Advertisement

ರಾತ್ರೋರಾತ್ರಿ ಬಿಬಿಎಂಪಿ ಕಡತ ಸುಟ್ಟವರು ಯಾರು?

12:51 PM Mar 15, 2018 | |

ಕೆಂಗೇರಿ: ಬಿಜೆಪಿ ಕಾಲದಲ್ಲಿ ಬಿಬಿಎಂಪಿ 1400 ಕಡತಗಳನ್ನು ಸುಟ್ಟುಹಾಕಿದರಲ್ಲಾ ಯಾಕೆ ಸುಟ್ಟು ಹಾಕಿದ್ರು..? ಏನಪ್ಪಾ ಅಶೋಕ್‌ ನಿಮ್ಮ ಕಾಲದಲ್ಲೆ ತಾನೆ ಅನೇಕ ಪಾಲಿಕೆ ಕಟ್ಟಡಗಳ ಅಡಮಾನ ಇಟ್ಟಿದ್ದು? 110 ಹಳ್ಳಿಗಳನ್ನು ಸೇರಿ ಅಭಿವೃದ್ಧಿ ಪಡಿಸಿದವರು ಯಾರು…? ಇದು “ಬೆಂಗಳೂರು ರಕ್ಷಿಸಿ’ ಅಭಿಯಾನದ ನೇತೃತ್ವ ವಹಿಸಿರುವ ಮಾಜಿ ಡಿಸಿಎಂ ಆರ್‌. ಅಶೋಕ್‌ಗೆ ಸಿಎಂ ಸಿದ್ದರಾಮಯ್ಯ ಕೇಳಿರುವ ಖಡಕ್‌ ಪ್ರಶ್ನೆಗಳು.

Advertisement

ಜಲಮಂಡಳಿಯಿಂದ ಕೆಂಗೇರಿಯಲ್ಲಿ ನಿರ್ಮಿಸಿರುವ 60 ದಶಲಕ್ಷ ಲೀಟರ್‌ ತ್ಯಾಜ್ಯ ಶುದ್ಧೀಕರಣ ಘಟಕ, ನಗರದ 110 ಹಳ್ಳಿಗಳಿಗೆ ಒಳಚರಂಡಿ ಸಂಪರ್ಕ ವ್ಯವಸ್ಥೆಯ ಶಂಕುಸ್ಥಾಪನೆ ಹಾಗೂ ಕಾವೇರಿ 5ನೇ ಹಂತ 1ನೇ ಘಟ್ಟಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಬಿಬಿಎಂಪಿಯಲ್ಲಿ ಭ್ರಷ್ಟಾಚಾರವೆಸಗಿ ಸಿಕ್ಕಿ ಬೀಳುತ್ತೇವೆ ಎಂಬ ಭಯದಿಂದ ರಾತ್ರೋ ರಾತ್ರಿ ಕಡತಗಳಿಗೆ ಬೆಂಕಿ ಹಾಕಿದವರು ಯಾರು ಸ್ವಾಮಿ? ಎಂದು ಸಿದ್ದರಾಮಯ್ಯ ಬಿಜೆಪಿ ನಾಯಕರನ್ನು ತರಾಟೆಗೆ ತೆಗೆದುಕೊಂಡರು.

ಜನರು ಅಧಿಕಾರ ನೀಡಿದಾಗ ಭ್ರಷ್ಟಾಚಾರದಲ್ಲಿ ತೊಡಗಿ ಬೆಂಗಳೂರಿಗೆ ಕೆಟ್ಟ ಹೆಸರು ತಂದವರು, ಈಗ ದಿನ ಬೆಳಗಾದರೆ ಬೆಂಗಳೂರು ರಕ್ಷಿಸಿ ಎಂದು ಬೀದಿ ಬೀದಿಗಳಲ್ಲಿ ಬೊಬ್ಬೆ ಹೊಡೆಯುತ್ತಿದ್ದಾರೆ ಎಂದು ಟೀಕಿಸಿದರು.

ಅಧಿಕಾರದಲ್ಲಿದ್ದಾಗ ಅಭಿವೃದ್ಧಿ ಕೆಲಸ ಮಾಡದೆ, ರಾತ್ರೋ ರಾತ್ರಿ ಪಾಲಿಕೆಯ ಕಡತಗಳಿಗೆ ಬೆಂಕಿ ಹಚ್ಚಿದವರು. ಯಾವ ಮುಖ ಇಟ್ಟುಕೊಂಡು ಬೆಂಗಳೂರು ರಕ್ಷಿಸಿ ಎಂದು ಜನರ ಮುಂದೆ ಹೋಗಿದ್ದಾರೆ ಎಂದು ದೂರಿದರು.

ಜೈಲುಪಾಲಾಗುವುದರಿಂದ ಬಚಾವ್‌: ಆರ್‌. ಅಶೋಕ್‌ ಭೂ ಮಂಜೂರಾತಿ ಮಂಡಳಿ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಸಾವಿರಾರು ಎಕರೆ ಭೂಮಿಯನ್ನು ಉಳ್ಳವರಿಗೆ ಹಂಚಿಕೆ ಮಾಡಿ ರೈತರಿಗೆ ದ್ರೋಹವೆಸಗಿದ್ದಾರೆ. ಆ ಪ್ರಕರಣದಲ್ಲಿ ಅವರ ವಿರುದ್ಧ ಎಫ್ಐಆರ್‌ ದಾಖಲಾಗಿದ್ದು, ಜೈಲಿಗೆ ಹೋಗುವುದರಿಂದ ಸ್ವಲ್ಪದರಲ್ಲಿ ತಪ್ಪಿಸಿಕೊಂಡಿದ್ದಾರೆ ಎಂದರು.

