Advertisement

ಭತ್ತ ಉಳಿಸಲು ಬಸಿ ನೀರೇ ಗತಿ

06:53 AM Feb 25, 2019 | Team Udayavani |

ಸಿರುಗುಪ್ಪ: ತಾಲೂಕಿನಲ್ಲಿ ಹರಿಯುವ ವೇದಾವತಿ ಹಗರಿ ನದಿ ಬತ್ತಿ ಹೋಗಿರುವುದರಿಂದ ನದಿ ಪಾತ್ರದ ಲ್ಲಿ ಬಾಡಿ ಹೋಗುತ್ತಿರುವ ಭತ್ತದ ಬೆಳೆ ಉಳಿಸಿಕೊಳ್ಳಲು ರೈತರು ಹರಸಾಹಸ ಪಡುತ್ತಿದ್ದಾರೆ.

Advertisement

ಭತ್ತ ಬೆಳೆದ ರೈತರು ನದಿಯಲ್ಲಿ ಸಣ್ಣ ಸಣ್ಣ ಬಸಿ ನೀರಿನ ಒಡ್ಡು ಮತ್ತು ಕಾಲುವೆ ನಿರ್ಮಿಸಿಕೊಳ್ಳುವ ಮೂಲಕ ಗದ್ದೆಗಳಿಗೆ ನೀರೆತ್ತಿ ಬೆಳೆ ಉಳಿಸಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ. ತಾಲೂಕಿನ ಬಲಕುಂದಿ, ಮುದೇನೂರು, ಬಗ್ಗೂರು, ಕೆ.ಸೂಗೂರು, ಚಾಣಕನೂರು, ಕರ್ಚಿಗನೂರು, ರಾರಾವಿ,
ಬಂಡ್ರಾಳು, ಕುರುವಳ್ಳಿ, ನಾಗಲಾಪುರ, ಕುಡುದರಹಾಳು, ಹೊನ್ನಾರಹಳ್ಳಿ, ಶ್ರೀಧರಗಡ್ಡೆ, ಚಿಕ್ಕಬಳ್ಳಾರಿ, 25-ಹಳೇಕೋಟೆ, ನಂದಿಪುರ ಕ್ಯಾಂಪ್‌ ಗ್ರಾಮಗಳ ವ್ಯಾಪ್ತಿಯಲ್ಲಿ ಬರುವ ನೂರಾರು ರೈತರು ಹೇಗಾದರೂ ಸರಿ ಭತ್ತ ಉಳಿಸಿಕೊಳ್ಳುವ ಉದ್ದೇಶದಿಂದ ವೇದಾವತಿ ಹಗರಿ ನದಿಯಲ್ಲಿಯೇ ಸಣ್ಣ ಸಣ್ಣ ಒಡ್ಡು ಹಾಗೂ ಕಾಲುವೆ ನಿರ್ಮಿಸಿಕೊಂಡು, ಒಡ್ಡುಗಳಲ್ಲಿ ಶೇಖರಣೆಯಾಗುವ ಬಸಿನೀರನ್ನು ಮೋಟಾರ್‌ ಮೂಲಕ ನೀರೆತ್ತಿ ಗದ್ದೆಗಳಿಗೆ ಹರಿಸಿಕೊಳ್ಳುತ್ತಿದ್ದಾರೆ.
 
ಈ ಭಾಗದ ರೈತರು ಕಳೆದ ಹಲವಾರು ವರ್ಷಗಳಿಂದ ಮುಖ್ಯಬೆಳೆಯಾಗಿ ಭತ್ತ ಬೆಳೆಯುತ್ತಿದ್ದಾರೆ. ಆದರೆ ಈ ವರ್ಷ ವೇದಾವತಿ, ಹಗರಿ ನದಿಯಲ್ಲಿ ಡಿಸೆಂಬರ್‌ ತಿಂಗಳಲ್ಲಿ ನೀರು ಹರಿಯುತ್ತಿದ್ದರಿಂದ ರೈತರು ಭತ್ತ ನಾಟಿ ಮಾಡಿದ್ದರು. ಆದರೆ ಜನವರಿ ಕೊನೆ ವಾರದಲ್ಲಿ ನದಿಯಲ್ಲಿ ನೀರಿನ ಹರಿವು ಕಡಿಮೆಯಾಗಿದ್ದು, ಹೇಗಾದರೂ ಫೆಬ್ರವರಿ ಕೊನೆಯವರೆಗೆ ಭತ್ತ ಉಳಿಸಿಕೊಂಡರೆ ಮಾರ್ಚ್‌ನಲ್ಲಿ ತುಂಗಭದ್ರಾ ಜಲಾಶಯದಿಂದ ನದಿಗೆ ಕುಡಿಯಲು ನೀರು ಹರಿಸುತ್ತಾರೆ ಎಂಬ ನಂಬಿಕೆಯಿಂದ ಭತ್ತ ಬೆಳೆದ ರೈತರಿಗೆ ನೀರಿನ ಕೊರತೆ ಶಾಕ್‌ ನೀಡಿದೆ. ಆದರೂ ಭತ್ತ ಬೆಳೆದ ರೈತರು ಬೆಳೆ ಉಳಿಸಿಕೊಳ್ಳಲು ಮೊದಲು ಬಸಿ ನೀರಿನ ಕಾಲುವೆ ತೆಗೆದು ಬೆಳೆಗೆ ನೀರು ಹರಿಸಲು ಮುಂದಾಗಿದ್ದಾರೆ.

