Advertisement

ಪಾಲಿಕೆ ಬಜೆಟ್‌: ನಿರ್ದೇಶನ ಕೋರಿ ಸರ್ಕಾರಕ್ಕೆ ಪತ್ರ

10:48 AM Apr 12, 2020 | mahesh |

ಬೆಂಗಳೂರು: ಬಿಬಿಎಂಪಿಯ 2020-21 ನೇ ಸಾಲಿನ ಬಜೆಟ್‌ ಮಂಡನೆ ವಿಚಾರದಲ್ಲಿ ಯಾವ ರೀತಿ ನಿರ್ಧಾರ ತೆಗೆದುಕೊಳ್ಳಬೇಕು ಎನ್ನುವುದನ್ನು ನಿರ್ದೇಶಿಸುವಂತೆ ಮೇಯರ್‌ ಎಂ.ಗೌತಮ್‌ ಕುಮಾರ್‌ ಸರ್ಕಾರದ ಮುಖ್ಯ ಕಾರ್ಯ  ದರ್ಶಿಗಳಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.

Advertisement

ಪಾಲಿಕೆಯ 2020-21ನೇ ಸಾಲಿನ ಬಜೆಟ್‌ ಅನ್ನು 2020ರ ಜ.15ರ ಒಳಗೆ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷರಿಗೆ ಬಿಬಿಎಂಪಿ ಆಯುಕ್ತರು ಸಲ್ಲಿಸಬೇಕಾಗಿತ್ತು. ಆದರೆ, ಈ ನಿಗದಿತ ಅವಧಿಯಲ್ಲಿ ಆಯುಕ್ತರು ಬಜೆಟ್‌ ಸಲ್ಲಿಸಿರುವುದಿಲ್ಲ. ಕೆಎಂಸಿ ಕಾಯ್ದೆಯ 1976ರ ಸೆಕ್ಷನ್‌ 167 ಮತ್ತು 168ರಂತೆ ಬಜೆಟ್‌ ತೆರಿಗೆ 
ಮತ್ತು ಆರ್ಥಿಕ ಸ್ಥಾಯಿ ಸಮಿತಿಯು ಫೆಬ್ರವರಿ ಮೊದಲ ವಾರದಲ್ಲಿ ಸಭೆ ಮುಂದೆ ಮಂಡಿಸಲು ನಿಗದಿಪಡಿಸಲಾಗಿತ್ತು.

ಆದರೆ, ಮುಖ್ಯ ಲೆಕ್ಕಾಧಿಕಾರಿಗಳು, ವಿಶೇಷ ಆಯುಕ್ತರು (ಹಣಕಾಸು) ಹಾಗೂ ಆಯುಕ್ತರು ಪಾಲಿಕೆಯ 2020-21ನೇ ಸಾಲಿನ ಆಯವ್ಯಯ ಪಟ್ಟಿ ಯನ್ನು ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿಗೆ ಸಲ್ಲಿಸಲು ವಿಳಂಬ ಮಾಡಿದ್ದಾರೆ. ಎಲ್ಲ ಮುಗಿದು ಇನ್ನೇನು ಬಜೆಟ್‌ ಮಂಡನೆ ಮಾಡಬೇಕು ಎನ್ನುವ ವೇಳೆಯಲ್ಲಿ ಕೊರೊನಾ ವ್ಯಾಪಕವಾಗಿದ್ದು, ಲಾಕ್‌ ಡೌನ್‌ ಆಗಿದೆ. ಹೀಗಾಗಿ, ಕೌನ್ಸಿಲ್‌, ಸ್ಥಾಯಿ ಸಮಿತಿ ಸಭೆ ಹಾಗೂ ಬಿಬಿಎಂಪಿ ಬಜೆಟ್‌ ಮಂಡನೆ ಮಾಡಲು ಸಾಧ್ಯವಾಗಿಲ್ಲ. ಈಗಾಗಲೇ 2020-21ನೇ ಸಾಲಿನ ಆರ್ಥಿಕ ವರ್ಷ ಪ್ರಾರಂಭವಾಗಿದ್ದು, ಪಾಲಿಕೆಯ ಆರ್ಥ ವ್ಯವಸ್ಥೆ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಮಾರ್ಗದರ್ಶನ ನೀಡಬೇಕು ಎಂದು ಮನವಿ ಮಾಡಿದ್ದಾರೆ. ಅಲ್ಲದೆ, ಲಾಕ್‌ಡೌನ್‌ನಂತಹ ಪರಿಸ್ಥಿತಿ ಮೊದಲ ಬಾರಿಗೆ ಎದುರಿಸುತ್ತಿದ್ದು,ಆಡಳಿತಾತ್ಮಕ ನಿರ್ಧಾರ
ತೆಗೆದು ಕೊಳ್ಳಲು ಸಾಧ್ಯವಾಗಿಲ್ಲ. ಈ ನಿಟ್ಟಿನಲ್ಲಿ ಪಾಲಿಕೆಯ ಪ್ರಸ್ತಕ ಆರ್ಥಿಕ ವರ್ಷದ ಬಜೆಟ್‌ ಮಂಡನೆಗೆ ಇರುವ ಅವಕಾಶಗಳ ಬಗ್ಗೆ ತಿಳಿಸಬೇಕು ಎಂದು ಕೋರಿದ್ದಾರೆ.

