Advertisement
ರಾಜ್ಯ ಸರ್ಕಾರದ ಬಜೆಟ್ ಫೆಬ್ರವರಿ 8ರಂದು ಮಂಡನೆಯಾಗಲಿರುವ ಹಿನ್ನೆಲೆಯಲ್ಲಿ ಪಾಲಿಕೆಯ ಬಜೆಟ್ ಅನ್ನು ಫೆ.15 ಅಥವಾ 18ರಂದು ಮಂಡಿಸಲು ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ತೀರ್ಮಾನಿಸಿದೆ. ಲೋಕಸಭಾ ಚುನಾವಣೆ ನೀತಿ ಸಂಹಿತೆ ಜಾರಿಯಾಗುವ ಹಿನ್ನೆಲೆಯಲ್ಲಿ ಆದಷ್ಟು ಬೇಗ ಬಜೆಟ್‌ಗೆ ಸರ್ಕಾರದಿಂದ ಅನುಮತಿ ಪಡೆಯಲು ನಿರ್ಧರಿಸಲಾಗಿದೆ.
Related Articles
Advertisement
ಸಚಿವರು, ಮೇಯರ್, ಉಪಮೇಯರ್‌ಗೆ ಬಂಪರ್: ಬಜೆಟ್‌ನಲ್ಲಿ ಬೆಂಗಳೂರು ನಗರಾಭಿವೃದ್ಧಿ ಸಚಿವರ ನಿಧಿ 250 ಕೋಟಿ ರೂ. ಮೀಸಲಿಡಲು ತೀರ್ಮಾನಿಸಲಾಗಿದೆ. ಜತೆಗೆ ಮೇಯರ್‌ಗೆ 150 ಕೋಟಿ ರೂ., ಉಪಮೇಯರ್‌ಗೆ 100 ಕೋಟಿ ರೂ. ಮೀಸಲಿಡಲು ನಿರ್ಧರಿಸಲಾಗಿದೆ. ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷರು ಹಾಗೂ ಆಡಳಿತ ಪಕ್ಷ ನಾಯಕರ ವಾರ್ಡ್‌ಗಳಿಗೆ 25 ಕೋಟಿ ರೂ., ವಿರೋಧ ಪಕ್ಷ ನಾಯಕರ ವಾರ್ಡ್ 10 ಕೋಟಿ ರೂ. ಹಾಗೂ ಪಾಲಿಕೆಯ ಜೆಡಿಎಸ್ ಪಕ್ಷದ ನಾಯಕರ ವಾರ್ಡ್‌ಗೆ 5 ಕೋಟಿ ರೂ. ಹೆಚ್ಚುವರಿಯಾಗಿ ಮೀಸಲಿಡುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ ಎಂದು ಮೂಲಗಳು ತಿಳಿಸಿವೆ.
ಅಬ್ದುಲ್ ವಾಜೀದ್ ಆಡಳಿತ ಪಕ್ಷದ ನಾಯಕ: ಬಿಬಿಎಂಪಿಯ ಆಡಳಿತ ಪಕ್ಷದ ನಾಯಕರಾಗಿ ಮನೋರಾಯನಪಾಳ್ಯ ವಾರ್ಡ್ ಸದಸ್ಯ ಅಬ್ದುಲ್ ವಾಜೀದ್ ಅವರನ್ನು ನೇಮಕ ಮಾಡಿ ಕಾಂಗ್ರೆಸ್ ಆದೇಶ ಹೊರಡಿಸಿದೆ. ಈ ಕುರಿತು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ದಿನೇಶ್ ಗುಂಡೂರಾವ್ ಮೇಯರ್ ಗಂಗಾಂಬಿಕೆ ಅವರಿಗೆ ಪತ್ರ ಬರೆದಿದ್ದು, ಆಡಳಿತ ಪಕ್ಷದ ನಾಯಕರಿಗೆ ಸಿಗುವ ಸವಲತ್ತುಗಳನ್ನು ಒದಗಿಸುವಂತೆ ಪತ್ರದಲ್ಲಿ ತಿಳಿಸಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಗುರುವಾರ ವಾಜೀದ್ ಅವರ ವಾರ್ಡ್‌ನಲ್ಲಿ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದ್ದಾರೆ. ಈ ಹಿಂದೆ ದತ್ತಾತ್ರೇಯ ದೇವಾಸ್ಥಾನ ವಾರ್ಡ್‌ನ ಆರ್.ಎಸ್.ಸತ್ಯನಾರಾಯಣ, ಗುರಪ್ಪನಪಾಳ್ಯ ವಾರ್ಡ್‌ನ ಮಹಮ್ಮದ್ ರಿಜ್ವಾನ್ ಹಾಗೂ ಕಳೆದ ಅವಧಿಗೆ ಶಂಕರಮಠ ವಾರ್ಡ್‌ನ ಎಂ.ಶಿವರಾಜು ಆಡಳಿತ ಪಕ್ಷ ನಾಯಕರಾಗಿ ಕಾರ್ಯನಿರ್ವಹಿಸಿದ್ದಾರೆ.
