ನರಗುಂದ: ಜನವಸತಿ ಪ್ರದೇಶಕ್ಕೆ ಶುದ್ಧ ಕುಡಿವ ನೀರು, ಸಂಚಾರಕ್ಕೆ ಸಮರ್ಪಕ ರಸ್ತೆ, ವಿದ್ಯುತ್ ಸಂಪರ್ಕ ಮುಂತಾದ ಮೂಲ ಸೌಕರ್ಯ ಒದಗಿಸಬೇಕಾದದ್ದು ಆಡಳಿತ ವ್ಯವಸ್ಥೆ ಕರ್ತವ್ಯ. ಆದರೆ ಇಲ್ಲೊಂದು ಗ್ರಾಮದಲ್ಲಿ ಮೂಲ ಸೌಕರ್ಯಗಳೇ ಇಲ್ಲವಾಗಿದೆ.
ಜಿಲ್ಲೆಯಲ್ಲೇ ಪ್ರಥಮ ಬಯಲು ಬಹಿರ್ದೆಸೆ ಮುಕ್ತ ಗ್ರಾಪಂ ಎಂಬ ಹೆಗ್ಗಳಿಕೆಗೆ ಪಾತ್ರವಾದ ತಾಲೂಕಿನ ರಡ್ಡೇರನಾಗನೂರ ಗ್ರಾಮದಲ್ಲೇ ಇಂಥದ್ದೊಂದು ಅವ್ಯವಸ್ಥೆ ಸೋಜಿಗವಾಗಿ ಕಂಡುಬಂದಿದೆ. ಅಲ್ಲಿನ ಹರಿಜನ ಕಾಲೋನಿಯ ಅಂಬೇಡ್ಕರ್ ಓಣಿಯಲ್ಲಿ ಮೂಲ ಸೌಕರ್ಯ ವಂಚಿತ ನಿವಾಸಿಗಳು ನಿತ್ಯ ಯಾತನೆ ಅನುಭವಿಸುವಂತಾಗಿದೆ.
ಗ್ರಾಮದ ಹೊರವಲಯ ಭೋಪಳಾಪುರ ರಸ್ತೆಗೆ ಹೊಂದಿಕೊಂಡ ಈ ಓಣಿಯಲ್ಲಿ ಸುಮಾರು 30 ಮನೆಗಳಿದ್ದು, 100ಕ್ಕೂ ಹೆಚ್ಚು ಜನಸಂಖ್ಯೆಯಿದೆ. ಓಣಿಯ ದುರ್ಗಾದೇವಿ ದೇವಸ್ಥಾನ ಹಿಂಭಾಗದ ಮುಖ್ಯರಸ್ತೆ ಸುಧಾರಣೆಯಿಲ್ಲದೇ ಕೆಸರು ನೀರು ರಸ್ತೆಯಲ್ಲಿ ಜಮಾವಣೆಯಾಗಿದ್ದು, ನಿವಾಸಿಗಳು ಸಂಚಾರಕ್ಕೂ ಪರದಾಡುವಂತಾಗಿದೆ. ಒಂದೂವರೆ ವರ್ಷದ ಹಿಂದೆ ಇದೇ ಓಣಿಯ ಸಣ್ಣ ರಸ್ತೆಯೊಂದನ್ನು ಸಿಸಿ ರಸ್ತೆಯಾಗಿ ಪರಿವರ್ತಿಸಲು ಮುಂದಾದಾಗ ಮುಖ್ಯರಸ್ತೆ ಮೊದಲು ಸಿಸಿ ರಸ್ತೆ ಮಾಡಿ ಎಂದು ತಕರಾರು ತೆಗೆದಾಗ ಇಲ್ಲಿನವರೆಗೂ ಯಾವ ರಸ್ತೆಯನ್ನೂ ಸಿಸಿಯಾಗಿ ಸುಧಾರಿಸಿಲ್ಲ. ನಮ್ಮನ್ನು ಕಾಡಿನಲ್ಲಿ ಇಟ್ಟಿದ್ದಾರ್ರೀ ಎಂಬ ಅಳಲು ಇಲ್ಲಿನ ಜನರಲ್ಲಿದೆ.
