ಆರ್ಕೆ ಭಟ್ಕಳ
ಭಟ್ಕಳ: ಮಳೆಯಿಲ್ಲದೇ ಭೂಮಿ ಬಿರಿಯುತ್ತಿದ್ದರೆ, ಹನಿ ನೀರೂ ಇಲ್ಲದೆ ರೈತರ ತೋಟಗಳು ಒಣಗುತ್ತಿವೆ. ಫಸಲು ಬಿಡುವ ಮರಗಳನ್ನು ಕಳೆದುಕೊಳ್ಳುವ ಭೀತಿ ಎದುರಾಗಿದೆ.
ಪ್ರತಿವರ್ಷ ಏಪ್ರಿಲ್ ಮೇ ತಿಂಗಳಲ್ಲಿ ಕನಿಷ್ಠ 2-3 ದಿನಗಳಾದರೂ ಮಳೆ ಬರುತ್ತಿತ್ತು. ಆದರೆ ಈ ಬಾರಿ ಮಳೆಯೇ ಇಲ್ಲದೆ ರೈತರು ಕಂಗಾಲಾಗಿದ್ದಾರೆ. ಕರಾವಳಿಯಲ್ಲಿ ಸಾಧಾರಣ ತಾಪಮಾನ ಇರುತ್ತಿದ್ದರೆ, ಈ ಬಾರಿ ಕರಾವಳಿಯೂ ಕಾದ ಕಬ್ಬಿಣದಂತಾಗಿದ್ದು, 35ರಿಂದ 38 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ.
ಅಂತರಜಲ ಕುಸಿತ:ತಾಲೂಕಿನ ಗ್ರಾಮೀಣ ಭಾಗದಲ್ಲಿ ಇಷ್ಟು ವರ್ಷಗಳ ಕಾಲ ಕೆರೆ, ಬಾವಿ ಒಣಗಿ ಹೋದ ಉದಾಹರಣೆಯೇ ಇಲ್ಲ. ಕೇವಲ ಕೆಲವೊಂದು ಕಡೆಗಳಲ್ಲಿ ಮಾತ್ರ ಒಣಗಿ ಹೋಗುತ್ತಿತ್ತು. ಈ ಬಾರಿ ಎಲ್ಲರ ಮನೆ ಬಾವಿ, ಕೆರೆಗಳು ಒಣಗಿ ಹೋಗಿದ್ದು, ಬರದ ಛಾಯೆ ಮೂಡಿದೆ. ಈ ಹಿಂದೆ ಪ್ರತಿಯೊಂದು ಊರಿನಲ್ಲಿಯೂ ಹಳ್ಳ, ಹೊಳೆ, ನದಿಗಳಿಗೆ ಬಾಂದಾರ ಕಟ್ಟಿ ನೀರನ್ನು ಹಿಡಿದಿಟ್ಟು ಕೊಳ್ಳುತ್ತಿದ್ದರು. ಕೃಷಿ ಚಟುವಟಿಕೆಗೆ ಉಪಯೋಗ ಮಾಡುತ್ತಿದ್ದ ಬಾಂದಾರ ಇತ್ತೀಚಿನ ವರ್ಷಗಳಲ್ಲಿ ಕೃಷಿಯೇ ಇಲ್ಲ ಎನ್ನುವುದು ಬಾಂದಾರವೂ ಇಲ್ಲವಾಗಿದೆ. ಇದರಿಂದ ಅಂತರಜಲ ಕುಸಿದು ನೀರಿಗೆ ಹಾಹಾಕಾರ ಎದ್ದಿದೆ.
ಕುಡಿವ ನೀರಿಗೂ ತತ್ವಾರ:ತಾಲೂಕಿನಲ್ಲಿ ಈಗಾಗಲೇ ಕುಡಿಯುವ ನೀರಿಗೂ ಹಾಹಾಕಾರ ಎದ್ದಿದ್ದು, ಕಡವಿನ ಕಟ್ಟೆ ಡ್ಯಾಂ ಒಣಗಿ ತಿಂಗಳ ಹತ್ತಿರ ಬಂದಿದೆ. ತಾಲೂಕಿನಲ್ಲಿ ನೀರು ಸರಬರಾಜು ಮಾಡುವ ಕುರಿತು ಟೆಂಡರ್ ಕರೆದಿದ್ದು, ಹೊಳೆಯ ನೀರು ತಂದು ಸರಬರಾಜು ಮಾಡುತ್ತಾರೆಂದು ಈಗಾಗಲೇ ಮುಟ್ಟಳ್ಳಿ ಗ್ರಾಮಸ್ಥರು ಪ್ರತಿಭಟನೆ ಮಾಡಿದ್ದಾರೆ. ನೀರು ಸರಬರಾಜು ಮಾಡುವ ವಾಹನಕ್ಕೆ ಜಿಪಿಎಸ್ ಕಡ್ಡಾಯ ಮಾಡಿದ್ದರೂ ಖಾಸಗಿಯವರಿಗೆ ಮಾರಾಟ ಮಾಡಲಾಗಿದೆ ಎನ್ನುವ ದೂರು ಕೇಳಿ ಬಂದಿದೆ. ಈ ಕುರಿತು ತಹಶೀಲ್ದಾರ್ ಪರಿಶೀಲನೆ ಮಾಡಿ ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ.