Advertisement

ಪ್ರಧಾನಿ ನರೇಂದ್ರ ಮೋದಿ ಭ್ರಷ್ಟಾಚಾರ ಸರ್ಕಾರವೆಂದು ಕಾಂಗ್ರೆಸ್‌ ಕಡೆಗೆ ಬೆಟ್ಟು ಮಾಡಿ ತೋರಿಸುತ್ತಾರೆ. ಆದರೆ, ಚೆಕ್‌ ಮೂಲಕ ಭ್ರಷ್ಟಾಚಾರ ಹಣ ಪಡೆದು ಜೈಲಿಗೆ ಹೋಗಿ ಬಂದಿರುವ ಯಡಿಯೂರಪ್ಪ ಅವರಿಗೆ ಕಾಣುವುದಿಲ್ಲ. ದೇಶ ಕಂಡ ಮಹಾನ್‌ ಸುಳ್ಳು ಹೇಳುವ ಪ್ರಧಾನಿಯನ್ನು ಇದುವರೆಗೂ ನಾನು ನೋಡಿರಲಿಲ್ಲ ಎಂದು ಟೀಕಿಸಿದರು.

ರಾಜಧಾನಿಯ ಕುಡಿಯುವ ನೀರು, ಒಳಚರಂಡಿ ವ್ಯವಸ್ಥೆ ಮತ್ತು ತ್ಯಾಜ್ಯ ನೀರು ಸಂಸ್ಕರಣೆಗಾಗಿ ರಾಜ್ಯ ಸರ್ಕಾರ ಕಳೆದ ಐದು ವರ್ಷದಲ್ಲಿ 10,215 ಕೋಟಿ ರೂ. ಗಳನ್ನು ಖರ್ಚು ಮಾಡಲಾಗಿದೆ. ಇದೀಗ ಜಪಾನ್‌ ಜತೆಗೆ ಒಡಂಬಡಿಕೆ ಮಾಡಿಕೊಂಡು 5,552 ಕೋಟಿ ವೆಚ್ಚದಲ್ಲಿ 110 ಹಳ್ಳಿಗಳಿಗೆ ಒಳಚರಂಡಿ ವ್ಯವಸ್ಥೆ, ರಸ್ತೆ ಅಭಿವೃದ್ಧಿಗೊಳಿಸಲು ಸರ್ಕಾರ ಮುಂದಾಗಿದೆ.

ಮುಂದಿನ 6 ತಿಂಗಳಲ್ಲಿ ಎಲ್ಲ ಯೋಜನೆಗಳು ಪೂರ್ಣಗೊಳ್ಳಲಿವೆ. ಇಷ್ಟು ಅಭಿವೃದ್ಧಿ ಕಾಮಗಾರಿಗಳನ್ನು ಮಾಡಿರುವ ನಮ್ಮ ಸರ್ಕಾರಕ್ಕೆ ಜನರು ಆರ್ಶೀವಾದ ಮಾಡಬೇಕು ಎಂದು ಮನವಿ ಮಾಡಿದರು.

ಯಶವಂತಪುರ ಶಾಸಕ ಎಸ್‌.ಟಿ. ಸೋಮಶೇಖರ್‌ ಮಾತನಾಡಿ, 110 ಹಳ್ಳಿಗಳ ಎಲ್ಲ ಸಮಸ್ಯೆಗಳನ್ನು ಸರ್ಕಾರ
ಪರಿಹಾರಗೊಳಿಸಿದೆ. ನಮ್ಮ ಕ್ಷೇತ್ರದ 23 ಹಳ್ಳಿಗಳು ಸಹ ಇದರಲ್ಲಿವೆ.ಕೆಂಗೇರಿ ಕೆರೆ ಅಭಿವೃದ್ಧಿಗೂ ಸರ್ಕಾರ 10 ಕೋಟಿ ರೂ.ಗಳನ್ನು ಒದಗಿಸಿದೆ ಎಂದರು.

ಕೆಂಗೇರಿ ಉಪನಗರದ ಗಾಂಧಿನಗರದಲ್ಲಿ ವಾಸಿಸುವ ನಿವಾಸಿಗಳಿಗೆ ಹಕ್ಕುಪತ್ರ ವಿತರಿಸಲಾಯಿತು. ಈ ವೇಳೆ
ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್‌, ಕೆ.ಆರ್‌.ಪುರ ಶಾಸಕ ಭೈರತಿ ಬಸವರಾಜು, ಜಪಾನ್‌ನ
ಕೌನ್ಸಲ್‌ ಜನರಲ್‌ ಟಕಾಯುಕಿ ಕಿಟಾಗವ, ಜಲಮಂಡಳಿ ಅಧ್ಯಕ್ಷ ತುಷಾರ್‌ ಗಿರಿನಾಥ್‌, ಪ್ರಧಾನ ಅಭಿಯಂತರ
ಕೆಂಪರಾಮಯ್ಯ ಇತರರು ಇದ್ದರು

ದೋಸೆ ಸವಿದ ಸಿಎಂ ಕೆಂಗೇರಿ ಉಪ ನಗರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ವಾಪಸ್‌
ತೆರಳುವಾಗ ಮುಖ್ಯಮಂತ್ರಿ ಸಿದ್ದರಾಮಯ್ಯ ಬಸವನಗುಡಿಯ ಗಾಂಧಿ ಬಜಾರ್‌ನಲ್ಲಿರುವ ವಿದ್ಯಾರ್ಥಿ ಭವನ್‌ ಹೊಟೆಲ್‌ಗೆ ಭೇಟಿ ನೀಡಿ ಬಿಸಿಯಾದ ದೋಸೆ ಸೇವಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next