Advertisement

ಏಕಕಾಲದ ಚುನಾವಣೆ ಪರ ನೀತಿ ಆಯೋಗ ಬ್ಯಾಟಿಂಗ್‌

09:28 AM May 01, 2017 | |

ನವದೆಹಲಿ: ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಗಳನ್ನು ಏಕಕಾಲದಲ್ಲಿ ನಡೆಸುವ ಚಿಂತನೆಗೆ ಇದೀಗ ಮತ್ತಷ್ಟು ಬಲ ಬಂದಿದೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಷ್ಟ್ರಪತಿ ಪ್ರಣಬ್‌ ಮುಖರ್ಜಿ ಅವರು ಏಕಕಾಲದಲ್ಲಿ ಚುನಾವಣೆ ನಡೆಸುವುದರ ಪರ ಧ್ವನಿಯೆತ್ತಿದ ಬೆನ್ನಲ್ಲೇ ನೀತಿ ಆಯೋಗವೂ ಈ ಬಗ್ಗೆ ಸಲಹೆ ನೀಡಿದೆ.

Advertisement

2024ರಿಂದಲೇ ಇದನ್ನು ಆರಂಭಿಸಬಹುದು ಎಂದು ಭಾನುವಾರ ನೀತಿ ಆಯೋಗ ತಿಳಿಸಿದೆ. ಪ್ರತಿಯೊಂದು ರಾಜ್ಯದಲ್ಲೂ ವಿಧಾನಸಭೆ, ಲೋಕಸಭೆ ಚುನಾವಣೆಗಳು ಬೇರೆ ಬೇರೆ ಸಮಯದಲ್ಲಿ ನಡೆಯುತ್ತಿದ್ದರೆ, ವರ್ಷವಿಡೀ ದೇಶ “ಪ್ರಚಾರದ ಮೋಡ್‌’ನಲ್ಲಿರಬೇಕಾಗುತ್ತದೆ. ಇದು ಆಡಳಿತದ ಮೇಲೂ ಪರಿಣಾಮ ಬೀರುತ್ತದೆ ಎಂದು ಆಯೋಗ ಅಭಿಪ್ರಾಯಪಟ್ಟಿದೆ.

ಈ ಕುರಿತ ಸಲಹೆಗಳನ್ನು ಪಡೆದು, ಸಂಬಂಧಪಟ್ಟವರ ಕಾರ್ಯಕಾರಿ ಸಮಿತಿಯೊಂದನ್ನು ರಚಿಸಿ ಏಕಕಾಲಕ್ಕೆ ಚುನಾವಣೆ ನಡೆಸುವ ಬಗ್ಗೆ ಮಾರ್ಗಸೂಚಿಯನ್ನು ಸಿದ್ಧಪಡಿಸಿ ಎಂದಿರುವ ನೀತಿ ಆಯೋಗವು, ಇದಕ್ಕಾಗಿ ಚುನಾವಣಾ ಆಯೋಗವನ್ನೇ ನೋಡಲ್‌ ಏಜೆನ್ಸಿಯಾಗಿ ನೇಮಿಸಿದೆ. ಜತೆಗೆ, ಈ ಕುರಿತ ವರದಿಯನ್ನು 6 ತಿಂಗಳೊಳಗೆ ಒಪ್ಪಿಸಿ, ಮುಂದಿನ ಮಾರ್ಚ್‌ ವೇಳೆಗೆ ಅಂತಿಮ ನೀಲನಕ್ಷೆ ಸಿದ್ಧಪಡಿಸುವಂತೆಯೂ ಸೂಚಿಸಿದೆ.

