Advertisement

ಬೆಳಗ್ಗೆ ಕದನ,ಸಂಜೆ ಶಮನ- ಸಚಿವರ ವಿರುದ್ಧ ಸಿಡಿದೆದ್ದ ಬಿ.ಆರ್‌. ಪಾಟೀಲ್‌ ಮನವೊಲಿಸಿದ ಸಿಎಂ

11:41 PM Nov 29, 2023 | Team Udayavani |

ಬೆಂಗಳೂರು: ರಾಜ್ಯ ಸರಕಾರದ ಕೆಲವು ಸಚಿವರ ವಿರುದ್ಧ ಧ್ವನಿ ಎತ್ತಿ “ಬೆಳಗಾವಿ ಅಧಿವೇಶನ ಬಹಿಷ್ಕಾರ’ ಬೆದರಿಕೆ ಹಾಕಿದ್ದ ಅಳಂದ ಶಾಸಕ ಬಿ.ಆರ್‌.ಪಾಟೀಲ್‌ ಅವರ ಮನವೊಲಿಸುವಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ  ಯಶಸ್ವಿಯಾಗಿದ್ದು, ಪಾಟೀಲ್‌ ಎರಡನೇ ಬಾರಿ ಕದನ ವಿರಾಮ ಘೋಷಿಸಿದ್ದಾರೆ.  ಬೆಳಗ್ಗೆಯಷ್ಟೇ ಸಚಿವರ ವಿರುದ್ಧ ಕಿಡಿಕಾರಿದ್ದ ಪಾಟೀಲ್‌ ಅವರನ್ನು ಸಂಜೆ ವೇಳೆಗೆ ಸಮಾಧಾನ ಮಾಡುವಲ್ಲಿ ಸಿಎಂ ಸಫ‌ಲರಾಗಿದ್ದಾರೆ.

Advertisement

ಕಾಮಗಾರಿಗಳನ್ನು ಲ್ಯಾಂಡ್‌ ಆರ್ಮಿಗೆ ಕೊಟ್ಟಿದ್ದು ಯಾಕೆ ಎಂದು ಸದನದಲ್ಲಿ ಕಂದಾಯ ಸಚಿವ ಕೃಷ್ಣಬೈರೇಗೌಡ ಪ್ರಶ್ನೆ ಮಾಡಿದ್ದರಿಂದ  ನೊಂದು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದ ಪಾಟೀಲ್‌, ಇದರಿಂದ ನನ್ನ ಮೇಲೆ ಅನುಮಾನ ವ್ಯಕ್ತವಾಗುವಂತಾಗಿದೆ. ಹೀಗಾಗಿ ತನಿಖೆ ನಡೆಸಬೇಕು. ಈ ಆರೋಪವನ್ನು ಒಪ್ಪಿಕೊಂಡರೆ ನಾನು ತಪ್ಪಿತಸ್ಥ ಎಂಬ ಭಾವನೆ ಬಲವಾಗುತ್ತದೆ. ಈ ಹಿನ್ನೆಲೆಯಲ್ಲಿ ಬೆಳಗಾವಿ ಅಧಿವೇಶನದಲ್ಲಿ ಭಾಗಿಯಾಗುವುದಿಲ್ಲ ಎಂದು ಹೇಳಿದ್ದರು. ಇದು ಕಾಂಗ್ರೆಸ್‌ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿತ್ತು.

