ಬೆಂಗಳೂರು: ಬಿಬಿಎಂಪಿ ಬಜೆಟ್‌ಗೆ ಸಂಬಂಧಿಸಿದಂತೆ ಆಡಳಿತಾರೂಢ ಕಾಂಗ್ರೆಸ್-ಜೆಡಿಎಸ್ ವಾಸ್ತವ ಎಂದು ಪ್ರತಿಪಾದಿಸಿದರೆ, ಪ್ರತಿಪಕ್ಷ ಬಿಜೆಪಿ ಅವಾಸ್ತವ ಎಂದು ಆರೋಪಿಸುವ ಮೂಲಕ ಬಜೆಟ್ ಚರ್ಚೆಯಲ್ಲಿ ವಾದ-ವಿವಾದಕ್ಕೆ ಎಡೆಮಾಡಿಕೊಟ್ಟಿತು.
ಎರಡನೇ ದಿನದ ಬಜೆಟ್ ಚರ್ಚೆಯಲ್ಲಿ ಪ್ರತಿಪಕ್ಷ ನಾಯಕ ಪದ್ಮನಾಭನರೆಡ್ಡಿ ಮಾತನಾಡಿ, ಪ್ರಸಕ್ತ ಸಾಲಿನ ಬಜೆಟ್ ಅವಾಸ್ತವಿಕ ಪುನರ್ ಪರಿಶೀಲನೆಗಾಗಿ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿಗೆ ಕಳುಹಿಸಬೇಕು. ಇಲ್ಲದಿದ್ದರೆ ಬಜೆಟ್ ಅನುಮೋದನೆ ಬಿಜೆಪಿ ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಸಿದರು.
ಮೈತ್ರಿ ಆಡಳಿತ ನಿರಂತರ ಸುಳ್ಳು ಹೇಳುತ್ತಿದ್ದು, ಕಾಂಗ್ರೆಸ್ ಮಾಡಿದ ಸಾಲ ತೀರಿಸಲು ಬಿಜೆಪಿ ಕಟ್ಟಡ ಅಡಮಾನ ಇಡಬೇಕಾಯಿತು. ಕಾಂಗ್ರೆಸ್‌ನಂತೆ ಬಿಜೆಪಿ ಯಾವುದೇ ಆಸ್ತಿಗಳನ್ನು ಮಾರಾಟ ಮಾಡಿಲ್ಲ ಎಂದು ಟೀಕಿಸಿದರು. ಕೇಂದ್ರ ಮತ್ತು ರಾಜ್ಯ ಸರ್ಕಾರಿ ಕಟ್ಟಡಗಳು ಕೆಎಂಸಿ ಕಾಯ್ದೆಯನ್ವಯ ಪಾಲಿಕೆಗೆ ಸೇವಾ ಶುಲ್ಕ ಪಾವತಿಸಬೇಕು.
ಆದರೆ, ಶುಲ್ಕ ಪಾವತಿಸಿಲ್ಲ. ಪಾಲಿಕೆಯ ಆಯುಕ್ತರು ಸೇವಾಶುಲ್ಕ ಪಾವತಿಸುವಂತೆ ಎಲ್ಲ ಕಚೇರಿಗಳಿಗೆ ನೋಟಿಸ್ ಜಾರಿಗೊಳಿಸಲಿ ಎಂದು ಲೇವಡಿ ಮಾಡಿದರು. ಕಾಂಗ್ರೆಸ್‌ನ ಹಿರಿಯ ಸದಸ್ಯ ನಾಯಕ ಎಂ.ಶಿವರಾಜು ಮಾತನಾಡಿ, ವಾಸ್ತವ ಬಜೆಟ್ ಮಂಡಿಸಲಾಗಿದೆ.
ಪಾಲಿಕೆಯಿಂದ ಮಂಡಿಸುವಂತಹ ಬಜೆಟ್ ಸಮರ್ಪಕವಾಗಿ ಅನುಷ್ಠಾನಗೊಳಿಸಲು ಪ್ರತ್ಯೇಕ ವಿಭಾಗ ರಚಿಸಬೇಕು ಎಂದರು. ಕಾಂಗ್ರೆಸ್‌ನ ಮಹಮ್ಮದ್ ರಿಜ್ವಾನ್ ನವಾಬ್ ಮಾತನಾಡಿ, ಹೊಸ ಜಾಹೀರಾತು ಉಪವಿಧಿಗಳನ್ನು ಆದಷ್ಟು ಬೇಗ ಜಾರಿಗೊಳಿಸಿದರೆ, ಪಾಲಿಕೆಗೆ ಒಂದಷ್ಟು ಆದಾಯ ಬರುತ್ತದೆ ಎಂದರು.
ಉದಯವಾಣಿ ವರದಿ ಪ್ರಸ್ತಾಪ: ಇಂದಿರಾ ಕ್ಯಾಂಟೀನ್ ಯೋಜನೆಗೆ ರಾಜ್ಯ ಸರ್ಕಾರ ಹಾಗೂ ಬಿಬಿಎಂಪಿ ಬಜೆಟ್‌ಗಳಲ್ಲಿ ಅನುದಾನ ಮೀಸಲಿಡದೆ ನಿರ್ಲಕ್ಷಿಸಿವೆ ಎಂದು ಬುಧವಾರ (ಫೆ.20) ರಂದು
“ಉದಯವಾಣಿ’ಯು “ಬೇಡವಾದ ಇಂದಿರಾ ಕ್ಯಾಂಟೀನ್’ ಶೀರ್ಷಿಕೆಯಡಿಯಲ್ಲಿ ವಿಶೇಷ ವರದಿ ಪ್ರಕಟಿಸಿತ್ತು. ಸಭೆಯಲ್ಲಿ ಈ ವಿಷಯ ಪ್ರತಿಪಕ್ಷ ನಾಯಕ ಪದ್ಮನಾಭರೆಡ್ಡಿ ಪ್ರಸ್ತಾಪಿಸಿದರು. ಸರ್ಕಾರ ಮತ್ತು ಪಾಲಿಕೆ ಬಜೆಟ್‌ನಲ್ಲಿ ಅನುದಾನವೇ ಇರಿಸಿಲ್ಲ. ಕ್ಯಾಂಟೀನ್ ನಿರ್ವಹಿಸಲಾಗಿದ್ದರೆ ಮುಚ್ಚಿಬಿಡ್ತೀರಾ? ಎಂದು ಪ್ರಶ್ನಿಸಿದರು.