ಎಲ್ಲ ರಾಜ್ಯಗಳಿಗೂ ಮಾಹಿತಿ:
ವರದಿಯ ಕರಡು ಪ್ರತಿಯನ್ನು ಏ.23ಕ್ಕೆ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳನ್ನು ಒಳಗೊಂಡ ಸಮಿತಿಗೆ ಕಳುಹಿಸಲಾಗುವುದು ಎಂದು ಆಯೋಗ ತಿಳಿಸಿದೆ. “2024ರ ಚುನಾವಣೆ ವೇಳೆಗಾಗಲೇ ಇದನ್ನು ಜಾರಿಗೊಳಿಸಲು ಬಯಸಿದ್ದೇವೆ. ದೇಶದ ಹಿತಾಸಕ್ತಿಯಿಂದ ಇದನ್ನು ಅನುಷ್ಠಾನ ಮಾಡಲು, ಸಂವಿಧಾನ ತಜ್ಞರು, ಚಿಂತಕರು, ಸರ್ಕಾರಿ ಅಧಿಕಾರಿಗಳು ಮತ್ತು ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳನ್ನು ಒಳಗೊಂಡ ಸಮಿತಿಯೊಂದನ್ನು ರಚಿಸಬೇಕು. ಅವರೆಲ್ಲರೂ ಕುಳಿತು ಏಕಕಾಲಕ್ಕೆ ಚುನಾವಣೆ ನಡೆಸುವುದಕ್ಕೆ ಸಂಬಂಧಿಸಿದ ಎಲ್ಲ ವಿಚಾರಗಳ ಬಗ್ಗೆ ಚರ್ಚಿಸಿ, ನಿರ್ಧಾರ ಕೈಗೊಳ್ಳಬೇಕು,’ ಎಂದು ಆಯೋಗದ ವರದಿ ಹೇಳಿದೆ.

ಪ್ರಧಾನಿ, ರಾಷ್ಟ್ರಪತಿಯಿಂದಲೂ ಸಲಹೆ:
ಗಣರಾಜ್ಯೋತ್ಸವದ ಭಾಷಣದ ವೇಳೆ, ಈ ವಿಚಾರವನ್ನು ಪ್ರಸ್ತಾಪಿಸಿದ್ದ ರಾಷ್ಟ್ರಪತಿ ಪ್ರಣಬ್‌ ಮುಖರ್ಜಿ, “ಚುನಾವಣಾ ಸುಧಾರಣೆ ಕುರಿತು ರಚನಾತ್ಮಕ ಚರ್ಚೆ ನಡೆಸಲು ಇದು ಸಕಾಲ. ಸ್ವಾತಂತ್ರಾéನಂತರದ ಆರಂಭಿಕ ವರ್ಷಗಳಲ್ಲಿ ಇದ್ದಂತಹ ಏಕಕಾಲದಲ್ಲಿ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆ ನಡೆಸುವ ಪದ್ಧತಿ ಮತ್ತೆ ಜಾರಿಯಾಗಬೇಕು. ಎಲ್ಲ ರಾಜಕೀಯ ಪಕ್ಷಗಳೊಂದಿಗೆ ಚರ್ಚಿಸಿ, ಈ ಚಿಂತನೆಯನ್ನು ಮುಂದಕ್ಕೆ ಕೊಂಡೊಯ್ಯುವುದು ಚುನಾವಣಾ ಆಯೋಗಕ್ಕೆ ಬಿಟ್ಟಿದ್ದು,’ ಎಂದಿದ್ದರು. ಇನ್ನು ಪ್ರಧಾನಿ ಮೋದಿ ಅವರು ಬಹಳಷ್ಟು ಬಾರಿ ಈ ವಿಚಾರವನ್ನು ಪ್ರಸ್ತಾಪಿಸಿದ್ದರು. 

Advertisement

“ಏಕಕಾಲದ ಚುನಾವಣೆಯಿಂದ ನಮಗೂ ಸೇರಿದಂತೆ ಎಲ್ಲರಿಗೂ ಸ್ವಲ್ಪಮಟ್ಟಿಗೆ ನಷ್ಟ ಆಗುತ್ತದೆ. ಆದರೆ, ಯಾರೂ ಇದನ್ನು ರಾಜಕೀಯ ಕನ್ನಡಕ ಧರಿಸಿ ನೋಡಬೇಡಿ,’ ಎಂದು ನುಡಿದಿದ್ದರು. ಲೋಕಸಭೆಯಲ್ಲೂ ಅವರು ಈ ವಿಷಯದ ಪರ ಧ್ವನಿಯೆತ್ತಿದ್ದರು.

