Advertisement
ಸಂಪೂರ್ಣ ಮಲಿನ ಕಡಬ- ಪಂಜ ರಸ್ತೆ ನಡುವೆ ಹರಿಯುತ್ತಿರುವ ಕೂಟೇಲು ಸಾರು ಹೊಳೆಗೆಕೊಳೆತ ಮೊಟ್ಟೆ, ಮಾಂಸ, ತರಕಾರಿ, ಪ್ಲಾಸ್ಟಿಕ್ ತ್ಯಾಜ್ಯಗಳನ್ನು, ಸತ್ತ ಪ್ರಾಣಿಗಳನ್ನು ಹಾಗೂ ಇತರ ಕಸವನ್ನು ಪ್ಲಾಸ್ಟಿಕ್ ಚೀಲಗಳಲ್ಲಿ ತುಂಬಿಸಿ ತಂದು ಎಸೆಯುವ ಕೃತ್ಯಗಳು ನಿರಂತರ ವಾಗಿ ನಡೆಯುತ್ತಿವೆ. ಇದರಿಂದಾಗಿ ಈ ಪರಿಸರದಲ್ಲಿ ಹೊಳೆಯ ನೀರು ಸಂಪೂರ್ಣ ಮಲಿನಗೊಂಡಿದೆ.
ಇದೇ ನೀರು ಹರಿದು ಕುಮಾರಧಾರಾ ನದಿಯನ್ನು ಸೇರುತ್ತಿದೆ. ಕುಮಾರಧಾರಾ ನದಿಗೆ ಬೃಹತ್ ಗಾತ್ರದ ಜಾಕ್‌ವೆಲ್ ಅನ್ನು ನಿರ್ಮಿಸಿ, ತೊಟ್ಟಿಯಲ್ಲಿ ನೀರು ಸಂಗ್ರಹಿಸಿ ಪಂಜ ಗ್ರಾಮಸ್ಥರಿಗೆ ಕುಡಿಯಲು ಸರಬರಾಜು ಮಾಡಲಾಗುತ್ತಿದೆ. ಹೊಳೆಯಲ್ಲಿದ್ದ ತ್ಯಾಜ್ಯಗಳು ನೀರಿನೊಂದಿಗೆ ತೊಟ್ಟಿ ಯನ್ನು ಸೇರುತ್ತಿದ್ದು, ಅದು ನೇರವಾಗಿ ಪಂಜ ಗ್ರಾಮಸ್ಥರಿಗೆ ಪೂರೈಕೆಯಾಗುತ್ತದೆ. ಕೊಳವೆಯ ತುದಿಗೆ ಫಿಲ್ಟರ್‌ಗಳನ್ನು ಅಳವಡಿಸದ ಕಾರಣ ಈ ಸಮಸ್ಯೆಯಾಗುತ್ತಿದೆ. ಕಸ ಕಡ್ಡಿ, ತ್ಯಾಜ್ಯಗಳು ಹರಿಯುವುದನ್ನು ತಡೆಯುವ ಯಾವ ಸಾಧನಗಳನ್ನೂ ಇಲ್ಲಿ ಅಳವಡಿಸಿಲ್ಲ. ಕುಡಿಯುವ ನೀರು
ಹೊಳೆ ನೀರಿನಲ್ಲೇ ಹಲವರು ಸ್ನಾನ ಮಾಡುತ್ತಿದ್ದಾರೆ. ಕುಮಾರಧಾರಾ ನದಿ ತಟದ ಜನರು ಈ ನೀರನ್ನು ಕುಡಿಯಲು ಹಾಗೂ ಕೃಷಿಗೆ ಬಳಸುತ್ತಾರೆ. ತ್ಯಾಜ್ಯ ಎಸೆಯುವ ಹೊಳೆಯಲ್ಲಿ ನೀರಿನ ಹರಿವು ಗಣನೀಯವಾಗಿ ಕಡಿಮೆಯಾಗಿದ್ದು, ರೋಗ – ರುಜಿನ ಹಬ್ಬುವ ಆತಂಕ ಎದುರಾಗಿದೆ. ರಸ್ತೆ ಪಕ್ಕದಲ್ಲಿರುವ ಹೊಳೆ ಬದಿಯಲ್ಲಿ ಕೊಳೆತ ಹಸಿ ಮೀನುಗಳನ್ನು ತಂದು ಸುರಿಯುತ್ತಾರೆ. ಕಿಡಿಗೇಡಿಗಳು ರಾತ್ರಿ ವೇಳೆ ವಾಹನಗಳಲ್ಲಿ ತಂದು ಉಪಯೋಗಕ್ಕಿಲ್ಲದ ಹಸಿಮೀನು, ಕೋಳಿ ತ್ಯಾಜ್ಯಗಳನ್ನು ಇಲ್ಲಿ ಎಸೆದು ಹೋಗುತ್ತಿರುವುದು ನಿರಂತರವಾಗಿದೆ. ಈ ಪರಿಸರದಲ್ಲಿ ದುರ್ವಾಸನೆ ಹರಡಿದ್ದು, ಮೂಗು ಮುಚ್ಚಿಕೊಂಡೇ ಸಂಚರಿಸುವ ಸ್ಥಿತಿ ಉದ್ಭವಿಸಿದೆ.
