Advertisement

ಸ್ನಾನ ಚೂರ್ಣಗಳು

12:30 AM Feb 01, 2019 | |

ಪ್ರಾಚೀನ ಕಾಲದಿಂದಲೂ ಸ್ನಾನಕ್ಕೆ ಮನೆಯಲ್ಲಿಯೇ ತಯಾರಿಸಿದ ನಿಸರ್ಗದತ್ತ ಸ್ನಾನ ಚೂರ್ಣಗಳನ್ನು ಬಳಸಲಾಗುತ್ತಿದೆ. ದೀಪಾವಳಿಯ ಸಮಯದಲ್ಲಿ “ಉಬಟನ್‌’ ಎಂದು ಕರೆಯುವ ಸ್ನಾನ ಚೂರ್ಣಗಳನ್ನು ಲೇಪಿಸಿ ಸ್ನಾನ ಮಾಡುವುದು ಮಹಾರಾಷ್ಟ್ರ ಹಾಗೂ ಉತ್ತರ ಭಾರತದಲ್ಲಿ ಪ್ರಸಿದ್ಧ. ನಿತ್ಯ ಉಪಯೋಗಕ್ಕೂ ಇದು ಶ್ರೇಷ್ಠ.

Advertisement

ದಕ್ಷಿಣ ಭಾರತದಲ್ಲಿ ಮುಖ್ಯವಾಗಿ ಆಂಧ್ರ ಪ್ರದೇಶದಲ್ಲಿ ಪಾರಂಪರಿಕ ಸ್ನಾನ ಚೂರ್ಣ “ಸುನ್ನಿ ಪಿಂಡಿ’ಯನ್ನು ಸ್ನಾನಕ್ಕೆ ಬಳಸುತ್ತಾರೆ. ತಮಿಳುನಾಡಿನಲ್ಲಿ “ನಲಂಗುಮಾವು’ ಎಂಬ ಸ್ನಾನ ಚೂರ್ಣ ಮನೆಯಲ್ಲೇ ತಯಾರಿಸಲಾಗುತ್ತದೆ.

ಈ ಸ್ನಾನಚೂರ್ಣಗಳೂ ಎಲ್ಲ ಕಾಲಗಳಲ್ಲೂ ಬಳಕೆಗೆ ಯೋಗ್ಯ. ಮೈಮೊಗದ ಕಾಂತಿ, ಸ್ನಿಗ್ಧತೆ, ಮೃದುತನ ಹಾಗೂ ಮಾರ್ದವತೆ ಹೆಚ್ಚಿಸುತ್ತವೆ. ಮಕ್ಕಳಲ್ಲಿಯೂ ಈ ಸ್ನಾನ ಹಿತಕರ.  ಮನೆಯಲ್ಲೇ ಸುಲಭವಾಗಿ ತಯಾರಿಸಬಹುದಾದ ಸ್ನಾನಚೂರ್ಣಗಳನ್ನು ಅರಿಯೋಣ.

ನಲಂಗು ಮಾವು ಸ್ನಾನಚೂರ್ಣ
ಬೇಕಾಗುವ ಸಾಮಗ್ರಿ:
ಹೆಸರುಕಾಳು 1 ಕಪ್‌, ಕಡಲೆಬೇಳೆ 1/2 ಕಪ್‌, ಮುಲ್ತಾನಿ ಮಿಟ್ಟಿ 1/2 ಕಪ್‌, ಬಾದಾಮಿ 10, ಗುಲಾಬಿ ದಳಗಳು 2 ಕಪ್‌, ತುಳಸೀ ಎಲೆಗಳು 1/2 ಕಪ್‌, ಕಹಿಬೇವಿನ ಎಲೆ 1 ಕಪ್‌, ಕಿತ್ತಳೆ ಸಿಪ್ಪೆ 4 ಚಮಚ, ಅರಸಿನ ಹುಡಿ 1 ಚಮಚ.