ಆಯುಕ್ತರ ವಿಳಂಬ ಕಾರ್ಯ
ಬಿಬಿಎಂಪಿಯ 2020-21ನೇ ಸಾಲಿನ ಬಜೆಟ್‌ನಲ್ಲಿ ಶೇ.30ರಷ್ಟು ಬಜೆಟ್‌ ಪೂರ್ವ ಅನುದಾನ ನೀಡಲು ಸಾಧ್ಯವಿಲ್ಲ ಎಂದು ಮೇಯರ್‌ ಎಂ.ಗೌತಮ್‌ ಕುಮಾರ್‌ ತಿಳಿಸಿದ್ದಾರೆ. ಬಿಬಿಎಂಪಿ ಆಯುಕ್ತ ಬಿ.ಎಚ್‌.ಅನಿಲ್‌ಕುಮಾರ್‌ ಅವರು ಸರಿಯಾದ ಸಮಯಕ್ಕೆ ಆರ್ಥಿಕ ಆಯವ್ಯಯ ಪಟ್ಟಿಸಲ್ಲಿಸಿಲ್ಲ. ಹೀಗಾಗಿ,
ಸಮಸ್ಯೆ ಸೃಷ್ಟಿಯಾಗಿದೆ. ಈಗ ಶೇ.30 ರಷ್ಟು ಬಜೆಟ್‌ ಪೂರ್ವ ಅನುದಾನ ಬಿಡುಗಡೆ ಮಾಡಿದರೆ ಮುಂದೆ ನಿಖರ
ಲೆಕ್ಕ ಸಿಗುವುದಿಲ್ಲ. ಹೀಗಾಗಿ, ಇದಕ್ಕೆ ಅವಕಾಶ ನೀಡುವುದಿಲ್ಲ ಎಂದು ಮೇಯರ್‌ ಸ್ಪಷ್ಟಪಡಿಸಿದರು.

ಮಂಡನೆಗೆ ಇರುವ ಅವಕಾಶಗಳು
ಪಾಲಿಕೆಯ ಸದಸ್ಯರೊಂದಿಗೆ ವಿಡಿಯೋ ಕಾನ್ಫರೆನ್ಸ್‌ ಸಭೆ ನಡೆಸಿದ ರೀತಿ ವಿಡಿಯೋ ಕಾನ್ಫರೆನ್ಸ್‌ ಮೂಲಕ ಎಲ್ಲ ಸದಸ್ಯರನ್ನು ಒಳಗೊಂಡಂತೆ ಬಜೆಟ್‌ ಮಂಡನೆ ಮಾಡಬಹುದು. ಅಲ್ಲದೆ, ಕೆಎಂಸಿ ಕಾಯ್ದೆ ಅನ್ವಯ ವ್ಯವಹಾರ ನಿರ್ವಹಣೆ ಅಡಿ ಬಜೆಟ್‌ ಮಂಡನೆ ಮಾಡಬಹುದಾಗಿದೆ. 

Advertisement

ವಿಪತ್ತು ನಿರ್ವಹಣೆ ಕಾಯ್ದೆ ಅಡಿಯಲ್ಲಿ ಮೇಯರ್‌, ಉಪಮೇಯರ್‌, ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷರು, ವಿಪಕ್ಷಗಳ
ನಾಯಕರು ಸೇರಿ 11 ಜನರು ಬಜೆಟ್‌ ಮಂಡನೆ ಮಾಡಬಹುದಾಗಿದೆ. ಇದರ ಹೊರತಾಗಿ ಪಾಲಿಕೆ ವ್ಯಪ್ತಿಯ 8
ವಲಯಗಳಲ್ಲಿನ ತಲಾ 20 ಪಾಲಿಕೆ ಸದಸ್ಯರು ಸೇರಿ ಒಟ್ಟು 160ಜನ ಪಾಲಿಕೆ ಸದಸ್ಯರ ಒಪ್ಪಿಗೆಯಂತೆ ಬಜೆಟ್‌ ಮಂಡನೆ ಮಾಡಬಹುದು.

ಮೇಯರ್‌, ಉಪಮೇಯರ್‌, ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ, ಆಡಳಿತ ಪಕ್ಷ ಮತ್ತು ವಿರೋಧ ಪಕ್ಷದ ನಾಯಕರನ್ನು ಒಳಗೊಂಡಂತೆ ಬಜೆಟ್‌ ಮಂಡನೆ ಮಾಡಬಹು ದಾಗಿದೆ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next