ತಿಪಟೂರು: ಆಯುಧ ಪೂಜೆ, ವಿಜಯದಶಮಿ ಹಬ್ಬದ ಆಚರಣೆಗೆ ತಾಲೂಕಿನ ಜನತೆ ಕೊರೊನಾದ ನಡುವೆಯೂ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ನಗರದಲ್ಲಿ ಕಳೆದ ಎರಡು ದಿನಗಳಿಂದ ಎಲ್ಲಿ ನೋಡಿದರು ಜನವೋ ಜನ. ಕೊರೊನಾವನ್ನು ಲೆಕ್ಕಿಸದೆ ಜನರು ಓಡಾಡುತ್ತಿದ್ದಾರೆ. ಸರ್ಕಾರದ ನಿಯಮಾವಳಿಯನ್ನು ಯಾರು ಪಾಲಿಸುತ್ತಿಲ್ಲ. ಇತ್ತ ಎಚ್ಚರಿಕೆ ನೀಡಬೇಕಿದ್ದ ನಗರಸಭೆ ಮತ್ತು ಪೊಲೀಸ್ ಇಲಾಖೆ ಕೈಚೆಲ್ಲಿ ಕೂತಿದ್ದು, ಕೊರೊನಾಗೆ ಜನರು ಡೋಂಟ್ ಕೇರ್ ಎನ್ನುತ್ತಿದ್ದಾರೆ.
ಆಯುಧ ಪೂಜೆ ಪ್ರಯುಕ್ತ ನಗರದ ಬಿ.ಎಚ್.ರಸ್ತೆ ಸೇರಿದಂತೆ ದೊಡ್ಡಪೇಟೆ, ರೈಲ್ವೆ ಸ್ಟೇಷನ್ ರಸ್ತೆ, ಮಾರುಕಟ್ಟೆಗಳ ಕೆಲ ಮುಖ್ಯರಸ್ತೆಗಳು ಜನಜಂಗುಳಿಯಿಂದ ತುಂಬಿವೆ. ಮನೆ, ಅಂಗಡಿ, ಕಚೇರಿ, ವಾಹನಗಳಿಗೆ ಪೂಜೆ ಸಲ್ಲಿಸಲು ಹಣ್ಣು ಹೂವು, ಬಾಳೆಕಂದು, ಮಾವಿನ ಸೊಪ್ಪು, ನಿಂಬೆಹಣ್ಣು ಮತ್ತು ಬೂದ ಕುಂಬಳ ಕಾಯಿಗಳನ್ನು ಖರೀದಿಸಲು ಜನ ಮುಗಿಬಿದ್ದಿದ್ದಾರೆ.
ಬಾಳೆಹಣ್ಣು ಕೆಜಿಗೆ ರೂ 80, ಬಾಳೆಕಂದು ಜೊತೆ 40, ಬೂದಕುಂಬಗಳ ಒಂದಕ್ಕೆ 30-50, ಒಂದು ಮಾರು ಹೂವಿಗೆ 50-150ರೂಗೆ ಮಾರಾಟವಾಗುತ್ತಿತ್ತು. ಇನ್ನು ವಾಹನ ಮಾಲೀಕರು ಗ್ಯಾರೇಜು, ಆಟೋ ಮೊಬೈಲ್ಸ್ ಮತ್ತು ವಾಟರ್ ಸರ್ವಿಸ್ ಸೆಂಟರ್ ಗಳಲ್ಲಿ ವಾಹನಗಳನ್ನು ಸರ್ವೀಸ್ ಮಾಡಿಸುವಲ್ಲಿ ನಿರತರಾಗಿದ್ದರು. ನಗರದ ಸರ್ಕಾರಿ ಹಾಗೂ ಖಾಸಗಿಯ ಸಾಕಷ್ಟು ಕಚೇರಿಗಳಲ್ಲಿ ಬುಧವಾರವೇ ಆಯುಧಪೂಜೆ ಹಮ್ಮಿಕೊಂಡಿದ್ದರಿಂದ ಕೆಲ ಕಚೇರಿಗಳಲ್ಲಿ ಅಧಿಕಾರಿಗಳು ಪೂಜೆಯಲ್ಲೇ ನಿರತರಾಗಿ ಅತಿಥಿಗಳನ್ನು ಸ್ವಾಗತಿಸಿ ಕಳುಹಿಸುತ್ತಿದ್ದ ದೃಶ್ಯಗಳು ಕಂಡುಬಂದವು.
ಇದನ್ನೂ ಓದಿ;- ಅಕ್ರಮ ಅಕ್ಕಿ ಸಾಗಾಣಿಕೆ: ಪೊಲೀಸರ ದಾಳಿ
ಕೊರೊನಾ ಮರೆತ ಜನತೆ: ನಗರದ ಹೆಚ್ಚು ವ್ಯಾಪಾರ ವಹಿವಾಟು ನಡೆಯುವ ದೊಡ್ಡಪೇಟೆ ಸೇರಿದಂತೆ ಮುಖ್ಯ ಸ್ಥಳಗಳು ಜನಜಂಗುಳಿ ಯಿಂದ ಕೂಡಿದ್ದು, ಸಾಮಾಜಿಕ ಅಂತರ ಮಾಯವಾಗಿತ್ತು. ಬೆರೆಳೆಣಿಕೆಯಷ್ಟು ಜನರು ಮಾತ್ರ ಮಾಸ್ಕ್ ಧರಿಸಿದ್ದು ಬಿಟ್ಟರೆ ಕೊರೊನಾ ಇಲ್ಲವೇನೋ ಎಂಬಂತೆ ಜನರು ಗುಂಪು- ಗುಂಪಾಗಿ ಓಡಾಡುತ್ತಿದ್ದರು. ಹೂ, ಹಣ್ಣು ಕೊಂಡುಕೊಳ್ಳಲು, ಬಟ್ಟೆ ಅಂಗಡಿಗ ಳಲ್ಲಿ ಜನವೋ ಜನ.
ಕೊರೊನಾವನ್ನು ಮೈ ಮರೆತು ಹಬ್ಬದ ಸಡಗರದಲ್ಲಿ ಜನತೆ ಭಾಗಿಯಾಗಿದ್ದಾರೆ. ಇದೇ ರೀತಿ ಜನರು ಕೊರೊನಾವನ್ನು ನಿರ್ಲಕ್ಷ್ಯಸಿದರೆ ಅಪಾಯ ಕಟ್ಟಿಟ್ಟ ಬುತ್ತಿ. ಒಟ್ಟಾರೆ ಕೊರೊನಾ ಇದ್ದರೂ, ವಸ್ತುಗಳ ಬೆಲೆ ಎಷ್ಟೇ ದುಬಾರಿಯಾದರೂ ಗ್ರಾಹಕರು ಅಂಗಡಿಗಳ ಮುಂದೆ ಸಾಲುಗಟ್ಟಿದ್ದು ಕಂಡುಬಂತು. ಎಲ್ಲಿಯೂ ಸಹ ಸಾಮಾಜಿಕ ಅಂತರ, ಕಡ್ಡಾಯವಾಗಿ ಮಾಸ್ಕ್ ಧರಿಸುವವರು ಇಲ್ಲವಾಗಿದ್ದು, ಕೊರೊನಾವನ್ನು ಸ್ವಾಗತಿಸುವಂತಿತ್ತು.