Advertisement
ಬಿಬಿಎಂಪಿಯಲ್ಲಿ ಈಗ ತಲ್ಲಣ ಶುರುವಾಗಿದೆ. ಪಾಲಿಕೆ ಸದಸ್ಯರ ಅಧಿಕಾರಾವಧಿ ಸೆ.10ಕ್ಕೆ ಮುಗಿಯಲಿದ್ದು, ಕೋವಿಡ್ ಸಂಕಷ್ಟದ ಪರಿಸ್ಥಿತಿ ಹಿನ್ನೆಲೆಯಲ್ಲಿ ಸ್ಥಳೀಯ ಆಡಳಿತ ಅತ್ಯಂತ ಅವಶ್ಯವಿದೆ. ಸದಸ್ಯರ ಅಧಿಕಾರಾವಧಿ ವಿಸ್ತರಣೆಗೆ ಈಗಾಗಲೇ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಈ ಕುರಿತು ಸರ್ಕಾರ ಸಕಾರಾತ್ಮಕವಾಗಿ ಇದುವರೆಗೂ ಸ್ಪಂದಿಸಿಲ್ಲ. ಹೀಗಾಗಿ ಸರ್ಕಾರ ಸಚಿವ ಸಂಪುಟದಲ್ಲಿ ವಿಷಯ ಮಂಡನೆ ಮಾಡಿ ಅನುಮೋದನೆ ಪಡೆದುಕೊಳ್ಳಬೇಕು. ಆದರೆ, ಇದಕ್ಕೆ ಶಾಸಕರು ಒಲವು ತೋರಿಸುತ್ತಿಲ್ಲ ಎನ್ನುತ್ತಾರೆ ಹೆಸರು ಹೇಳಲಿಚ್ಛಿಸದ ಆಡಳಿತ ಪಕ್ಷದ ನಾಯಕರೊಬ್ಬರು.
Related Articles
Advertisement
ಸರ್ಕಾರಕ್ಕೆ ಲಾಭವಾಗುವ ಸಾಧ್ಯತೆ : ಪಾಲಿಕೆ ವ್ಯಾಪ್ತಿಯಲ್ಲಿ ಆಡಳಿತಾತ್ಮಕ ನಿರ್ವಹಣೆಯಿಂದ ಲಾಭವೂ ಇದೆ. ಸರ್ಕಾರವೇ ಪಾಲಿಕೆಯ ಮೇಲೆ ನೇರ ಅಧಿಕಾರ ಚಲಾಯಿಸುವ ಹಿನ್ನೆಲೆಯಲ್ಲಿ ಗೊಂದಲಗಳು ಮೂಡುವ ಸಾಧ್ಯತೆ ಇಲ್ಲದೆ, ನಿರ್ಧಾರಗಳನ್ನು ಶೀಘ್ರ ತೆಗೆದುಕೊಳ್ಳಬಹುದು. ಈ ಅವಧಿಯಲ್ಲಿ ನಗರದ ಹಲವು ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳ ಬಹುದು ಎನ್ನುವ ಮಾತೂ ಇದೆ. ಆದರೆ, ಈ ವೇಳೆ ಸರ್ಕಾರ ಏಕಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಧ್ಯತೆಗಳನ್ನೂ ತಳ್ಳಿಹಾಕುವಂತಿಲ್ಲ. ಶಾಸಕರು ಹೇಳಿದಂತೆ ಮತ್ತು ಅವರಿಗೆ ಬೇಕಾದವರಿಗೆ ಆಗಬೇಕಾದ ಕೆಲಸಗಳು ಸರಾಗವಾಗಿ ಆಗುವ ಸಾಧ್ಯತೆಯೂ ಇದೆ.