ವಿಧಾನ: ಗುಲಾಬಿದಳ, ಕಹಿಬೇವಿನ ಎಲೆ, ತುಳಸೀ ಎಲೆ ಹಾಗೂ ಕಿತ್ತಳೆ ಹಣ್ಣಿನ ಸಿಪ್ಪೆ- ಇವುಗಳನ್ನು ಚೆನ್ನಾಗಿ ಒಣಗಿಸಿ ತದನಂತರ ನಯವಾಗಿ ಪುಡಿ ಮಾಡಬೇಕು. ಹೆಸರುಕಾಳು, ಕಡಲೆಬೇಳೆ ಹಾಗೂ ಬಾದಾಮಿಯನ್ನು ಬೇರೆ ಬೇರೆಯಾಗಿ ಮಿಕ್ಸರ್‌ನಲ್ಲಿ ಹಾಕಿ ನಯವಾಗಿ ಪೌಡರ್‌ ಮಾಡಬೇಕು. ಬಳಿಕ ಈ ಎರಡೂ ಮಿಶ್ರಣಗಳನ್ನು ಅರಸಿನ ಹುಡಿ, ಮುಲ್ತಾನಿ ಮಿಟ್ಟಿ ಇವುಗಳನ್ನು ಒಂದು ದೊಡ್ಡ ಬೌಲ್‌ನಲ್ಲಿ ಹಾಕಿ ಚೆನ್ನಾಗಿ ಮಿಶ್ರ ಮಾಡಬೇಕು. ಗಾಳಿಯಾಡದ ಡಬ್ಬದಲ್ಲಿ ಸಂಗ್ರಹಿಸಿ ನಿತ್ಯ ಸ್ನಾನಕ್ಕೆ ಬಳಸಬೇಕು.

Advertisement

ಬೇಕಾದಷ್ಟು ಪ್ರಮಾಣದಲ್ಲಿ ಈ ಸ್ನಾನಚೂರ್ಣವನ್ನು ನೀರಿನೊಂದಿಗೆ ಬೆರೆಸಿ ಪೇಸ್ಟ್‌ ತಯಾರಿಸಿ ಮುಖ ಹಾಗೂ ಮೈಗೆ ಲೇಪಿಸಬೇಕು. 5-10 ನಿಮಿಷದ ಬಳಿಕ ಸ್ನಾನ ಮಾಡಬೇಕು. ವಿಶೇಷ ಪರಿಣಾಮ ಉಂಟಾಗಲು ಅಥವಾ ಕಾಂತಿವರ್ಧಕವಾಗಿ ಮುಖಕ್ಕೆ ಬಳಸಲು ಈ ಸ್ನಾನ ಚೂರ್ಣದ ಜೊತೆಗೆ ಗುಲಾಬಿ ಜಲ, ಜೇನುತುಪ್ಪ ಅಥವಾ ಹಾಲು ಬೆರೆಸಿ ಪೇಸ್ಟ್‌ ತಯಾರಿಸಿ ಲೇಪಿಸಿದರೆ ಪರಿಣಾಮಕಾರಿ. ಮೊಸರಿನೊಂದಿಗೆ ಬೆರೆಸಿದರೆ ಉತ್ತಮ ಸðಬ್‌ನಂತೆ ಪರಿಣಾಮ ಬೀರುತ್ತದೆ. ಮಕ್ಕಳಿಗೆ ಈ ಸ್ನಾನಚೂರ್ಣ ಬಳಸುವಾಗ ಹಾಲಿನಲ್ಲಿ ಬೆರೆಸಿ ಲೇಪಿಸಿದರೆ ಹಾಗೂ ಸ್ವಲ್ಪ ಶ್ರೀಗಂಧದ ಹುಡಿ ಬೆರೆಸಿದರೆ ಪುಟ್ಟ ಮಕ್ಕಳಿಗೆ ಹಿತಕರ.

“ಸುನ್ನಿ ಪಿಂಡಿ’ ಸ್ನಾನಚೂರ್ಣ
ಸಾಮಗ್ರಿ:
ಹೆಸರುಕಾಳು 100 ಗ್ರಾಂ, ಕಡಲೆ 100 ಗ್ರಾಂ, ಹುರುಳಿ 50 ಗ್ರಾಂ, ಅಕ್ಕಿ 50 ಗ್ರಾಂ, ಮುಲ್ತಾನಿ ಮಿಟ್ಟಿ 50 ಗ್ರಾಂ, ಅರಸಿನ ಹುಡಿ 1 ಚಮಚ, ಕಹಿಬೇವಿನ ಎಲೆ 2 ಚಮಚ, ಗುಲಾಬಿದಳಗಳು 2 ಚಮಚ, ಮೆಂತ್ಯೆ 4 ಚಮಚ, ನೆಲ್ಲಿಕಾಯಿ ಪುಡಿ 3 ಚಮಚ, ತುಳಸೀಎಲೆ 2 ಚಮಚ, ನಿಂಬೆ ಸಿಪ್ಪೆ 3 ಚಮಚ, ಬಾದಾಮಿ 6.

