Advertisement

ತ್ಯಾಜ್ಯ ವಿಂಗಡಣೆಗೆ ಪಾಲಿಕೆಯಿಂದ ಜಾಗೃತಿ

02:50 PM Jun 13, 2022 | Team Udayavani |

ಬೆಂಗಳೂರು: ಹಸಿ ತ್ಯಾಜ್ಯ ಸಂಸ್ಕರಣೆಗೆ ಸೂಕ್ತ ವ್ಯವಸ್ಥೆ ಮಾಡಿಕೊಳ್ಳದ ಬಿಬಿಎಂಪಿ, ಸಾರ್ವಜನಿಕರು ತ್ಯಾಜ್ಯ ವಿಂಗಡಣೆ ಮಾಡುವಂತೆ ಜಾಗೃತಿ ಮೂಡಿಸಲು ಪ್ರಚಾರ ಮಾಡಲು ಮುಂದಾಗಿದೆ. ಅದಕ್ಕಾಗಿ 10 ಕೋಟಿ ರೂ. ವ್ಯಯಿಸುತ್ತಿದೆ.

Advertisement

ಬಿಬಿಎಂಪಿ ವ್ಯಾಪ್ತಿಯಲ್ಲಿ ವಾರ್ಷಿಕ 5,500 ಟನ್‌ಗೂ ಹೆಚ್ಚಿನ ತ್ಯಾಜ್ಯ ಉತ್ಪತ್ತಿಯಾಗುತ್ತಿದೆ. ಅದರಲ್ಲಿ ಶೇ. 80 ಭಾಗ ಹಸಿ ತ್ಯಾಜ್ಯವಾಗಿದ್ದು, 1,500 ಟನ್‌ಗೂ ಕಡಿಮೆ ಪ್ರಮಾಣದಲ್ಲಿ ಹಸಿ ತ್ಯಾಜ್ಯ ಸಂಸ್ಕರಣೆ ಮಾಡಲಾಗುತ್ತಿದೆ. ಉಳಿದ ತ್ಯಾಜ್ಯವನ್ನು ಭೂಭರ್ತಿ ಪ್ರದೇಶಗಳಲ್ಲಿ ಸುರಿಯಲಾಗುತ್ತಿದೆ. ಪರಿಸ್ಥಿತಿ ಹೀಗಿರುವಾಗ ಬಿಬಿಎಂಪಿ ಮಾತ್ರ ಹಸಿ, ಒಣ ಹಾಗೂ ಸ್ಯಾನಿಟರಿ ತ್ಯಾಜ್ಯ ವಿಂಗಡಣೆ ಮಾಡುವ ಕುರಿತಂತೆ ಜನರಲ್ಲಿ ಜಾಗೃತಿ ಮೂಡಿಸಲು ಮುಂದಾಗಿದೆ.

ವರ್ಷವಿಡೀ ಪ್ರಚಾರ: ಬಿಬಿಎಂಪಿ ರೂಪಿಸಿರುವ ಯೋಜನೆಯಂತೆ ತ್ಯಾಜ್ಯ ವಿಂಗಡಣೆ ಮತ್ತು ನಿರ್ವಹಣೆ ಕುರಿತು ವರ್ಷದ 365 ದಿನವೂ ವಿವಿಧ ರೀತಿಯಲ್ಲಿ ಪ್ರಚಾರ ಕಾರ್ಯ ಕೈಗೊಳ್ಳಲಾಗುತ್ತದೆ. ಅದರಲ್ಲೂ ಯಾವ ಮಾಧ್ಯಮಗಳಲ್ಲಿ ಎಷ್ಟು ದಿನ ತ್ಯಾಜ್ಯ ವಿಂಗಡಣೆ, ನಿರ್ವಹಣೆ ಕುರಿತು ಅರಿವು ಮೂಡಿಸಬೇಕು ಎಂಬುದನ್ನು ಬಿಬಿಎಂಪಿ ಅಧಿಕಾರಿಗಳು ಈಗಾಗಲೇ ನಿಗದಿ ಮಾಡಿದ್ದಾರೆ.

14 ಬಗೆಯಲ್ಲಿ ಜಾಗೃತಿ: ಬಿಬಿಎಂಪಿ ಅಧಿಕಾರಿಗಳು ಸಿದ್ಧಪಡಿಸಿರುವ ಯೋಜನೆಯಂತೆ ಎಫ್ಎಂ, ಮುದ್ರಣ, ದೃಶ್ಯ ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳ ಮೂಲಕ ವಿವಿಧ ರೀತಿಯಲ್ಲಿ ಪ್ರಚಾರ ಕೈಗೊಳ್ಳಲಾಗುತ್ತದೆ. ಅದರ ಜತೆಗೆ ಬೀದಿ ನಾಟಕ, ಬಿಎಂಟಿಸಿಯ 1 ಸಾವಿರ ಬಸ್‌ ಗಳಲ್ಲಿ, ಆಟೋ ಟಿಪ್ಪರ್‌, ಬಸ್‌ ಶೆಲ್ಟರ್‌ಗಳಲ್ಲಿ ಜಾಹೀರಾತು ಪ್ರದರ್ಶನ, ಹಡ್ಸನ್‌ ವೃತ್ತದಲ್ಲಿ ಕಲಾತ್ಮಕ ಚಿತ್ರ ರಚಿಸುವುದು, ಬಿಬಿಎಂಪಿ ಟವರ್‌ನಲ್ಲಿ ಲೈಟಿಂಗ್‌ ಅಳವಡಿಕೆ, ಶಾಲೆಗಳಲ್ಲಿ ಕಾರ್ಯಾಗಾರ ಸೇರಿ 14 ವಿಧಾನಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲು ಯೋಜಿಸಲಾಗಿದೆ.