ಶಾಸಕರಿಗೆ ಜವಾಬ್ದಾರಿ ಜತೆಗೆ ಲಾಭ : ಬೆಂಗಳೂರಿನಲ್ಲಿ ವಿವಿಧ ಪಕ್ಷದ 27 ಜನ ಶಾಸಕರು ಇದ್ದಾರೆ. ಆದರೆ, ಸೋಂಕು ತಡೆಯುವ ನಿಟ್ಟಿನಲ್ಲಿ ಇಲ್ಲಿಯವರೆಗೆ ಬಹುತೇಕ ಶಾಸಕರು ಸಕ್ರಿಯವಾಗಿ ತೊಡಗಿಸಿಕೊಂಡಿರುವ ಬಗ್ಗೆ ವರದಿಯಾಗಿಲ್ಲ. ಅಲ್ಲದೆ, ಮುಂದಿನ ದಿನಗಳಲ್ಲಿ ಇಡೀ ವಿಧಾನಸಭಾ ಕ್ಷೇತ್ರದಲ್ಲಿನ ಸಮಸ್ಯೆಗಳನ್ನು ಹಾಗೂ ಕೊರೊನಾ ತುರ್ತು ಪರಿಸ್ಥಿಯನ್ನು ಶಾಸಕರೇ ನಿರ್ವಹಿಸಲಿದ್ದಾರೆಯೇ ಎನ್ನುವುದೂ ಪ್ರಶ್ನೆಯಾಗಿಯೇ ಉಳಿದಿದೆ. ಈ ವೇಳೆ ಶಾಸಕರು ಬೆಂಬಲಿಗರಿಗೆ ಹೆಚ್ಚು ಅನುಕೂಲ, ವರ್ಗಾವಣೆ ಹಾಗೂ ಅನುದಾನ ಬಳಕೆಯ ವಿಚಾರಗಳಲ್ಲಿ ಸಹ ಮೇಲುಗೈ ಸಾಧಿಸುವ ಸಾಧ್ಯತೆಯೂ ಇದೆ.
ಅವಧಿ ವಿಸ್ತರಣೆ ಅನುಮಾನ : ಪಾಲಿಕೆ ಸದಸ್ಯರ ಅಧಿಕಾರ ಅವಧಿ ವಿಸ್ತರಣೆ ಮಾಡುವ ವಿಚಾರದಲ್ಲಿ ಸರ್ಕಾರ ಸಮ್ಮತಿ ನೀಡುವ ಸಾಧ್ಯತೆ ಇಲ್ಲ ಎಂದು ಹೆಸರು ಹೇಳಲಿಚ್ಛಿಸದ ಆಡಳಿತ ಪಕ್ಷದ ನಾಯಕರೊಬ್ಬರು ತಿಳಿಸಿದರು. ಪಾಲಿಕೆಯ ಕೆಲವು ಆಡಳಿತಾತ್ಮಕ ವಿಚಾರಗಳಲ್ಲಿ ಸರ್ಕಾರಕ್ಕೆ ಅಸಮಾಧಾನವಿದೆ. ಕೊರೊನಾ ತುರ್ತು ಪರಿಸ್ಥಿತಿ ಇದೆಯಾದರೂ, ಅಧಿಕಾರಿಗಳು ಹಾಗೂ ಸ್ವಯಂ ಸೇವಕರನ್ನು ಹೆಚ್ಚು ಬಳಸಿಕೊಂಡು ಇದಕ್ಕೆ ಕಡಿವಾಣ ಹಾಕಲಾಗುವುದು. ಹೀಗಾಗಿ, ಶೇ. 99ರಷ್ಟು ಪಾಲಿಕೆ ಸದಸ್ಯರ ಅಧಿಕಾರ ಅವಧಿ ವಿಸ್ತರಣೆಯಾಗುವ ಸಾಧ್ಯತೆ ಇಲ್ಲ ಎಂದು ಹೇಳಿದರು.
ಮೀಸಲಾತಿ ಪಟ್ಟಿ ಇನ್ನು ಪ್ರಕಟಿಸಿಲ್ಲ : ಬಿಬಿಎಂಪಿ ವ್ಯಾಪ್ತಿಯ 198 ವಾರ್ಡ್‌ಗಳಲ್ಲಿ 2011ರ ಜನ ಸಂಖ್ಯೆಗೆ ಅನುಗುಣವಾಗಿ ವಾರ್ಡ್ ಮರುವಿಂಗಡಣೆ ಮಾಡಲಾಗಿದೆ. ಬಿಬಿಎಂಪಿ ವ್ಯಾಪ್ತಿಯ 28 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯ ಶೇ. 5ಕ್ಕಿಂತ ಹೆಚ್ಚು ಬದಲಾವಣೆ ಮಾಡದಂತೆ ಮರುವಿಂಗಡಣೆ ಮಾಡಲಾಗಿದ್ದು, ಆದರೆ, ಸರ್ಕಾರ ವಾರ್ಡ್‌ಗಳಿಗೆ ಮೀಸಲಾತಿ ಪಟ್ಟಿಯನ್ನು ಇನ್ನೂ ಪ್ರಕಟ ಮಾಡಿಲ್ಲ. ಪಾಲಿಕೆಯ ಚುನಾವಣೆಗೆ ಮುನ್ನ ಪ್ರತಿ ವಾರ್ಡ್‌ಗೂ ಮೀಸಲಾತಿ ಪ್ರಕಟಿಸಿದರೆ ಚುನಾವಣೆ ಸಾಧ್ಯ. ಆದರೆ, ಈ ವಿಚಾರದಲ್ಲಿ ಸರ್ಕಾರ ವಿಳಂಬ ನೀತಿ ಅನುಸರಿಸುತ್ತಿದ್ದು, ಜತೆಗೆ ಕೋವಿಡ್ ಪರಿಸ್ಥಿತಿಯೂ ಅನಾಸಕ್ತಿಗೆ ಕಾರಣ ಎನ್ನಲಾಗಿದೆ.
