ಬೆಂಗಳೂರು: ಇಲ್ಲಿನ ಮಾರತಹಳ್ಳಿಯಲ್ಲಿರುವ ಕ್ರಿಕೆಟ್ ಕೋಚ್ ಆರ್‌ಎಕ್ಸ್ ಮುರಳಿ ಅವರ ಅಕಾಡೆಮಿಯಲ್ಲಿ ಅಭ್ಯಾಸ ಚಟುವಟಿಕೆ ಆರಂಭಗೊಂಡಿದೆ.
ಈ ಅಕಾಡೆಮಿಯ ಸದಸ್ಯರಾದ ಟೆಸ್ಟ್ ಆರಂಭಕಾರ ಮಾಯಾಂಕ್ ಅಗರ್ವಾಲ್ ಕೂಡ ಅಭ್ಯಾಸದಲ್ಲಿ ಪಾಲ್ಗೊಂಡಿದ್ದಾರೆ.
‘ನನ್ನ ಅಕಾಡೆಮಿಯಲ್ಲಿ ಎಲ್ಲ ಕ್ರಿಯಾತ್ಮಕ ಚಟುವಟಿಕೆಗಳೂ ನಡೆಯುತ್ತವೆ. ಆದರೆ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕಾದ್ದರಿಂದ ಒಂದೊಂದೇ ವಿಭಾಗವನ್ನು ಆರಂಭಿಸಲಾಗುವುದು. ಸದ್ಯ ಇಲ್ಲಿ ಗ್ರೂಪ್ ಟ್ರೇನಿಂಗ್‌ಗೆ ಅವಕಾಶವಿಲ್ಲ. ಮಾಯಾಂಕ್ ಕೂಡ ಸುಮಾರು 25 ಕಿ.ಮೀ. ಪ್ರಯಾಣ ಮಾಡಿ ಅಭ್ಯಾಸಕ್ಕೆ ಆಗಮಿಸುತ್ತಿದ್ದಾರೆ’ ಎಂದು ಮುರಳಿ ತಿಳಿಸಿದರು.
‘ಎಲ್ಲರೂ ಕ್ರಿಕೆಟ್ ಆರಂಭವಾಗುತ್ತಿರುವುದನ್ನೇ ಕಾಯುತ್ತಿದ್ದಾರೆ. ಭಾರತ ಕ್ರಿಕೆಟಿನ ಪವರ್ ಹೌಸ್ ಆಗಿದ್ದು, ನಾವು ಆರಂಭಿಸದೇ ಹೋದರೆ ಬೇರೆಯವರಿಗೂ ಇದು ಸಾಧ್ಯವಾಗದು’ ಎಂಬುದು ಮುರಳಿ ಅಭಿಪ್ರಾಯ.
ಕೋವಿಡ್-19 ಸದ್ಯ ನಿರ್ಮೂಲನವಾಗುವುದು ಕಷ್ಟ. ಆದರೆ ಸರಕಾರ ಈ ನಿಟ್ಟಿನಲ್ಲಿ ನಿರ್ವಹಿಸಿದ ಪಾತ್ರ ಅಮೋಘ ಎಂಬುದಾಗಿ ಮುರಳಿ ಹೇಳಿದರು.