ಈ ಹಿನ್ನೆಲೆಯಲ್ಲಿ ವಿವಾದ ಬಗೆಹರಿಸಲು ಮುಂದಾದ ಸಿಎಂ ಸಿದ್ದರಾಮಯ್ಯ ಹಾವೇರಿ ಪ್ರವಾಸ ಸಂದರ್ಭದಲ್ಲೇ ಬಿ.ಆರ್‌.ಪಾಟೀಲರಿಗೆ ಕರೆ ಮಾಡಿ ಬುಧವಾರ ಸಾಯಂಕಾಲ ತಮ್ಮನ್ನು ಭೇಟಿ ಮಾಡುವಂತೆ ಸೂಚಿಸಿದ್ದರು. ಸಚಿವರಾದ ಎಚ್‌.ಕೆ.ಪಾಟೀಲ್‌, ಬೈರತಿ ಸುರೇಶ್‌ ಜತೆ ಶಕ್ತಿ ಭವನಕ್ಕೆ ಬಂದು ಸಿದ್ದರಾಮಯ್ಯ ಜತೆ ಮುಕ್ಕಾಲು ಗಂಟೆಗಳ ಕಾಲ ಚರ್ಚೆ ನಡೆಸಿದ ಬಳಿಕ ಪಾಟೀಲ್‌, ಬೆಳಗಾವಿ ಅಧಿವೇಶನದಲ್ಲಿ ಭಾಗವಹಿಸಲು ಒಪ್ಪಿಕೊಂಡರು.

ಬಳಿಕ ಸುದ್ದಿಗಾರರ ಜತೆಗೆ ಮಾತನಾಡಿದ ಪಾಟೀಲ್‌, ಸಿಎಂ ಕರೆದು ಮಾತನಾಡಿದ್ದಾರೆ. ಎಲ್ಲ ಸಮಸ್ಯೆ ಬಗೆಹರಿಸಿದ್ದಾರೆ. ಜತೆಗೆ ಬೇರೆ ರೀತಿ ಪರಿಹಾರ ಕೊಡುತ್ತೇನೆ ಎಂದಿದ್ದಾರೆ.  ಅದು ಹೇಗೆಂದು  ನನಗೆ ಗೊತ್ತಿಲ್ಲ. ಆದರೆ ಸಿಎಂ ಮಾತಿನಿಂದ  ಸಮಾಧಾನವಾಗಿದ್ದು, ಅವರ ಮೇಲೆ  ನನಗೆ ನಂಬಿಕೆ ಇದೆ. ಅವರ ಆದೇಶ ಹಿನ್ನೆಲೆಯಲ್ಲಿ ಬೆಳಗಾವಿ ಅಧಿವೇಶನದಲ್ಲಿ ಭಾಗವಹಿಸುತ್ತೇನೆ ಎಂದರು.

ಸಚಿವ ಕೃಷ್ಣ ಬೈರೇಗೌಡ ಅವರ ಮಾತಿನ ಅರ್ಥವನ್ನು ಬಿಚ್ಚಿ ಹೇಳಬೇಕಾ? ಲ್ಯಾಂಡ್‌ ಆರ್ಮಿಗೆ ಯಾಕೆ ಕೊಡಬೇಕೆಂದು ಪ್ರಶ್ನಿಸುವ ಮೂಲಕ ಎಲ್ಲ ಶಾಸಕರಿಗೂ ಸಚಿವರು ಸವಾಲು ಹಾಕಿದ್ದಾರೆ. ಪ್ರಿಯಾಂಕ್‌ ಖರ್ಗೆ ಬೇರೆ ಸಭೆಯಲ್ಲಿ ಇದ್ದ ಕಾರಣಕ್ಕೆ ಬಂದಿಲ್ಲ. ಅವರ ಜತೆಗೆ ಯಾವುದೇ ಮನಸ್ತಾಪವಿಲ್ಲ. ಕೃಷ್ಣ ಬೈರೇಗೌಡರ ಜತೆಗೂ ಭಿನ್ನಾಭಿಪ್ರಾಯವಿಲ್ಲ ಎಂದು ಸ್ಪಷ್ಟಪಡಿಸಿದರು.

Advertisement

ಅನುದಾನ ವಿಚಾರವಾಗಿ ನನಗೆ ಯಾವುದೇ ಅಸಮಾಧಾನವಿಲ್ಲ.

