ವಾಷಿಂಗ್ಟನ್: ಜಗತ್ತಿನ ಎರಡು ಬೃಹತ್ ಶಕ್ತಿಗಳ ನಡುವೆ ಯುದ್ದೋನ್ಮಾದ. ಇಬ್ಬರೂ ಕ್ಷಿಪಣಿಗಳಿಗೆ ಪರಸ್ಪರ ಗುರಿ ನಿಗದಿ ಮಾಡಿಟ್ಟು, ಟ್ರಿಗರ್ ಒತ್ತಲು ಕಾಯುತ್ತಿದ್ದಾರೆ. ಈಗ ಮೊದಲು ಯಾರ ಬಾಂಬ್ ಯಾರ ಮೇಲೆ ಬೀಳಲಿದೆ? ಯಾರು ಜಗತ್ತಿನ ಅಳಿವಿಗೆ ನಾಂದಿ ಹಾಡುತ್ತಾರೆ ಎಂಬುದನ್ನು ಇಡೀ ವಿಶ್ವವೇ ತುದಿಗಾಲಲ್ಲಿ ನಿಂತು, ಉಸಿರು ಬಿಗಿ ಹಿಡಿದು ನೋಡುತ್ತಿದೆ!
ಒಂದೆಡೆ ಭಾರತ-ಚೀನ ಗಡಿಯಲ್ಲಿ ಉದ್ವಿಗ್ನತೆ ಉಲ್ಬಣಿಸಿದರೆ, ಮತ್ತೂಂದೆಡೆ ಅಮೆರಿಕ-ಉತ್ತರ ಕೊರಿಯಾ ನಡುವೆ ಅಕ್ಷರಶಃ ಯುದ್ಧ ನಡೆಯುವ ವಾತಾವರಣ ಸೃಷ್ಟಿಯಾಗಿದೆ. ಭಾರತ-ಚೀನ ನಡುವೆ ಯುದ್ಧ ಪರಿಸ್ಥಿತಿಯೇನೂ ಸೃಷ್ಟಿಯಾಗಿಲ್ಲವಾದರೂ ಅಮೆರಿಕ ಹಾಗೂ ಉತ್ತರ ಕೊರಿಯಾ ಪರಸ್ಪರ ಕ್ಷಿಪಣಿ ಉಡಾಯಿಸುವ ಲೆಕ್ಕಕ್ಕೆ ಮಾತನಾಡುತ್ತಿವೆ. ಹೀಗಾಗಿ ಎಲ್ಲೆಡೆ ಕದನ ಕುತೂಹಲ ಮಡುಗಟ್ಟಿದೆ.
ಅಮೆರಿಕದ ಸೇನಾ ಸಾಮಗ್ರಿಗಳನ್ನು ಸಂಗ್ರಹಿಸಿರುವ ಗುವಾಮ್ ಮೇಲೆ ಕ್ಷಿಪಣಿ ದಾಳಿ ನಡೆಸುವುದಾಗಿ ಮೊನ್ನೆ ಯಷ್ಟೇ ಉತ್ತರ ಕೊರಿಯಾ ಹೇಳಿತ್ತು. ಅದಕ್ಕೆ ಪ್ರತಿಕ್ರಿಯಿಸಿ ರುವ ಅಮೆರಿಕ ಅಧ್ಯಕ್ಷ ಟ್ರಂಪ್, ದಕ್ಷಿಣ ಕೊರಿಯಾದಿಂದ ಬರುವ ಬೆದರಿಕೆಗಳಿಗೆ ಬೆಂಕಿಯಂಥ ಆಕ್ರೋಶದಿಂದ ಉತ್ತರಿಸುವುದಾಗಿ ಹೇಳಿದ್ದಾರೆ. ಈ ನಡುವೆ ಉತ್ತರ ಕೊರಿಯಾ ಬೆಂಬಲಕ್ಕೆ ನಿಂತಿರುವ ಚೀನ, “ಉತ್ತರ ಕೊರಿಯಾ ತಂಟೆಗೆ ಬಂದರೆ ಹುಷಾರ್!’ ಎಂಬರ್ಥದಲ್ಲಿ ವಿಶ್ವದ ದೊಡ್ಡಣ್ಣನ ಮೇಲೇ ಗುಟುರು ಹಾಕಿದೆ.