ಚೆಕ್ ಡ್ಯಾಂ ನಿರ್ಮಾಣ ಆಗಲಿ: ತಾಲೂಕಿನಲ್ಲಿ ಅನೇಕ ಚಿಕ್ಕ ಚಿಕ್ಕ ನದಿಗಳು, ಹೊಳೆಗಳು ಇದ್ದು, ಅವುಗಳಲ್ಲಿನ ನೀರು ವ್ಯರ್ಥವಾಗಿ ಹರಿದು ಸಮುದ್ರ ಸೇರುತ್ತಿವೆ. ಮೊದಲು ರೈತರು ತಮ್ಮ ಬೆಳೆಗೆ ನೀರುಣಿಸಲಿಗೋಸ್ಕರವಾಗಿ ಪ್ರತಿಯೊಂದು ಹೊಳೆಗೆ ಚೆಕ್ ಡ್ಯಾಂ ನಿರ್ಮಿಸಿಕೊಂಡು ನೀರನ್ನು ಹಿಡಿದಿಟ್ಟುಕೊಳ್ಳುತ್ತಿದ್ದರು. ಸುಮಾರು ಅಕ್ಟೋಬರ್, ನವೆಂಬರ್ ತಿಂಗಳಲ್ಲಿ ಒಡ್ಡು ನಿರ್ಮಾಣ ಮಾಡಿದರೆ ಮೇ ಕೊನೆಯ ತನಕವೂ ನೀರು ಇರುತ್ತಿತ್ತು. ಗದ್ದೆಗೂ ನೀರಾಯಿತು, ಅಂತರ್‌ಜಲವೂ ವೃದ್ಧಿಯಾಯಿತು ಎನ್ನುವಂತಾಗುತ್ತಿತ್ತು. ಆದರೆ ಇಂದು ಗದ್ದೆಗಳನ್ನು ನಾಟಿ ಮಾಡುವುದೇ ಕಡಿಮೆಯಾದ್ದರಿಂದ ರೈತರು ಒಡ್ಡು ನಿರ್ಮಾಣ ಮಾಡುವುದನ್ನೇ ಬಿಟ್ಟಿದ್ದಾರೆ. ಇದೂ ಕೂಡಾ ನೀರಿಗಾಗಿ ಹಾಹಾಕಾರಕ್ಕೆ ಕಾರಣವಾಗಿದೆ. ಒಟ್ಟಾರೆ ಸರಕಾರ ಈಗಿಂದಲೇ ಮುಂದಿನ ವರ್ಷಕ್ಕೆ ತಯಾರಿ ನಡೆಸಬೇಕಾಗಿದೆ.
ಕಡವಿನಕಟ್ಟೆಯಲ್ಲಿ ಇನ್ನೊಂದು ಡ್ಯಾಂ ನಿರ್ಮಿಸಿ
ಕಳೆದ ಹಲವಾರು ವರ್ಷಗಳಿಂದ ಕಡವಿನಕಟ್ಟೆ ಡ್ಯಾಂನಿಂದ ಸುಮಾರು 500 ಮೀಟರ್ ದೂರದಲ್ಲಿ ಇನ್ನೊಂದು ಸಣ್ಣ ಡ್ಯಾಂ ನಿರ್ಮಾಣ ಮಾಡಿ ನೀರನ್ನು ಹಿಡಿದಿಟ್ಟುಕೊಳ್ಳುವ ಯೋಜನೆ ರೂಪಿಸುವಂತೆ ಮಾಡಿದ ಜನತೆಯ ಮನವಿ ಅರಣ್ಯ ರೋಧನವಾಗಿದೆ. ಯಾವುದೇ ಜನ ಪ್ರತಿನಿಧಿಗಳು, ಅಧಿಕಾರಿಗಳು ಇದಕ್ಕೆ ಕಿವಿಗೊಡುವುದೇ ಇಲ್ಲ. ಇನ್ನಾದರೂ ಇದಕ್ಕೆ ಚಾಲನೆ ದೊರಕಿಸಿಕೊಟ್ಟಲ್ಲಿ ಕನಿಷ್ಠ ಒಂದು ತಿಂಗಳಿಗಾಗುವಷ್ಟು ನೀರು ಸಂಗ್ರಹ ಇರುವುದರಲ್ಲಿ ಸಂಶಯವಿಲ್ಲ.