Related Articles
ವಾರದಲ್ಲಿ ಒಂದೆರಡು ಸಲವಾದರೂ ಕೊಳೆತ ಮೀನು, ಮಾಂಸ ಎಸೆಯುತ್ತಿದ್ದಾರೆ. ಕಿಡಿಗೇಡಿಗಳ ಈ ಕೃತ್ಯದಿಂದಾಗಿ ಈ ಪರಿಸರದ ನೆಮ್ಮದಿಗೆ ಭಂಗವಾಗುತ್ತಿದೆ. ಅಲ್ಲದೆ ಇಲ್ಲಿಂದ ಕುಡಿಯುವ ನೀರು ಪೂರೈಸುವ ಪಂಜ ಗ್ರಾ.ಪಂ.ಗೆ ತಲೆ ನೋವಾಗಿದೆ. ತ್ಯಾಜ್ಯ ಎಸೆಯದಂತೆ ಎಷ್ಟೇ ತಿಳಿಹೇಳಿದರೂ ಪ್ರಯೋಜನವಾಗಿಲ್ಲ. ಈ ಸ್ಥಳದಲ್ಲಿ ಕಾಗದಪತ್ರಗಳು, ಮದುವೆ ಆಮಂತ್ರಣ ಇತ್ಯಾದಿಗಳನ್ನು ಎಸೆದಿರುವುದು ಕಂಡುಬಂದಿದ್ದು, ಈ ಆಧಾರದಲ್ಲಿ ತನಿಖೆ ಮಾಡಿ, ತ್ಯಾಜ್ಯ ಎಸೆಯುವವರನ್ನು ಪತ್ತೆ ಹಚ್ಚಬಹುದು ಎನ್ನುವುದು ಗ್ರಾಮಸ್ಥರ ಮಾತು.
Advertisement
ಕೂಟೇಲು ಸಾರು ಪರಿಸರದಲ್ಲಿ ತ್ಯಾಜ್ಯ ಎಸೆಯುವ ವಿಚಾರ ಗ್ರಾ.ಪಂ. ಗಮನದಲ್ಲೂ ಇದೆ. ಪಂಚಾಯತ್ ಕಡೆಯಿಂದ ಅನೇಕ ಸಲ ಎಚ್ಚರಿಕೆ ನೀಡಲಾಗಿದೆ. ದೂರು ಬಂದಾಗಲೆಲ್ಲ ಗ್ರಾ.ಪಂ. ವತಿಯಿಂದ ಸ್ವತ್ಛತೆ ಕೈಗೊಳ್ಳಲಾಗುತ್ತಿದೆ. ಆದರೆ ಶಾಶ್ವತ ಪರಿಹಾರ ಕಾಣುತ್ತಿಲ್ಲ. ತ್ಯಾಜ್ಯ ಎಸೆಯುವ ಸ್ಥಳದಲ್ಲಿ ಸಿ.ಸಿ. ಕೆಮರಾ ಅಳವಡಿಸಿದರೆ ಕಿಡಿಗೇಡಿಗಳನ್ನು ಪತ್ತೆ ಹಚ್ಚಲು ಅನುಕೂಲವಾದೀತು ಎನ್ನುವುದು ಸಾರ್ವಜನಿಕರ ಅಭಿಪ್ರಾಯ.
