Advertisement

ಬಸ್ರೂರು: ರೈತನಲ್ಲಿ ಲಾಭದ ನಿರೀಕ್ಷೆ

09:55 PM Mar 28, 2019 | Sriram |

ಬಸ್ರೂರು: ಬಸ್ರೂರು, ಬಳ್ಕೂರು, ಜಪ್ತಿ, ಕಂದಾವರ, ಕಂಡ್ಲೂರು ಮಂತಾದೆಡೆಗಳಲ್ಲಿ ಕಾತಿ ಬೆಳೆಯ ಅನಂತರದ ಸುಗ್ಗಿ ಬೆಳೆಯೀಗ ರೈತನ ಕೈಗೆ ಬಂದಿದೆ.

Advertisement

ಮುಂಗಾರು ಮಳೆಯನ್ನೆ ನಂಬಿ ಗದ್ದೆಗಿಳಿಯುವ ರೈತ ಕಾತಿ ಬೆಳೆಯನ್ನು ಮೂರೂವರೆ ತಿಂಗಳಿನಲ್ಲಿ ಮುಗಿಸಿದರೆ ಅನಂತರದ ಮೂರೂವರೆ ತಿಂಗಳಿನ ಸುಗ್ಗಿ ಬೆಳೆಯೀಗ ಗದ್ದೆಗಳಲ್ಲಿ ಕಟಾವಾಗುತ್ತಿದೆ.

ಸುಗ್ಗಿ ಬೆಳೆಗೆ ಗದ್ದೆ ಹದಮಾಡಿ ಭತ್ತದ ಬೀಜವನ್ನು ಬಿತ್ತಿದ ಮೇಲೆ ಬೆಳೆದ ಸಸಿಗಳನ್ನು ನಾಟಿಮಾಡುವ ಕ್ರಮವಿಲ್ಲ.. ಕೃತಕ ನೀರಾವರಿಯನ್ನೇ ಅವಲಂಬಿಸಿ ಸುಗ್ಗಿ ಬೆಳೆಯನ್ನು ಮಾಡಲಾಗುತ್ತದೆ. ಈ ಭಾಗದಲ್ಲಿ ಜಯ, ಜ್ಯೋತಿ, ಮುಕ್ತಿ ಮುಂತಾದ ತಳಿಗಳನ್ನು ಹೆಚ್ಚಾಗಿ ಬಿತ್ತಲಾಗುತ್ತದೆ.

ಬಳ್ಕೂರಿನಲ್ಲಿ 30 ಎಕರೆ , ಕಂದಾವರದಲ್ಲಿ 50 ಎಕರೆ, ಬಸ್ರೂರಿನಲ್ಲಿ 20 ಎಕರೆ ಮತ್ತು ಜಪ್ತಿ-ಕಂಡ್ಲೂರಿನಲ್ಲಿ ತಲಾ 20 ಎಕರೆ ಜಾಗದಲ್ಲಿ ಸುಗ್ಗಿ ಬೆಳೆಯನ್ನು ಬೆಳೆಯಲಾಗಿದೆ.
ಒಂದು ಎಕರೆ ಜಮೀನಿನಲ್ಲಿ ಹದಿನೈದರಿಂದ ಇಪ್ಪತ್ತು ಕ್ವಿಂಟಾಲ್‌ ಭತ್ತವನ್ನು ಮಿಲ್‌ಗೆ ಮಾರಾಟ ಮಾಡಿದರೆ ಒಂದು ಕ್ವಿಂಟಾಲ್‌ಗೆ 1,700 ರೂ. ಹಣ ದೊರೆಯುತ್ತದೆ. ಅದೇ ಬೆಳೆದ ಭತ್ತವನ್ನು ಅಕ್ಕಿ ಮಾಡುವುದಾದರೆ ಕ್ವಿಂಟಾಲ್‌ಗೆ 400 ರೂ. ಹಣ ಕೇಳುತ್ತಾರೆ. ಬೆಳೆದ ಭತ್ತವನ್ನು ಮಿಲ್‌ಗೆ ಹಾಕಿ ಬೇರೆ ಅಕ್ಕಿಯನ್ನು ಕೊಳ್ಳುವುದಾದರೆ 3,300 ರೂ. ರಿಂದ 3,400 ರೂ. ಹಣ ಕೇಳುತ್ತಾರೆ.