ವಿವಿಧ ವಿಚಾರಕ್ಕೆ ಜಾಗೃತಿ: ಮನೆಗಳಲ್ಲಿ ಹಸಿ, ಒಣ ಹಾಗೂ ಸ್ಯಾನಿಟರಿ ತ್ಯಾಜ್ಯ ವಿಂಗಡಿಸುವ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುವುದರ ಜತೆಗೆ ಇನ್ನಿತರ ಹಲವು ವಿಚಾರಗಳ ಬಗ್ಗೆಯೂ ತಿಳಿಹೇಳುವ ಕೆಲಸ ಮಾಡಲಾಗುತ್ತದೆ. ಪ್ರಮುಖವಾಗಿ ಏಕ ಬಳಕೆ ಪ್ಲಾಸ್ಟಿಕ್‌ ನಿಷೇಧ, ಗೂಗಲ್‌ ಟಾಯ್ಲೆಟ್‌ ಲೊಕೇಟರ್‌ ಆ್ಯಪ್‌ ಕುರಿತು, ತ್ಯಾಜ್ಯ ನೀರು ಸಂಸ್ಕರಣೆ, ಕೊರೊನಾ ತ್ಯಾಜ್ಯವನ್ನು ಪ್ರತ್ಯೇಕವಾಗಿಡುವುದರ ಬಗ್ಗೆಯೂ ಪ್ರಚಾರ ಮಾಡಲಾಗುತ್ತದೆ.

Advertisement

 ಸ್ವಚ್ಛ ಸರ್ವೇಕ್ಷಣ್‌ಗೆ ಒತ್ತು: ತ್ಯಾಜ್ಯ ವಿಂಗಡಣೆಯ ಜತೆಗೆ ಕೇಂದ್ರ ಸರ್ಕಾರ ನಡೆಸುವ ಸ್ವಚ್ಛ ಸರ್ವೇಕ್ಷಣ್‌ ಅಭಿಯಾನದ ಬಗ್ಗೆಯೂ ಜನರಿಗೆ ತಿಳಿಸುವ ಕೆಲಸ ಮಾಡಲಾಗುತ್ತದೆ. ಪ್ರಮುಖವಾಗಿ 100 ದಿನಗಳೊಳಗಾಗಿ ತ್ಯಾಜ್ಯ ವಿಂಗಡಣೆ, ನಿರ್ವಹಣೆ ಸೇರಿ ಇನ್ನಿತರ ವಿಷಯಗಳ ಕುರಿತಂತೆ 10ರಿಂದ 15 ಲಕ್ಷ ಜನರಿಂದ ಅಭಿಪ್ರಾಯ ಸಂಗ್ರಹಿಸಲಾಗುತ್ತದೆ. ಸ್ವಚ್ಛ ಭಾರತ ಮೊಬೈಲ್‌ ಆ್ಯಪ್‌, ಗೋಡೆಗಳ ಮೇಲೆ ಚಿತ್ರ ಬಿಡಿಸುವುದು, ಕೊಳಗೇರಿ ಮತ್ತು ಕೈಗಾರಿಕ ಪ್ರದೇಶಗಳಲ್ಲಿ ಈ ಕುರಿತು ಅರಿವು ಮೂಡಿಸಲು ಕ್ರಮ ಕೈಗೊಳ್ಳಲಾಗುತ್ತದೆ.

ಹೊಸಗುತ್ತಿಗೆದಾರರು ನೇಮಕವಾಗಬೇಕು: ಬಿಬಿಎಂಪಿ 198 ವಾರ್ಡ್‌ಗಳಲ್ಲಿ ತ್ಯಾಜ್ಯ ಸಂಗ್ರಹ ಮತ್ತು ವಿಲೇವಾರಿಗೆ ಗುತ್ತಿಗೆದಾರರು ನೇಮಕವಾಗಬೇಕಿದೆ. ಈ ಕುರಿತು ಟೆಂಡರ್‌ ಪ್ರಕ್ರಿಯೆ ನಡೆಸಲು ಬಿಬಿಎಂಪಿ ಎಲ್ಲ ಸಿದ್ಧತೆ ಮಾಡಿಕೊಂಡಿದೆ. ಘನ ತ್ಯಾಜ್ಯ ನಿರ್ವಹಣಾ ಸಂಸ್ಥೆ ಮೂಲಕ ಗುತ್ತಿಗೆ ಕರೆಯಲಾಗುತ್ತಿದ್ದು, ಶೀಘ್ರದಲ್ಲಿ ಪ್ರಕ್ರಿಯೆ ಆರಂಭಿಸಲಾಗುತ್ತದೆ.

10 ಕೋಟಿ ರೂ. ವೆಚ್ಚ : ಸದ್ಯ ಬಿಬಿಎಂಪಿ ಘನತ್ಯಾಜ್ಯ ನಿರ್ವಹಣೆಗಾಗಿ 500 ಕೋಟಿ ರೂ.ಗೂ ಹೆಚ್ಚಿನ ವೆಚ್ಚ ಮಾಡಲಾಗುತ್ತಿದೆ. ಅದು ಕೇವಲ ತ್ಯಾಜ್ಯ ಸಂಸ್ಕರಣೆ, ವಿಲೇವಾರಿಗೆ ಮಾತ್ರ. ಆದರೆ ಇದೀಗ ಪ್ರಚಾರ ಕಾರ್ಯಕ್ಕಾಗಿಯೇ 10 ಕೋಟಿ ರೂ. ವ್ಯಯಿಸಲಾಗುತ್ತಿದೆ.

 

-ಗಿರೀಶ್‌ ಗರಗ

Advertisement

Udayavani is now on Telegram. Click here to join our channel and stay updated with the latest news.

Next