ಕೋಲ್ಕತಾ: ಬ್ರಿಟಿಷ್ ಬ್ರಾಡ್‌ಕಾಸ್ಟಿಂಗ್ ಕಾರ್ಪೋರೇಷನ್ (ಬಿಬಿಸಿ) ರಾಷ್ಟ್ರೀಯ ಉದ್ಯಾನ ಕಾಜಿರಂಗದಲ್ಲಿನ ವನ್ಯ ಸಂರಕ್ಷಣೆಯ ಕುರಿತಂತೆ ರಚಿಸಿದ್ದ ಸಾಕ್ಷ್ಯಚಿತ್ರದ ಬಗ್ಗೆ ಇದೀಗ ಕೇಂದ್ರ ಸರ್ಕಾರ ಕೆಂಡಕಾರಿದೆ. ಕಾಜಿರಂಗದಲ್ಲಿ ಖಡ್ಗಮೃಗ ಬೇಟೆಗಾರರ ವಿರುದ್ಧ ಅರಣ್ಯ ಕಾವಲು ಸಿಬ್ಬಂದಿಗೆ ಗುಂಡಿಟ್ಟು ಕೊಲ್ಲಲು ಅನುಮತಿ ನೀಡಿದ್ದರ ಕುರಿತಂತೆ ಬಿಬಿಸಿ “ಡಾರ್ಕ್ ಸೀಕ್ರೆಟ್’ (ಕಾಜಿರಂಗದ ನಿಗೂಢ ಸತ್ಯಗಳು) ಹೆಸರಿನಲ್ಲಿ ಸಾಕ್ಷ್ಯಚಿತ್ರ ನಿರ್ಮಾಣ ಮಾಡಿತ್ತು. ಅಲ್ಲದೆ ಬೇಟೆಗಾರರು ಖಡ್ಗಮೃಗಗಳನ್ನು ಹತ್ಯೆಮಾಡಿದ್ದಕ್ಕಿಂತಲೂ ಹೆಚ್ಚಿಗೆ ಅರಣ್ಯ ಕಾವಲು ಸಿಬ್ಬಂದಿ ಗುಂಡಿಗೆ ಬೇಟೆಗಾರರು ಹತ್ಯೆಯಾಗಿದ್ದಾರೆ ಎಂದು ಹೇಳಲಾಗಿತ್ತು. ಈ ಕುರಿತಂತೆ, ಕೇಂದ್ರ ಪರಿಸರ ಸಚಿವಾಲಯ ಕಟುವಾಗಿ ಬಿಬಿಸಿಗೆ ಪತ್ರ ಬರೆದಿದ್ದು, ಬಿಬಿಸಿ ದಕ್ಷಿಣ ಏಷ್ಯಾ ಪ್ರತಿನಿಧಿ ಜಸ್ಟಿನ್ ರಾವ್‌ಲೆಟ್ ಅವರನ್ನು ಕಪ್ಪುಪಟ್ಟಿಗೆ ಸೇರಿಸುವುದಾಗಿ ಎಚ್ಚರಿಸಿದೆ. ಕಳೆದ ವಾರ ಸಾಕ್ಷ್ಯಚಿತ್ರವನ್ನು ಪ್ರಸಾರ ಮಾಡಲಾಗಿದ್ದು, ಅದಕ್ಕೆ ಪರಿಸರ ಸಚಿವಾಲಯದ ಪೂರ್ವಾನುಮತಿ ಪಡೆದಿರಲಿಲ್ಲ ಎಂದೂ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ ಹೇಳಿದೆ.