Advertisement

ಹೆದ್ದಾರಿಯಂಚಿನ ಜನರ ಬವಣೆ ಕೇಳ್ಳೋರ್ಯಾರು?

04:11 PM Jun 13, 2019 | Naveen |

ಭಟ್ಕಳ: ಚತುಷ್ಪಥ ಹೆದ್ದಾರಿ ತಾಲೂಕಿಗೊಂದು ಶಾಪವಾಗಿ ಪರಿಣಮಿಸಿದ್ದು, ಕಳೆದ 6-7 ವರ್ಷಗಳಿಂದ ಜನರ ಬವಣೆ ಕೇಳುವವರೇ ಇಲ್ಲವಾಗಿದೆ. ಹೆದ್ದಾರಿ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದ್ದು, ಈಗಾಗಲೇ ಹತ್ತಾರು ಜೀವ ಬಲಿಯಾದರೂ ಯಾವುದೇ ಮುಂಜಾಗೃತೆ ಕೈಗೊಳ್ಳದೇ ಕಾಮಗಾರಿ ಮುಂದುವರಿಸಿರುವ ಗುತ್ತಿಗೆದಾರ ಕಂಪೆನಿಗೆ ಮೂಗುದಾರ ಹಾಕುವವರೇ ಇಲ್ಲದೇ ಇನ್ನೆಷ್ಟು ಬಲಿ ಪಡೆಯಬೇಕೋ ಕಾಲವೇ ಹೇಳಬೇಕಾಗಿದೆ.

Advertisement

ದಕ್ಷಿಣ ಕನ್ನಡ ಜಿಲ್ಲೆಯಿಂದ ಉತ್ತರ ಕನ್ನಡ ಜಿಲ್ಲೆಗೆ ಚತಷ್ಪಥ ಹೆದ್ದಾರಿ ಕಾಲಿಡುತ್ತದೆ ಎನ್ನುವಾಗಲೇ ಇಲ್ಲಿನ ಜನತೆ ತೀವ್ರ ಎಚ್ಚರಗೊಂಡಿದ್ದರು. ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವವರು ಕೇವಲ ಗುಂಟೆ, ಎರಡು ಗುಂಟೆ ಜಮೀನಿರುವವರು, ಇಲ್ಲಿ 60 ಮೀಟರ್‌ ಭೂಮಿ ವಶಪಡಿಸಿಕೊಂಡರೆ ಹೆಚ್ಚಿನ ಜನರು ಬೀದಿಪಾಲಾಗಬೇಕಾಗುತ್ತದೆ ಎಂದು ನಾಗರಿಕರು ಕೇಂದ್ರ ಸರಕಾರದ ಮೊರೆ ಹೋಗಿದ್ದರ ಫಲವಾಗಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಕೇವಲ 45 ಮೀಟರ್‌ ಜಾಗಾ ವಶಪಡಿಸಿಕೊಳ್ಳಲು ಹೆದ್ದಾರಿ ಪ್ರಾಧಿಕಾರ ಒಪ್ಪಿಗೆ ಸೂಚಿಸಿ ಆದೇಶ ನೀಡಿತು. ಭಟ್ಕಳದಲ್ಲಿ ಬೈಪಾಸ್‌ ರಸ್ತೆ ನಿರ್ಮಿಸಬೇಕು, ಇಲ್ಲಿನ ಹೆದ್ದಾರಿ ಅಕ್ಕಪಕ್ಕದಲ್ಲಿರುವ ಜಮೀನು ವಶಪಡಿಸಿಕೊಂಡರೆ ಭಟ್ಕಳದ ಸೌಂದರ್ಯವೇ ಹೋಗುವುದು ಎನ್ನುವ ಕೂಗು ಕೊನೆಗೂ ಕೆಲವರ ಸ್ವಾರ್ಥದಿಂದಾಗಿ ನಿಂತು ಹೋಯಿತು.

ಶಿರಾಲಿಯಲ್ಲಿ ಕೇವಲ 750 ಮೀ. ರಸ್ತೆಯನ್ನು 30 ಮೀ.ಗೆ ಸೀಮಿತಗೊಳಿಸಿದ್ದನ್ನು ರಾಜಕೀಕರಣಗೊಳಿಸಿ, ಅಪಘಾತದ ನೆಪವೊಡ್ಡಿ ಪತ್ರ ಸಮರ, ಮನವಿ, ಪ್ರತಿಭಟನೆ ಕೂಡಾ ಮಾಡಲಾಯಿತು. ಇಂದು 30 ಮೀಟರ್‌ ಸ್ಥಳದಲ್ಲಿಯೇ ಕಾಮಗಾರಿ ಮಾಡಲಾಗುತ್ತಿದೆ.

