ಕೊರಟಗೆರೆ: ತಾಲೂಕಿನ ಕಸಬಾ ಹೋಬಳಿಯ ಹುಲಿಕುಂಟೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರುವ ಸರ್ವೇ ನಂಬರ್ 31ರಲ್ಲಿ ಅಲೆಮಾರಿ ಜನಾಂಗದವರಿಗೆ ಮೂಲಭೂತ ಸೌಕರ್ಯ ಒದಗಿಸಲು ಮುಂದಾದ ಕೊರಟಗೆರೆ ತಾಲೂಕು ಆಡಳಿತ ವರ್ಗ ಯಶಸ್ವಿಯಾಗಿದೆ.
ಹುಲಿಕುಂಟೆ ಗ್ರಾ.ಪಂ. ವ್ಯಾಪ್ತಿಯ ಸರ್ವೇ ನಂಬರ್ 31 ರಲ್ಲಿ ಅಲೆಮಾರಿ ಜನಾಂಗಕ್ಕಾಗಿ 1 ಎಕರೆ ಜಮೀನು ಮೀಸಲಾಗಿರಿಸಿ ಅಲ್ಲಿನ ಜನಾಂಗದವರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಲು ತಾಲೂಕು ಆಡಳಿತ ವರ್ಗದ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.
ಜಿಲ್ಲಾ ಪಂಚಾಯತ್ ಮಧುಗಿರಿ ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ರವಿಕುಮಾರ್ ಮಾತನಾಡಿ, ಅಲೆಮಾರಿ ಜನಾಂಗದವರಿಗೆ ನಿವೇಶನ ವಿಂಗಡಣೆ ಮಾಡಲು ಜಿಲ್ಲಾಧಿಕಾರಿಗಳ ಆದೇಶವಾಗಿದ್ದು, ಅದರಂತೆ ತಹಶೀಲ್ದಾರ್, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಸೇರಿ ನಿವೇಶನದ ಸರ್ವೇ ಮಾಡಿಸಿದ್ದು, ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ನಿವೇಶನ ವಿಂಗಡನೆ ಮಾಡಲು ಹಾಗೂ ರಸ್ತೆ ಅಭಿವೃದ್ಧಿ ಮಾಡುವುದಕ್ಕಾಗಿ ಅನುದಾನವನ್ನು ಬಿಡುಗಡೆ ಮಾಡಿದ್ದಾರೆ. ಮೇಲಾಧಿಕಾರಿಗಳ ಜೊತೆ ಚರ್ಚಿಸಿ ಶಾಸಕರ ಸೂಚನೆಯಂತೆ ರಸ್ತೆಯನ್ನು ಶೇಕಡ 70 ರಷ್ಟು ಕಾಮಗಾರಿಯನ್ನು ಮುಗಿಸಲಾಗಿದೆ. ಆದಷ್ಟು ಬೇಗ ಇಲ್ಲಿನ ಜನರಿಗೆ ನಿವೇಶನ ಹಂಚಿಕೆ ಮಾಡಿಕೊಡಲಾಗುವುದು ಎಂದು ತಿಳಿಸಿದರು.
ಹುಲಿಕುಂಟೆ ಗ್ರಾಪಂ ಅಭಿವೃದ್ಧಿ ಅಧಿಕಾರಿ ಪೃತ್ವಿಭಾ ಮಾತನಾಡಿ, ಇಲ್ಲಿನ ಜನರಿಗೆ ಮೂಲಭೂತ ಸೌಕರ್ಯಗಳು ಇಲ್ಲದೇ ಇರುವ ಕಾರಣದಿಂದ ಪಿಆರ್ ಇಡಿ ಇಂಜಿನಿಯರ್ ಹಾಗೂ ತಹಶೀಲ್ದಾರ್ ಸಹಭಾಗಿತ್ವದಿಂದ ಕಾರ್ಯನಿರ್ವಾಹಕ ಅಧಿಕಾರಿಗಳ ಸೂಚನೆಯಂತೆ ರಸ್ತೆ ಕಾಮಗಾರಿ ನಡೆಯುತ್ತಿದೆ ಹಾಗೂ ಬೆಳಕಿನ ವ್ಯವಸ್ಥೆ ಇಲ್ಲದಿರುವ ಕಾರಣದಿಂದ, ಗ್ರಾಮ ಪಂಚಾಯತ್ ವತಿಯಿಂದ ಬೆಳಕಿನ ಹಾಗೂ ನೀರಿನ ವ್ಯವಸ್ಥೆಯನ್ನು ಒದಗಿಸಿದ್ದೇವೆ. ಅದೇ ರೀತಿ ಶಾಶ್ವತವಾಗಿ ನೀರಿನ ವ್ಯವಸ್ಥೆ ಮಾಡಿಕೊಡಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷ ಮಲ್ಲಣ್ಣ, ಕಾರ್ಯಪಾಲಕ ಎಂಜಿನಿಯರ್ ರವಿಕುಮಾರ್,ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು, ಹುಲಿಕುಂಟೆ ಗ್ರಾಪಂ ಉಪಾಧ್ಯಕ್ಷ ಹಾಗೂ ಸದಸ್ಯರು ಹಾಜರಿದ್ದರು.