥಾನ ಸಿಕ್ಕಿಲ್ಲ. ಹೀಗಾಗಿ 2020ರಲ್ಲಿ 20ನೇ ರ್‍ಯಾಂಕ್‌ ಒಳಗೆ ಬೆಂಗಳೂರಿನ ಹೆಸರು ಬರುವಂತೆ ಮಾಡಲು ಕ್ರಮ ಕೈಗೊಳ್ಳಲಾಗುವುದು. ಅದಕ್ಕಾಗಿ ಈಗಿನಿಂದಲೇ ಸಿದ್ಧತೆ ಆರಂಭಿಸಿದ್ದು, ಖಾಸಗಿ ಸಂಸ್ಥೆಗಳ ಸಹಭಾಗಿತ್ವದಲ್ಲಿ ವಿವಿಧ ಉಪಕ್ರಮಗಳ ಅನುಷ್ಠಾನಗೊಳಿಸಲಾಗುವುದು ಎಂದರು.

ಸ್ವಚ್ಛ ಸರ್ವೆಕ್ಷಣ್‌ ಅಭಿಯಾನ ಕೇವಲ ತ್ಯಾಜ್ಯ ನಿರ್ವಹಣೆಗೆ ಸೀಮಿತವಾಗಿಲ್ಲ. ಅದಕ್ಕಿಂತಲೂ ಪ್ರಮುಖವಾಗಿ ನಗರದ ಬಯಲು ಶೌಚಮುಕ್ತವಾಗಿರಬೇಕು. ಸದ್ಯ ನಗರದಲ್ಲಿ 10 ಸಾವಿರಕ್ಕೂ ಹೆಚ್ಚಿನ ಶೌಚಗೃಹಗಳ ನಿರ್ಮಾಣ ಮಾಡಬೇಕಿದ್ದು, ಕೂಡಲೇ ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.

ನಗರದಲ್ಲಿ ಅಗತ್ಯವಿರುವ ಕಡೆಗಳಲ್ಲಿ ಕೂಡಲೇ ಜಾಗ ಗುರುತಿಸಿ ಶೌಚಗೃಹ ನಿರ್ಮಿಸುವಂತೆ ತಿಳಿಸಲಾಗಿದೆ. ಕೆಲವೆಡೆ ಶೌಚಗೃಹ ನಿರ್ಮಾಣಕ್ಕೆ ಸ್ಥಳೀಯರು ವಿರೋಧ ವ್ಯಕ್ತಪಡಿಸುತ್ತಿದ್ದು, ಅಂತಹ ಕಡೆಗಳಲ್ಲಿ ಪಾಲಿಕೆ ಸದಸ್ಯರು ಸಾರ್ವಜನಿಕರೊಂದಿಗೆ ಮಾತುಕತೆ ನಡೆಸಿ ಅವರಿಗೆ ಅರಿವು ಮೂಡಿಸಲು ಮುಂದಾಗಬೇಕು ಎಂದು ಕೋರಿದರು.

Advertisement

ತ್ಯಾಜ್ಯ ವಿಂಗಡಣೆ, ಸಂಸ್ಕರಣಾ ಘಟಕಗಳ ಕಾರ್ಯಕ್ಷಮತೆ ಹೆಚ್ಚಳ ಸೇರಿ ಇನ್ನಿತರ ವ್ಯವಸ್ಥೆಯನ್ನು ಸರಿದಾರಿಗೆ ತರಲಾಗುವುದು. ಅದಕ್ಕೆ ಸಾರ್ವಜನಿಕರ ನೆರವು ಅಗತ್ಯವಾಗಿದ್ದು, ಬೆಂಗಳೂರಿನ ನಾಗರೀಕರು ತಮ್ಮ ಸುತ್ತಲಿನ ಪರಿಸರವನ್ನು ಸ್ವಚ್ಛವಾಗಿರಿಸಿಕೊಳ್ಳಬೇಕು. ಜತೆಗೆ ಶೇ. 100 ತ್ಯಾಜ್ಯ ವಿಂಗಡಿಸಿ ಪಾಲಿಕೆಗೆ ನೀಡುವುದು ಸಾರ್ವಜನಿಕರ ಜವಾಬ್ದಾರಿಯಾಗಿದೆ ಎಂದು ಹೇಳಿದರು.

ಪ್ರತಿ ವಾರ್ಡ್‌ನಲ್ಲಿ ಜಾಗೃತಿ ಸಭೆ: ಸ್ವಚ್ಛ ಸರ್ವೆಕ್ಷಣ್‌ ಅಭಿಯಾನದ ಕುರಿತು ಜನರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಪ್ರತಿ ವಾರ್ಡ್‌ನಲ್ಲಿ ಸಭೆ ನಡೆಸಿ ಮಾಹಿತಿ ನೀಡುವಂತೆ ಪಾಲಿಕೆ ಸದಸ್ಯರಿಗೆ ತಿಳಿಸಲಾಗಿದೆ. ಅದರಂತೆ ವಾರ್ಡ್‌ನಲ್ಲಿ ಸ್ವಚ್ಛತೆ ಹೆಚ್ಚಿಸಲು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಸಲಹೆ ಹಾಗೂ ಸಾರ್ವಜನಿಕರ ಬೇಡಿಕೆಗಳನ್ನು ತಿಳಿಸಲಾಗುತ್ತದೆ. ಆ ಮೂಲಕ ಎಲ್ಲ ವಾರ್ಡ್‌ಗಳಲ್ಲಿ ಸ್ವಚ್ಛತೆಗೆ ಏಕರೂಪ ಕ್ರಮಕೈಗೊಳ್ಳಲಾಗುವುದು ಎಂದು ಮೇಯರ್‌ ತಿಳಿಸಿದರು.

ಪಾಲಿಕೆ ಸದಸ್ಯರ ನಿರಾಸಕ್ತಿ: ಸ್ವಚ್ಛ ಸರ್ವೆಕ್ಷಣ್‌ ಅಭಿಯಾನದ ಪೂರ್ವ ಸಿದ್ಧತಾ ಸಭೆಯಲ್ಲಿ ಭಾಗವಹಿಸುವಂತೆ ಮೇಯರ್‌ ಪಾಲಿಕೆಯ ಎಲ್ಲ 198 ವಾರ್ಡ್‌ ಪಾಲಿಕೆ ಸದಸ್ಯರಿಗೆ ಸೂಚನೆ ನೀಡಿದ್ದರು. ಆದರೆ, ಕೆಲ ಹಿರಿಯ ಪಾಲಿಕೆ ಸದಸ್ಯರನ್ನು ಹೊರತುಪಡಿಸಿದರೆ, ಉಳಿದವರು ಪಾಲ್ಗೊಂಡಿರಲಿಲ್ಲ. ಕೇವಲ 25 ರಿಂದ 30 ಪಾಲಿಕೆ ಸದಸ್ಯರು ಮಾತ್ರ ಸಭೆಯಲ್ಲಿ ಭಾಗವಹಿಸಿ ಸಲಹೆ ನೀಡಿದರಿಂದ ಮೇಯರ್‌ ಸಭೆ ಕರೆದ ಉದ್ದೇಶವೇ ಈಡೇರಲಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next