ಭಟ್ಕಳ: ಪೊಲೀಸರು ವರ್ಷದ ಎಲ್ಲಾ ದಿನವೂ ಒತ್ತಡದಲ್ಲಿಯೇ ಕರ್ತವ್ಯ ನಿರ್ವಹಿಸಬೇಕಾಗಿದ್ದು ಮಕ್ಕಳ ಶೈಕ್ಷಣಿಕ ಹಾಗೂ ಕ್ರೀಡಾ ಚಟುವಟಿಕೆಗಳನ್ನು ನೋಡಲು ಸಮಯ ದೊರೆಯುವುದಿಲ್ಲ. ಅಂತಹ ಸಂದರ್ಭದಲ್ಲಿ ಅವರ ಮಕ್ಕಳಿಗಾಗಿಯೇ ಏರ್ಪಡಿಸಿದ ಕ್ರೀಡಾಕೂಟ ಅತ್ಯಂತ ಶ್ಲಾಘನೀಯ ಎಂದು ಉಪ ವಿಭಾಗಾಧಿಕಾರಿ ಸಾಜಿದ್ ಅಹಮ್ಮದ್ ಮುಲ್ಲಾ ಹೇಳಿದರು. ಅವರು ಇಲ್ಲಿನ ಪೊಲೀಸ್ ಪರೇಡ್ ಮೈದಾನದಲ್ಲಿ ಭಟ್ಕಳ ಉಪ ವಿಭಾಗದ ಪೊಲೀಸರ ಮಕ್ಕಳಿಗಾಗಿ ನಡೆದ ಕ್ರೀಡಾ ಕೂಟವನ್ನು ಪಾರಿವಾಳಗಳನ್ನು ಹಾರಿಬಿಡುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಜಗತ್ತಿನಲ್ಲಿರುವ ಎಲ್ಲಾ ಜೀವಿಗಳನ್ನು ಮಾನವರು ಅಯಂತ ಶ್ರೇಷ್ಠ ಜೀವಿಯಾಗಿದ್ದಾನೆ. ಪ್ರತಿಯೊಬ್ಬರಿಗೂ ಅತ್ಯಂತ ಮುಕ್ತವಾಗಿ ಅವಕಾಶ ದೊರೆಯುವಂತೆ ಮಾಡಿದಾಗ ಮಾತ್ರ ನಿಜವಾದ ಪ್ರತಿಭೆ ಹೊರಬರಲು ಸಾಧ್ಯ. ಮಕ್ಕಳಲ್ಲಿರುವ ಪ್ರತಿಭೆಯನ್ನು ಅವರಿಗೆ ಇಂತಹ ಅವಕಾಶಗಳನ್ನು ಕೊಡುವುದರ ಮೂಲಕ ಹೊರ ಹಾಕಲು ಸಾಧ್ಯವಾಗುವುದು. ಕ್ರೀಡಾಕೂಟದಲ್ಲಿ ಮಕ್ಕಳು ಮುಕ್ತವಾಗಿ ಭಾಗವಹಿಸಲು ಅವಕಾಶವಿದ್ದು ತಮ್ಮ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಲು ಕರೆ ನೀಡಿದರು.
ಮುಖ್ಯ ಅತಿಥಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ರಾಧಾಕೃಷ್ಣ ಭಟ್ಟ ಮಾತನಾಡಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪ್ರಗತಿಯಷ್ಟೇ ಮುಖ್ಯ ಕ್ರೀಡಾ ಪ್ರಗತಿಯಾಗಿದೆ. ಪೊಲೀಸರು ಒಂದು ದಿನವಾದರೂ ತಮ್ಮ ಹೆಂಡತಿ, ಮಕ್ಕಳೊಂದಿಗೆ ಮುಕ್ತವಾಗಿ ಭಾವಹಿಸಲಿ ಎನ್ನುವ ಕಾರಣದಿಂದ ಇಲಾಖೆ ಕ್ರೀಡಾಕೂಟವನ್ನು ಏರ್ಪಡಿಸುತ್ತಿದ್ದು ಎಲ್ಲರೂ ಅತ್ಯಂತ ಸಂತಸದಿಂದ ಭಾಗವಹಿಸಿದ್ದಾರೆ. ಕ್ರೀಡಾಕೂಟದಲ್ಲಿ ಮಕ್ಕಳು ಸ್ಪರ್ಧಾ ಮನೋಭಾವದಿಂದ ಭಾಗವಹಿಸಿ ಜಿಲ್ಲಾ ಹಾಗೂ ರಾಜ್ಯಮಟ್ಟದಲ್ಲಿ ನಮ್ಮ ಉಪ ವಿಭಾಗಕ್ಕೆ ಉತ್ತಮ ಹೆಸರು ತರಲಿ ಎಂದರು ಹಾರೈಸಿದರು. ಉಪ ವಿಭಾಗದ ಉಪಾ ಧೀಕ್ಷಕ ವೆಲೆಂಟೈನ್ ಡಿಸೋಜ ಅಧ್ಯಕ್ಷತೆ ವಹಿಸಿದ್ದರು. ಭಟ್ಕಳ ವೃತ್ತ ನಿರೀಕ್ಷಕ ಗಣೇಶ ಕೆ.ಎಲ್., ಉಪ ವಿಭಾಗದ ಉಪ ನಿರೀಕ್ಷರುಗಳು ಉಪಸ್ಥಿತರಿದ್ದರು. ಮಾರುತಿ ನಾಯ್ಕ ಕಾರ್ಯಕ್ರಮ ನಿರ್ವಹಿಸಿದರು. ಸಿಪಿಐ ಕೆ.ಎಲ್. ಗಣೇಶ ಸ್ವಾಗತಿಸಿದರು. ಭಟ್ಕಳ ನಗರ ಠಾಣೆ ಸಬ್ ಇನ್ಸಪೆಕ್ಟರ್ ಕುಸುಮಾಧರ ವಂದಿಸಿದರು.