ಲಾಭವೇನು?
– ಚುನಾವಣೆಯ ಸಮಯದಲ್ಲಿ ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ, ಅಭಿವೃದ್ಧಿ ಕಾರ್ಯ ನಡೆಸಲು ಅಡ್ಡಿಯಾಗುತ್ತದೆ. ಏಕಕಾಲಕ್ಕೆ ಚುನಾವಣೆ ನಡೆಯುವುದರಿಂದ ಅಭಿವೃದ್ಧಿ ಕಾರ್ಯ ಕುಂಠಿತವಾಗುವುದು ತಪ್ಪುತ್ತದೆ.
– 2009ರ ಲೋಕಸಭೆ ಚುನಾವಣೆಗೆ 1,100 ಕೋಟಿ ರೂ. ವೆಚ್ಚವಾಗಿತ್ತು. 2014ರಲ್ಲಿ ಈ ವೆಚ್ಚ 4 ಸಾವಿರ ಕೋಟಿ ರೂ.ಗೆ ತಲುಪಿತ್ತು. ಒಂದೇ ಬಾರಿಗೆ ಚುನಾವಣೆ ನಡೆಸುವುದರಿಂದ ಈ ರೀತಿಯ ಭಾರೀ ಪ್ರಮಾಣದ ವೆಚ್ಚ ತಗ್ಗುತ್ತದೆ.
– ಶಿಕ್ಷಕರೂ ಸೇರಿದಂತೆ ಕೋಟಿಗಟ್ಟಲೆ ಸರ್ಕಾರಿ ನೌಕರರು ಚುನಾವಣಾ ಕರ್ತವ್ಯಕ್ಕೆ ಹಾಜರಾಗಬೇಕಾಗುತ್ತದೆ. ಆಗಾಗ್ಗೆ ಚುನಾವಣೆ ನಡೆಯುತ್ತಿದ್ದರೆ ಶಿಕ್ಷಣ ಕ್ಷೇತ್ರದ ಮೇಲೆ ಇದು ಪರಿಣಾಮ ಬೀರುತ್ತದೆ. ಏಕಕಾಲದ ಚುನಾವಣೆಯಿಂದ ಈ ಸಮಸ್ಯೆ ತಪ್ಪಬಹುದು.

ಅನನುಕೂಲವೇನು?
– ಪ್ರಾದೇಶಿಕ ಸಮಸ್ಯೆಗಳು, ವಿಚಾರಗಳನ್ನು ರಾಷ್ಟ್ರೀಯ ಮಟ್ಟದಲ್ಲಿ ಪ್ರಸ್ತಾಪಿಸುವುದರಲ್ಲಿ ಪ್ರಾದೇಶಿಕ ಪಕ್ಷಗಳು ಪ್ರಮುಖ ಪಾತ್ರ ವಹಿಸುತ್ತವೆ. ಏಕಕಾಲಕ್ಕೆ ಚುನಾವಣೆ ನಡೆದರೆ ಇಂಥ ಪ್ರಾದೇಶಿಕ ವಿಚಾರಗಳು ತಮ್ಮ ಮಹತ್ವವನ್ನೇ ಕಳೆದುಕೊಳ್ಳಬಹುದು
– ಅನಿವಾರ್ಯ ಕಾರಣಗಳಿಂದ ವಿಧಾನಸಭೆ ವಿಸರ್ಜನೆಗೊಂಡು, ಹೊಸ ಚುನಾವಣೆ ನಡೆಯಬೇಕಾದ ಸಂದರ್ಭ ಬರಲೂಬಹುದು.
– ಒಂದೇ ಬಾರಿಗೆ ಚುನಾವಣೆ ನಡೆಸಲು ಮಾನವ ಸಂಪನ್ಮೂಲದ ಅಗತ್ಯತೆ ಹೆಚ್ಚಾಗುವ ಕಾರಣ, ಹೆಚ್ಚುವರಿ ಹೊರೆ ಆಗಬಹುದು.
– ಈವರೆಗೆ ರಾಜ್ಯದಲ್ಲೊಂದು, ಕೇಂದ್ರದಲ್ಲೊಂದು ಪಕ್ಷಕ್ಕೆ ಮತ ಹಾಕುತ್ತಿದ್ದವರು, ಗೊಂದಲಕ್ಕೀಡಾಗಿ ಒಂದೇ ಪಕ್ಷಕ್ಕೆ ಮತ ಹಾಕುವ ಸಾಧ್ಯತೆಯಿರುತ್ತದೆ

Advertisement

Udayavani is now on Telegram. Click here to join our channel and stay updated with the latest news.

Next