Advertisement
ಕುವೈಟ್ ವಿಮಾನ ನಿಲ್ದಾಣದಲ್ಲಿ ಇಳಿದಾಗ ಅವರನ್ನು ತಪಾಸಣೆಗೆ ಒಳಪಡಿಸಿದ ಪೊಲೀಸರಿಗೆ ಮಾತ್ರೆಗಳಿರುವ ಪಾರ್ಸೆಲ್ ಸಿಕ್ಕಿತ್ತು. ವಿಚಾರಣೆ ವೇಳೆ ಪತಿ, ಇದನ್ನು ತನ್ನ ಸಹೋದ್ಯೋಗಿಯ ವಿನಂತಿಯಂತೆ ಕುವೈಟ್‌ನಲ್ಲಿರುವ ಮಹಿಳೆಗೆ ನೀಡಲು ತಂದಿರುವುದಾಗಿ ಹೇಳಿದ್ದರು. ಆದರೆ ಪೊಲೀಸರ ಮುಂದೆ ಅವರ ಸಹೋದ್ಯೋಗಿ ನಮಗೂ ಪಾರ್ಸೆಲ್‌ಗೂ ಸಂಬಂಧ ಇಲ್ಲ ಎಂದು ಹೇಳಿಕೆ ನೀಡಿ ನನ್ನ ಪತಿಗೆ ಮೋಸಮಾಡಿದ್ದಾರೆ ಎಂದು ಜ್ಯೋತಿ ಆರೋಪಿಸಿದ್ದಾರೆ. ನನ್ನ ಪತಿ ಯಾವುದೇ ತಪ್ಪು ಮಾಡದಿದ್ದರೂ ಮೂರು ತಿಂಗಳಿಂದ ಕುವೈಟ್ ಜೈಲಿನಲ್ಲಿದ್ದಾರೆ. ಈ ಬಗ್ಗೆ ಸಂಸದರಾದ ನಳಿನ್ ಕುಮಾರ್ ಕಟೀಲು, ಶೋಭಾ ಕರಂದ್ಲಾಜೆ ಅವರ ಮೂಲಕ ಸಚಿವೆ ಸುಷ್ಮಾ ಸ್ವರಾಜ್‌ರಿಗೆ ಮನವಿ ಕೊಡಲಾಗಿತ್ತು. ಆದರೆ ಯಾವುದೇ ಪ್ರಯೋಜನವಾಗಿಲ್ಲ ಎನ್ನುತ್ತಾರೆ ಜ್ಯೋತಿ.
ಕುವೈಟ್‌ನ ಜೈಲಿನಲ್ಲಿ ಬಂಧಿಯಾಗಿರುವ ಶಂಕರ್ ಪೂಜಾರಿ ಪ್ರಕರಣ ಸಂಬಂಧ ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಅವರು ಇತರ ಅಧಿಕಾರಿಗಳ ಸಮ್ಮುಖ ಜ್ಯೋತಿ ಅವರನ್ನು ಆ. 28ರಂದು ತಮ್ಮ ಕಚೇರಿಗೆ ಕರೆಸಿ ಪ್ರಕರಣದ ಮಾಹಿತಿ ಪಡೆದುಕೊಂಡು ಕಾನೂನು ಪ್ರಕ್ರಿಯೆಗಳ ಬಗ್ಗೆ ಚರ್ಚಿಸಿದರು. ಎಸ್ಪಿ ಲಕ್ಷ್ಮಣ ಬ. ನಿಂಬರಗಿ, ಕುಂದಾಪುರದ ಸಹಾಯಕ ಆಯುಕ್ತ ಭೂಬಾಲನ್, ಮಾನವ ಹಕ್ಕುಗಳ ಪ್ರತಿಷ್ಠಾನದ ಅಧ್ಯಕ್ಷ ಡಾ| ರವೀಂದ್ರನಾಥ್ ಶ್ಯಾನುಭಾಗ್, ಕರವೇ ಜಿಲ್ಲಾಧ್ಯಕ್ಷ ಅನ್ಸಾರ್ ಅಹ್ಮದ್ ಉಪಸ್ಥಿತರಿದ್ದರು. ಶಂಕರ ಪೂಜಾರಿ ಅವರ ಪತ್ನಿಯನ್ನು ಕರೆಸಿ ಪ್ರಕರಣದ ಬಗ್ಗೆ ಮಾಹಿತಿ ಪಡೆದುಕೊಳ್ಳಲಾಗಿದೆ. ಆದರೆ ಅವರನ್ನು ಬಂಧಿಸಿದ ಕಾರಣದ ಬಗ್ಗೆ ಸ್ಪಷ್ಟತೆಯಿಲ್ಲದ ಕಾರಣ ನಾವೇ ಕುವೈಟ್‌ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಯನ್ನು ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳಲಾಗುವುದು. ಅಲ್ಲಿನ ಮಾಹಿತಿಯಂತೆ ಮುಂದಿನ ಕ್ರಮ ಕೈಗೊಳ್ಳಲಾಗುವುದು.
– ಪ್ರಿಯಾಂಕಾ ಮೇರಿ ಫ್ರಾನ್ಸಿಸ್, ಉಡುಪಿ ಡಿಸಿ