ಎರಡು ದಿನಕ್ಕೊಮ್ಮೆ ಕುಡಿಯಲು ನೀರು ಬಿಟ್ಟಾಗ ಇರುವ ಎರಡು ಸಾರ್ವಜನಿಕ ನಲ್ಲಿಗಳಲ್ಲೇ ನೀರು ಪಡೆಯಬೇಕು. ಎರಡು ಓಣಿಗಳಿಗೂ ಒಂದೇ ಬೀದಿದೀಪ ಅಳವಡಿಸಲಾಗಿದೆ. ವಿದ್ಯುತ್ ಇಲ್ಲದಾಗ ರಸ್ತೆಯಲ್ಲಿ ಸಂಚರಿಸುವುದೇ ದುಸ್ತರ ಎಂಬ ಆರೋಪ ಜನರದ್ದಾಗಿದೆ. ಈ ಕುರಿತು ಹಲವಾರು ಬಾರಿ ಗ್ರಾಮ ಪಂಚಾಯತ್‌ಗೆ ಮನವಿ ಮಾಡಿದರೂ ನಮಗೆ ಮೂಲ ಸೌಕರ್ಯ ಒದಗಿಸುತ್ತಿಲ್ಲ. ಆದ್ದರಿಂದ ಮೊದಲು ರಸ್ತೆ ಸುಧಾರಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಿ. ರಸ್ತೆಯೊಳಗಿನ ಕೆಸರು ನೀರಿನಿಂದ ಸಾಂಕ್ರಾಮಿಕ ರೋಗಭೀತಿ, ಗಬ್ಬು ವಾಸನೆಯಿಂದ ನಮ್ಮನ್ನು ಮುಕ್ತಗೊಳಿಸಲಿ ಎಂದು ಅಲ್ಲಿನ ನಿವಾಸಿಗಳಾದ ಯಲ್ಲಪ್ಪ ಚಲವಾದಿ, ನಿಂಗಪ್ಪ ಚಲವಾದಿ, ಶಾಂತವ್ವ ಚಲವಾದಿ, ಮಾರುತಿ ಚಲವಾದಿ, ಮುದಕಪ್ಪ ದೊಡಮನಿ, ಚನ್ನಪ್ಪ ದೊಡಮನಿ, ಶಂಕ್ರಪ್ಪ ಚಲವಾದಿ, ಬಸಪ್ಪ ಚಲವಾದಿ, ಶ್ರೀಕಾಂತ ಚಲವಾದಿ, ಮುದಿಯಪ್ಪ ಪೂಜಾರ, ಮಾದೇವಪ್ಪ ದೊಡಮನಿ, ನಿಂಗಬಸಪ್ಪ ಚಲವಾದಿ ಮುಂತಾದವರು ಆಗ್ರಹಿಸಿದ್ದಾರೆ.
ಜಿಪಂಗೆ ಪ್ರಸ್ತಾವನೆ
ಗ್ರಾಮದ ಹರಿಜನ ಕಾಲೋನಿಯಲ್ಲಿ ಅಗತ್ಯ ಸೌಲಭ್ಯ, ಸಿಸಿ ರಸ್ತೆ ನಿರ್ಮಾಣಕ್ಕೆ ಈಗಾಗಲೇ ಗ್ರಾಮ ಸಭೆಯಲ್ಲಿ ಚರ್ಚಿಸಲಾಗಿದೆ. 300 ಮೀ. ಸಿಸಿ ರಸ್ತೆಗಾಗಿ ಕ್ರಿಯಾಯೋಜನೆ ತಯಾರಿಸಿ ಜಿಲ್ಲಾ ಪಂಚಾಯತ್‌ಗೆ ಪ್ರಸ್ತಾವನೆ ಸಲ್ಲಿಸಲಾಗಿದೆ.
ಈಶ್ವರಗೌಡ ಪಾಟೀಲ,
ರಡ್ಡೇರನಾಗನೂರ ಪಿಡಿಒ