ಮಂಗಳೂರು: ನಗರದಲ್ಲಿ ಇತ್ತೀಚೆಗೆ ನಡೆದ ಬ್ಯಾಟರಿ ಮತ್ತು ದ್ವಿಚಕ್ರ ವಾಹನ ಕಳವು ಪ್ರಕರಣಕ್ಕೆ ಸಂಬಂಧಿಸಿ ಪಾಂಡೇಶ್ವರ ಪೊಲೀಸರು ಇಬ್ಬರನ್ನು ಬಂಧಿಸಿ ಒಟ್ಟು 3,20,000 ರೂ. ಮೌಲ್ಯದ ಸೊತ್ತುಗಳನ್ನು ವಶ ಪಡಿಸಿಕೊಂಡಿದ್ದಾರೆ.
ಬಂಟ್ವಾಳ ತಾಲೂಕು ಇರಾ ಗ್ರಾಮ ಕುಕ್ಕಾಜೆಯ ಮಹಮ್ಮದ್ ಆಸೀಫ್ ಯಾನೆ ಅಸೀಫ್ (24) ಮತ್ತು ತುಂಬೆ ಗ್ರಾಮದ ಹಬೀಬ್ ರೆಹಮಾನ್ ಯಾನೆ ಹಬೀಬ್ (36) ಬಂಧಿತರು. ಆರೋಪಿಗಳಿಂದ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ದಾಖಲಾದ 3 ಪ್ರಕರಣಕ್ಕೆ ಸಂಬಂಧಿ ಸಿ ಒಟ್ಟು 12 ಬ್ಯಾಟರಿ ಹಾಗೂ ಒಂದು ದ್ವಿಚಕ್ರ ವಾಹನವನ್ನು, ಪುತ್ತೂರು ನಗರ ಠಾಣೆಯಲ್ಲಿ ದಾಖಲಾದ ಕಳವು ಪ್ರಕರಣಕ್ಕೆ ಸಂಬಂ ಧಿಸಿ 2 ಬ್ಯಾಟರಿಗಳನ್ನು ಹಾಗೂ ಕಾವೂರು ಠಾಣೆಯಲ್ಲಿ ದಾಖಲಾದ ಕಳವು ಪ್ರಕರಣ ಕುರಿತಂತೆ 6 ಬ್ಯಾಟರಿಗಳನ್ನು ಹಾಗೂ ಕದ್ರಿ ಪೊಲೀಸ್ ಠಾಣೆಯಲ್ಲಿ ವರದಿ
ಯಾದ ದ್ವಿಚಕ್ರ ವಾಹನ ಕಳವು ಪ್ರಕರಣಕ್ಕೆ ಸಂಬಂಧಿಸಿ ಒಂದು ಸ್ಕೂಟರ್ ಸಹಿತ ಒಟ್ಟು 6 ಪ್ರಕರಣಗಳಿಗೆ ಸಂಬಂಧಿ ಸಿ 20 ಬ್ಯಾಟರಿಗಳನ್ನು ಹಾಗೂ 2 ದ್ವಿಚಕ್ರ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ. ಅವುಗಳ ಒಟ್ಟು ಮೌಲ್ಯ 3,20,000 ರೂ. ಎಂದು ಅಂದಾಜಿಸಲಾಗಿದೆ. ಅ. 18ರಂದು ರಾತ್ರಿ ಅತ್ತಾವರದ ಅಯ್ಯಪ್ಪ ಗುಡಿಯ ಎದುರು ಗ್ರೌಂಡಿನಲ್ಲಿ ನಿಲ್ಲಿಸಿದ್ದ ಲಾರಿ ಹಾಗೂ ಜೆಸಿಬಿಗಳ ಒಟ್ಟು 6 ಬ್ಯಾಟರಿಗಳು ಕಳವಾಗಿರುವುದಾಗಿ ಅಕ್ಷಿತ್ ಅವರು ಪಾಂಡೇಶ್ವರ ಠಾಣೆಗೆ ದೂರು ಸಲ್ಲಿಸಿದ್ದರು. ಈ ಬಗ್ಗೆ ತನಿಖೆ ನಡೆಸುತ್ತಿದ್ದಾಗ ಇಬ್ಬರು ಆರೋಪಿಗಳು ಬಲೆಗೆ ಬಿದ್ದಿದ್ದಾರೆ.
ಆರೋಪಿ ಮಹಮ್ಮದ್ ಆಸೀಫ್ ಯಾನೆ ಅಸೀಫ್ ಹಳೆ ಆರೋಪಿಯಾಗಿದ್ದು ಈತನ ಮೇಲೆ ಈ ಹಿಂದೆ ಮಂಗಳೂರು ಗ್ರಾಮಾಂತರ ಠಾಣೆ, ಕದ್ರಿ ಹಾಗೂ ಬಂದರು ಠಾಣೆಗಳಲ್ಲಿ ಒಟ್ಟು 6 ಕಳವು ಪ್ರಕರಣಗಳು ದಾಖಲಾಗಿವೆ. ಬಂದರು ಠಾಣೆಯಲ್ಲಿ ದಾಖಲಾದ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದು, ನ್ಯಾಯಾಲಯ ಜಾಮೀನು ರಹಿತ ವಾರಂಟ್ ಹೊರಡಿಸಿತ್ತು. ಆರೋಪಿ ಹಬೀಬ್ ರೆಹಮಾನ್ ಯಾನೆ ಹಬೀಬ್ ಪಾಂಡೇಶ್ವರ ಠಾಣೆಯ ಹಳೆಯ ಶಿಕ್ಷಾರ್ಹ ಅಪರಾಧಿ . ಪೊಲೀಸ್ ಆಯುಕ್ತ ಟಿ.ಆರ್. ಸುರೇಶ್, ಡಿಸಿಪಿಗಳಾದ ಹನುಮಂತರಾಯ ಮತ್ತು ಉಮಾ ಪ್ರಶಾಂತ್, ಮಂಗಳೂರು ದಕ್ಷಿಣ ಉಪ ವಿಭಾಗದ ಎಸಿಪಿ ರಾಮ ರಾವ್ ಅವರ ಮಾರ್ಗದರ್ಶನದಲ್ಲಿ ಪಾಂಡೇಶ್ವರ ಪೊಲೀಸ್ ನಿರೀಕ್ಷಕ ಬೆಳ್ಳಿಯಪ್ಪ ಕೆ.ಯು. ಅವರು ಪಿಎಸ್‌ಐ ಮತ್ತು ಅಪರಾಧ ಪತ್ತೆ ವಿಭಾಗದ ಸಿಬಂದಿ ಸಹಕಾರದಲ್ಲಿ ಈ ಪತ್ತೆ ಕಾರ್ಯಾಚರಣೆ ನಡೆಸಿದ್ದರು.