ಈ ಭಾಗದಲ್ಲಿ ಸುಮಾರು 700ರಿಂದ 800ಎಕರೆ ಪ್ರದೇಶದಲ್ಲಿ ಭತ್ತ ಬೆಳೆಯಲಾಗಿದ್ದು, 2 ಬಾರಿ ರಸಗೊಬ್ಬರ ಹಾಕಿ ಕಳೆ ಕಿತ್ತು ಗದ್ದೆ ಹಸನು ಮಾಡಿದ್ದಾರೆ. ಆದರೆ ನದಿಯಲ್ಲಿ ನೀರು ಬತ್ತಿರುವುದರಿಂದ ಹೇಗಾದರೂ ಮಾಡಿ ಬೆಳೆ ಉಳಿಸಿಕೊಳ್ಳಲು ನದಿಯಲ್ಲಿ ರೈತರು ತಮ್ಮ ಜಮೀನಿಗೆ ಅನುಗುಣವಾಗಿ ಒಡ್ಡುಗಳನ್ನು ತೆಗೆದಿದ್ದಾರೆ. ಒಡ್ಡುಗಳ ಹತ್ತಿರ ಡೀಸೆಲ್‌ ಮತ್ತು ವಿದ್ಯುತ್‌ ಮೋಟಾರ್‌ ಅಳವಡಿಸಿಕೊಂಡಿದ್ದು, ಇದರಿಂದ ನೀರೆತ್ತಿ ಗದ್ದೆಗಳಿಗೆ ಹರಿಸಿಕೊಳ್ಳುತ್ತಿದ್ದಾರೆ.

ಜಮೀನುಗಳಿಗನುಗುಣವಾಗಿ ನೀರು ಹರಿಸಲು ತೆಗೆದಿರುವ ಒಡ್ಡುಗಳಲ್ಲಿ ತುಂಬುವ ನೀರು ಒಂದರಿಂದ 2 ಎಕರೆಗೆ ಹರಿಸಬಹುದು. ಹೆಚ್ಚು ಜಮೀನು ಇರುವ ರೈತರು ಆಳ ಮತ್ತು ಉದ್ದದ ಒಡ್ಡು ನಿರ್ಮಿಸಿಕೊಂಡರೆ ಸಣ್ಣ ರೈತರು ತಮ್ಮ ಜಮೀನಿಗೆ ನೀರು ಹರಿಸಲು ಬೇಕಾಗುವಷ್ಟು ಆಳ ಮತ್ತು ಉದ್ದದ ಒಡ್ಡನ್ನು ನಿರ್ಮಿಸಿಕೊಂಡು ಒಣಗುತ್ತಿರುವ ಭತ್ತದ ಗದ್ದೆ ಉಳಿಸಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ.

ಭತ್ತದ ಬೆಳೆ ಉಳಿಸಿಕೊಳ್ಳಲು ನದಿಯಲ್ಲಿ ಒಡ್ಡು ನಿರ್ಮಿಸಿಕೊಂಡು ಗದ್ದೆಗೆ ನೀರು ಹರಿಸುವ ಪ್ರಯತ್ನ ಮಾಡುತ್ತಿದ್ದೇವೆ. ನದಿಯಲ್ಲಿ ಒಡ್ಡು ನಿರ್ಮಿಸಿಕೊಳ್ಳಲು ನದಿ ಪಾತ್ರದ ಹಳ್ಳಿಗಳ ರೈತರು 20ಲಕ್ಷಕ್ಕೂ ಹೆಚ್ಚು ಹಣ ಖರ್ಚು ಮಾಡಿದ್ದಾರೆ.
 ನರಸಪ್ಪ, ಶ್ರೀಧರಗಡ್ಡೆ ಗ್ರಾಮದ ರೈತ.

Advertisement
Advertisement

Udayavani is now on Telegram. Click here to join our channel and stay updated with the latest news.

Next