ಕೆಲವೆಡೆ ಸುಗ್ಗಿ ಬೆಳೆಯ ಕಟಾವನ್ನು ರೈತ ಮುಗಿಸಿದ್ದರೆ ಮತ್ತೆ ಕೆಲವರು ಕೆಲವೇ ದಿನಗಳಲ್ಲಿ ಮುಗಿಸಲಿದ್ದಾರೆ. ಇವೆಲ್ಲವನ್ನೂ ರೈತರು ಯಂತ್ರದ ಮೂಲಕವೇ ಮಾಡುತ್ತಿದ್ದು, ಮೆಷಿನ್‌ನವರು ಒಂದು ಗಂಟೆಗೆ ರೂ.2,000 ಬಾಡಿಗೆ ತೆಗೆದುಕೊಳ್ಳುತ್ತಾರೆ. ಎಲ್ಲ ಪ್ರಕ್ರಿಯೆ ಮುಗಿದ ಅನಂತರವಷ್ಟೆ ರೈತ ನಿಟ್ಟುಸಿರು ಬಿಟ್ಟು ಲಾಭದ ನಷ್ಟದ ಲೆಕ್ಕಾಚಾರ ಹಾಕುತ್ತಾನೆ. ಸುಗ್ಗಿ ಬೇಸಾಯ ಮಾಡದ ರೈತರು ಉದ್ದು, ಅವರೆ ಮತ್ತು ಗೆಣಸು ಮುಂತಾದ ಬೆಳೆಯನ್ನು ಬೆಳೆಯುತ್ತಾರೆ.

Advertisement

ಕಾದು ನೋಡಬೇಕಿದೆ
ನಾನು ಬಸ್ರೂರು ಸಹಕಾರಿ ಬ್ಯಾಂಕ್‌ನಲ್ಲಿ ರೂ.50,000 ಸಾಲ ಪಡೆದು ಸುಗ್ಗಿ ಬೆಳೆಗೆ ಕೈಹಾಕಿದ್ದೇನೆ. ಆರಂಭದಲ್ಲಿ ಬಾಡಿಗೆ ಟ್ರಾಕ್ಟರ್‌ನಿಂದ ಉಳುಮೆ ಮಾಡುವುದರಿಂದ ಹಿಡಿದು ಬಾಡಿಗೆ ಮೆಷಿನ್‌ನಿಂದ ಕಟಾವು ಮಾಡುವವರೆಗಿನ ಲೆಕ್ಕವನ್ನು ಪುಸ್ತಕದಲ್ಲಿ ಬರೆದಿಟ್ಟಿದ್ದೇನೆ. ಬೆಳೆದ ಬೆಳೆ ಯಾವ ಬೆಲೆಗೆ ಮಾರಾಟವಾಗುತ್ತದೆ ಎಂಬುದರ ಮೇಲೆ ಬ್ಯಾಂಕ್‌ನ ಸಾಲ ತೀರಿಸುವ ಜವಾಬ್ದಾರಿಯೂ ಒಳಗೊಂಡಿದೆ. ಲಾಭವೋ-ನಷ್ಟವೋ ಕಾದು ನೋಡಬೇಕಾಗಿದೆ.
-ರಾಮ ಪೂಜಾರಿ,
ಕೃಷಿಕ, ಬಳ್ಕೂರು ನಿವಾಸಿ

-  ದಯಾನಂದ ಬಳ್ಕೂರು

Advertisement

Udayavani is now on Telegram. Click here to join our channel and stay updated with the latest news.

Next