ಅಪಘಾತಗಳ ಸರಮಾಲೆ: ಭಟ್ಕಳ ತಾಲೂಕಿನಲ್ಲಿ ಹಾದು ಹೋಗುವ ಹೆದ್ದಾರಿ ಕಾಮಗಾರಿ ಆರಂಭವಾದಾಗಿನಿಂದ ಅಪಘಾತಗಳು ಸಂಭವಿಸುತ್ತಲೇ ಇವೆ. ಅಪಘಾತದಿಂದಾಗಿ ಹತ್ತಾರು ಜನರು ಪ್ರಾಣ ಕಳೆದುಕೊಂಡಿದ್ದು, ನೂರಾರು ಜನರು ಚಿಕಿತ್ಸೆ ಪಡೆದಿದ್ದಾರೆ. ಆದರೂ ಕಾಮಗಾರಿ ಮಾಡುವವರಾಗಲೀ, ಸಂಬಂಧಪಟ್ಟ ಇಲಾಖೆಯವರಾಗಲೀ ಯಾವುದೇ ಕ್ರಮ ಕೈಗೊಂಡಿಲ್ಲ, ಪರಿಣಾಮ ಇಂದಿಗೂ ಜನ ಅಪಘಾತದಿಂದ ಸಾಯುತ್ತಲೇ ಇದ್ದಾರೆ. ಮೊನ್ನೆ ಮೊನ್ನೆ ಬೈಕ್‌ ಅಪಘಾತದಲ್ಲಿ ಇಬ್ಬರು ಸ್ಥಳದಲ್ಲಿಯೇ ಮೃತ ಪಟ್ಟ ಘಟನೆ ಸೇರಿದಂತೆ ಎಲ್ಲಾ ಘಟನಾವಳಿಗಳಿಗೂ ಯಾರು ಹೊಣೆ ಎನ್ನುವುದೇ ಯಕ್ಷಪ್ರಶ್ನೆಯಾಗಿದೆ.

ಮಾಹಿತಿ ಕೊರತೆ: ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಾಗಿ ಸ್ಥಳ ಸ್ವಾಧೀನ ಪಡಿಸಿಕೊಳ್ಳುವುದರಿಂದ ಹಿಡಿದು ಹೆದ್ದಾರಿ ಕಾಮಗಾರಿ ಕೈಗೊಳ್ಳುವ ತನಕವೂ ಯಾವುದೇ ಮಾಹಿತಿ ಜನರಿಗೆ ನೀಡದಿರುವುದು ಜನತೆಯ ಹಕ್ಕನ್ನು ಮೊಟಕುಗೊಳಿಸಿದಂತೆಯೇ ಆಗಿದೆ. ಯಾವುದೇ ಸ್ಥಳದ ಕುರಿತು ನಿಖರವಾಗಿ ಹೇಳದ ಅಧಿಕಾರಿಗಳು, ಸಿಬ್ಬಂದಿ ಇನ್ನೂ ಕೂಡಾ ಸ್ಪಷ್ಟ ಚಿತ್ರಣವನ್ನು ಜನತೆಗೆ ನೀಡಲು ವಿಫಲರಾಗಿದ್ದಾರೆ. ಹಲವಾರು ಕಡೆಗಳಲ್ಲಿ ನೀಡಿದ ಪರಿಹಾರ ಮೊತ್ತವೂ ಭಾರೀ ವ್ಯತ್ಯಾಸ ಮತ್ತು ಗೊಂದಲಕ್ಕೆ ಕಾರಣವಾಗಿದ್ದು, ಉತ್ತರ ಕೊಡುವವರೇ ಇಲ್ಲವಾಗಿದ್ದಾರೆ. ಭಟ್ಕಳ ನಗರದಲ್ಲಿಯಂತೂ ಎಲ್ಲೆಲ್ಲಿ ಎಷ್ಟು ಎನ್ನುವುದು ಸ್ವತಹ ಕಾಮಗಾರಿ ನಡೆಸುವವರಿಗೆ ಸ್ಪಷ್ಟವಿಲ್ಲವಾಗಿದೆ. ಶಂಶುದ್ಧೀನ್‌ ಸರ್ಕಲ್ನಲ್ಲಿ ಫ್ಲೈ ಓವರ್‌ ನಿರ್ಮಾಣವಂತೂ ಅರ್ಧ ಭಟ್ಕಳವನ್ನೇ ನುಂಗಿ ಹಾಕುವ ಹುನ್ನಾರವಾಗಿದ್ದು ಈ ಕುರಿತು ಇನ್ನೂ ಸ್ಪಷ್ಟ ನಿಲುವು ಹೊಂದದ ಹೆದ್ದಾರಿ ಪ್ರಾಧಿಕಾರ ಜನತೆಯನ್ನು ಕತ್ತಲೆಯಲ್ಲಿಟ್ಟು ಮುಂದುವರಿಯುತ್ತಿರುವುದು ಮಾತ್ರ ವಿಪರ್ಯಾಸ.

