Advertisement
ಕುಮಟಾ: ಪುರಾಣ ಪ್ರಸಿದ್ಧ ಹಾಗೂ ನೈಸರ್ಗಿಕವಾಗಿ ರಾಜ್ಯದಲ್ಲಿ ಗುರುತಿಸುಕೊಳ್ಳುವಂತಹ ತಾಲೂಕಿನ ಅನೇಕ ಪ್ರದೇಶಗಳು ಪ್ರವಾಸೋದ್ಯಮ ಇಲಾಖೆ ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಎಲೆಮರೆ ಕಾಯಾಗಿ, ಸಮರ್ಪಕ ಮೂಲ ಸೌಲಭ್ಯಗಳಿಲ್ಲದೇ ಬಡವಾಗುತ್ತಿದೆ.
Related Articles
Advertisement
15ನೇ ಶತಮಾನದ ಸರ್ಪಮಲ್ಲಿಕನ ಐತಿಹಾಸಿಕ ಮಿರ್ಜಾನ ಕೋಟೆ, 10ನೇ ಶತಮಾನದ ಕದಂಬ ವಂಶದ ಚಂದಾವರ ಕೋಟೆ ಪ್ರದೇಶ, 8ನೇ ಶತಮಾನದ ಮೇದನಿ ಕೋಟೆ, 9ನೇ ಶತಮಾನದ ಅಘನಾಶನಿ ಕೋಟೆಗಳಿವೆ, ತದಡಿ, ವನ್ನಳ್ಳಿ, ಹೆಡ್‌ಬಂದರ್‌ನಲ್ಲಿ ಮೀನುಗಾರಿಕಾ ಬಂದರುಗಳಿವೆ. ಐಗಳಕುರ್ವೇಯಂತಹ ಜನವಸತಿ ಇರುವ ರಮಣೀಯ ದ್ವೀಪ ಪ್ರದೇಶವಿದೆ.
ಸಂಪೂರ್ಣ ದಟ್ಟಾರಣ್ಯ ಪ್ರದೇಶದಿಂದಲೇ ಆವೃತವಾಗಿರುವ ಬ್ರಹ್ಮೂರು, ನಾಗೂರು, ಸಂಡಳ್ಳಿ, ಬಡಾಳ, ಸಂತೆಗುಳಿಯಂತ ಮುಂಜಾನೆ ಅವಧಿಯಲ್ಲಿ ಸದಾ ಮಂಜಿನಿಂದ ಆವೃತವಾಗಿರುವ ಸ್ಥಳವಿದೆ. ತಾರಿದೋಣಿಯನ್ನೇ ಅವಲಂಬಿಸಿರುವ ಮೋರ್ಸೆ, ಹೆಗಡೆ-ಮಿರ್ಜಾನ ತಾರಿಬಾಗಿಲು, ಅಘನಾಶಿನಿ-ತದಡಿ ಸಂಪರ್ಕದ ತಾರಿದೋಣಿ ವ್ಯವಸ್ಥೆ ಇರುವ ಪ್ರದೇಶಗಳಿವೆ. ಅಘನಾಶನಿ ಕಿರಬೇಲೆಯ ಆಶ್ಚರ್ಯ ಹುಟ್ಟಿಸುವ ಗುಹೆ, ಯಾಣದ ಗುಹೆಗಳು, ಕಪ್ಪು ಶಿಲಾವೃತ ಬಂಡೆಗಳು, ಜೀವವೈವಿದ್ಯ, ಔಷಧ ಸಸ್ಯಗಳ ಕುರಿತು ಸಂಶೋಧನೆ, ಅಧ್ಯಯನ ಮಾಡುವಂತಹ ವಿದೇಶದವರನ್ನು ಆಕರ್ಷಿಸುವ ದೇವಿಮನೆಯಲ್ಲಿ ಕತ್ತಲೆ ಕಾಡಿನ ಪ್ರದೇಶವಿದೆ.
ಜಗತ್ತಿನಲ್ಲಿ ಎಲ್ಲಿಯೂ ಇಲ್ಲದ ಅನೇಕ ಕಪ್ಪೆಯ ಪ್ರಭೆದ, ಜೀವ-ಜಂತುಗಳು ತಾಲೂಕಿನ ದೇವಿಮನೆ ಹಾಗೂ ಬಡಾಳದ ಕಾನಿನಲ್ಲಿ ನೋಡಲು ಸಾಧ್ಯ. ಬೆಳಚು, ಅಡ್ಡ ಬೆಳಚು, ಕಲ್ಗ್, ಕೆಂಪುಕಲ್ಗ, ಸಣ್ಣ ಬೆಳಚು ಇತ್ಯಾದಿ ದೇಹಕ್ಕೆ ಕ್ಯಾಲ್ಸಿಯಂ ಒದಗಿಸುವ 49 ಜಾತಿಯ ಬೆಳಚುಗಳು ತದಡಿ ಪ್ರದೇಶದಲ್ಲಿದೆ.
ಮೂರೂರು, ಕಲ್ಲಬ್ಬೆ, ಬೊಗರಿಬೈಲ್, ತದಡಿ ಹಿನ್ನೀರಿನ ಪ್ರದೇಶ, ಮಾಸೂರು, ಲುಕ್ಕೇರಿಯಲ್ಲಿ ನೂರಾರು ಜಾತಿಯ ಪಕ್ಷಿ ನೋಡಲು ಸಾಧ್ಯ. ಅಕ್ಟೋಬರ್‌ದಿಂದ ಎಪ್ರಿಲ್ ತನಕ ವಲಸೆ ಬರುವ ವಿದೇಶಿ ಪಕ್ಷಿಗಳಿಂದ ಇಲ್ಲಿನ ಪ್ರದೇಶಗಳು ಪಕ್ಷಿಧಾಮದಂತೆ ಗೋಚರಿಸುತ್ತದೆ. ಈ ರೀತಿ ಕುಮಟಾ ತಾಲೂಕು ಪ್ರವಾಸೋದ್ಯಮ ದೃಷ್ಟಿಯಿಂದ ಒಂದು ಉಪಖಂಡ ಎನಿಸಿಕೊಂಡಿದೆ.
ವಿಶೇಷ ಯೋಜನೆ ರೂಪಿಸಲಿಪ್ರವಾಸೋದ್ಯಮ ಇಲಾಖೆಯು ಈ ಎಲ್ಲ ಸ್ಥಳದ ಬಗ್ಗೆ ಸರಿಯಾದ ಮಾಹಿತಿ ನೀಡಿದಲ್ಲಿ ಪ್ರವಾಸೋದ್ಯಮದ ಅಭಿವೃದ್ಧಿ ಸಾಧ್ಯ. ಆದರೆ ಅಧಿ ಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ಇಲ್ಲಿನ ಪ್ರವಾಸೋದ್ಯಮ ಅಭಿವೃದ್ಧಿಗಾಗಿ ವಿಶೇಷ ಗಮನ ಹರಿಸದೇ ಇರುವುದು ವಿಷಾದನೀಯ. ಈ ಕುರಿತು ಸಮಗ್ರ ಅಧ್ಯಯನ ನಡೆಸಿ ಇಂತಹ ಪ್ರದೇಶಗಳ ಅಭಿವೃದ್ಧಿ ಕುರಿತು ವಿಶೇಷ ಯೋಜನೆ ರೂಪಿಸಬೇಕು ಎಂಬುದು ಹಲವರ ಅಭಿಪ್ರಾಯ. ಕೆ. ದಿನೇಶ ಗಾಂವ್ಕರ