ವಿಧಾನ: ಮೊದಲು ಹೆಸರು, ಕಡಲೆ, ಹುರುಳಿ, ಅಕ್ಕಿ ಹಾಗೂ ಮೆಂತ್ಯೆ, ಬಾದಾಮಿಗಳನ್ನು ಚೆನ್ನಾಗಿ ಬಿಸಿಲಿನಲ್ಲಿ ಒಣಗಿಸಿ. ತದನಂತರ ಮಿಕ್ಸರ್‌ನಲ್ಲಿ ತಿರುವಿ ನಯವಾದ ಪೌಡರ್‌ ತಯಾರಿಸಬೇಕು. ಹೆಚ್ಚು ಕಾಲ ಬಾಳಿಕೆ ಬರಲು ಹಾಗೂ ಪರಿಮಳಯುತವಾದ ಸ್ನಾನ ಚೂರ್ಣ ತಯಾರಿಸಲು ಈ ಕಾಳುಗಳನ್ನು ಸ್ವಲ್ಪ ತುಪ್ಪದಲ್ಲಿ ಹುರಿದು ಹುಡಿಮಾಡಿದರೂ ಉತ್ತಮ. ಅದೇ ರೀತಿ ಕಹಿಬೇವಿನ ಎಲೆ, ಗುಲಾಬಿದಳ, ತುಳಸೀ ಎಲೆ, ನಿಂಬೆ ಸಿಪ್ಪೆ- ಇವುಗಳನ್ನು ಚೆನ್ನಾಗಿ ಒಣಗಿಸಿ ತದನಂತರ ನಯವಾದ ಪೌಡರ್‌ ತಯಾರಿಸಬೇಕು. ಕೊನೆಯಲ್ಲಿ ದೊಡ್ಡ ಬೌಲ್‌ನಲ್ಲಿ ಈ ಎರಡೂ ಮಿಶ್ರಣಗಳನ್ನು , ಮುಲ್ತಾನಿ ಮಿಟ್ಟಿ , ಅರಸಿನ ಹುಡಿ ಹಾಗೂ ನೆಲ್ಲಿಕಾಯಿ ಪುಡಿಗಳನ್ನು ಹಾಕಿ, ಚೆನ್ನಾಗಿ ಮಿಶ್ರಮಾಡಿ ಗಾಳಿಯಾಡದ ಜಾಡಿಯಲ್ಲಿ ಸಂಗ್ರಹಿಸಬೇಕು.

ಸ್ನಾನಕ್ಕೆ ಮೊದಲು ಇದನ್ನು ನೀರಿನಲ್ಲಿ ಅಥವಾ ಹಾಲಿನಲ್ಲಿ ಬೆರೆಸಿ ಪೇಸ್ಟ್‌ ತಯಾರಿಸಿ ಮೈಗೆ ಲೇಪಿಸಬೇಕು. 5-10 ನಿಮಿಷಗಳ ಬಳಿಕ ಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡಬೇಕು. ಮೊಸರು, ಟೊಮ್ಯಾಟೋ ರಸ, ನಿಂಬೆರಸ ಅಥವಾ ಎಳೆ ಸೌತ್‌ಕಾಯಿ ರಸ ಬೆರೆಸಿ ಮುಖ, ಮೈ, ಕತ್ತುಗಳಿಗೆ ಲೇಪಿಸಿದರೆ ಚರ್ಮ ತಾಜಾ ಹಾಗೂ ಸ್ನಿಗ್ಧವಾಗಿ ಹೊಳೆಯುತ್ತದೆ. ನೈಸರ್ಗಿಕ ಸðಬ್‌ ಹಾಗೂ ಫೇಸ್‌ಪ್ಯಾಕ್‌ನಂತೆಯೂ ಪರಿಣಾಮಕಾರಿ. ಈ ಎರಡೂ ಸ್ನಾನಚೂರ್ಣಗಳು ತೈಲಾಭ್ಯಂಗದ ಬಳಿಕ ಉತ್ತಮ ಪರಿಣಾಮ ಬೀರುತ್ತವೆ.