ಮಾತಲ್ಲೇ ಬಲಾಬಲ ಪ್ರದರ್ಶನ: ಮೊದಲು ಮಾತಿನ ಯುದ್ಧ ಆರಂಭಿಸಿದ ಉತ್ತರ ಕೊರಿಯಾ ಅಧ್ಯಕ್ಷ ಕಿಮ್ ಜಾಂಗ್ ಉನ್, ಅಮೆರಿಕದ ಸೇನಾ, ಶಸ್ತ್ರಾಸ್ತ್ರ ನೆಲೆಯನ್ನೇ ಉಡಾಯಿಸುವ ಬೆದರಿಕೆ ಹಾಕಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, “ಉತ್ತರ ಕೊರಿಯಾ ಹೀಗೇ ಬೆದರಿಕೆ ಹಾಕುತ್ತಿದ್ದರೆ ಜಗತ್ತು ಹಿಂದೆಂದೂ ಕಂಡರಿಯದಂಥ ಬೆಂಕಿಯಂಥ ಆಕ್ರೋಶ ಎದುರಿಸಬೇಕಾಗುತ್ತದೆ,’ ಎಂದಿದ್ದಾರೆ. ಈ ವಾಗ್ಯುದ್ಧದ ನಂತರ ಈಗ “ಬಲ ಪ್ರದರ್ಶನ’ದ ಸರದಿ. “ನನ್ನ ಬಳಿ 60ಕ್ಕೂ ಹೆಚ್ಚು ಅಣು ಬಾಂಬ್‌ಗಳು ಸಿದ್ಧವಾಗಿವೆ’ ಎಂದು ಉತ್ತರ ಕೊರಿಯಾ ಹೇಳಿದರೆ, “ನನ್ನಲ್ಲಿರುವ ಅಣ್ವಸ್ತ್ರ ಸಂಗ್ರಹ ಹಿಂದೆಂದಿಗಿಂತಲೂ ಬಲಿಷ್ಠವಾಗಿದೆ. ಹಿಂದೆ, ಇಂದು, ಮುಂದೆಂದೂ ಜಗತ್ತಿಗೆ ನಾನೊಬ್ಬನೇ ದೊಡ್ಡಣ್ಣ’ ಎಂದು ಅಮೆರಿಕ ಅಧ್ಯಕ್ಷ ಟ್ವೀಟಿಸಿದ್ದಾರೆ.
ಸದ್ದಿಲ್ಲದೆ ಸಮರಾಭ್ಯಾಸ: ಅಮೆರಿಕ, ಕೊರಿಯಾ ನಡುವಿನ ಈ ವಾಗ್ಯುದ್ಧ ಕಂಡ ಅಮೆರಿಕನ್ನರು ಮತ್ತು ಕೊರಿಯನ್ನರು ಅಕ್ಷರಶಃ ನಿದ್ದೆಗೆಟ್ಟಿದ್ದಾರೆ. “ನಮ್ಮ ಬಿ-1ಬಿ ಸ್ಟ್ರಾಟಜಿಕ್ ಬಾಂಬರ್‌ಗಳು “ಇಂದು ರಾತ್ರಿಯೇ ಹೋರಾಟ’ಕ್ಕೆ ಸನ್ನದ್ಧವಾಗಿವೆ’ ಎನ್ನುವ ಮೂಲಕ ಅಮೆರಿಕ ವಾಸ್ತವ ಯುದ್ಧದ ಸೂಚನೆ ನೀಡಿದೆ. ಇದಕ್ಕೆ ಇಂಬು ನೀಡುವಂತೆ ಎರಡು ಬಿ-1ಬಿ ಬಾಂಬರ್‌ಗಳನ್ನು ಬಳಸಿ ಕೊರಿಯಾದ ದ್ವೀಪದಲ್ಲಿ 10 ಗಂಟೆಗಳ ಕಾಲ ಸಮರಾಭ್ಯಾಸ ನಡೆಸಲಾಗಿದೆ. ಇದರ ಬೆನ್ನಲ್ಲೇ ಉತ್ತರ ಕೊರಿಯಾ ಗುವಾಮ್ ಮೇಲೆ ಕ್ಷಿಪಣಿ ದಾಳಿ ನಡೆಸುವ ಹೇಳಿಕೆ ನೀಡಿದೆ. ಜತೆಗೆ ಅಮೆರಿಕ “ಅಣು ಯುದ್ಧದ ಉನ್ಮಾದ’ದಲ್ಲಿದೆ ಎಂದು ಹೇಳಿದೆ. ಇದೇ ವೇಳೆ “ಉತ್ತರ ಕೊರಿಯಾದ ಯಾವುದೇ ಬೆದರಿಕೆ ನಂಬಲು ಅರ್ಹವಲ್ಲ. ಹೀಗಾಗಿ ಅಮೆರಿಕನ್ನರು ಆತಂಕ ಪಡದೆ ರಾತ್ರಿ ಆರಾಮವಾಗಿ ನಿದ್ದೆ ಮಾಡಬಹುದು,’ ಎಂದು ಅಮೆರಿಕ ವಿದೇಶಾಂಗ ಸಚಿವ ರೆಕ್ಸ್ ಟಿಲ್ಲರ್‌ಸನ್ ಅಭಯ ನೀಡಿದ್ದಾರೆ.