ನವದೆಹಲಿ: ಬಾಲಿವುಡ್ ದಂತಕಥೆ, ದಾದಾ ಸಾಹೇಬ್ ಪಾಲ್ಕೆ ಪ್ರಶಸ್ತಿ ಪುರಸ್ಕೃತ ನಟ ಶಶಿಕಪೂರ್(79ವರ್ಷ) ನಿಧನದ ಸುದ್ದಿಯನ್ನು ಜಗತ್ತಿನಾದ್ಯಂತ ಪತ್ರಿಕೆಗಳು, ಟಿವಿ ಮಾಧ್ಯಮಗಳು ಪ್ರಸಾರ ಮಾಡಿವೆ. ಏತನ್ಮಧ್ಯೆ ಪ್ರತಿಷ್ಠಿತ ಬಿಬಿಸಿ(ಬ್ರಿಟಿಷ್ ಬ್ರಾಡ್ ಕಾಸ್ಟಿಂಗ್ ಕಾರ್ಪೋರೇಶನ್) ಶಶಿಕಪೂರ್ ಗೆ ಶ್ರದ್ಧಾಂಜಲಿ ಸಲ್ಲಿಸುವ ಬದಲು ಅಮಿತಾಬ್ ಬಚ್ಚನ್ ಹಾಗೂ ರಿಷಿ ಕಪೂರ್ ಫೂಟೇಜ್ ಅನ್ನು ಪ್ರಸಾರ ಮಾಡಿ ಎಡವಟ್ಟು ಮಾಡಿಕೊಂಡಿದೆ!
70ರ ದಶಕದಲ್ಲಿ ಆಗಿನ ಹುಡುಗಿಯರ ಡ್ರೀಮ್ ಬಾಯ್ ಆಗಿದ್ದ ಶಶಿಕಪೂರ್ ಬಗ್ಗೆ ಬಿಬಿಸಿ ಆಂಕರ್ ಮಾತನಾಡುತ್ತ, ವೀಕ್ಷಕರಿಗೆ ಪ್ರದರ್ಶಿಸಿದ್ದು ಅಮಿತಾಬ್ ಬಚ್ಚನ್ ಮತ್ತು ರಿಷಿ ಕಪೂರ್ ಫೂಟೇಜ್…ಕೂಡಲೇ ಟ್ವೀಟರ್ ನಲ್ಲಿ ಬಿಬಿಸಿ ನ್ಯೂಸ್ ವಿರುದ್ಧ ಟೀಕೆಯ ಸುರಿಮಳೆ ಆರಂಭವಾಗಿತ್ತು.
ಹ್ಯಾಂಗ್ ಆನ್ ಬಿಬಿಸಿ ನ್ಯೂಸ್(ಬಿಬಿಸಿ ನ್ಯೂಸ್ ಗೆ ನೇಣುಹಾಕಿ)ಗೆ ಅಂತ, ವಿಧಿವಶರಾಗಿರುವುದು ಶಶಿಕಪೂರ್, ಅಮಿತಾಬ್ ಬಚ್ಚನ್ ಆಗಲಿ, ರಿಷಿ ಕಪೂರ್ ಆಗಲಿ ಅಲ್ಲ! ಯಾಕೆ ನೀವು ಇಂತಹ ಅಸಂಬದ್ಧ ಸುದ್ದಿಯನ್ನು ಹಬ್ಬಿಸುತ್ತೀರಿ ಎಂದು ತರಾಟೆಗೆ ತೆಗೆದುಕೊಂಡಿದ್ದರು.
ಏತನ್ಮಧ್ಯೆ ಸೋಮವಾರ ಶಶಿಕಪೂರ್ ವಿಧಿವಶರಾದ ಎಂಬ ಸುದ್ದಿ ಬಿತ್ತರವಾಗುತ್ತಿದ್ದಂತೆಯೇ ಖಾಸಗಿ ಟಿವಿ ಚಾನೆಲ್ ವೊಂದು ಶಶಿಕಪೂರ್ ಬದಲಿಗೆ ಶಶಿತರೂರ್ ಎಂದು ಪ್ರಸಾರ ಮಾಡಿತ್ತು! ಕೊನೆಗೆ ತನ್ನಿಂದಾದ ಪ್ರಮಾದಕ್ಕೆ ಬಿಬಿಸಿ ಕ್ಷಮೆಯಾಚಿಸಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.