ಯಾವುದೇ ಶಾಸಕರಾಗಲಿ ಮಾತನಾಡಲು, ದನಿ ಎತ್ತಲು ಅವಕಾಶವಿದೆ. ಸದನದಲ್ಲಿ ಮಾತನಾಡುವಾಗ ತನಿಖೆಯಾಗಲಿ ಎಂದು ಹೇಳಿರಬಹುದು. ಕಂದಾಯ ಸಚಿವ ಕೃಷ್ಣಬೈರೇಗೌಡರು ತನಿಖೆಗೆ ಸೂಕ್ತ ತೀರ್ಮಾನಗಳನ್ನು ತೆಗೆದುಕೊಂಡಿದ್ಧಾರೆ, ತನಿಖೆಗಳು ನಡೆಯುತ್ತಿರುವ ವಿಚಾರ ನನಗೂ ಗೊತ್ತಿದೆ.

-ಡಿ.ಕೆ. ಶಿವಕುಮಾರ್‌, ಡಿಸಿಎಂ

ಸಚಿವರ ಜತೆಗೆ ಅವರ ಪಿಎಗಳು ಬಹಿರಂಗವಾಗಿಯೇ ವಸೂಲಿಗೆ ಇಳಿದಿದ್ಧಾರೆ. ಧೈರ್ಯವಿರುವ ಶಾಸಕರು ಮಾತ್ರ ವಿರೋಧಿಸುತ್ತಿದ್ದು, ಎರಡನೇ ಬಾರಿ ಬಿ.ಆರ್‌.ಪಾಟೀಲ್‌ ಪತ್ರ ಬರೆದಿದ್ಧಾರೆ. ನಾನು ಸದನಕ್ಕೆ ಬರುವುದಿಲ್ಲ ಎಂದು ಹೇಳುವ ಮೂಲಕ ಅವರು, ಧೈರ್ಯ ತೋರಿಸಿದ್ಧಾರೆ.

– ಆರ್‌. ಅಶೋಕ್‌, ವಿಪಕ್ಷ ನಾಯಕ

ಕೃಷ್ಣಬೈರೇಗೌಡರು ನನಗೆ ಮಾತ್ರವಲ್ಲ, ಎಲ್ಲರಿಗೂ ಸವಾಲು ಹಾಕಿದ್ದಾರೆ. ಪ್ರಜಾಪ್ರಭುತ್ವದಲ್ಲಿ ನ್ಯಾಯ ಸಿಗುವ ವಿಶ್ವಾಸವಿದೆ. ಅಧಿವೇಶನದಲ್ಲಿ ಭಾಗವಹಿಸುವಂತೆ ಸಿಎಂ ಹೇಳಿದ್ದಾರೆ, ಹಾಗಾಗಿ ಭಾಗವಹಿಸುತ್ತಿದ್ದೇನೆ.

-ಬಿ.ಆರ್‌. ಪಾಟೀಲ್‌, ಅಳಂದ ಶಾಸಕ

ಇದು ಕೇವಲ ಬಿ.ಆರ್‌. ಪಾಟೀಲ್‌ ಅವರ ಸಮಸ್ಯೆಯಲ್ಲ, ಇಡೀ ವ್ಯವಸ್ಥೆಯ ಸಮಸ್ಯೆ ಆಗಿದೆ. ಇದರಿಂದ ಸರಕಾರಕ್ಕೆ ಕಂಟಕವಾಗುತ್ತದಾ ಎಂದು ಕಾದು ನೋಡಿ. ಸರಕಾರದ ಬಗ್ಗೆ ಹೇಳಲು ನಾನು ಜ್ಯೋತಿಷಿಯಲ್ಲ.

– ಎಚ್‌.ಡಿ. ಕುಮಾರಸ್ವಾಮಿ, ಜೆಡಿಎಸ್‌ ನಾಯಕ

Advertisement

Udayavani is now on Telegram. Click here to join our channel and stay updated with the latest news.

Next