ಉಬಟನ್‌
ದೀಪಾವಳಿಯ ಸಮಯದಲ್ಲಿ ಅಧಿಕವಾಗಿ ಬಳಸಲ್ಪಡುವ ಉತ್ತರ ಭಾರತೀಯ “ಉಬಟನ್‌’ ಸ್ನಾನಚೂರ್ಣಗಳು ಎಲ್ಲ ಕಾಲದಲ್ಲೂ ಬಳಸಲು ಯೋಗ್ಯವಾದ ಸುಲಭ ಸ್ನಾನಚೂರ್ಣಗಳಾಗಿವೆ.

ಬಿಳಿ ಎಳ್ಳು ಹಾಗೂ ಅರಸಿನ ಹುಡಿಯ ಸ್ನಾನಚೂರ್ಣ
ಸಾಮಗ್ರಿ:
6 ಚಮಚ ಬಿಳಿ ಎಳ್ಳು , 2 ಚಮಚ ಅರಸಿನ ಹುಡಿ.

ವಿಧಾನ: ಎರಡನ್ನೂ ಬೆರೆಸಿ ಮಿಕ್ಸರ್‌ನಲ್ಲಿ ಹಾಕಿ ಸ್ವಲ್ಪ ನೀರು ಬೆರೆಸಿ ನಯವಾದ ಪೇಸ್ಟ್‌ ತಯಾರಿಸಬೇಕು. ಇದನ್ನು ಸ್ನಾನಕ್ಕೆ ಮೊದಲು ಮೈಗೆ ಲೇಪಿಸಿ, 5 ನಿಮಿಷ ಬಿಟ್ಟು ಮಾಲೀಶು ಮಾಡಿ, ಬಿಸಿ ನೀರಿನಿಂದ ಸ್ನಾನ ಮಾಡಿದರೆ ಚರ್ಮ ತಾಜಾ ಹಾಗೂ ಕಾಂತಿಯುತವಾಗುತ್ತದೆ. 

ಚಂದನದ ಪೌಡರ್‌ ಅರಸಿನ ಹುಡಿ ಹಾಗೂ ಎಳ್ಳೆಣ್ಣೆಯ ಸ್ನಾನಚೂರ್ಣ
ಸಾಮಗ್ರಿ:
5 ಚಮಚ ಚಂದನ ಪುಡಿ, 3 ಚಮಚ ಅರಸಿನ ಹುಡಿ ಹಾಗೂ 3 ಚಮಚ ಎಳ್ಳೆಣ್ಣೆ.

ವಿಧಾನ: ಇವೆಲ್ಲವನ್ನೂ ಬೆರೆಸಿ ಪೇಸ್ಟ್‌ ತಯಾರಿಸಬೇಕು. ಸ್ವಲ್ಪ ನೀರಿನೊಂದಿಗೆ ಬೆರೆಸಿ ಮೈಗೆ ಲೇಪಿಸಿ 5-10 ನಿಮಿಷದ ಬಳಿಕ ಸ್ನಾನ ಮಾಡಬೇಕು.

ಚಂದನದ ಪೌಡರ್‌, ಅಕ್ಕಿಹಿಟ್ಟಿನ ಸ್ನಾನಚೂರ್ಣ
ಸಾಮಗ್ರಿ:
2 ಚಮಚ ಚಂದನದ ಪುಡಿ, 2 ಚಮಚ ಅಕ್ಕಿಹಿಟ್ಟು , 2 ಚಮಚ ಕಡಲೆಹಿಟ್ಟು , 1/2 ಚಮಚ ಅರಸಿನ ಹುಡಿ, 4 ಚಮಚ ಗುಲಾಬಿ ಜಲ, 2 ಚಮಚ ಎಳ್ಳೆಣ್ಣೆ .

ವಿಧಾನ: ಎಲ್ಲ ಪೌಡರ್‌ಗಳನ್ನು ಬೆರೆಸಿ ತದನಂತರ ಗುಲಾಬಿಜಲ, ಎಳ್ಳೆಣ್ಣೆ ಸೇರಿಸಿ ಪೇಸ್ಟ್‌ ತಯಾರಿಸಬೇಕು. ಇದನ್ನು ಲೇಪಿಸಿ 5 ನಿಮಿಷಗಳ ಬಳಿಕ ಬಸಿನೀರಿನಲ್ಲಿ ಸ್ನಾನ ಮಾಡಬೇಕು. ತೈಲಯುಕ್ತ ಚರ್ಮಕ್ಕೆ ಇದು ಉತ್ತಮ.

ಡಾ. ಅನುರಾಧಾ ಕಾಮತ್‌

Advertisement

Udayavani is now on Telegram. Click here to join our channel and stay updated with the latest news.

Next