ಸ್ವಚ್ಛತೆಗೆ ಸವಾಲುಸ್ವಚ್ಛತೆಗೆ ಪಂಜ ಗ್ರಾ.ಪಂ. ಅಧ್ಯಕ್ಷ ಕಾರ್ಯಪ್ಪ ಚಿದ್ಗಲ್ಲು ಮೊದಲಿನಿಂದಲೂ ಆದ್ಯತೆ ನೀಡುತ್ತಿದ್ದಾರೆ. ಅನೇಕ ಬಾರಿ ಈ ಜಾಗದಲ್ಲಿ ಕಿಡಿಗೇಡಿಗಳು ತ್ಯಾಜ್ಯ ಎಸೆದಿರುವ ಮಾಹಿತಿ ಸಿಕ್ಕಿದೊಡನೆಯೇ ಸ್ವತ್ಛತೆಗೆ ಕ್ರಮ ಕೈಗೊಂಡಿದ್ದಾರೆ. ಕಿಡಿಗೇಡಿಗಳು ಮತ್ತೆ ಮತ್ತೆ ತ್ಯಾಜ್ಯ ಎಸೆಯುತ್ತಿರುವುದು ಸವಾಲಾಗಿದೆ. ಈ ಕುರಿತು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ಅಧ್ಯಕ್ಷ ಕಾರ್ಯಪ್ಪ ಚಿದ್ಗಲ್ಲು ತಿಳಿಸಿದ್ದಾರೆ. ಸಿಸಿ ಕೆಮರಾ ಅಳವಡಿಸಿ
ಹೊಳೆಗೆ ತ್ಯಾಜ್ಯ ಎಸೆದು ಮಲಿನಗೊಳಿಸುತ್ತಿರುವ ಕುರಿತು ಅನೇಕ ಬಾರಿ ಇಲ್ಲಿನ ಸ್ಥಳೀಯಾಡಳಿದ ಗಮನಕ್ಕೆ ತಂದಿದ್ದೇವೆ. ಅವರು ಸಕಾರಾತ್ಮಕವಾಗಿ ಸ್ಪಂದಿಸಿ ತ್ಯಾಜ್ಯಗಳನ್ನು ತೆರವುಗೊಳಿಸಿ ಶುಚಿಗೊಳಿಸಿದ್ದಾರೆ. ಇದು ತಾತ್ಕಾಲಿಕ ಪರಿಹಾರವಾಗಿದೆ. ಇದರ ಬದಲು ತ್ಯಾಜ್ಯ ಬಿಸಾಕುವ ಕಿಡಿಗೇಡಿಗಳ ಪತ್ತೆಗೆ ಅಗತ್ಯವಾದ ಕ್ರಮ ಕೈಗೊಳ್ಳಬೇಕಿದೆ. ಸಿ.ಸಿ. ಕೆಮರಾ ಅಳವಡಿಸಿದರೆ ಸೂಕ್ತ.
– ದಾಮೋದರ ನೇರಳ , ಸ್ಥಳೀಯರು ಕರೆದು ಎಚ್ಚರಿಕೆ ನೀಡಿದ್ದೇವೆ
ತ್ಯಾಜ್ಯ ಬಿಸಾಕಿದ ಸ್ಥಳದಲ್ಲಿ ಕೆಲವು ಕಾಗದ ಪತ್ರಗಳಿರುವ ದಾಖಲೆಗಳು ನಮಗೆ ದೊರಕಿದ್ದವು. ಅವುಗಳ ಆಧಾರದಲ್ಲಿ ತನಿಖೆ ನಡೆಸಿ, ಎಚ್ಚರಿಕೆ ನೀಡಿದ್ದೇವೆ. ಮುಂದಿನ ದಿನಗಳಲ್ಲಿ ತ್ಯಾಜ್ಯಗಳನ್ನು ಎಸೆಯದಂತೆ ನಾಮಫಲಕ ತೂಗು ಹಾಕುತ್ತೇವೆ. ಮತ್ತೆಯೂ ಮುಂದುವರಿದಲ್ಲಿ ಪರ್ಯಾಯ ಮಾರ್ಗ ಅನುಸರಿಸಿ ಪತ್ತೆ ಹಚ್ಚುತ್ತೇವೆ. ಸದ್ಯಕ್ಕೆ ತ್ಯಾಜ್ಯವಿದ್ದ ಜಾಗವನ್ನು ಶುಚಿಗೊಳಿಸಿದ್ದೇವೆ.
– ಪುರುಷೋತ್ತಮ ಮಣಿಯಾನಮನೆ , ಪಿಡಿಒ, ಪಂಜ ಗ್ರಾ.ಪಂ. ದಯಾನಂದ ಕಲ್ನಾರ್