ಆಡಳಿತ ಪಕ್ಷ ನಾಯಕರಾಗಿ ಆಯ್ಕೆಯಾದ ಬಳಿಕ ಪ್ರತಿಕ್ರಿಯಿಸಿದ ಅಬ್ದುಲ್ ವಾಜೀದ್, ಲೋಕಸಭೆ ಚುನಾವಣೆಯ ಸಂದರ್ಭದಲ್ಲಿ ಪಕ್ಷ ನನಗೆ ಮಹತ್ವ ಜವಾಬ್ದಾರಿ ವಹಿಸಿದೆ. ಆ ಹಿನ್ನೆಲೆಯಲ್ಲಿ ಯಾವುದೇ ಆರೋಪಗಳಿಗೆ ಅವಕಾಶವಿಲ್ಲದಂತೆ ಉತ್ತಮ ಆಡಳಿತ ನೀಡಲಾಗುವುದು. ನಗರದಲ್ಲಿ ಮೂಲ ಸೌಕರ್ಯಕ್ಕೆ ಸಂಬಂಧಿಸಿದಂತೆ ಹಲವಾರು ಸಮಸ್ಯೆಗಳಿದ್ದು, ಅವುಗಳನ್ನು ಸಮರ್ಥವಾಗಿ ನಿಭಾಯಿಸಲಾಗುವುದು ಎಂದು ಹೇಳಿದ್ದಾರೆ.
ಬಿಜೆಪಿಯಲ್ಲಿ ಅಸಮಧಾನ: ಆಡಳಿತ ಪಕ್ಷದ ನಾಯಕರನ್ನು ಬದಲಿಸಿ ಕಾಂಗ್ರೆಸ್ ಆದೇಶ ಹೊರಡಿಸಿದ ಬೆನ್ನಲ್ಲೇ, ಬಿಜೆಪಿಯ ಕೆಲ ಪಾಲಿಕೆ ಸದಸ್ಯರು ಅಸಮಧಾನಗೊಂಡಿದ್ದಾರೆ. ಪ್ರತಿ ವರ್ಷ ಕಾಂಗ್ರೆಸ್ ಆಡಳಿತ ಪಕ್ಷ ನಾಯಕ ಹಾಗೂ ಜೆಡಿಎಸ್ ಪಕ್ಷ ನಾಯಕ ಸ್ಥಾನವನ್ನು ಬೇರೆಯವರಿಗೆ ನೀಡುವ ಮೂಲಕ ಎಲ್ಲ ಸದಸ್ಯರಿಗೆ ಅವಕಾಶ ನೀಡಲಾಗುತ್ತಿದೆ. ಆದರೆ, ಬಿಜೆಪಿಯಲ್ಲಿ ಮೂರು ವರ್ಷಗಳಿಂದ ಒಬ್ಬರೇ ವಿರೋಧ ಪಕ್ಷದ ನಾಯಕರಾಗಿದ್ದು, 100 ಜನ ಸದಸ್ಯರಿದ್ದರೂ ಸ್ಥಾನಮಾನ ಹಂಚಿಕೆಯಾಗುತ್ತಿಲ್ಲ ಎಂದು ಅಕಾಂಕ್ಷಿಯೊಬ್ಬರು ಬೇಸರ ಹೊರಹಾಕಿದ್ದಾರೆ.