ಬಸ್ರೂರು: ಕುಂದಾಪುರ- ಬಸ್ರೂರು-ಕಂಡ್ಲೂರು ಮಾರ್ಗದಲ್ಲಿ ಕರ್ನಾಟಕ ರಾಜ್ಯ ಸಾರಿಗೆ ನಿಗಮದ ಬಸ್‌ಗಳಿಗಿಂತ ಖಾಸಗಿ ಬಸ್‌ಗಳದ್ದೇ ಹೆಚ್ಚು ಅಬ್ಬರವಾಗಿದೆ.
ಕೆ.ಎಸ್.ಆರ್.ಟಿ.ಸಿ. ಬಸ್ ಖಾಸಗಿ ಬಸ್‌ಗಿಂತ ತುಸು ಮುಂದಿದ್ದರೆ ಖಾಸಗಿ ಬಸ್ ಗಳನ್ನು ಅತಿ ವೇಗದಲ್ಲಿ ಚಲಾಯಿಸಿ ನಿಲ್ದಾಣದಲ್ಲಿ ತುಸು ಮುಂದೆ ಅಡ್ಡವಿರಿಸಿ ಪ್ರಯಾಣಿಕರನ್ನು ಹತ್ತಿಸಿಕೊಳ್ಳಲಾಗುತ್ತದೆ. ಇಂತಹ ಸಂದರ್ಭದಲ್ಲಿ ಪ್ರಯಾಣಿಕರ ಸುರಕ್ಷತೆಯ ಬಗ್ಗೆ ಯಾರೂ ಕಾಳಜಿ ವಹಿಸುವುದಿಲ್ಲ.
ಈ ಅವ್ಯವಸ್ಥೆಯಿಂದಾಗಿ ಮಹಿಳೆಯರು ಮಕ್ಕಳು ಹೆಚ್ಚಿನ ತೊಂದರೆಗೆ ಒಳಗಾಗುತ್ತಿದ್ದು, ಈ ಬಗ್ಗೆ ಪ್ರಯಾಣಿಕರು ದೂರಿಕೊಂಡಿದ್ದಾರೆ. ಕೆ.ಎಸ್.ಆರ್.ಟಿ.ಸಿ. ಬಸ್ ಹಾಗೂ ಈ ಮಾರ್ಗದಲ್ಲಿ ಸಂಚರಿಸುವ ಖಾಸಗಿ ಬಸ್‌ಗಳು ಸಮಯ ಪಾಲನೆ ಮಾಡುತ್ತಿಲ್ಲವಾಗಿದ್ದು, ಸಾರ್ವಜನಿಕರು ಪರದಾಡುವ ಸ್ಥಿತಿ ಇದೆ.
ಈ ಮಾರ್ಗದಲ್ಲಿ ಸಂಚರಿಸುವ ಖಾಸಗಿ ಬಸ್‌ಗಳು ಬಸ್ರೂರು-ಕಂಡ್ಲೂರಿನಲ್ಲಿ ನಿಲ್ಲುವುದಿಲ್ಲ. ಆದರೆ ಮುಖ್ಯವಾಗಿ ಕುಂದಾಪುರ – ಬಸ್ರೂರು – ಕಂಡ್ಲೂರು – ಸಿದ್ಧಾಪುರ ಮಾರ್ಗವಾಗಿ ಸಾಗುವ ಬಸ್‌ಗಳು ಅನಿಯಮಿತವಾಗಿ ಸಂಚಾರ ನಡೆಸುತ್ತಿದ್ದು ಇದು ಪ್ರಯಾಣಿಕರಿಗೆ ಅಪಾಯದ ಮುನ್ಸೂಚನೆಯಾಗಿದೆ.
ಸಂಬಂಧಪಟ್ಟ ಇಲಾಖೆಯವರು ತತ್‌ಕ್ಷಣ ಕ್ರಮ ಜರಗಿಸಬೇಕೆಂದು ಪ್ರಯಾಣಿಕರು ದೂರಿದ್ದಾರೆ.