ಪಾಲಿಕೆ ಸದಸ್ಯರ ಅಧಿಕಾರ ಅವಧಿ ಆರು ತಿಂಗಳು ವಿಸ್ತರಿಸುವಂತೆ ಸರ್ಕಾರಕ್ಕೆ ಮನವಿ ಮಾಡುವ ಸಂಬಂಧ ಪಕ್ಷದ ವರಿಷ್ಠರೊಂದಿಗೆ ಚರ್ಚೆ ಮಾಡಲಾಗುವುದು. ಅಂತಿಮವಾಗಿ ಸರ್ಕಾರದ ನಿರ್ಧಾರಕ್ಕೆ ಬದ್ಧ. – ಎಂ. ಗೌತಮ್‌ಕುಮಾರ್, ಮೇಯರ್
ಎಲ್ಲ ವಾರ್ಡ್‌ಗಳಲ್ಲಿ ವಾರ್ಡ್ ಮಟ್ಟದ ಸಮಿತಿ ಅಧ್ಯಕ್ಷರಾಗಿ ಆಯಾ ವಾರ್ಡ್‌ನ ಪಾಲಿಕೆ ಸದಸ್ಯರೇ ಇರುವ ಹಿನ್ನೆಲೆಯಲ್ಲಿ ಹಾಗೂ ಕೋವಿಡ್ ಸಂಕಷ್ಟದ ಹಿನ್ನೆಲೆಯಲ್ಲಿ ವಾರ್ಡ್ ಮಟ್ಟದಲ್ಲಿ ಪಾಲಿಕೆ ಸದಸ್ಯರಿಗೆ ಅನೌಪಚಾರಿಕವಾಗಿ ಅಧಿಕಾರ ನೀಡುವುದು ಉತ್ತಮ. – ಕಾತ್ಯಾಯಿನಿ ಚಾಮರಾಜ್, ಸಾಮಾಜಿಕ ಕಾರ್ಯಕರ್ತೆ
ಕೋವಿಡ್ ತಡೆಯುವ ನಿಟ್ಟಿನಲ್ಲಿ ಪಾಲಿಕೆ ಸದಸ್ಯರು ಫ್ರಂಟ್ ಲೈನ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಹೀಗಾಗಿ, ಪಾಲಿಕೆ ಸದಸ್ಯರ ಅಧಿಕಾರ ಅವಧಿಯನ್ನು ಸರ್ಕಾರ ಮೂರು ಅಥವಾ ಆರು ತಿಂಗಳು ವಿಸ್ತರಿಸಬೇಕು. – ಅಬ್ದುಲ್‌ವಾಜಿದ್, ವಿರೋಧ ಪಕ್ಷದ ನಾಯಕ, ಬಿಬಿಎಂಪಿ
ಸದಸ್ಯರ ಅಧಿಕಾರ ವಿಸ್ತರಿಸುವುದಕ್ಕೆ ಬರುವುದಿಲ್ಲ. ಇದು ಸಂವಿಧಾನ ವಿರೋಧಿ ನಡೆ. ಈ ಅಧಿಕಾರ ಸರ್ಕಾರಕ್ಕೂ ಇಲ್ಲ. ಈಗ ಬಿಹಾರ ಸೇರಿದಂತೆ ವಿವಿಧೆಡೆ ಚುನಾವಣೆ ಚರ್ಚೆ ನಡೆದಿದೆ. ಅದೇ ರೀತಿ, ಇಲ್ಲೂ ಚುನಾವಣೆ ನಡೆಸಲಿ. –ಪಿ.ಆರ್. ರಮೇಶ್, ಮಾಜಿ ಮೇಯರ್
– ಹಿತೇಶ್ ವೈ