Advertisement

ಅವೈಜ್ಞಾನಿಕ ಕಾಮಗಾರಿ
ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯನ್ನು ನಿರ್ವಹಿಸುವ ಕಂಪೆನಿ ಯಾವುದೇ ಮುಂಜಾಗೃತಾ ಕ್ರಮವನ್ನಾಗಲೀ, ಸ್ಥಳೀಯರ ಅಭಿಪ್ರಾಯವನ್ನಾಗಲೀ ಪಡೆಯದೇ ಅವೈಜ್ಞಾನಿಕವಾಗಿ ಕಾಮಗಾರಿ ನಡೆಸುತ್ತಿದೆ. ಮಳೆಗಾಲ ಬಂತೆಂದರೆ ಜನತೆ ಭಯದಿಂದಲೇ ಕಾಲ ಕಳೆಯುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಕಳೆದ 2-3 ವರ್ಷಗಳಿಂದ ಹೇಳುತ್ತಲೇ ಬಂದರೂ ಕೂಡಾ ಮಳೆಗಾಲದ ಪೂರ್ವ ತಯಾರಿ ಮಾಡಿಕೊಳ್ಳದೇ ಇರುವುದು ಅನಾಹುತಕ್ಕೆ ಕಾರಣವಾಗುತ್ತದೆ. ಕಳೆದ ವರ್ಷ ಇಲ್ಲಿನ ಮೂಢಭಟ್ಕಳದಲ್ಲಿ ನೀರು ತುಂಬಿ ಅನಾಹುತವಾಗಿದ್ದರೆ, ಮಣ್ಕುಳಿಯಲ್ಲಿ ಮನೆಗಳಿಗೆಲ್ಲಾ ಹೊಲಸು ನೀರು ನುಗ್ಗಿದ್ದನ್ನು ಜನ ಇನ್ನೂ ಮರೆತಿಲ್ಲವಾಗಿದೆ. ಈ ಬಾರಿಯೂ ಅದೇ ರೀತಿಯ ಪರಿಸ್ಥಿತಿ ಇದ್ದು ಇನ್ನೇನು ಕಾದಿದೆಯೋ ನೋಡಬೇಕಾಗಿದೆ. ಗೊರ್ಟೆಯಿಂದ ಬೈಲೂರು ಗಡಿಯ ತನಕವೂ ಅಲ್ಲಲ್ಲಿ ನೀರು ನಿಂತು ಅನಾಹುತಗಳಾಗುತ್ತಿದ್ದು ತಕ್ಷಣ ಎಚ್ಚೆತ್ತು ಮುಂಜಾಗೃತಾ ಕ್ರಮ ಕೈಗೊಂಡಲ್ಲಿ ಮಾತ್ರ ಜನ ತೊಂದರೆಯಿಂದ ಪಾರಾಗಬಹುದು.

ಸರಣಿ ಅಪಘಾತಗಳಿಂದ ಸಾವು-ನೋವು
ರಾಷ್ಟ್ರೀಯ ಹೆದ್ದಾರಿಯ ಕೆಲಸ ಆರಂಭವಾದಾಗಿನಿಂದ ಇಲ್ಲಿನ ತನಕ ಹತ್ತಾರು ಜನರು ಅಪಘಾತದಲ್ಲಿ ಮೃತಪಟ್ಟರೆ ಕೇವಲ ಮುರ್ಡೇಶ್ವರ ಠಾಣಾ ವ್ಯಾಪ್ತಿಯಲ್ಲಿಯೇ 52 ಅಪಘಾತದಲ್ಲಿ 11 ಜನರು ಮೃತಪಟ್ಟು 47 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. 14 ಜನರು ಚಿಕ್ಕಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಇನ್ನೂ ಅನೇಕ ಚಿಕ್ಕಪುಟ್ಟ ಅಪಘಾತಗಳು ದಾಖಲೆಯೇ ಆಗಿಲ್ಲ. ಇದಕ್ಕೆ ಅವೈಜ್ಞಾನಿಕವಾಗಿ ಅಳವಡಿಸುವ ಡಿವೈಡರ್‌, ಅನಗತ್ಯ ಸ್ಥಳದಲ್ಲಿ ಹಂಪ್‌, ಎರಡೂ ಕಡೆಗಳಲ್ಲಿ ಕಾಮಗಾರಿ ಮುಗಿದಿದ್ದರೂ ಒಂದು ಕಡೆಯಿಂದ ವಾಹನ ನಿರ್ಬಂಧಿಸುವುದು ಮುಖ್ಯ ಕಾರಣವಾಗಿದೆ. ವಾಹನ ನಿರ್ಬಂಧಿಸುವ ಮಾರ್ಗವನ್ನು ಪದೇಪದೇ ಬದಲಿಸುವುದು, ಸರಿಯಾದ ಬೆಳಕಿನ ವ್ಯವಸ್ಥೆ ಮಾಡದಿರುವುದು ಕೂಡಾ ಅಪಘಾತಕ್ಕೆ ಮುಖ್ಯ ಕಾರಣವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next