Advertisement

ಕನ್ನಲ್ಲಿಯಲ್ಲಿ ಕಸ ಸುರಿದು ಬಿಬಿಎಂಪಿ ಹಳೇ ಚಾಳಿ, ಸ್ಥಳೀಯರ ಪ್ರತಿಭಟನೆ

12:15 PM Apr 08, 2017 | Team Udayavani |

ಕೆಂಗೇರಿ: ಸ್ಥಳೀಯರ ಒತ್ತಾಯ ಹಾಗೂ ಪ್ರತಿಭಟನೆಗೆ ಸ್ಪಂದಿಸಿ ಎರಡು ತಿಂಗಳಿಂದ ಘನ ತ್ಯಾಜ್ಯಘಟಕದಲ್ಲಿ ಕಸ ಸುರಿಯುವುದು ಸ್ಥಗಿತಗೊಳಿಸಿದ್ದ ಬಿಬಿಎಂಪಿ ಅಧಿಕಾರಿಗಳು ರಾತ್ರೋ ರಾತ್ರಿ ಕನ್ನಲ್ಲಿ ಘನತ್ಯಾಜ್ಯ ಘಟಕಕ್ಕೆ ತ್ಯಾಜ್ಯ ತಂದು ಸುರಿಯುತ್ತಿರುವುದರ ವಿರುದ್ಧ ನಾಗರಿಕರು ಆಕ್ರೋಶ ವ್ಯಕ್ತಪಡಿಸಿ ಘನತ್ಯಾಜ್ಯ ಘಟಕದ ಮುಂಭಾಗ ಪ್ರತಿಭಟನೆ ನಡೆಸಿದರು.

Advertisement

ಈ ವೇಳೆ ಕನ್ನಲ್ಲಿ ವೀರಭದ್ರಸ್ವಾಮಿ ನಿತ್ಯಾನ್ನದಾಸೋಹ ಸೇವಾ ಸಮಿತಿ ಅಧ್ಯಕ್ಷ ಕೆ.ಎಸ್‌.ಶಾಂತರಾಜು ಮಾತನಾಡಿ, ಈಗಾಗಲೇ ಕಸ ಸಂಗ್ರಹಣೆ ಮಾಡಿರುವ ಪರಿಣಾಮ ದುರ್ವಾಸನೆಯಿಂದಾಗಿ ಉಸಿರಾಟದ ತೊಂದರೆ, ಮಾರಕ ಕಾಯಿಲೆಗೆ ತುತ್ತಾಗುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಹಳ್ಳಿಗಳೆಂದರೆ ಕಸದ ತೊಟ್ಟಿ ಎಂದು ತಿಳಿದಿದ್ದಾರೆ. ನಾವೂ ಮನುಷ್ಯರಲ್ಲವೆ, ನಮಗೂ ಬದುಕಲು ಹಕ್ಕಿಲ್ಲವೇ ಎಂದು ಕಿಡಿಕಾರಿದರು.

ನಂಬಿಕೆ ದ್ರೋಹ: ಘನತ್ಯಾಜ್ಯ ಘಟಕ ಹೋರಾಟ ಸಮಿತಿ ಅಧ್ಯಕ್ಷ ಚನ್ನಪ್ಪಮಾತನಾಡಿ, ಕಸ ಹಾಕುವುದಿಲ್ಲ ಎಂದು ನಂಬಿಕೆ ದ್ರೋಹ ಮಾಡಿದರೂ ನಾವುಗಳು ಇಲ್ಲಿ ಕಸ ಹಾಕಲು ಬಿಡುವುದಿಲ್ಲ, ಆಗಲೂ ಅಧಿಕಾರಿಗಳು ನಮ್ಮ ಮನವಿಗೆ ಸ್ಪಂದಿಸದೇ ಇದ್ದಲ್ಲಿ ಉಗ್ರ ಹೋರಾಟಕ್ಕೂ ಸಿದ್ಧರಾಗಿದ್ದು ನಮ್ಮ ಗ್ರಾಮವನ್ನು ಸಂರಕ್ಷಿಸಿಕೊಳ್ಳಲು ಎಲ್ಲ ರೀತಿಯಲ್ಲಿ ಸಜಾಗಿದ್ದೇವೆ ಎಂದರು.

ಜನರ ಹೋರಾಟದಲ್ಲಿ ಮಧ್ಯಸ್ಥಿಕೆ ವಹಿಸಿದ್ದ ಬಿಬಿಎಂಪಿ ದಕ್ಷಿಣ ವಲಯದ ಘನ ತ್ಯಾಜ್ಯ ವಿಭಾಗದ ಕಾರ್ಯಪಾಲಕ ಎಂಜಿನಿಯರ್‌ ರಾಘವೇಂದ್ರ ಮತ್ತು ತಾವರೆಕೆರೆ ಪೊಲೀಸ್‌ ಠಾಣಾ ಇನ್ಸ್‌ಪೆಕ್ಟರ್‌ ನಂದೀಶ್‌ ಮುಂದಿನ ದಿನಗಳಲ್ಲಿ ಇಂತಹ ಅವಘಡ ಸಂಭವಿಸದಂತೆ ನೋಡಿಕೊಳ್ಳಲಾಗುವುದು ಹಾಗೂ ಯಾವುದೇ ಕಾರಣಕ್ಕೂ ಘಟಕದಲ್ಲಿ ಕಸ ಸಂಗ್ರಹಣೆ ಮಾಡಲಾಗುವುದಿಲ್ಲ ಎಂದು ಆಶ್ವಾಸನೆ ನೀಡಿದಾಗ ಬೆಳಗ್ಗೆಯಿಂದ ಪ್ರತಿಭಟನೆಯಲ್ಲಿ ತೊಡಗಿದ್ದ ಸ್ಥಳೀಯರು ಹೋರಾಟವನ್ನು ಕೈಬಿಟ್ಟರು.

Advertisement

Udayavani is now on Telegram. Click here to join our channel and stay updated with the latest news.

Next