Advertisement

ಬ್ಯಾಟಿಂಗ್‌ ವೈಫ‌ಲ್ಯ: ಧೋನಿ ಚಿಂತೆ

06:02 PM May 08, 2019 | Sriram |

ಚೆನ್ನೈ: ಮುಂಬೈ ವಿರುದ್ಧದ ಸೋಲಿಗೆ ತಂಡದ ಬ್ಯಾಟಿಂಗ್‌ ವೈಫ‌ಲ್ಯವೇ ಮುಖ್ಯ ಕಾರಣ ಎಂಬುದಾಗಿ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ನಾಯಕ ಮಹೇಂದ್ರ ಸಿಂಗ್‌ ಧೋನಿ ಅಭಿಪ್ರಾಯಪಟ್ಟಿದ್ದಾರೆ. ಜತೆಗೆ ಕಳಪೆ ಕ್ಷೇತ್ರರಕ್ಷಣೆಯ ಬಗ್ಗೆಯೂ ಚಿಂತೆ ವ್ಯಕ್ತಪಡಿಸಿದ್ದಾರೆ.

Advertisement

ಮಂಗಳವಾರ ರಾತ್ರಿ ತವರಿನಂಗಳದಲ್ಲೇ ಆಡಿದ ಮೊದಲ ಕ್ವಾಲಿಫೈಯರ್‌ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ಚೆನ್ನೈ ನಾಲ್ಕೇ ವಿಕೆಟ್‌ ಕಳೆದುಕೊಂಡರೂ ಗಳಿಸಿದ್ದು 131 ರನ್‌ ಮಾತ್ರ. ಮುಂಬೈ ಇದನ್ನು 18.3 ಓವರ್‌ಗಳಲ್ಲಿ ನಾಲ್ಕೇ ವಿಕೆಟಿಗೆ ಹಿಂದಿಕ್ಕಿ ಫೈನಲಿಗೆ ನೆಗೆಯಿತು.

131 ರನ್‌ ಉಳಿಸಿಕೊಳ್ಳುವುದು ಕಷ್ಟ
ತವರು ಅಂಗಳ ನಮಗೆ ಹೆಚ್ಚು ಪರಿಚಿತ. ಇಲ್ಲಿನ ವಾತಾವರಣಕ್ಕೆ ಬೇರೆಲ್ಲರಿಗಿಂತ ನಾವೇ ಬಹಳ ಬೇಗ ಹೊಂದಿಕೊಳ್ಳುತ್ತೇವೆ. ಈಗಾಗಲೇ ಇಲ್ಲಿ 6-7 ಪಂದ್ಯಗಳನ್ನು ಆಡಲಾಗಿದೆ. ಹೀಗಾಗಿ ಇಲ್ಲಿನ ಪಿಚ್‌ ಹೇಗೆ ವರ್ತಿಸುತ್ತದೆ ಎಂಬ ಸ್ಪಷ್ಟ ಅರಿವು ನಮಗಿರಬೇಕಿತ್ತು. ಆದರೆ ಇದನ್ನು ಅಂದಾಜಿಸುವಲ್ಲಿ ನಾವು ವಿಫ‌ಲರಾದೆವು. ನಮ್ಮ ಬ್ಯಾಟಿಂಗ್‌ ಬಹಳಷ್ಟು ಸುಧಾರಿಸಬೇಕಾದ ಅಗತ್ಯವಿದೆಎಂದು ಸೋಲಿನ ಬಳಿಕ ಧೋನಿ ಅಭಿಪ್ರಾಯಪಟ್ಟರು.

ನಾವು ಸಮರ್ಥ ಹಾಗೂ ಅನುಭವಿ ಬ್ಯಾಟ್ಸ್‌ಮನ್‌ಗಳನ್ನೇ ಹೊಂದಿದ್ದೇವೆ. ಎಲ್ಲರೂ ಇಲ್ಲಿನ ವಾತಾವರಣಕ್ಕೆ ಹೊಂದಿಕೊಂಡು ಉತ್ತಮ ಪ್ರದರ್ಶನ ನೀಡಬೇಕಿತ್ತು. ನಮ್ಮ ಬ್ಯಾಟಿಂಗ್‌ ವೇಳೆ ಎಲ್ಲೂ ಟಿ20 ಜೋಶ್‌ ಕಂಡುಬರಲಿಲ್ಲ. ಕೇವಲ 131 ರನ್‌ ಮಾಡಿ ಇದನ್ನು ಉಳಿಸಿಕೊಳ್ಳುವುದೆಂದರೆ ಅದು ಬಹಳ ಕಷ್ಟ. ಇನ್ನು ನಮಗೆ ತವರಿನ ಪಂದ್ಯವಿಲ್ಲ. ಮುಂದಿನ ಕ್ವಾಲಿಫೈಯರ್‌ ಪಂದ್ಯದಲ್ಲಿ ಬ್ಯಾಟಿಂಗ್‌ ಸುಧಾರಿಸಿಕೊಳ್ಳದೇ ಹೋದರೆ ಮೇಲುಗೈ ಕಷ್ಟವಾದೀತು ಎಂಬುದಾಗಿ ಧೋನಿ ಹೇಳಿದರು.

ಸೂರ್ಯಕುಮಾರ್‌ಗೆ ಜೀವದಾನ
ತಂಡದ ಕಳಪೆ ಫೀಲ್ಡಿಂಗ್‌ ಕೂಡ ಧೋನಿ ಆತಂಕಕ್ಕೆ ಕಾರಣವಾಗಿದೆ. ಮುಂಬೈ ತಂಡದ ಗೆಲುವಿನ ರೂವಾರಿ ಸೂರ್ಯಕುಮಾರ್‌ ಯಾದವ್‌ಗೆ ಕೇವಲ 11 ರನ್‌ ಮಾಡಿದ ವೇಳೆ ಮುರಳಿ ವಿಜಯ್‌ ನೀಡಿದ ಜೀವದಾನ ದುಬಾರಿಯಾಗಿ ಪರಿಣಮಿಸಿತ್ತು. ಇದರ ಲಾಭವೆತ್ತಿದ ಸೂರ್ಯಕುಮಾರ್‌ ಅಜೇಯ 71 ರನ್‌ ಬಾರಿಸಿ ತಂಡವನ್ನು ದಡ ತಲುಪಿಸಿದರು.

Advertisement

ಇಂಥ ಸಮಯದಲ್ಲಿ ಕ್ಯಾಚ್‌ ಬಿಡುವುದು, ಸೋಲುವುದನ್ನು ಯಾರೂ ಬಯಸರು. ಅದೃಷ್ಟವಶಾತ್‌ ನಾವು ಅಗ್ರ ಎರಡು ಸ್ಥಾನದೊಂದಿಗೆ ಲೀಗ್‌ ಮುಗಿಸಿದ್ದೇವೆ. ಹೀಗಾಗಿ ನಮ್ಮ ಮುಂದೆ ಇನ್ನೊಂದು ಅವಕಾಶವಿದೆ. ಇದನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಬೇಕು ಎಂದು ಧೋನಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next